ಕುಂಭಕರ್ಣ ರಾಕ್ಷಸನಿರಬಹುದು- ಆದರೆ ಆತ ಉತ್ತಮ ನಡತೆ ಹೊಂದಿದ್ದ. ತತ್ವಜ್ಞಾನಿಯಾಗಿದ್ದ. ಆತನ ಕುರಿತ ಇನ್ನೂ ಹಲ ಆಸಕ್ತಿಕರ ವಿಷಯಗಳು ಇಲ್ಲಿವೆ.
ಯಾರಾದ್ರೂ ಸ್ವಲ್ಪ ಹೆಚ್ಚು ನಿದ್ರೆ ಮಾಡಿದ್ರೆ ಸಾಕು, ಕುಂಭಕರ್ಣನ ವಂಶದವನಾ ನೀನು ಅಂತ ಕೇಳುತ್ತೇವೆ. ಹಾಗೆ ನಿದ್ರೆಯಲ್ಲೇ ಅರ್ಧ ಜೀವನ ಕಳೆದವನು ಕುಂಭಕರ್ಣ. ಆರಾರು ತಿಂಗಳು ನಿದ್ರೆಯ ಸುಖ ಸವಿದರೆ, ಎದ್ದ ಮೇಲೆ ತಿನ್ನುವುದೇ ಕೆಲಸ. ಈ ಅಭ್ಯಾಸಗಳಿಂದಲೇ ಕುಂಭಕರ್ಣ ರಾಮಾಯಣದಲ್ಲಿ ಆಸಕ್ತಿಕರ ವ್ಯಕ್ತಿತ್ವವಾಗಿ ಕಾಣುವುದು. ಕುಂಭರ್ಣಕನ ಬಗ್ಗೆ ನಿದ್ರೆ ಹಾಗೂ ತಿನ್ನುವುದು ಬಿಟ್ಟರೆ ಉಳಿದ ವಿಷಯಗಳನ್ನು ಬಲ್ಲವರು ಅಪರೂಪ. ಹಾಗಾಗಿ ಆತನ ಕುರಿತ ಕೆಲ ಅಪರೂಪದ ವಿಷಯಗಳು ಇಲ್ಲಿವೆ.
ನಿದ್ರೆ ಆತ ಪಡೆದ ವರ!
ಯಾರಾದರೂ ಭಗವಂತನನ್ನು ಮೆಚ್ಚಿಸಲು ಘೋರ ತಪಸ್ಸು ಮಾಡಿ ಆತ ಒಲಿದಾಗ ಏನು ಕೇಳಬಹುದು? ಐಶ್ವರ್ಯ, ವಿದ್ಯೆಗಳು, ಸಾವಿಲ್ಲದ ವರ ಇತ್ಯಾದಿ ಇತ್ಯಾದಿ. ಆದರೆ, ಕುಂಭಕರ್ಣ ಕೇಳಿದ್ದೇನು ಗೊತ್ತಾ? ನಿದ್ರೆ!
ಅಯ್ಯೋ, ಇದೇನು ಆತ ಇಷ್ಟಪಟ್ಟು ಕೇಳಿದ್ದಲ್ಲ, ಬಾಯಿ ತಪ್ಪಿ ಕೇಳಿದ್ದು. ಹೌದು, ಕುಂಭಕರ್ಣ ತನ್ನ ಅಣ್ಣಂದಿರಾದ ವಿಭೀಷಣ ಹಾಗೂ ರಾವಣನೊಡನೆ ತಪಸ್ಸಿಗೆ ಕೂರುತ್ತಾನೆ. ಅವರ ಭಕ್ತಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾದಾಗ ಪ್ರತಿಯೊಬ್ಬರಿಗೂ ಅವರ ಕೋರಿಕೆ ಕೇಳಲು ಬ್ರಹ್ಮ ಹೇಳುತ್ತಾನೆ. ಈ ಸಂದರ್ಭದಲ್ಲಿ ಇಂದ್ರಾಸನ(ಇಂದ್ರನ ಸಿಂಹಾಸನ) ಕೇಳಲು ಹೋದ ಕುಂಭಕರ್ಣ ನಾಲಿಗೆ ತೊದಲಿ ನಿದ್ರಾಸನ ಎನ್ನುತ್ತಾನೆ. ಇದು ತಾಯಿ ಸರಸ್ವತಿ ಬೇಕಂತಲೇ ಮಾಡಿಸಿದ ಎಡವಟ್ಟಂತೆ. ತಕ್ಷಣ ಬ್ರಹ್ಮ ತಥಾಸ್ತು ಎನ್ನುತ್ತಾನೆ.
ಫುಲ್ ಪವರ್‌ಫುಲ್ ರಾಕ್ಷಸ
ಇಂದ್ರಲೋಕದಲ್ಲಿ ಇಂದ್ರನೂ ಸೇರಿದಂತೆ ಯಾರೊಬ್ಬರಿಗೂ ಕುಂಭಕರ್ಣನನ್ನು ಸೋಲಿಸುವುದು ಸಾಧ್ಯವಿರಲಿಲ್ಲ. ಅಷ್ಟು ಬಲಾಢ್ಯನಾಗಿದ್ದ ಕುಂಭಕರ್ಣ. ಅದೇ ಕಾರಣಕ್ಕೆ ಇಂದ್ರ ಕೂಡಾ ಕುಂಭಕರ್ಣನ ಕುರಿತು ಹೊಟ್ಟೆಕಿಚ್ಚು ಹೊಂದಿದ್ದ.
undefined
ಜಗತ್ತನ್ನೇ ತಿನ್ನಬಲ್ಲ ಸಾಮರ್ಥ್ಯ
ಅದೇನು ಈಟಿಂಗ್ ಡಿಸಾರ್ಡರ್ ಇತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಕುಂಭಕರ್ಣನ ತಿನ್ನುವ ಸಾಮರ್ಥ್ಯವನ್ನು ಮೀರಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಆತ ನಿದ್ರೆಯ ವರ ಪಡೆವ ಮುನ್ನವೂ ಸಿಕ್ಕಾಪಟ್ಟೆ ತಿನ್ನುತ್ತಿದ್ದ ದೈತ್ಯ. ಹಾಗಾಗಿ ಬ್ರಹ್ಮ ಮತ್ತು ಸರಸ್ವತಿಗೆ ಆತ ಬ್ರಹ್ಮಾಂಡವನ್ನೇ ತಿನ್ನಬಹುದೆಂಬ ಭಯ ಆವರಿಸಿತ್ತಂತೆ. ಆದ್ದರಿಂದಲೇ ಅವರು ಆತ ವರ ಕೇಳುವ ಸಮಯದಲ್ಲಿ ತೊದಲುವಂತೆ ಮಾಡಿದರು ಎಂಬ ಕತೆಯೊಂದಿದೆ.
ತತ್ವಜ್ಞಾನಿ
ಕುಂಭಕರ್ಣ ರಾಕ್ಷಸನೇ ಆದರೂ ಪಾಪಗಳನ್ನು ಮಾಡುವುದರಲ್ಲಿ, ಹಿಂಸೆಗಳಲ್ಲಿ ಆತನಿಗೆ ಆಸಕ್ತಿ ಇರಲಿಲ್ಲ. ಆತನಿಗೆ ನಾರದ ಮುನಿಗಳೇ ತತ್ವಜ್ಞಾನ ಬೋಧಿಸಿದ್ದರು. ನಿದ್ರೆಯಿಂದ ಎದ್ದಾಗ ಆತ ತತ್ವಜ್ಞಾನ ಓದುತ್ತಿದ್ದ. ಆತ ತನ್ನ ಕುಟುಂಬ, ಸಂಬಂಧಿಕರನ್ನು ಬಹಳ ಪ್ರೀತಿಸುತ್ತಿದ್ದ. ಯಾರಿಗೂ ನೋವಾಗದಂತೆ ವರ್ತಿಸುತ್ತಿದ್ದ.
ಅಣ್ಣನಿಗಾಗಿ ಯುದ್ಧ
ರಾಮನ ವಿರುದ್ಧ ಯುದ್ಧದಲ್ಲಿ ತಮ್ಮ ಕಡೆಯದೇ ತಪ್ಪಿರುವ ಅರಿವು ಕುಂಭಕರ್ಣನಿಗಿತ್ತು. ಅದರಲ್ಲಿ ತಾವು ಗೆಲ್ಲುವುದಿಲ್ಲ ಎಂದೂ ತಿಳಿದಿತ್ತು. ಹಾಗಿದ್ದೂ ಅಣ್ಣನ ಪರವಾಗಿ ನಿಲ್ಲುವುದು ತನ್ನ ಕರ್ತವ್ಯವೆಂದು ಭಾವಿಸಿ ಆತ ಹೋರಾಡುತ್ತಾನೆ.
ಸೀತೆ ಅಪಹರಣ ವಿರೋಧಿಸಿದ್ದ
ಜಗತ್‌ಜನನಿಯನ್ನು ಅಪಹರಿಸಿದ್ದು ತಪ್ಪು, ಇದರಿಂದ ಸಂತೋಷವಾಗಿರುವುದು ಸಾಧ್ಯವಿಲ್ಲ, ತಕ್ಷಣ ರಾಮನ ಬಳಿ ಕ್ಷಮೆ ಕೋರು ಎಂದು ಅಣ್ಣನಿಗೆ ಬುದ್ಧಿವಾದ ಹೇಳಿದ್ದ ಕುಂಭಕರ್ಣ. ಆದರೆ, ರಾವಣ ಹಾಗೆ ಮಾಡಲು ಒಪ್ಪಲಿಲ್ಲ.