ಪುತ್ತೂರಿನಲ್ಲಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಈ ಅಗರ್‌ವುಡ್!

By Suvarna NewsFirst Published Jan 2, 2020, 2:28 PM IST
Highlights

ಅಗರ್‌ವುಡ್ ಸದ್ಯ ಬಹಳ ಬೇಡಿಕೆ ಇರುವ ಬೆಳೆ. ಇದಕ್ಕೆ ಶ್ರೀಗಂಧಕ್ಕಿಂತಲೂ ಅಧಿಕ ಬೆಲೆ ಇದೆ. ಕೆಲವೇ ಕೆಲವು ರೈತರಷ್ಟೇ ಸದ್ಯಕ್ಕೆ ಇದನ್ನು ಬೆಳೆಯುತ್ತಿದ್ದಾರೆ. ಅವರಲ್ಲಿ ಪುತ್ತೂರಿನ ಕೇಶವ
ಕೈಪಾರ ಅವರೂ ಒಬ್ಬರು. ಇದೂ ಸೇರಿದಂತೆ ಅನೇಕ ವಾಣಿಜ್ಯ ಬೆಳೆಗಳ ಜೊತೆಗೆ ಪಾರಂಪರಿಕವಾಗಿ ಬತ್ತ ಬೆಳೆಯುತ್ತಿದ್ದಾರೆ. ಸಾವಯವ ಕೃಷಿಯನ್ನೂ ಮಾಡುತ್ತಾರೆ.

ಗರ್‌ವುಡ್ ಕೃಷಿ ವಲಯದಲ್ಲಿ ನಿಧಾನಕ್ಕೆ ಸುದ್ದಿ ಮಾಡುತ್ತಿದೆ. ಕಾರಣ ಇದಕ್ಕಿರುವ ಅಪಾರ ಬೆಲೆ. ಕೆಜಿಗೆ ನಾಲ್ಕೈದು ಲಕ್ಷ ರುಪಾಯಿಗಳಷ್ಟು ಬೆಲೆಯಿದೆ ಎಂಬುದು ಚಾಲ್ತಿಯಲ್ಲಿರುವ ಮಾತು. ಆದರೆ ನಮ್ಮ ರಾಜ್ಯದಲ್ಲಿನೂ ಅಷ್ಟು ದೊಡ್ಡ ಮರ ಮಾಡಿ ಮಾರಿ ಆ ಬೆಲೆ ಪಡೆದವರು ಸಿಗೋದೇ ಇಲ್ಲ ಅನ್ನಬಹುದು. ಆದರೆ ಸದ್ಯಕ್ಕೀಗ ತಮ್ಮ ಇಪ್ಪತ್ತು ಎಕರೆಯಲ್ಲಿ ಅಗರ್‌ವುಡ್ ಜೊತೆಗೆ ಇತರ ಕೃಷಿ ಯಲ್ಲೂ ತೊಡಗಿರುವವರು ಕೇಶವ ಕೈಪಾರ.ಇವರು ಪುತ್ತೂರು ತಾಲ್ಲೂಕು ಕೋಡಿಂಬಾಡಿ ಗ್ರಾಮದವರು. ಸ್ವತಃ ಅಗರ್‌ವುಡ್ ಬೆಳೆದಿರುವ ಅವರ ಅನುಭವದ ಮಾತು ಹೀಗಿದೆ.

ಕಲಘಟಗಿಯಲ್ಲಿ ಸ್ಟ್ರಾಬೆರಿ ಬೆಳೆದು ಲಕ್ಷಾಂತರ ಆದಾಯ ಪಡೆದ ಗುತ್ತಿಗೆದಾರ!

ಪಾರಂಪರಿಕ ಬತ್ತ ಕೃಷಿ

ಕೇಶವ ಅವರು ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಹಾಗಂತ ಪಾರಂಪರಿಕವಾಗಿ ಬಂದ ಆಹಾರ ಬೆಳೆಯನ್ನು ನಿರ್ಲಕ್ಷಿಸಿಲ್ಲ. ಪಾರಂಪರಿಕ ಶೈಲಿಯಲ್ಲಿ ಬತ್ತ ಬೆಳೆಯುತ್ತಾರೆ. ಅಂದರೆ ಇನ್ನೂ ಹಿಂದಿನಂತೆಯೇ ನೆಲ ಉತ್ತು ಬತ್ತ ಬಿತ್ತನೆ ಮಾಡುತ್ತಾರೆ. ಸಾಂಪ್ರದಾಯಿಕವಾಗಿ ಸಾವಯವ ಮಾದರಿಯಲ್ಲಿ ಕೃಷಿ ಮಾಡಿದ್ದಾರೆ. ವಾರ್ಷಿಕವಾಗಿ ಎರಡು ಬೆಳೆ ಬೆಳೆಯುತ್ತಾರೆ. ಇಳುವರಿಯೂ ಹೆಚ್ಚು. ಈ ಬತ್ತ ರಾಸಾಯನಿಕದಿಂದ ಮುಕ್ತ, ಅರೋಗ್ಯಯುಕ್ತ. ಈ ಸಾಧನೆಗಾಗಿ ಇವರಿಗೆ ಮೂರು ಬಾರಿ ಕೃಷಿ ಇಲಾಖೆಯ ಪ್ರಶಸ್ತಿ ಸಿಕ್ಕಿದೆ. 2010-2011ರಲ್ಲಿ ಭತ್ತದ ಕೃಷಿಗೆ, 2017-18 ರಲ್ಲಿ ಪಾರಂಪರಿಕ ಶೈಲಿಯ ಗದ್ದೆ ಉಳುಮೆ, 2018-19 ರಲ್ಲಿ ಸಾವಯವ ಕೃಷಿಯಲ್ಲಿ ಪ್ರಶಸ್ತಿಗಳು ಲಭಿಸಿವೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇವರ ಕೃಷಿ ಭೂಮಿ ಅಧ್ಯಯನ ಸ್ಥಳವಾಗಿದೆ.

ಈ ಗದ್ದೆಯಲ್ಲದೆ ತೆಂಗು, ಅಡಕೆ, ರಬ್ಬರ್, ಕರಿಮೆಣಸು ತರಕಾರಿ ಬೆಳೆಯೊಂದಿಗೆ ೫೦೦ಕ್ಕೂ ಹೆಚ್ಚು ಸಾಗುವಾನಿ ಗಿಡ, ಶ್ರೀಗಂಧ, ರಕ್ತಚಂದನ, ಬೀಟೆ ಗಿಡಗಳನ್ನು ನೆಡುವ ಮೂಲಕ ಕೃಷಿಯನ್ನು ಇದೀಗ ಬಹು ವಿಧ ಸಂಪಾದನೆಯನ್ನಾಗಿ ಪರಿವರ್ತಿಸಿದ್ದಾರೆ.

ಹೊರರಾಜ್ಯದ ಆಡು ಸಾಕಿದರೆ ಲಕ್ಷಾಂತರ ರು. ಆದಾಯ ಪಡೆಯಬಹುದು!

ಹಲವು ಬೆಳೆಗಳ ಸಂಗ್ರಹ

ಅಡಿಕೆಯ ಜೊತೆಗೆ ರಬ್ಬರ್, ತೆಂಗು, ಕೊಕ್ಕೊ, ಕರಿಮೆಣಸು, ವೀಳ್ಯದೆಲೆ, ಚಿಕ್ಕು, ತರಕಾರಿ ಮೊದಲಾದ ಉಪ ಬೆಳೆಗಳನ್ನು ವ್ಯವಸ್ಥಿತವಾಗಿ ಬೆಳೆಸುತ್ತಿದ್ದಾರೆ. ವೀಳ್ಯೆದೆಲೆ ಕೃಷಿ ಈಗ ಹೆಚ್ಚಿನ ಲಾಭ ಕೊಡುತ್ತಿದೆ. ೮೦ ವೀಳ್ಯದೆಲೆಯ ಒಂದು ಸೂಡಿ (ಕಟ್ಟು)ಗೆ 40 ರುಪಾಯಿಗಳಷ್ಟು ಬೆಲೆ ಇವರಿಗೆ ಲಭಿಸುತ್ತಿದೆ. ಗುಡ್ಡ ಪ್ರದೇಶವನ್ನು ಬೆಲೆ ಬಾಳುವ ಮರಕೃಷಿಗೆ ಬಳಸುತ್ತಿದ್ದಾರೆ. 275
ಶ್ರೀಗಂಧದ ಗಿಡಗಳನ್ನು ನೆಟ್ಟಿದ್ದು, ಅದರ ಪೈಕಿ ಹೆಚ್ಚಿನ ಬೆಳೆದು ನಿಂತಿದೆ. ಬೀಟೆ ಹಾಗೂ ಹೆಬ್ಬಲಸು ಗಿಡಗಳು, ರಕ್ತ ಚಂದನದ ಗಿಡಗಳು ಹುಲುಸಾಗಿ ಬೆಳೆಯುತ್ತಿವೆ.

ಸಾವಯವದತ್ತ ಪ್ರಯೋಗಾತ್ಮಕ ಹೆಜ್ಜೆ

ಅಡಕೆ ಕೃಷಿಯಲ್ಲಿ ಕೇಶವ ಅವರು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ದೇಶಿ ಹಾಗೂ ವಿದೇಶಿ ತಳಿಯ ಅಡಕೆಗಳನ್ನು ಬೆಳೆಸುತ್ತಿದ್ದಾರೆ. ಈಗಾಗಲೇ ಬಹುತೇಕ ಎಲ್ಲ ಕೃಷಿ ಬೆಳೆಗಳಿಗೆ ಶೇ.80ರಷ್ಟು ಸಾವಯವ ಗೊಬ್ಬರವನ್ನು ಬಳಸಿ, ಅಗತ್ಯಕ್ಕೆ ತಕ್ಕಂತೆ ಶೇ.೨೦ರಷ್ಟು ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಇದೀಗ ಸಂಪೂರ್ಣ ಸಾವಯವ ಗೊಬ್ಬರವನ್ನೇ ಬಳಸಿದರೆ ದೊರೆಯುವ ಇಳುವರಿಯ ಬಗ್ಗೆ ಅಧ್ಯಯನ ನಿರತರಾಗಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಅಡಕೆ ತೋಟವನ್ನು ನಿರ್ಮಿಸಿದ್ದು, ಗಿಡ ನೆಡುವುದರಿಂದ ಹಿಡಿದು ಯೋಜನಾಬದ್ಧವಾಗಿ ಸೆಗಣಿಯಾಧಾರಿತ ಸಾವಯವ ಗೊಬ್ಬರವನ್ನು ಮಾತ್ರ ನೀಡುತ್ತಾ ಬರುತ್ತಿದ್ದಾರೆ. ಫಸಲು ನೀಡುವ ಹಂತಕ್ಕೆ ಬಂದಿರುವ ಈ ಸಾವಯವ ತೋಟದ ಅಡಕೆ ಮರಗಳು ಉತ್ತಮ ಆರೋಗ್ಯಪೂರ್ಣ ಸ್ಥಿತಿಯಲ್ಲಿ ಬೆಳೆಯುತ್ತಿವೆ.

ಅತ್ಯಂತ ಕಡಿಮೆ ನೀರು ಬಳಸಿ ಬಂಪರ್ ಭತ್ತ ಪಡೆದ ಮೈಸೂರು ರೈತ!

click me!