ಬೆಂಕಿ ಬೆಳಕಿನ ತಾರೆ: ಶ್ರೀಧರ ಭಂಡಾರಿ

By Kannadaprabha NewsFirst Published Feb 28, 2021, 9:06 AM IST
Highlights

ದೇಶದ ಪಾರಂಪರಿಕ ರಂಗಭೂಮಿಯಲ್ಲಿ ಉಜ್ವಲ ಪ್ರಭೆಯಿಂದ ಮೆರೆದು ಮರೆಯಾದ ಬಳ್ಳಂಬೆಟ್ಟು ಶ್ರೀಧರ ಭಂಡಾರಿ (1945-2021) ಅವರನ್ನು ನೆನಪಿಸುವಾಗಲೆಲ್ಲ ಬರುವುದು ಒಂದು ಉಲ್ಲಾಸದ ಅಬ್ಬರ, ಚಕ ಚಕ ಹೊಳೆದು ಹರಿಯುವ ರಸ ಪ್ರವಾಹದ ಲೀಲೆ. ಅವರು ಏರಿದ ಎತ್ತರ, ದೀರ್ಘಕಾಲಿಕವಾದ ಏಕಪ್ರಕಾರ ಕಲಾ ಸಾಮರ್ಥ್ಯ, ಪಡೆದ ಜನಪ್ರಿಯತೆಗಳು ಬಹು ವಿರಳ, ಅತ್ಯಂತ ಅರ್ಹ.

-ಡಾ. ಎಂ.ಪ್ರಭಾಕರ ಜೋಶಿ

ಆರು ದಶಕಗಳ ಕಾಲ ಯಕ್ಷಗಾನ ತೆಂಕುತಿಟ್ಟಿನ ಪುಂಡು ವೇಷ (ಬಾಲ, ತರುಣ, ವೀರ)ದಲ್ಲಿ ಪ್ರವೃತ್ತರಾಗಿದ್ದು ನಿಜಕ್ಕೂ ಬಹುಶಃ ಮೀರಲಾಗದ ವಿಕ್ರಮ. ಯಕ್ಷಗಾನದ ಪುಂಡು ವೇಷದಲ್ಲಿ ಅಪೇಕ್ಷಿತವಾದ ರೂಪ, ತಾರುಣ್ಯ, ರಭಸ, ಜೀವಂತಿಕೆಗಳನ್ನು ಅಷ್ಟುಕಾಲ ಕಾಪಾಡಿಕೊಂಡು ಕಾಣಿಸಿದ ಶ್ರೀಧರ ಕಲಾ ಜೀವನ ಒಂದು ಪವಾಡದಂತೆ ಕಂಡರೆ ಅದು ವರ್ಣನೆಯಲ್ಲ. ಇದು ಅನುಭವಿಸಿದವರಿಗೆ ಗೊತ್ತು. ಅರ್ವಾಚೀನ ಯಕ್ಷಗಾನದ ಇತಿಹಾಸದಲ್ಲಿ ಭಂಡಾರಿ ಅವರಿಗೆ ಒಂದು ದೊಡ್ಡ ಸ್ಥಾನವಿದೆ.

ತನ್ನ ಸಮೃದ್ಧವಾದ ಕೌಟುಂಬಿಕ ಪರಂಪರೆಯ ಹಿನ್ನೆಲೆಯನ್ನೂ, ಗುರು ಪರಂಪರೆಯನ್ನೂ ಸಾರ್ಥಕವಾಗಿ ಬೆಳೆಸಿದ ಪಿತೃಋುಣ, ಆಚಾರ್ಯ ಋುಣಗಳನ್ನು ತೀರಿಸಿದ ಜೀವನ ಸಾರ್ಥಕ ಸಾಧಕರವರು.

ಕಾಸರಗೋಡಿನ ಪೆರ್ಲ ಬಳಿಯ ಬಳ್ಳಂಬೆಟ್ಟು ಮೂಲದವರು. ಅವರ ಅಜ್ಜ ಭಾಗವತ ಜತ್ತಪ್ಪ ರೈಗಳು. ಮೇಳ ಸಂಚಾಲಕ, ಭಾಗವತರಾಗಿ ಪ್ರಸಿದ್ಧರು. ತಂದೆ ಪ್ರಸಿದ್ಧ ಕಲಾವಿದ ಶೀನಪ್ಪ ಭಂಡಾರಿ (ತಾಯಿ-ಸುಂದರಿ). ಬಹುಮುಖಿ ಕಲಾಸಾಧಕ, ಉತ್ತಮ ನಟರು. ಬಳ್ಳಂಬೆಟ್ಟು, ಸುಬ್ರಹ್ಮಣ್ಯ, ಪುತ್ತೂರು ಮೇಳಗಳನ್ನು ನಡೆಸಿ ಮೂಲೆ ಮೂಲೆಗಳಿಗೆ ಕಲಾ ಪ್ರಸಾರ ಮಾಡಿದವರು.

19 ಮಂದಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

ಒಂಬತ್ತನೆಯೇ ಪ್ರಾಯದಲ್ಲಿ ಬಳ್ಳಂಬೆಟ್ಟು ಮೇಳದಲ್ಲಿ ಗೆಜ್ಜೆ ಕಟ್ಟಿದ ಶ್ರೀಧರ, ಮುಂದೆ ಅರುವತ್ತೇಳು ವರ್ಷ ನಿರಂತರ ನಡೆಸಿದ ಕಲಾ ವ್ಯವಸಾಯ, ಬೆಳೆದು ಬಂದ ಬಗೆ ಒಂದು ವೀರಗಾಥೆ. ಮನೆತನದ ಆರಂಭಿಕ ಪಾಠಕ್ಕೆ ಯಕ್ಷಗಾನಾಚಾರ್ಯ ಕುರಿಯ ವಿಠಲ ಶಾಸ್ತ್ರಿ, ಹಿರಿಯ ವೇಷಧಾರಿಗಳಾದ ಮಾಧವ ಶೆಟ್ಟಿ, ಗೋವಿಂದ ಭಟ್ಟ, ಮಹಾಲಿಂಗ ಭಟ್ಟ, ನಾರಾಯಣ ಭಟ್ಟರ ಪಾಠ, ಒಡನಾಟದ ಮೆರುಗು. ನಾಟ್ಯಾಚಾರ್ಯ ಕುದ್ಕಾಡಿ ವಿಶ್ವನಾಥ ರೈ ಅವರಿಂದ ನೃತ್ಯ ಶಿಕ್ಷಣ. ಇವನ್ನೆಲ್ಲ ಒಂದು ಪಾಕವಾಗಿಸಿ ಯಶಸ್ಸಿನ ಶಿಖರವೇರಿದವರು ಶ್ರೀಧರ ಭಂಡಾರಿಯದು ಚಿಗರೆಯ ಓಟ, ಮರಿಸಿಂಹದ ಪ್ರತಾಪ.

ಭಂಡಾರಿಯವರ ಅತ್ಯುತ್ತಮವಾದ ಕಲಾಜೀವನ ಸುಮಾರು ನಾಲ್ಕು ದಶಕದ ಕಾಲದ ಶ್ರೀ ಧರ್ಮಸ್ಥಳ ಮೇಳದಲ್ಲಿ. ಅದು ಆ ಮೇಳದಲ್ಲಿ ಒಂದು ದೊಡ್ಡ ತಂಡವಿದ್ದ ಕಾಲ. ಕಡತೋಕ ಮಂಜುನಾಥ ಭಾಗವತ, ಪುತ್ತೂರು ನಾರಾಯಣ ಹೆಗ್ಡೆ, ಕುಂಬಳೆ ಸುಂದರ ರಾವ್‌, ಕೆ.ಗೋವಿದ ಭಟ್ಟ, ಎಂಪಕಟ್ಟೆರಾಮಯ್ಯ ರೈ, ನೆಡ್ಲೆ ನರಸಿಂಹ ಭಟ್ಟ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ ಇವರ ಒಡನಾಟ ಭಾಗ್ಯ ಸಣ್ಣದೇ? ಗುರುವೃಂದದಿಂದ ಕಲಿತ ನೃತ್ಯ, ಹೊಸಹಿತ್ಲು ಅವರ ಪಾತ್ರಕಲ್ಪನೆಯ ನಡೆಗಳಿಂದ ಪುಷ್ಟವಾದ ಇವರ ಕಲೆಗಾರಿಕೆ ಅನನ್ಯವೆಂಬಂತೆ ಮೆರೆಯಿತು. ತೆಂಕುತಿಟ್ಟಿನ ಪುಂಡುವೇಷ ಪರಂಪರೆಯ ಶ್ರೇಷ್ಠರೆನಿಸಿದ ಅಳಕೆ ರಾಮಯ್ಯ ರೈ, ಮೂಡಬಿದ್ರೆ ವಾಸು, ಕೃಷ್ಣ ರಾವ್‌ (ಕಿಟ್ಟು) ಕ್ರಿಶ್ಚಿನ್‌ ಬಾಬು, ಕೊರಗಪ್ಪ ರೈ ಇವರಿಗೆ ಸರಿ ಮಿಗಿಲೆನಿಸಿ ಮೆರೆದ ಭಂಡಾರಿ ಒಂದು ಯಕ್ಷ ನಕ್ಷತ್ರ.

ರಂಗಸ್ಥಳದ ಪಾದರಸ: ಪುಂಡು ವೇಷಧಾರಿಗಿರಬೇಕಾದ ಎಲ್ಲವೂ ಒಬ್ಬನಲ್ಲಿ ಸೇರಿ ಬರುವುದು ಅಸಮಾನ್ಯ ಯೋಗ. ಹದವಾದ ದೇಹ, ಸುರೇಖ, ಸುಂದರ ಮೋಹಕ ರೂಪ ಸಂಪತ್ತು, ಅದ್ಭುತವೆನಿಸುವ ಕಸುವು, ನಿರಾಯಾಸ ದುಡಿಮೆಯ ತಾಕತ್ತು, ಚೊಕ್ಕತನ, ರಭಸ, ಉತ್ಕರ್ಷ ತುಂಬಿದ ಕುಣಿತ, ನಾಟ್ಯ, ಚಲನ, ಭಾವ, ಹದವಾದ ಭಾವ ತುಂಬಿ ಮಾತುಗಾರಿಕೆಗಳ ಶ್ರೀಧರ ‘ಅನುಪಮ’ ಕಲಾಕಾರ ನಿಸ್ಸಂದೇಹ. ಅವರು ರಂಗಸ್ಥಳದ ಪಾದರಸ. ಅವರ ಧಿಗಿಣ, ಬೆಂಕಿಯ ಉಂಡೆಯ ಹಾಗೆ, ‘ಸಿಡಿಲ ಮರಿ’ ಎಂಬ ಅನ್ವರ್ಥಕ ಬಿರುದಿನ ಸಾಕಾರವಾಗಿದ್ದ ಒಟ್ಟು ನಿರ್ವಹಣೆ ಅವರನ್ನು ಸಾಟಿಯಿಲ್ಲದ ಕಲಾವಿದನಾಗಿ ಸ್ಥಾಪಿಸಿದವು. ಅಭಿಮನ್ಯು, ಪರಶುರಾಮ, ಬಭ್ರುವಾಹನ, ಶ್ರೀಕೃಷ್ಣ, ಸುದರ್ಶನ ಮೊದಲಾದ ಅವರ ಪಾತ್ರಗಳು ಐಕಾನಿಕ್‌ ಅನಿಸಿದವು. ಇಷ್ಟೆಲ್ಲ ಕುಣಿದು, ಏದುಸಿರು ಬಿಡದೆ ಸಲೀಸಾಗಿ ಮಾತಾಡಿ ಪುನಃ ಕುಣಿಯುವುದೆಂದರೆ ಮನುಷ್ಯಮಾತ್ರನಿಗೆ ಸಾಧ್ಯವೇ ಎಂಬಷ್ಟು ಆಶ್ಚರ್ಯಕರ ಎಂದು ಪ್ರೊ.ಬಿಳಿಮಲೆ ಅವರು ಬರೆದಿರುವುದು ಅತಿಶಯೋಕ್ತಿಯಲ್ಲ. ಅಭಿಮನ್ಯುವಿನಂತಹ ಪಾತ್ರ ರಭಸದಿಂದ ಪ್ರವೇಶಿಸಿ, ಪ್ರಸಂಗದ ಕೊನೆಯ ತನಕವೂ ಅದೇ ಉಲ್ಲಾಸ ಉಳಿಸಿಕೊಂಡು, ಮತ್ತಷ್ಟುಉಜ್ವಲವಾಗಿ ಮೆರೆಸಿದ್ದು ಈಗ ನೆನಪು ಮಾತ್ರ. ಏನು ಕುಣಿತ, ಅದೆಂತಹ ಧಿಗಿಣ, ಏನು ರಭಸ! ಸನ್ನಿವೇಶದಿಂದ ಸನ್ನಿವೇಶಕ್ಕೆ ಏರುತ್ತಲೇ ಹೋಗುತ್ತಿದ್ದ ಅವರ ಸಾಮರ್ಥ್ಯ, ವಿಸ್ಮಯ ಎಂದರೆ ಸಾಲದು. ಶ್ರೀಧರ ಭಂಡಾರಿ ಅವರು ರಂಗದಲ್ಲಿ ಮೆರೆಯುವುದಕ್ಕೆ ಕಾರಣಕಾರ ಈರ್ವರೆಂದರೆ ವೇಷ, ನಾಟ್ಯ ಅಭಿನಯಗಳಿಗೆ ಜೀವ ತುಂಬುತ್ತಿದ್ದ ಕಡತೋಕ ಭಾಗವತರು ಮತ್ತು ಕೃಷ್ಣಯ್ಯ ಬಲ್ಲಾಳರ ಹಿಮ್ಮೇಳದ ಸಂಪದ.

ಮದುವೆ ಭೋಜನದಲ್ಲಿ ಭಾಗವತಿಕೆ: ಜೋಡಿ ಕಲಾರಾಧನೆಗೆ ಕಲಾ ರಸಿಕರು ಖುಷ್ 

ಶ್ರೀಧರ ಭಂಡಾರಿ, ನೂರಾರು ಧೀಗಿಣ (ಗಿರ್ಕಿ) ಹಾರುತ್ತಿದ್ದರು ಎಂದಷ್ಟೇ ಅವರನ್ನು ವೈಭವಿಸುವುದು ಅವರ ಸರ್ವಾಂಗ ಕಲೆಗಾರಿಕೆಗೆ ಮಾಡುವ ಅನ್ಯಾಯ. ಮಾತು, ಅಭಿನಯ, ವಿವಿಧ ರಸಭಾವಗಳ ಸೂಕ್ಷ್ಮ ಅಭಿವ್ಯಕ್ತಿಯಲ್ಲಿ ಅವರಿಗೆ ಉತ್ತಮ ಪ್ರಭುತ್ವವಿತ್ತು. ವಿವಿಧ ಪ್ರಸಂಗಗಳ ಅವರ ಕೃಷ್ಣನ ಪಾತ್ರ, ಅಭಿಮನ್ಯು, ಬಭ್ರುವಾಹನರಷ್ಟೇ ಯಶಸ್ವಿಯಾಗಿತ್ತು. ಬಹುಶಃ ಕೆಲವರಿಗಷ್ಟೇ ನೆನಪಿರಬಹುದಾದ ಸಂಗತಿ, ಅವರು ಉತ್ತಮ ಮಟ್ಟದ ಸ್ತ್ರೀಪಾತ್ರಧಾರಿಯೂ ಆಗಿದ್ದರೆಂಬುದು. ‘ಜಲಂಧರ’ ಪ್ರಸಂಗದ ಅವರ ಲಕ್ಷ್ಮೇ-ಕುಂಬಳೆ ಸುಂದರ ರಾಯರ ವಿಷ್ಣು ಸ್ಮರಣೀಯ ಜೋಡಿ.

ಎಪ್ಪತ್ತೈದರ ಹರೆಯದ ವರೆಗೂ ಭಂಡಾರಿ ಅವರು ಉಳಿಸಿಕೊಂಡಿದ್ದ ಯೌವ್ವನ, ಅಬ್ಬರ, ರೂಪ ನಮ್ಮ ಕಲಾಕ್ಷೇತ್ರದ ಒಂದು ವಿರಳ ವಿಸ್ಮಯ. ಕಿರೀಟದ ತಾಮ್ರಧ್ವಜ, ಇಂದ್ರಜಿತು ಮೊದಲಾದ ವೇಷಗಳಲ್ಲಿಯೂ ಅವರು ಯಶಸ್ವಿ.

ಒಳ್ಳೆಯ ಸಂಘಟಕರೂ ಆಗಿದ್ದ ಭಂಡಾರಿ ಪುತ್ತೂರು ಮಹಾಲಿಂಗೇಶ್ವರ ಮೇಳ, ಕಾಂತಾವರ ಮೇಳಗಳ ಸಂಚಾಲಕರಾಗಿಯೂ ನಿರ್ವಹಿಸಿದ್ದರು. ಪುತ್ತೂರಿನ ಯಕ್ಷಕುಟೀರದ ಗುರು ನಿರ್ದೇಶಕರಾಗಿ ಹಲವರಿಗೆ ತರಬೇತಿ ನೀಡಿದ್ದರು. ಈ ಲೇಖಕನು ಸಂಘಟಿಸಿದ್ದ ದುಬೈ, ಬಹರೈನ್‌ ಯಕ್ಷಗಾನ ಪ್ರವಾಸದಲ್ಲಿ ಅವರಿಗಿತ್ತ ಸಮುಗ್ರ ಸಹಕಾರ ಮರೆಯಲಾಗದು.

ದೇಶದ ಪಾರಂಪರಿಕ ರಂಗಭೂಮಿಯ ಓರ್ವ ಅಗ್ರಪಂಕ್ತಿಯ ಕಲಾವಿದರಾದ ಶ್ರೀಧರ ಭಂಡಾರಿ ಯಕ್ಷಗಾನದ ಓರ್ವ ಅವಿಸ್ಮರಣೀಯ, ಮಹಾನ್‌ ಕಲಾವಿದ. ಪ್ರೇಕ್ಷಕರ ನೆನಪಿನ ನಿಧಿ. ಒಡನಾಡಿಗಳ ಹೆಮ್ಮೆ. ಕಲಾಭಿವ್ಯಕ್ತಿಯ ಬೆಂಕಿ ಬೆಳಕಿನ ತಾರೆ, ನಿತ್ಯ ಸ್ಮೃತಿಯ ಅಭಿಮನ್ಯು.

click me!