ಅಮೆರಿಕಾದಲ್ಲಿ ಕನ್ನಡ ಸೊಗಡು; ತನ್ಮಯಿ ಕೃಷ್ಣಮೂರ್ತಿ ಕಂಠದಲ್ಲಿ 'ಕಗ್ಗ' ಕಂಪು

By Shrilakshmi Shri  |  First Published Feb 26, 2020, 1:30 PM IST

ಅಮೆರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನ ಅದರ ಅಂತಃಸತ್ವದಿಂದಲೇ ಪ್ರಸಿದ್ಧಿ. ಅರ್ಥಪೂರ್ಣ ಕಾರ್ಯಕ್ರಮಗಳು, ಅನಿವಾಸಿ ಕನ್ನಡಿಗರ ಸಾಹಿತ್ಯ ಮತ್ತು ಕಲಾ ಪ್ರೀತಿ, ಅಚ್ಚುಕಟ್ಟುತನಕ್ಕೆಲ್ಲಾ ಇದು ಹೆಸರು.  


ನಮ್ಮ ಮನೆಯಂಗಳದಲ್ಲಿ ಬೆಳೆದ ಹೂವುಗಳು ದೂರದ ಅಮೆರಿಕಾದಲ್ಲಿ ತಮ್ಮ ಕಂಪನ್ನು ಸೂಸುತ್ತಾ ನಮ್ಮ ನೆಲೆದ ದನಿಯನ್ನು ಅಲ್ಲಿನ ಕಿವಿಗಳಿಗೆ ಮುಟ್ಟಿಸುತ್ತಾ, ಅವರ ಎದೆಯಾಳದಲ್ಲಿ ಬದುಕಿನ ಬಗೆಗೊಂದು ಪ್ರೀತಿ ಹುಟ್ಟುವಂತೆ ಮಾಡುತ್ತಿವೆ.

ಅದು ‘ಕಗ್ಗ ಲಹರಿ’ ಎನ್ನುವ ಹೊಸ ರೀತಿಯ ಡಿ.ವಿ. ಗುಂಡಪ್ಪನವರ ಕಗ್ಗ ಗಾಯನ ಮತ್ತು ವ್ಯಾಖ್ಯಾನದ ಮೂಲಕ. ತನ್ಮಯಿ ಕೃಷ್ಣಮೂರ್ತಿ ಮಧುರ ಸ್ವರ ಮತ್ತು ಸಂಗೀತ ಸಂಯೋಜನೆ, ವಯಲಿನ್‌ನಲ್ಲಿ ವಿದ್ವಾನ್‌ ವಿಠ್ಠಲ್‌ ರಾಮಮೂರ್ತಿ, ಫä್ಲಟ್‌ನಲ್ಲಿ ವಿದ್ವಾನ್‌ ಎಲ್‌.ವಿ. ಮುಕುಂದ್‌, ಕಗ್ಗ ವ್ಯಾಖ್ಯಾನದಲ್ಲಿ ಪೂರ್ಣಿಮಾ ಸುಬ್ರಹ್ಮಣ್ಯ, ನೀಲಿಮಾ ಚಿಕ್ಕೋಡಿ, ತಾಂಡವ್‌ ಮೂರ್ತಿ, ಹರಿಚರಣ್‌ ಮೈಲಾರಯ್ಯ ಜೊತೆಯಾಗಿದ್ದಾರೆ.

Tap to resize

Latest Videos

undefined

ಭಾಷಾ ಪ್ರೀತಿಗೆ ಎಲ್ಲೆ ಎಲ್ಲಿ.. ಅಮೆರಿಕಾದ ಕನ್ನಡ 'ಕಲಿ'ಗಳು

ಇದುವರೆಗೂ ಕಗ್ಗಗಳ ವಾಚನ, ಗಾಯಕ, ವ್ಯಾಖ್ಯಾನ ಸಾಕಷ್ಟುಬಂದಿದ್ದರೂ ಇವರ ಪ್ರಯತ್ನ ತುಂಬಾ ಮಾಧುರ್ಯಮಯ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಕಗ್ಗಗಳನ್ನು ಹಾಡಿ ಅದಕ್ಕೆ ನವೀನ ರೀತಿಯ ಸಂಗೀತ, ಆಧುನಿಕ ಬದುಕಿನ ರೂಪಕಗಳನ್ನು ಒಳಗೊಂಡ ಸರಳ ವ್ಯಾಖ್ಯಾನಗಳೆಲ್ಲವೂ ಸೇರಿ ‘ಕಗ್ಗ ಲಹರಿ’ ಆಪ್ತವಾಗಿದೆ. ಅನಿವಾಸಿ ಕನ್ನಡಿಗರ ಈ ಸಣ್ಣ ಪ್ರಯತ್ನಕ್ಕೆ ಈಗಾಗಲೇ ಅತ್ಯುತ್ತಮ ರೀತಿಯಲ್ಲಿ ಮೆಚ್ಚುಗೆ ಸಿಕ್ಕಿದ್ದು, ಇದೇ ಮೆಚ್ಚುಗೆಯ ಬಲದಿಂದ ಮತ್ತಷ್ಟುಇದೇ ರೀತಿಯ ಪ್ರಯತ್ನಕ್ಕೆ ಕೈ ಹಾಕುತ್ತಿದೆ ಈ ತಂಡ.

ರಸಧಾರೆಯಿಂದ ಲಹರಿಯ ತನಕ

ಅಮೆರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನ ಅದರ ಅಂತಃಸತ್ವದಿಂದಲೇ ಪ್ರಸಿದ್ಧಿ. ಅರ್ಥಪೂರ್ಣ ಕಾರ್ಯಕ್ರಮಗಳು, ಅನಿವಾಸಿ ಕನ್ನಡಿಗರ ಸಾಹಿತ್ಯ ಮತ್ತು ಕಲಾ ಪ್ರೀತಿ, ಅಚ್ಚುಕಟ್ಟುತನಕ್ಕೆಲ್ಲಾ ಇದು ಹೆಸರು. ಹೀಗೆ 2018ರಲ್ಲಿ ಡೆಲೆಸ್‌ ನಗರದಲ್ಲಿ ನಡೆದ ಅಕ್ಕ ಸಮ್ಮೇಳನದ ವೇಳೆ ಅಲ್ಲಿ ಸೇರಿದ್ದ ಒಂದಷ್ಟುಸಾಹಿತ್ಯ ಪ್ರೇಮಿಗಳು ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡುತ್ತಾರೆ.

ಅದು ಅಲ್ಲಿಗೆ ನಿಲ್ಲದೇ ವಾಟ್ಸಪ್‌ ಗ್ರೂಪ್‌ ರಚಿಸಿಕೊಂಡು ದಿನಕ್ಕೆ ಮೂರು ಕಗ್ಗಳಿಗೆ ವ್ಯಾಖ್ಯಾನ ಬರೆದು ಅಲ್ಲಿ ಹಾಕುತ್ತಾರೆ. ಇದು ನಿರಂತರವಾಗಿ ಸಾಗಿ ಎಲ್ಲರ ಮನಸ್ಸಿಗೆ ತಟ್ಟಿದ ಮೇಲೆ ನಾವೇ ಯಾಕೆ ಇವುಗಳನ್ನು ಹಾಡಿನ ರೂಪಕ್ಕೆ ಇಳಿಸಿ ‘ಕಗ್ಗ ರಸಧಾರೆ’ ಎನ್ನುವ ಕಾರ್ಯಕ್ರಮ ಮಾಡಬಾರದು ಎನ್ನುವ ಆಲೋಚನೆ ಹುಟ್ಟುತ್ತದೆ. ಅದೇ ವೇಳೆಗೆ ಈ ತಂಡವನ್ನು ತನ್ಮಯಿ ಕೃಷ್ಣಮೂರ್ತಿ ಅವರು ಸೇರುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಕಗ್ಗ ರಸಧಾರೆಯ ಹರಿವು.

ಡೆಲೆಸ್‌ ನಗರದ ಹರಿಚರಣ್‌ ಅವರ ಮನೆಯಲ್ಲಿ ಪ್ರಾರಂಭದಲ್ಲಿ 80 ಮಂದಿ ಸಾಹಿತ್ಯಾಸಕ್ತರು ಒಂದಾಗುತ್ತಾರೆ. ಅಲ್ಲಿ ಕಗ್ಗಗಳ ಗಾಯನ, ವ್ಯಾಖ್ಯಾನ ನಡೆಯುತ್ತದೆ. ನಂತರ ಈ ಕಾರ್ಯಕ್ರಮ ಯಶಸ್ವಿ ಮೂರು ಕಂತುಗಳನ್ನು ಪೂರೈಸಿದಾಗ ಈ ತಂಡಕ್ಕೆ ಇದನ್ನೆಲ್ಲಾ ಯಾಕೆ ಒಂದು ಆಲ್ಬಂ ಆಗಿ ಮಾಡಬಾರದು ಎನ್ನುವ ಆಲೋಚನೆ ಬಂದು ಅದು ‘ಕಗ್ಗ ಲಹರಿ’ಯಾಗಿ ರೂಪುತಾಳುತ್ತದೆ. ಇದರ ಮುಂದಿನದು ಸ್ವರ ಮಾಧುರ್ಯದ ಹಾದಿ. ಇದುವರೆಗೂ 16 ಕಗ್ಗಗಳ ಗಾಯನ, ವ್ಯಾಖ್ಯಾನವಾಗಿದ್ದು, ಇದು ಇನ್ನೂ ಮುಂದೆ ಸಾಗಲಿದೆ. ಅಲ್ಲದೇ ಈ ದಾರಿಯಲ್ಲಿ ಕನ್ನಡದ ಇನ್ನೂ ಹಲವಾರು ಕವಿಗಳ ಕವಿತೆ, ಭಾವಗೀತೆಗಳ ಸೇರ್ಪಡೆಯೂ ಆಗಲಿದೆ.

`ನನ್ನ ರೀತಿ ನೀತಿಯೇ ವಿಭಿನ್ನ' ಎನ್ನುತ್ತಾರೆ ಸ್ವಾತಿ..!

ಭಾವಗೀತೆಗಳ ಬಾಗಿಲಿನಿಂದ

ಹೀಗೆ ದೂರದ ನಾಡಿನಲ್ಲಿ ಕಂಪು ಚೆಲ್ಲುತ್ತಿರುವ ತಂಡದ ಸದಸ್ಯೆ ತನ್ಮಯಿ ಕೃಷ್ಣಮೂರ್ತಿ ನಮ್ಮ ಹಾಸನದ ಹೊಳಲ್ಕೆರೆಯವರು. ತಾಯಿ ಭಾಗ್ಯಲಕ್ಷ್ಮೀ ಕೃಷ್ಣಮೂರ್ತಿ, ತಂದೆ ಕೃಷ್ಣಮೂರ್ತಿ ಸಂಗೀತದ ಹಿನ್ನೆಲೆ ಇರುವವರೇ. ಹೀಗೆ ಸಂಗೀತ ಪರಿಸರದಲ್ಲಿಯೇ ಬೆಳೆದ ತನ್ಮಯಿ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದು, 2014ರಲ್ಲಿ ಮದುವೆಯಾಗಿ ಅಮೆರಿಕಾಕ್ಕೆ ತೆರಳಿದವರು.

‘ನಾನು ಒಂದು ಹಂತದಲ್ಲಿ ಭಾವಗೀತೆಗಳ ಗಾಯನಕ್ಕೆ ಮುಂದಾದಾಗಲೇ ನನಗೆ ಸಾಹಿತ್ಯಕ್ಕೆ ಎಷ್ಟುಶಕ್ತಿ ಇದೆ ಎಂದು ಗೊತ್ತಾಗಿದ್ದು. ಇದೇ ಕಾರಣಕ್ಕೆ ನಾನು ಕೆಲಸವನ್ನು ತೊರೆದು ಭಾವಗೀತೆಗಳ ಗಾಯನ, ಸ್ವರ ಸಂಯೋಜನೆ, ಇಲ್ಲಿನ ಮಂದಿಗೆ ನಮ್ಮ ಸಂಗೀತವನ್ನು ಹೇಳಿಕೊಡುವ ಕಾಯಕಕ್ಕೆ ಇಳಿದೆ’ ಎನ್ನುವ ತನ್ಮಯಿ ಅವರು ಇಂದು ಅಮೆರಿಕಾದ ಮಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಸುತ್ತಿದ್ದಾರೆ. ಜೊತೆ ಜೊತೆಗೆ ಅಲ್ಲಿಯೇ ಸಂಗೀತ ಸಮಾಜದ ಮೇಲೆ ಯಾವೆಲ್ಲಾ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎನ್ನುವುದನ್ನು ಅಧ್ಯಯನ ಮಾಡಿ, ಬೇರೆ ಬೇರೆ ದೇಶಗಳ ಸಂಗೀತ ಪ್ರಕಾರ, ಅವುಗಳ ವಿಶೇಷತೆಗಳನ್ನು ತಿಳಿದುಕೊಂಡಿದ್ದಾರೆ.

ಸಾಂಸ್ಕೃತಿಕ ಸೇತುವೆ

ಚೈನ್ನೈನ ಪ್ರಸಿದ್ಧ ಸಂಗೀತಗಾರ ಟಿ.ಎಂ. ಕೃಷ್ಣ, ನಮ್ಮಲ್ಲಿನ ಯಶ್ವಂತ್‌ ಅಳಿಬಂಡಿ ಮೊದಲಾದವರ ಗರಡಿಯಲ್ಲಿ ಸಂಗೀತ ಕಲಿತ ತನ್ಮಯಿ ಕೃಷ್ಣಮೂರ್ತಿ ದೇಶಾದ್ಯಂತ ಸಂಗೀತ ಕಚೇರಿ ನಡೆಸಿಕೊಟ್ಟವರು. ಈಗ ವರ್ಷದ ಮೂರು ತಿಂಗಳು ಭಾರತದಲ್ಲಿ ಉಳಿದ ಕಾಲ ಅಮೆರಿಕಾದಲ್ಲಿ ಇದ್ದುಕೊಂಡು ನಮ್ಮ ಅಮೂಲ್ಯ ಸಂಗೀತವನ್ನು ಅಲ್ಲಿನ ಮಂದಿಗೆ, ಅಲ್ಲಿನ ಉತ್ಕೃಷ್ಟಸಂಗೀತವನ್ನು ಇಲ್ಲಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಹಾಗಾಗಿ ಇವರು ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಸೇತುವೆಯೇ ಸರಿ. ಆಫ್ರಿಕನ್‌, ಐರಿಷ್‌, ಚೈನಿಸ್‌ ಹೀಗೆ ಬೇರೆ ಬೇರೆ ದೇಶಗಳ ಸಂಗೀತದ ಬಗ್ಗೆ ಅರಿವು ಪಡೆದುಕೊಂಡಿರುವ ಇವರು ಮುಂದಿನ ದಿನಗಳಲ್ಲಿ ಜನರಿಗೆ ಸಂಗೀತದ ಮೂಲಕ ಸಾಹಿತ್ಯವನ್ನು ಮತ್ತಷ್ಟುಹತ್ತಿರ ಮಾಡಲು ಶ್ರಮಿಸುತ್ತಿದ್ದಾರೆ.

‘ಸದ್ಯ ನಾವೀಗ ಕುವೆಂಪು ಅವರ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಓದುತ್ತಿದ್ದೇವೆ. ಇದನ್ನು ಮುಂದೆ ಗಾಯನದ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದುಕೊಂಡಿದ್ದೇವೆ.

ಸಂಗೀತದ ಮೂಲಕ ಸಾಹಿತ್ಯವನ್ನು ಹಂಚಬೇಕು ಎನ್ನುವ ಸದಾಶಯ ನಮ್ಮದಾಗಿದ್ದು, ಖ್ಯಾತ ಸಾಹಿತಿಗಳ ಜೊತೆಗೆ ಹೆಚ್ಚು ಪ್ರಚಲಿತವಲ್ಲದ ಸಾಹಿತಿಗಳ ಉತ್ತಮ ಸಾಹಿತ್ಯವನ್ನೂ ನಾವು ಜನರಿಗೆ ತಲುಪಿಸುತ್ತೇವೆ. ಮುಂದೆ ಎಲ್ಲವನ್ನೂ ಶಾಸ್ತ್ರೀಯ ಸಂಗೀತದಲ್ಲಿ ಆಲ್ಬಂ ಮಾಡುತ್ತೇವೆ’ ಎನ್ನುವ ತನ್ಮಯಿ ಅವರು ಮಾಡುತ್ತಿರುವುದು ನಿಜವಾದ ಸಾಹಿತ್ಯ ಸೇವೆಯೇ ಆಗಿದೆ.

ನಮ್ಮದು ವೆರಿ ರಿಚ್‌ ಆರ್ಟ್‌ ಫಾರ್ಮ್

ನಮ್ಮ ಶಾಸ್ತ್ರೀಯ ಸಂಗೀತದ ಬಗ್ಗೆ ಇಲ್ಲಿನವರಿಗೆ ತುಂಬಾ ಆಸಕ್ತಿ ಇದೆ. ಒಮ್ಮೆ ನಮ್ಮ ಸಂಗೀತ ಕೇಳಿದರೆ ತುಂಬಾ ಎಕ್ಸೈಟ್‌ ಆಗುತ್ತಾರೆ. ಅವರಾಗಿಯೇ ಬಂದು ಮತ್ತಷ್ಟುಹೇಳಿಕೊಡಿ ಎಂದು ಕೇಳುತ್ತಾರೆ. ಆಳವಾಗಿ ತಿಳಿದುಕೊಳ್ಳುತ್ತಾರೆ. ಇಲ್ಲಿ ಕನ್ನಡಿಗರು, ಭಾರತೀಯರಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳಿಂದ ಬಂದವರು ನಮ್ಮ ಪ್ರಯತ್ನಕ್ಕೆ, ಹಾಡುಗಳಿಗೆ ಮನಸೋತಿದ್ದಾರೆ. ಇದಕ್ಕಾಗಿಯೇ ನಾನು ನನ್ನ ಕೆಲಸ ಬಿಟ್ಟು, ಸಂಗೀತ ಕಲಿಸುವುದಕ್ಕೆ ತೊಡಗಿಸಿಕೊಂಡಿದ್ದೇನೆ. ನಮ್ಮದು ವೆರಿ ರಿಚ್‌ ಆರ್ಟ್‌ ಫಾಮ್‌ರ್‍. ಇದನ್ನು ಕಲಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ.

ತನ್ಮಯಿ ಕೃಷ್ಣಮೂರ್ತಿ, ಗಾಯಕಿ

 

ಅನಿವಾಸಿ ಕನ್ನಡಿಗರ ಪ್ರಯತ್ನ

ಆತ್ಮೀಯ ಸಹೃದಯರ ಮುಂದೆ ಈ ಧ್ವನಿ ಸುರುಳಿ ಇಡಲು ನಮಗೆ ಅತ್ಯಂತ ಸಂತೋಷ ತಂದಿದೆ. ಇದು ಡಿ.ವಿ.ಜಿ. ಹಾಗೂ ಕಗ್ಗದ ಬಗ್ಗೆ ಸಮಾನ ಶ್ರದ್ಧೆ, ಭಕ್ತಿ, ಪ್ರೀತಿ ಮತ್ತು ಕೃತಜ್ಞತೆಯುಳ್ಳ ಕೆಲವು ಅನಿವಾಸಿ ಕನ್ನಡಿಗರ ಒಂದು ಸಣ್ಣ ಪ್ರಯತ್ನ.

- ಕೆಂಡಪ್ರದಿ 

click me!