ತುಮಕೂರು :  ಮಿತ ಆಹಾರ, ಒಳ್ಳೆ ಚಿಂತನೆಯಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ನಂಬಿದ್ದ ಶ್ರೀಗಳು ಕೊನೇವರೆಗೂ ಅದನ್ನು ಪಾಲಿಸಿದರು, ತಮ್ಮ ನಂಬಿಕೆಯನ್ನು ನಿಜ ಎಂದು ಸಾಬೀತು ಮಾಡಿ ತೋರಿಸಿದರು. 

ಇದಕ್ಕೆ ಅವರು ಕಡೇ ತನಕ ಕನ್ನಡಕವನ್ನೂ ಹಾಕಿರಲಿಲ್ಲ ಎಂಬುದೇ ಸಾಕ್ಷಿ. ಪ್ರತಿ ದಿನ ಸುಮಾರು 20 ಗಂಟೆ ಕಾಲ ಮಠದ ಏಳಿಗೆಗಾಗಿ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರೀಗಳು ದುಡಿದಿದ್ದರು. ಪ್ರತಿ ದಿನ ಕನಿಷ್ಠ 2 ಗಂಟೆಗಳ ಕಾಲ  ಅಧ್ಯಯನದಲ್ಲಿ ತೊಡಗುವುದು, ಸುಮಾರು 1 ಗಂಟೆ ಕಾಲ ಬರಿಯುವಾಗಲೂ ಶ್ರೀಗಳು ಕನ್ನಡಕ ಧರಿಸುತ್ತಿರಲಿಲ್ಲ. 

ಉತ್ಸಾಹದ ಚಿಲುಮೆಯಾಗಿದ್ದ ಶ್ರೀಗಳು ತಮ್ಮ ಹಳೆಮಠದಿಂದ ಆಡಳಿತ ಕಚೇರಿಗೆ, ಅಲ್ಲಿಂದ ಗದ್ದುಗೆಗೆ, ಬಳಿಕ ಊಟದ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದರು. ಶ್ರೀಗಳು ಸ್ಟೆಂಟ್ ಅಳವಡಿಸಿಕೊಳ್ಳುವ ತನಕ ಸಲೀಸಾಗಿ ಮಠದ ತುಂಬೆಲ್ಲಾ ಓಡಾಡುತ್ತಲೇ ಸ್ಫೂರ್ತಿಯಾಗಿದ್ದರು.