ಕೊನೆಗೂ ತಾಯಿಯ ಕ್ಯಾನ್ಸರ್ ಶಿಶುವಿಗೆ ಬರಲಿಲ್ಲ!

By Kannadaprabha NewsFirst Published Aug 6, 2018, 3:30 PM IST
Highlights

ಕಳೆದ ವಾರ ಅಚ್ಚರಿಯ ವೈದ್ಯಕೀಯ ವಿದ್ಯಮಾನವೊಂದು ಬೆಳಕಿಗೆ ಬಂತು. ತನ್ನ ಜೀನ್‌ನಲ್ಲಿ ಕ್ಯಾನ್ಸರ್ ಕೋಶಗಳನ್ನು ಹೊಂದಿದ್ದ ತಾಯಿಯೊಬ್ಬಳು ತನ್ನಿಂದ ಕ್ಯಾನ್ಸರ್ ಜೀನ್‌ಗಳು ತನ್ನ ಮಕ್ಕಳಿಗೂ ವರ್ಗಾವಣೆಯಾಗಬಾರದು ಎಂದು ವಿಶಿಷ್ಟ ಪ್ರಯೋಗಕ್ಕೆ ಮುಂದಾದಳು. ಐವಿಎಫ್ ಮೂಲಕ ಪಿಜಿಡಿ ಅಥವಾ ಪ್ರಿ ಇಂಪ್ಲಾಂಟೇಶನ್ ಡಯಗ್ನೋಸಿಸ್ ಎಂಬ ಆಧುನಿಕ ಐವಿಎಫ್ ತಂತ್ರಜ್ಞಾನವನ್ನು ಬಳಸಿ ತನ್ನ ಕ್ಯಾನ್ಸರ್ ವಂಶವಾಹಿ ಮಕ್ಕಳಲ್ಲಿ ಮುಂದುವರಿಯದಂತೆ ನೋಡಿಕೊಂಡಳು. ದೇಶದಲ್ಲೇ ಮೊದಲು ಎನಿಸಿಕೊಂಡ ಈ ಪ್ರಯೋಗದ ಬಗೆಗಿನ ವಿವರ ಇಲ್ಲಿದೆ.

ಸುಮಾರು ಎಂಟು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಸ್ವಯಂಪ್ರಭಾ ಎಂಬ ಹೆಣ್ಣುಮಗಳಲ್ಲಿ ಅನಿಯಮಿತ ರೂಪಾಂತರ ಹೊಂದುವ ಬಿಆರ್ ಸಿಎ೧ಜೀನ್ ಇರುವುದು ಪತ್ತೆಯಾಯ್ತು. ‘ಬಿಆರ್‌ಸಿಎ’ ಅಂದರೆ ಬ್ರೆಸ್ಟ್ ಕ್ಯಾನ್ಸರ್ ಜೀನ್ ಅಂತ. ಪ್ರತೀವ್ಯಕ್ತಿಯಲ್ಲೂ ‘ಬಿಆರ್‌ಸಿಎ೧’ ಹಾಗೂ ‘ಬಿಆರ್‌ಸಿಎ೨’ ಜೀನ್ ಗಳಿರುತ್ತವೆ. ಇವು ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ. ಬದಲಾಗಿ ಕ್ಯಾನ್ಸರ್ ಬರದಂತೆ ತಡೆಯುವಲ್ಲಿ ಮುಖ್ಯಪಾತ್ರ ವಹಿಸುತ್ತವೆ.

ಆದರೆ ಈ ಕೋಶಗಳ ರೂಪಾಂತರದಲ್ಲಿ ಆಗುವ ಬದಲಾವಣೆ ಮತ್ತು ವಿಪರೀತ ಏರಿಕೆಯಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಅದೇ ಪುರುಷರಲ್ಲಿ ವೃಷಣಗಳ ಕ್ಯಾನ್ಸರ್ ಹಾಗೂ ಇನ್ನಿತರ ಭಾಗಗಳ ಕ್ಯಾನ್ಸರ್ ಬರಬಹುದು. ಹೆಂಗಸರಲ್ಲಿ ವಂಶವಾಹಿ ಮೂಲಕ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ.೫೦ ರಷ್ಟಿರುತ್ತದೆ.

ಸ್ವಯಂಪ್ರಭಾ ಅವರ ತಾಯಿಗೆ ಕ್ಯಾನ್ಸರ್ ಸಮಸ್ಯೆ ಇತ್ತು. ಸಣ್ಣ ಅನುಮಾನದಲ್ಲಿ ಇವರೂ ಬಿಆರ್‌ಸಿಎ ಟೆಸ್ಟ್ ಮಾಡಿಸಿದಾಗ ಈಕೆಗೂ ಸ್ತನ ಕ್ಯಾನ್ಸರ್ ಬರುವ ಅಪಾಯವಿತ್ತು. ಅಷ್ಟೇ ಅಲ್ಲ, ಈಕೆಯ ಮೂಲಕ ಅದು ಇವರ ಮಕ್ಕಳಿಗೂ ವರ್ಗಾವಣೆಯಾಗಿ ಅವರಲ್ಲೂ ಕ್ಯಾನ್ಸರ್ ಮುಂದುವರಿಯುವ ಸಾಧ್ಯತೆ ಇತ್ತು. ಕಳೆದ ತಿಂಗಳು ಈಕೆ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಆದರೆ ಆ ಇಬ್ಬರೂ ಮಕ್ಕಳೂ ವಂಶವಾಹಿಯಿಂದ ಬರುವ ಕ್ಯಾನ್ಸರ್‌ನಿಂದ ಮುಕ್ತರಾಗಿದ್ದರು.

ಇದೆಲ್ಲಾ ಹೇಗಾಯ್ತು?

ಐವಿಎಫ್‌ನಲ್ಲಿ ಪಿಜಿಡಿ/ಟಿ ಅಂದರೆ ಪ್ರಿ ಇಂಪ್ಲಾಂಟೇಶನ್ ಜೆನೆಟಿಕ್ ಡಯಗ್ನೋಸಿಸ್/ಟೆಸ್ಟಿಂಗ್ ಎಂಬ ಅತ್ಯಾಧುನಿಕ ವೈದ್ಯಕೀಯ ಟೆಕ್ನಿಕ್ ಇದೆ. ಇದರಲ್ಲಿ ಗಂಡು ಹೆಣ್ಣಿನ ಅಂಡ ವೀರ‌್ಯಗಳನ್ನು ಬಳಸಿ ಐದಾರು ಭ್ರೂಣಗಳನ್ನು ಸೃಷ್ಟಿಸುತ್ತಾರೆ. ಇವುಗಳಲ್ಲಿ ಆರೋಗ್ಯಪೂರ್ಣವಾಗಿರುವುದನ್ನು ಮಾತ್ರ ಗರ್ಭಕ್ಕೆ ಕಸಿ ಮಾಡುತ್ತಾರೆ. ಈ ಕ್ಯಾನ್ಸರ್ ಮಾರಿ ತನಗೇ ಕೊನೆಯಾಗಬೇಕು. ಜೀನ್ ಮೂಲಕ ತನ್ನ ಮಕ್ಕಳಲ್ಲೂ ಮುಂದುವರಿಯಬಾರದು ಎಂಬ ಹಂಬಲ ಇರುವವರು ಈ ತಂತ್ರಜ್ಞಾನದ ಮೊರೆ ಹೋಗಬಹುದು.

ಎರಡು ಆರೋಗ್ಯಪೂರ್ಣ ಕುಡಿಗಳು

ಸ್ವಯಂಪ್ರಭಾಗೆ ಖಾಸಗಿಯಲ್ಲಿ ಆಸ್ಪತ್ರೆಯಲ್ಲಿ ಐವಿಎಫ್ ಚಿಕಿತ್ಸೆ ಆರಂಭವಾಯ್ತು. ಇವರ ಅಂಡಾಣು ಹಾಗೂ ಅವರ ಪತಿಯ ವೀರ‌್ಯದಿಂದ ವೈದ್ಯರು ೬ ಭ್ರೂಣಗಳನ್ನು ಸೃಷ್ಟಿಸಿದರು. ಇವುಗಳಲ್ಲಿ ಎರಡು ಭ್ರೂಣಗಳಲ್ಲಿ ಕ್ಯಾನ್ಸರ್ ಜೀನ್‌ಗಳಿದ್ದವು. ಇನ್ನೆರಡು ಜೀನ್‌ಗಳಲ್ಲಿ ಕ್ಯಾನ್ಸರ್‌ನ ಅಂಶಗಳಿದ್ದು ಅವು (ಮ್ಯುಟೇಶನ್)ಶೀಘ್ರರೂಪಾಂತರದ ಗುಣ ಹೊಂದಿದ್ದು ಕ್ಯಾನ್ಸರ್ ಬರುವ ಎಲ್ಲ ಸಾಧ್ಯತೆಗಳನ್ನು ಹೊಂದಿದ್ದವು. ಕೊನೆಯ ಎರಡು ಭ್ರೂಣಗಳ ಜೀನ್‌ಗಳು ಮಾತ್ರ ಕ್ಯಾನ್ಸರ್ ಕೋಶಗಳಿಲ್ಲದೇ ಆರೋಗ್ಯದಿಂದಿದ್ದವು. ಅವುಗಳನ್ನೇ ಅಭಿವೃದ್ಧಿ ಪಡಿಸಲಾಯಿತು. ಸ್ವಯಂಪ್ರಭಾ ಅವರಿಗೆ ಆರೋಗ್ಯಪೂರ್ಣ ಅವಳಿಗಳು ಜನಿಸಿದವು.

ಆರೋಗ್ಯವಂತ ಭ್ರೂಣಗಳ ಸೃಷ್ಟಿ ಹೇಗೆ?

ಬೆಂಗಳೂರಿನ ಗುಣಶೀಲ ಆಸ್ಪತ್ರೆಯ ಮುಖ್ಯಸ್ಥೆ, ಡಾ.ದೇವಿಕಾ ಗುಣಶೀಲ ಅವರು ಪಿಜಿಎಸ್ ಮೂಲಕ ಆರೋಗ್ಯವಂತ ಭ್ರೂಣಗಳ ಸೃಷ್ಟಿಯನ್ನು ಹೀಗೆ ವಿವರಿಸುತ್ತಾರೆ.

  • ಮೊದಲಿಗೆ ಆರೋಗ್ಯಕರ ಅಂಡಾಣು ಉತ್ಪಾದನೆಯಾಗಲು ಔಷಧಿ ನೀಡುತ್ತೇವೆ. ಬಳಿಕ ಅಂಡಾಣುಗಳನ್ನು ತೆಗೆದು ಪ್ರತೀ ಅಂಡಾಣುವಿಗೂ ವೀರ‌್ಯಾಣು ಸೇರಿಸುತ್ತೇವೆ. ಅದರಿಂದ ಭ್ರೂಣ ಸೃಷ್ಟಿ ಮಾಡುತ್ತೇವೆ. ಇದನ್ನು ಐದನೇ ದಿನದವರೆಗೆ ಬೆಳೆಸುತ್ತೇವೆ.
  • ಐದನೇ ದಿನಕ್ಕೆ ಕೋಶಗಳು ಅಭಿವೃದ್ಧಿಯಾಗುತ್ತೆ. ಆಗ ಸೆಲ್‌ಗಳಿಂದ ಡಿಎನ್‌ಎ ತೆಗೆದು ಕ್ರೊಮೊಸೊಮಲ್ ಸಮಸ್ಯೆಗಳನ್ನು ಪತ್ತೆ ಹಚ್ಚುತ್ತೇವೆ.- ಈ ತಂತ್ರಜ್ಞಾನದಲ್ಲಿ ಕ್ಯಾನ್ಸರ್‌ನ ಜೀನ್‌ಗಳನ್ನು ಪತ್ತೆ ಮಾಡಬಹುದು.
  • ಹಾರ್ಟ್‌ಪ್ರಾಬ್ಲೆಮ್, ಕಿಡ್ನಿ ಸಮಸ್ಯೆ ಗೊತ್ತಾಗಲ್ಲ. ಆದರೆ ಮೂಲಕ ಬುದ್ಧಿಮಾಂದ್ಯತೆಗೆ ಕಾರಣವಾಗುವ ಟ್ರೈಸೊಮಿ ೨೧, ಟ್ರೈಸೊಮಿ೧೮, ೧೩ ಟೆಸ್ಟ್ ಮಾಡ್ತೀವಿ. ಈ ತಂತ್ರಜ್ಞಾನದಲ್ಲಿ ಹಿಮೋಫೀಲಿಯಾ, ಥಲಸ್ಸೇಮಿಯಾ, ಅಸ್ತಮಾ,ಅಂಧತ್ವ, ಅಂಗವಿಕಲತೆ ಇತ್ಯಾದಿ ಸಮಸ್ಯೆಗಳಿದ್ದರೂ ಪತ್ತೆ ಮಾಡಬಹುದು.
  • ಸಮಸ್ಯೆಗಳಿಲ್ಲದ ಆರೋಗ್ಯವಂತ ಭ್ರೂಣವನ್ನು ತಾಯಿಯ ಗರ್ಭ ಸೇರಿಸುತ್ತೇವೆ.

ಬೆಂಗಳೂರಿನಲ್ಲೂ ಯಶಸ್ವಿ ಪಿಜಿಎಸ್ ಪ್ರಯೋಗ

ಬೆಂಗಳೂರಿನ ಗುಣಶೀಲ ಆಸ್ಪತ್ರೆಯಲ್ಲಿ ಐವಿಎಫ್ ವಿಭಾಗದಲ್ಲಿ ಪಿಜಿಎಸ್ (ಪ್ರಿ ಇಂಪ್ಲಾಂಟೇಶನ್ ಜೆನೆಟಿಕ್ ಸ್ಕ್ರೀನಿಂಗ್) ಘಟಕವಿದೆ. ಇಲ್ಲಿ ೨೦೧೬ರಲ್ಲೇ ಇಲ್ಲಿ ಪಿಜಿಎಸ್ ತಂತ್ರಜ್ಞಾನದ ಯಶಸ್ವಿ ಪ್ರಯೋಗ ನಡೆಯಿತು. ೪೧ ವರ್ಷದ ಶಿಲ್ಪಶ್ರೀ ಹಾಗೂ ೫೨ ವರ್ಷದ ಸತ್ಯನಾರಾಯಣ ದಂಪತಿಗಳು ಈ ಪ್ರಯೋಗಕ್ಕೊಳಪಟ್ಟರು. ಫಲವತ್ತತೆಯ ಕೊರತೆ ಹಾಗೂ ವಯಸ್ಸಿನ ಕಾರಣಕ್ಕೆ ಶಿಲ್ಪಶ್ರೀ ಅವರಿಗೆ ಗರ್ಭ ನಿಲ್ಲುತ್ತಿರಲಿಲ್ಲ. ಕೊನೆಗೆ ಸಹಾಯಕ್ಕೆ ಬಂದದ್ದು ಪಿಜಿಎಸ್ ತಂತ್ರಜ್ಞಾನ. ಈ ತಂತ್ರಜ್ಞಾನದಲ್ಲಿ ಐದು ಭ್ರೂಣಗಳನ್ನು ಸೃಷ್ಟಿಸಲಾಯಿತು. ಅವುಗಳಲ್ಲಿ ಒಂದು ಭ್ರೂಣವಷ್ಟೇ ಆರೋಗ್ಯವಂತವಾಗಿತ್ತು. ಅದನ್ನೇ ಅವರಿಗೆ ಕಸಿ ಮಾಡಿ ಗರ್ಭಪಾತ ವಾಗದಂತೆ ಮುನ್ನಚ್ಚರಿಕೆ ವಹಿಸಲಾಯ್ತು. ಈ ಪ್ರಯೋಗ ಯಶಸ್ವಿಯಾಯ್ತು. 

 

 

click me!