
ಬೆಂಗಳೂರು (ಸೆ. 09): ಮುನಿಭಾ ಮಜಾರಿ ಪಾಕಿಸ್ತಾನದ ಐರನ್ ಲೇಡಿ ಎಂದೇ ಖ್ಯಾತರಾದವರು. ಇವರ ಜೀವನದ ಸವಾಲನ್ನು ನೋಡಿದ್ರೆ ಎಂಥವರ ಕರುಳೂ ಚುರುಕ್ ಎನ್ನುತ್ತೆ. ಒಂದು ಕಾರು ಅಪಘಾತ ಇವರ ಜೀವನವನ್ನೇ ಬದಲಾಯಿಸಿಬಿಟ್ಟಿತು. ಅಂಗವೈಕಲ್ಯವನ್ನೇ ಮೀರಿ ಕ್ಯಾನ್ವಾಸ್‌ನಲ್ಲಿ ಕಲೆ ಅರಳಿಸಿದವರು ಮುನಿಭಾ ಮಜಾರಿ. ಸವಾಲನ್ನು ಇವರು ಸ್ವೀಕರಿಸಿದ್ದೇಗೆ? ಅವರದೇ ಮಾತುಗಳು ಇಲ್ಲಿದೆ ನೋಡಿ.
ಬಹುಶಃ ನಾನೊಬ್ಬಳು ಕತೆಗಾರ್ತಿಯಿರಬೇಕು. ಏಕೆಂದರೆ ನಾನೆಲ್ಲೇ ಹೋದರೂ ಎಲ್ಲರೊಂದಿಗೂ ನನ್ನ ಜೀವನಗಾಥೆಯನ್ನು ಶೇರ್ ಮಾಡುತ್ತೇನೆ. ಇದೊಂದು ಅಪೂರ್ಣಗೊಂಡ ಕತೆ. ಅದೇ ಅಪೂರ್ಣತೆ ಈಗ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ.
ನಿಮಗೆ ಜೀವನ ಭಾರ ಎನಿಸಿದರೆ ಏನು ಮಾಡುತ್ತೀರಿ? ಬಹಳ ಜನರು ಅದನ್ನು ಬಿಟ್ಟುಬಿಡುತ್ತಾರೆ. ಆದರೆ, ಮತ್ತೊಮ್ಮೆ ಯೋಚನೆ ಮಾಡಿ. ನಿಮ್ಮ ಬಗ್ಗೆಯೇ ನಿಮಗೆ ಅಪನಂಬಿಕೆ ಇದ್ದರೆ ಏನನ್ನೂ ಸಾಧಿಸಲಾಗದು. ಕೆಲವೊಮ್ಮೆ ಸಮಸ್ಯೆಗಳು ಅಷ್ಟೇನೂ ದೊಡ್ಡದಾಗಿರುವುದದಿಲ್ಲ. ಆದರೆ ನಾವು ಅದಕ್ಕಿಂತಲೂ ಚಿಕ್ಕವರಾಗಿರುತ್ತೇವೆ ಅಷ್ಟೆ. ಕೆಲವರು ನನ್ನನ್ನು ಅಂಗವಿಕಲೆ ಎನ್ನುತಾರೆ. ಆದರೆ ನಾನು ನನ್ನನ್ನು ವಿಶಿಷ್ಟ ವ್ಯಕ್ತಿ ಎಂದುಕೊಳ್ಳುತ್ತೇನೆ.
ಏಕೆಂದರೆ ಅವರು ನನ್ನ ಅಂಗವೈಕಲ್ಯತೆಯನ್ನು ಮಾತ್ರ ನೋಡುತ್ತಾರೆ. ನಾನು ನನ್ನ ಶಕ್ತಿಯನ್ನು ನೋಡುತ್ತೇನೆ. ಜೀವನ ಪೂರ್ತಿ ವ್ಹೀಲ್‌ಚೇರ್ ಕೆಲ ಭಯಾನಕ ಅವಘಡಗಳು ದೈಹಿಕವಾಗಿ ನಿಮ್ಮನ್ನು ಕುಗ್ಗಿಸಬಹುದು. ಅವು ನಿಮ್ಮ ದೇಹ
ವನ್ನು ವಿರೂಪಗೊಳಿಸಬಹುದು. ಆಗ ಜೀವನವೇ ಮುಗಿಯಿತು ಎಂದೆನಿಸಬಹುದು. ಆದರೆ ನಿಮ್ಮಲ್ಲಿ ಛಲ ಇದ್ದರೆ ಅದೇ ಘಟನೆ ನಿಮ್ಮ ಬದುಕನ್ನೇ ಬದುಲಿಸಬಲ್ಲದು. ಅಂಥದ್ದೇ ಘಟನೆ ನನ್ನ ಜೀವನದಲ್ಲಿಯೂ ಘಟಿಸಿತು.
ನಾನು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದವಳು. 18 ವರ್ಷದವಳಿದ್ದಾಗಲೇ ಮದುವೆ ಆಯಿತು. ನಂತರ 2 ವರ್ಷದಲ್ಲಿ ಅಂದರೆ ಸುಮಾರು 9 ವರ್ಷದ ಹಿಂದೆ ಕಾರು ಅಪಘಾತವಾಯಿತು.
ನನ್ನ ಗಂಡ ಹೊರಗೆ ಹಾರಿ ಪ್ರಾಣ ರಕ್ಷಿಸಿಕೊಂಡರು. ಆದರೆ, ನಾನು ಕಾರಿನೊಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡೆ. ಬಲಗೈಗೆ ಬಲವಾಗಿ ಪೆಟ್ಟಾಗಿತ್ತು, ಮಣಿಕಟ್ಟು ಮರಿದಿತ್ತು. ಭುಜದ ಎಲುಬು, ಕೊರಳ ಎಲುಬು, ಪಕ್ಕೆಲುಬಿಗೆ ಗಾಯವಾಗಿತ್ತು. ಇದರಿಂದಾಗಿ ಯಕೃತ್ತು ಹಾಗೂ ಶ್ವಾಸಕೋಶಕ್ಕೆ ಹಾನಿಯಾಗಿತ್ತು.
ಸರಿಯಾಗಿ ಉಸಿರಾಡಲೂ ಆಗುತ್ತಿರಲಿಲ್ಲ. ಬೆನ್ನೆಲುಬು ಸಂಪೂರ್ಣ ಪುಡಿ ಪುಡಿಯಾಗಿತ್ತು. ಉಳಿದ ಜೀವನಪೂರ್ತಿ ಪಾಶ್ವವಾಯು ಬಡಿದವರಂತೆ ಬದುಕಬೇಕಾಯಿತು. ಎರಡೂವರೆ ತಿಂಗಳು ಆಸ್ಪತ್ರೆಯಲ್ಲಿ ಕಳೆದೆ. ಹಲವು ಸರ್ಜರಿಗಳಾದವು. ಒಂದು ದಿನ ಡಾಕ್ಟರ್ ಬಂದು, ‘ನೀನು ಆರ್ಟಿಸ್ಟ್ ಆಗಬೇಕೆಂದು ಕೊಂಡಿದ್ದೀಯಾ ಅಂತ ಕೇಳ್ಪಟ್ಟೆ. ಆದರೆ ಹೌಸ್‌ವೈಫ್ ಆಗಿಯೇ ನಿನ್ನ ಜೀವನ ಕೊನೆಗೊಳ್ಳುತ್ತದೆ. ನೀನು ಮತ್ತೊಮ್ಮೆ ಕುಂಚ ಹಿಡಿಯಲು ಸಾಧ್ಯವಿಲ್ಲ. ನಿನ್ನ ಮಣಿಕಟ್ಟು
ಮುರಿದಿದೆ’ ಎಂದರು. ನಾನು ಸುಮ್ಮನಿದ್ದೆ. ಮತ್ತೆ ಮರುದಿನ ಬಂದ ಡಾಕ್ಟರ್, ‘ನೀನು ಎದ್ದು ನಡೆಯಲು ಸಾಧ್ಯವಿಲ್ಲ’ ಎಂದರು.
ನಾನು ಸುದೀರ್ಘವಾಗಿ ಉಸಿರೆಳೆದುಕೊಂಡು ‘ಇಟ್ಸ್ ಓಕೆ’ ಎಂದೆ. ಮತ್ತೆ ಮರುದಿನ ಬಂದ ಡಾಕ್ಟರ್, ‘ಬೆನ್ನುಹುರಿಗೆ ಗಾಯವಾಗಿರುವುದರಿಂದ ನೀನು ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ’ ಎಂದರು. ಆ ದಿನ ನನ್ನ ಜೀವನವೇ
ಛಿದ್ರವಾದಂತೆನಿಸಿತು. ಪ್ರತಿಯೊಬ್ಬ ಸ್ತ್ರೀಗೂ ತಾಯಿಯಾಗದೇ ಜೀವನ ಅಪೂರ್ಣ ಎಂಬ ಭಾವನೆ ಇರುತ್ತದೆ. ನಾನು ಜೀವನಪೂರ್ತಿ ಅಪೂರ್ಣ ಮಹಿಳೆಯಾಗಿಯೇ ಬದುಕಬೇಕೆ? ಆ ಜೀವನಕ್ಕೆ ಏನರ್ಥವಿದೆ? ಎಂದೆನಿಸಿತು.
ಆಗ ನನ್ನ ತಾಯಿ ನನಗೊಂದು ಮಾತು ಹೇಳಿದ್ದರು, ‘ದೇವರು ನಿನಗಾಗಿ ಬೇರೇನೋ ಯೋಜನೆ ಹಾಕಿಕೊಂಡಿದ್ದಾನೆ. ಅದೇನೆಂದು ನನಗೂ ಗೊತ್ತಿಲ್ಲ. ಆದರೆ ಖಂಡಿತ ಏನನ್ನೋ ನೀಡಿಯೇ ನೀಡುತ್ತಾನೆ.’ ಆಸ್ಪತ್ರೆಯಲ್ಲಿ ಮೊದಲ ಪೇಂಟಿಂಗ್ ಒಂದು ದಿನ ನನ್ನ ಅಣ್ಣನ ಬಳಿ ಹೋಗಿ ಹೇಳಿದೆ, ‘ನನ್ನ ಕೈಗಳು ವಿರೂಪಗೊಂಡಿವೆ. ಆಸ್ಪತ್ರೆಯ ಈ ಬಿಳಿ ಗೋಡೆ ನೋಡಿ ದಣಿದಿದ್ದೇನೆ. ನನ್ನ ಜೀವನದಲ್ಲಿ ಮತ್ತಷ್ಟು ಬಣ್ಣಗಳು ಬೇಕು. ಬಣ್ಣಗಳನ್ನು ತಂದು ಕೊಡು. ಕ್ಯಾನ್‌ವಾಸ್
ತಂದು ಕೊಡು. ನಾನು ಪೇಯಿಂಟ್ ಮಾಡಬೇಕು.
’ ಮೊದಲ ಬಾರಿಗೆ ನಮ್ಮಿಂದ ದೂರಾದ ನನ್ನ ತಂದೆಯ ಚಿತ್ರ ಬರೆದೆ. ಅದು ಕೇವಲ ಚಿತ್ರವಾಗಿರಲಿಲ್ಲ, ನನಗೆ ನಾನು ಮಾಡಿಕೊಂಡ ಥೆರಪಿಯಾಗಿತ್ತು! ಜನ ಇಂದು ನನ್ನ ಬಳಿ ಬಂದು ಪೇಂಟಿಂಗ್ ಎಷ್ಟು ಚೆನ್ನಾಗಿದೆ ಎನ್ನುತ್ತಾರೆ. ಅದರ ಹಿಂದಿನ ಕಣ್ಣೀರಿನ ಕತೆ ಯಾರಿಗೂ ಕಾಣುವುದಿಲ್ಲ. ಆಸ್ಪತ್ರೆಯಲ್ಲಿನ ಎರಡೂವರೆ ತಿಂಗಳೂ ಹೀಗೇ ಕಳೆದೆ. ಬಳಿಕ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದೆ. ಬೇರೆಲ್ಲ ಸರಿಯಾಗಿತ್ತು, ಆದರೆ ಕೂರಲು ಸಾಧ್ಯವಾಗು ತ್ತಿರಲಿಲ್ಲ. ದೇಹಕ್ಕೆ ಸಾಕಷ್ಟು ಸೋಂಕು ತಗುಲಿತ್ತು. ಹಾಗಾಗಿ ಹಾಸಿಗೆ ಮೇಲೆ ನೇರವಾಗಿ ಮಲಗಿಕೊಂಡೇ ಇರಬೇಕೆಂದು ಡಾಕ್ಟರ್ ಸಲಹೆ ನೀಡಿದರು.
ಅದೇನೂ ಒಂದೆರಡು ವಾರ ಅಥವಾ ಒಂದೆರಡು ತಿಂಗಳಲ್ಲ. ಸತತ 2 ವರ್ಷ. ಕನ್ನಡಿ ಮುಂದಿನ ಸಾಕ್ಷಾತ್ಕಾರ ಪ್ರತಿಯೊಬ್ಬರ ಜೀವನದಲ್ಲೂ ಟರ್ನಿಂಗ್ ಪಾಯಿಂಟ್ ಎನ್ನುವುದಿರುತ್ತದೆ. ಎಲ್ಲರಿಗೂ ಮರುಹುಟ್ಟು ಎಂಬುದು ಇರುತ್ತದೆ. ನಾನದನ್ನು ಆಚರಿಸಿದ್ದೇನೆ. ಎರಡೂವರೆ ವರ್ಷದ ನಂತರ ನಾನು ವ್ಹೀಲ್ ಚೇರ್ ಮೇಲೆ ಕುಳಿತುಕೊಳ್ಳಲು ಸಾಧ್ಯವಾದ ದಿನವೇ ನನ್ನ ಮರುಹುಟ್ಟು.
ಆ ದಿನ ವ್ಹೀಲ್‌ಚೇರ್ ಮೇಲೆ ಕುಳಿತು ಕನ್ನಡಿ ಎದುರು ಹೋದೆ. ಆಗ ನನ್ನ ಜೀವನದಲ್ಲಿ ಪವಾಡವೊಂದು ಘಟಿಸೀತು ಎಂದು ಕಾದು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ, ನನ್ನನ್ನು ನಾನು ಅಪೂರ್ಣ ಎಂದು ಕೊಂಡರೆ ಏನನ್ನೂ ಮಾಡಲಾಗದು, ನನಗಾಗಿ ನಾನು ಬದುಕಬೇಕು ಎಂದುಕೊಂಡೆ. ನನ್ನ ಭಯದ ವಿರುದ್ಧ ನಾನೇ ಹೋರಾಟ ಮಾಡಬೇಕೆಂದು ನಿರ್ಧರಿಸಿದೆ.
ನನ್ನ ಭಯಗಳ ಉದ್ದ ಲಿಸ್ಟ್!
ಪ್ರತಿಯೊಬ್ಬರಲ್ಲೂ ಆ ಭಯ ಇದ್ದೇ ಇರುತ್ತದೆ. ಯಾರನ್ನೋ ಕಳೆದುಕೊಳ್ಳುವ ಭಯ, ಯಾರದ್ದೂ ಸಹಾಯ ಇಲ್ಲದೆ ಹೇಗೆ ಬದುಕಬೇಕೆಂಬ ಭಯ, ಇತ್ಯಾದಿ ಆ ಎಲ್ಲಾ ಭಯವನ್ನೂ ಒಂದಾದ ಮೇಲೊಂದರಂತೆ ಬರೆದಿಟ್ಟೆ. ಆ ಭಯದಿಂದ ಹೊರಬರಲು ನಿರ್ಧರಿಸಿದೆ. ಆದರೆ, ನನ್ನ ಅತಿದೊಡ್ಡ ಭಯ ‘ವಿಚ್ಛೇದನ’ವಾಗಿತ್ತು. ಆತನಿಗೆ ಮುಕ್ತಿ ನೀಡಿ ನನ್ನನ್ನು ಸ್ವಂತಂತ್ರಗೊಳಿಸಿಕೊಳ್ಳಲು ನಿರ್ಧರಿಸಿದೆ.
ನನ್ನ ಮತ್ತೊಂದು ಭಯ ನಾನು ತಾಯಿಯಾಗಲಾರೆ ಎಂಬುದು. ಆಗ, ಪ್ರಪಂಚದಲ್ಲಿ ಲಕ್ಷಾಂತರ ಮಕ್ಕಳಿದ್ದಾರೆ. ಅಳುವುದರಲ್ಲಿ ಅರ್ಥವಿಲ್ಲ, ಅವರಲ್ಲಿ ಯಾರಾದರೊಬ್ಬರನ್ನು ದತ್ತು ಪಡೆಯಬಹುದು ಎಂದು ನನಗೆ ಅರಿವಾಯಿತು. ಅದನ್ನು ಮಾಡಿದೆ ಸಹ.
ಯಾವುದು ಪರಿಪೂರ್ಣತೆ?
ಯಾರಿಗೂ ಸೋಲು ಅಂತಿಮ ಅಲ್ಲ. ಅದೊಂದು ಆಯ್ಕೆ ಅಷ್ಟೆ. ಸೋತಾಗ ಎದ್ದುನಿಲ್ಲಿ. ಆಗ ಮತ್ತೊಮ್ಮೆ ಸೋಲಬಹುದು. ಆಗಲೂ ಎದ್ದೇಳಿ. ಅದು ನಿಮ್ಮನ್ನು ಮುಂದೆ ಕರೆದೊಯ್ಯುತ್ತದೆ. ಬದುಕಿನಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕೆಂದು ಬಯಸುವುದು ಸಹಜ. ಆದರೆ ನಾವೆಲ್ಲ ರೂ ಪರಿಪೂರ್ಣರಲ್ಲಿ ಅಪರಿಪೂರ್ಣರು.
ನನಗೂ ಈ ಮೊದಲು ‘ಎತ್ತರ, ಬಣ್ಣ ಎಲ್ಲ ದರಲ್ಲೂ ನೀನು ಪರ್‌ಫೆಕ್ಟ್’ ಎನ್ನುತ್ತಿದ್ದರು. ಆದರೆ ಈಗ? ವಾಸ್ತವವಾಗಿ ಬೇರೊಬ್ಬರ ಮುಖದಲ್ಲಿ ನಗು ಮೂಡಿಸುವುದೊಂದೇ ಪರಿಪೂರ್ಣತೆ.