ಬಟ್ಟೆ ಹರಿದಿದ್ದರೂ ಪರವಾಗಿಲ್ಲ, ಕೈಲೊಂದು ಪುಸ್ತಕವಿರಲಿ: ಶಿವಕುಮಾರ ಸ್ವಾಮೀಜಿ

By Kannadaprabha NewsFirst Published Jan 22, 2019, 10:51 AM IST
Highlights

ಇದು ಪುಸ್ತಕಪ್ರೇಮಿ , ನಿರಂತನ ಅಧ್ಯಯನಶೀಲ ಶಿವಕುಮಾರ ಸ್ವಾಮಿಗಳ ನಿಲುವು ಬಸವಣ್ಣನನ್ನು ಓದಿಕೊಂಡಂತೆ ಶೇಕ್ಸ್‌ಪಿಯರ್, ಶೆಲ್ಲಿ, ಮಾರ್ಕ್ಸ್‌ನನ್ನೂ ಶ್ರೀಗಳು ಓದಿದ್ದರು.

ಶ್ರೀಗಳಿಗೆ ಪುಸ್ತಕಗಳೆಂದರೆ ಬಲು ಪ್ರೀತಿ. ಬಿಡುವು ಸಿಕ್ಕಾಗಲೆಲ್ಲಾ ಓದುತ್ತಲೇ ಇರುತ್ತಿದ್ದರು. ಒಳ್ಳೆಯ ವಿಚಾರಗಳು ಎಲ್ಲಿಂದ ಬೇಕಾದರೂ ಬರಲಿ, ಅವುಗಳಿಗೆ ತಡೆ ಹಾಕುವುದು ಬೇಡ ಎಂಬ ನಿಲುವನ್ನು ಶ್ರೀಗಳು ಹೊಂದಿದ್ದರು. ಪಂಪ, ರನ್ನ, ಬಸವಣ್ಣ, ಅಲ್ಲಮ ಪ್ರಭು, ಚನ್ನಬಸವಣ್ಣ, ಹರಿಹರ, ರಾಘವಾಂಕ, ಕನಕದಾಸ, ಪುರಂದರದಾಸ, ಸರ್ವಜ್ಞರ ಜೊತೆಗೆ ರಸಲ್, ಬರ್ನಾಡ್ ಷಾ, ಸಾಕ್ರೆಟೀಸ್, ಪ್ಲೇಟೋ, ಅರಿಸ್ಟಾಟಲ್, ಷೇಕ್ಸ್ ಪಿಯರ್, ವರ್ಡ್ಸ್‌ವರ್ತ್, ಶೆಲ್ಲಿ, ಮಾರ್ಕ್ಸ್, ಡಾರ್ವಿನ್, ಐನ್‌ಸ್ಟೈನ್ ಹೀಗೆ ಪ್ರಪಂಚದ ಎಲ್ಲಾ ಜ್ಞಾನಿಗಳ, ದಾರ್ಶನಿಕರ, ಚಿಂತನಶೀಲರ ವಿಚಾರಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿನ ಸಾರ ಸಂಗ್ರಹವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಿದ್ದರು.

ತಾವು ಓದಿದ್ದನ್ನು ವಿದ್ಯಾರ್ಥಿಗಳಿಗೂ ಬೋಧಿಸುತ್ತಿದ್ದರು. ಕೃತಿಗಳ ಮಹತ್ವ ತಿಳಿಸಿ ಅಧ್ಯಯನದಲ್ಲಿ ತೊಡಗಲು ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತಿದ್ದರು. ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ. ಮೈಮೇಲೆ ಹರಿದ ಬಟ್ಟೆ ಇದ್ದರೂ ಪರವಾಗಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ ಎಂಬುದು ಶ್ರೀಗಳ ಅಂಬೋಣವಾಗಿತ್ತು. ತಮ್ಮ ಕಾರ್ಯಾಲಯದ ಟೇಬಲ್ ಮುಂದೆ ಪುಸ್ತಕಗಳನ್ನು ಇಡುತ್ತಿದ್ದರು. ತಮ್ಮ ಕಣ್ಣೆದುರಿಗೆ ಪುಸ್ತಕ ಇರಬೇಕೆಂದು ಹೇಳುತ್ತಿದ್ದರು. ಕಣ್ಣೆದುರಿಗಿರುವ ಯಾವ ಪುಸ್ತಕವನ್ನು ಓದಬೇಕು, ಓದಿಲ್ಲದಿರುವುದು ಯಾವುದು, ಹೊಸದಾಗಿ ಬರೆದ ಗ್ರಂಥ ಯಾವುದು ಎಂಬುದನ್ನು ನೆನಪಿಸಿಕೊಳ್ಳುತ್ತಿದ್ದರು.

ಕಡೆಗೂ ಕನ್ನಡಕ ಹಾಕಲೇ ಇಲ್ಲ ಶ್ರೀಗಳು!

ಅಲ್ಲದೇ ಶ್ರೀಗಳು ದೂರ ದೂರಿಗೆ ಹೋಗುವಾಗಲಂತೂ ಪುಸ್ತಕಗಳು ಜೊತೆ ಇರಲೇಬೇಕು. ಸಭೆ ಸಮಾರಂಭಗಳಿಗೆ ಹೋದಾಗ ಬೇರೆ ಗಣ್ಯರು ಬರಲು ತಡವಾದಾಗಲೂ ಕೂಡ ಶ್ರೀಗಳು ಪುಸ್ತಕದ ಮೊರೆ ಹೋಗುತ್ತಿದ್ದರು. ಗ್ರಂಥಗಳು ಕೈಯಲ್ಲಿದ್ದರೆ ಎಂತದ್ದೋ ನೆಮ್ಮದಿ ಎಂಬುದು ಶ್ರೀಗಳ ಅಚಲ ನಂಬಿಕೆಯಾಗಿತ್ತು. ಅಷ್ಟೆ ಅಲ್ಲ ಮಠದಲ್ಲಿದ್ದಾಗ, ಹೊಲ ಗದ್ದೆಗಳಿಗೆ ಕೆಲಸಕ್ಕೆ ಹೋಗುವಾಗಲೂ ಕೂಡ ಕೈಯಲ್ಲಿ ಗ್ರಂಥಗಳಿರುತ್ತಿದ್ದವು. ಪೂಜಾಗೃಹದಲ್ಲೂ ಕೂಡ ಪುಸ್ತಕಗಳನ್ನು ಇಟ್ಟಿರುತ್ತಿದ್ದರು. ಮಲಗುವ ಮುನ್ನ ಹಾಗೂ ಎದ್ದ ಕೂಡಲೇ ಪುಸ್ತಕ ಓದುವ ಕಾಯಕವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದರು. ಪುಸ್ತಕ ಓದುವಾಗ ಪುಸ್ತಕದಲ್ಲಿ ಮುಖ್ಯವಾದ ವಿಷಯವಿದ್ದರೆ ಅದನ್ನು ಪೆನ್ನಿನಲ್ಲಿ ಗುರುತು ಮಾಡಿಕೊಂಡು ಮರುದಿನ ಬೇರೆಯವರಿಗೆ ಅದರ ಬಗ್ಗೆ ವಿವರಿಸುತ್ತಿದ್ದರು. ಗ್ರಂಥಗಳು ಸನ್ಮಿತ್ರ, ಗ್ರಂಥಾವಲೋಕನ ಒಂದು ತಪಸ್ಸು, ಅದೊಂದು ಸತ್ಸಂಗ ಯೋಗ, ಅದರಿಂದ ಜೀವನ ಯೋಗದ ಪರಿಪೂರ್ಣ ದರ್ಶನ ಭಾಗ್ಯ ಸಿಗುತ್ತದೆ ಎನ್ನುತ್ತಿದ್ದರು ಶ್ರೀಗಳು.

ಗ್ರಂಥಗಳು ಸನ್ಮಿತ್ರ, ಗ್ರಂಥಾವಲೋಕನ ಒಂದು ತಪಸ್ಸು, ಅದೊಂದು ಸತ್ಸಂಗ ಯೋಗ. ಅದರಿಂದ ಜೀವನ ಯೋಗದ ಪರಿಪೂರ್ಣ ದರ್ಶನ ಭಾಗ್ಯ ಸಿಗುತ್ತದೆ. - ಡಾ| ಶಿವಕುಮಾರ ಸ್ವಾಮೀಜಿ

 

click me!