ಕಂತ್ರಿ ನಾಯಿಯೋ, ಜಾತಿ ನಾಯಿಯೋ ತಿಳಿಯುವುದು ಹೇಗೆ? ತೇಜಸ್ವಿ ಹೇಳ್ತಾರೆ ನೋಡಿ

By Web DeskFirst Published Nov 14, 2018, 12:17 PM IST
Highlights

ಯಾರು ಎಷ್ಟೇ ದೊಡ್ಡವರಾದರೂ ಬಾಲ್ಯದಲ್ಲಿ ಪುಟ್ಟ ಮಕ್ಕಳೇ. ಆಗ ಎಲ್ಲರೂ ತಂಟೆಕೋರರೇ. ಎಲ್ಲರೂ ಬಾಲ್ಯದಲ್ಲಿ ಹುಡುಗಾಟ ಮಾಡಿಕೊಂಡೇ ಬೆಳೆದವರು. ಸಾಹಿತಿ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಬಾಲ್ಯದ ಕಥೆ ಬಹಳ ಮಜವಾಗಿದೆ. ಅದೇನು ಅಂತ ತಿಳ್ಕೋಳೋಕೆ ಇದನ್ನು ಓದಿ. 

‘ಕಾನೂರು ಹೆಗ್ಗಡತಿ’ ಓದಿ ನಾಯಿ ಸಾಕಬೇಕು ಅನ್ನೋ ಹುಚ್ಚು ತಲೆಗಂಟಿತ್ತು. ಅಣ್ಣನಲ್ಲಿ ಹೇಳಿದರೆ ಹಳ್ಳಿಯಲ್ಲಾದರೆ ಸರಿ, ನಾವಿರುವ ಮೈಸೂರಿನಲ್ಲೆಲ್ಲ ಅವನ್ನು ಸಾಕಲಾಗದು ಎಂದಿದ್ದರು. ವಾರ್ಡ್‌ಬಾಯ್ ಸಿ.ಕೆ ರಾಮನ ಮನೆಯಲ್ಲಿ ಕಂತ್ರಿ ನಾಯಿ ಇತ್ತು. ಅದರ ಮರಿ ತಂದು ಕೊಡುತ್ತೇನೆ ಎಂಬ ಆಶ್ವಾಸನೆಯನ್ನೂ ಅವನು ಕೊಟ್ಟಿದ್ದ. ಆದರೆ ‘ಅವೆಲ್ಲ ಕಂತ್ರಿ ನಾಯಿಗಳು. ಅವನ್ನೆಲ್ಲ ಮನೆಯೊಳಗೆ ತಂದೀರಿ..’ ಅಣ್ಣ ಹೆದರಿಸಿದರು. ಕಂತ್ರಿ ನಾಯಿಗೂ ಜಾತಿ ನಾಯಿಗೂ ವ್ಯತ್ಯಾಸ ನಮಗೆ ಗೊತ್ತಿರಲಿಲ್ಲ.

ಸೀ.ಕೆ ರಾಮನಲ್ಲಿ ನಮ್ಮ ಗೊಂದಲ ಹೇಳಿದಾಗ ಆತ ಬಾಲ ಮೊಂಡಾಗಿರುವ ಕಿವಿ ಎತ್ತಿದರೆ ಕೂಗದ ನಾಯಿ ಜಾತಿ ನಾಯಿಯಾಗಿರುತ್ತೆ ಎಂದಿದ್ದ. ಕಂತ್ರಿನಾಯಿಗಳ ಬಾಲ ಕತ್ತರಿಸಿ ಸುಲಭವಾಗಿ ಜಾತಿ ನಾಯಿ ಮಾಡಬಹುದು ಎಂಬ
ಉಪಾಯ ಹೇಳಿದ್ದ. ನಮಗದು ಸರಿ ಅನಿಸಿತು. ಆದರೆ ಬಾಲ ಕತ್ತರಿಸುವ ಬಗೆ ತಿಳಿಯಲಿಲ್ಲ. ಸಿ.ಕೆ ರಾಮನ ನಾಯಿಯನ್ನೇ ಒಂದಿನ ನಮ್ಮ ಮನೆಗೆ ತರಿಸಿ ಬಾಲ ಕತ್ತರಿಸಲು ನಿರ್ಧರಿಸಿದೆವಾದರೂ ಹೇಗೆ ಕತ್ತರಿಸೋದು, ಕತ್ತರಿಯಿಂದಲಾ, ಬ್ಲೇಡ್‌ನಿಂದಲೇ, ಎಷ್ಟು ಕತ್ತರಿಸಬೇಕು ಏನೂ ಗೊತ್ತಾಗಲಿಲ್ಲ.

ಮುಂದಿನ ವಾರ ಮತ್ತೆ ನಾಯಿಯೊಂದಿಗೆ ಬಂದ ರಾಮ ಪೈಪ್‌ನ ಮೇಲೆ ಅದರ ಬಾಲ ಇತ್ತು ಕತ್ತಿಯಿಂದ ಹೊಡೆದೇಬಿಟ್ಟ. ಬಾಲಕ್ಕೆ ಏಟುಬೀಳುತ್ತಲೂ ರೋಷಾವೇಷದಿಂದ ನಮ್ಮ ಮೇಲೆ ಹಾರಿ ಆರ್ತನಾದ ಮಾಡುತ್ತ ನಮ್ಮ ಬಚ್ಚಲೊಳಗೆ ಹೋಗಿ ಬೂದಿಯಲ್ಲಿ ಕೂತುಬಿಟ್ಟಿತು ನಾಯಿ. ಆ ಗದ್ದಲಕ್ಕೆ ಮನೆಯವರೆಲ್ಲ ಗಾಬರಿಯಿಂದ ಬಂದು ನಮ್ಮನ್ನು ವಿಚಾರಿಸಿದರು. ಚಿಕ್ಕವರಾಗಿದ್ದ ನಮಗೆ ವಿಷಯ ವಿವರಿಸಲು ಬರದಿದ್ದರೂ ಕಂತ್ರಿನಾಯಿ ಬಾಲ ಕತ್ತರಿಸಿದರೆ ಜಾತಿ ನಾಯಿಯಾಗುತ್ತೆ ಎಂಬ ನನ್ನ ವಾದದಿಂದ ಸ್ವಲ್ಪ ಪರಿಸ್ಥಿತಿಯ ಚಿತ್ರಣ ಸಿಕ್ಕ ಹಾಗಿತ್ತು. ಆದರೆ ಆ ನಾಯಿ ಬಾಲ ಮಾತ್ರ ನಮ್ಮ ಮೊಂಡು ಕತ್ತಿ ಹೊಡೆತಕ್ಕೆ ಕತ್ತರಿಸದೇ ಮೂಳೆಯಷ್ಟೇ ಮುರಿದು ಕೊನೆಯವರೆಗೂ  ಪೆಂಡ್ಯುಲಮ್‌ನಂತೆ ಅಲ್ಲಾಡುತ್ತಲೇ ಇತ್ತು! 

- ಕೆ ಪಿ ಪೂರ್ಣಚಂದ್ರ ತೇಜಸ್ವಿ

’ಅಣ್ಣ ನೆನಪು’ ಕೃತಿಯಿಂದ ಆರಿಸಿದ್ದು 

click me!