ಕೊಪ್ಪಳದಲ್ಲಿ ಶಂಕಿತ ಡೆಂಘೀ: ಸಾರ್ವಜನಿಕರ ಆಕ್ರೋಶ

By Web Desk  |  First Published Nov 4, 2019, 10:19 AM IST

15 ದಿನಗಳಿಂದ ಆಸ್ಪತ್ರೆಗೆ ಗ್ರಾಮಸ್ಥರ ಅಲೆದಾಟ | ಲಾರ್ವಾ ಸರ್ವೇ ಆಧರಿಸಿ ಫಾಗಿಂಗ್| ಗ್ರಾಮಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ|50 ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದು, 9 ಜನರಲ್ಲಿ ಶಂಕಿತ ಡೆಂಘೀ ಕಾಣಿಸಿಕೊಂಡಿದೆ|


ಹನುಮಸಾಗರ[ನ.4]: ಸಮೀಪದ ಮಡಿಕ್ಕೇರಿ ಗ್ರಾಮದಲ್ಲಿ ಸೊಳ್ಳೆಗಳು ಹೆಚ್ಚಾಗಿ ಶಂಕಿತ ಡೆಂಘೀ ಕಾಣಿಸಿಕೊಂಡಿದ್ದು, 15 ದಿನಗಳಿಂದ ಜನರು ಆಸ್ಪತ್ರೆಗೆ ಅಲೆದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಗ್ರಾಮಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಗ್ರಾಮದಲ್ಲಿ ಸುಮಾರು 2000 ಕ್ಕೂ ಹೆಚ್ಚು ಜನರಿದ್ದು, 50 ಕ್ಕೂ ಹೆಚ್ಚು ಜನರು ಜ್ವರದಿಂದ ಬಳಲುತ್ತಿದ್ದು, 9 ಜನರಲ್ಲಿ ಶಂಕಿತ ಡೆಂಘೀ ಕಾಣಿಸಿಕೊಂಡಿದೆ. ಒಬ್ಬರಿಗೆ ಡೆಂಘೀ ಪಾಸಿಟಿವ್‌ ಬಂದಿದೆ.ಜ್ವರ ಕಾಣಿಸಿಕೊಂಡ ಕೆಲವರು ಹನುಮಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಕೊಪ್ಪಳದ ಜಿಲ್ಲಾಸ್ಪತ್ರೆ, ಹುಬ್ಬಳ್ಳಿ ಮತ್ತು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ಬಂದರೆ. ಇನ್ನೂ ಕೆಲವರು ಅಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗ್ರಾಮದ ಕೆಲವು ಬೀದಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡದಿರುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿವೆ. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಬೆನಕನಾಳ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಫೋನ್ ಕರೆ ಮಾಡಿದರೆ ಪಿಡಿಒ ಸ್ವೀಕರಿಸುತ್ತಿಲ್ಲ. ಗ್ರಾಮದಲ್ಲಿ ಐವರು ಗ್ರಾಪಂ ಸದಸ್ಯರಿದ್ದು,ಜನರ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ. ಚರಂಡಿ ಸ್ವಚ್ಛಗೊಳಿಸುತ್ತಿಲ್ಲ. ನಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸೊಳ್ಳೆಗಳು ಹೆಚ್ಚಾಗಿ ಜ್ವರ ಕಾಣಿಸಿಕೊಳುತ್ತಿರುವುದು ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರಾದ ಶರಣಪ್ಪ ಮೇಟಿಗೌಡ್ರ, ಕಳಕಪ್ಪ ತೆಲಗಾರ, ಮಲ್ಲಪ್ಪ ತೆಲಗಾರ,ಶರಣಪ್ಪ ಡಗ್ಗಿ, ಮೌನೇಶ ಬಡಿಗೇರ, ರವಿ ಈಳಗೇರ, ಹನಮಪ್ಪ ಜಾಲಾಪುರ, ಸಕ್ರಪ್ಪ ಮುದಗಲ್ಲ, ನಾಗಪ್ಪಟೆಂಗಿನಕಾಯಿ, ಬಸವರಾಜ ತೆಂಗಿನಕಾಯಿ ದೂರಿದ್ದಾರೆ.

ಆಶಾ ಕಾರ್ಯಕರ್ತೆಯರಿಂದ ಮಡಿಕ್ಕೇರಿಯಲ್ಲಿ ಲಾರ್ವಾ ಸರ್ವೇ ಮಾಡಿಸಲಾಗುತ್ತಿದೆ. ನೀರು ನಿಂತುಕೊಳ್ಳುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಡೆಂಘೀ ಜ್ವರದ ಬಗ್ಗೆ ಜಿಲ್ಲಾಸ್ಪತ್ರೆಯಿಂದ ವರದಿ ಬಂದಿದೆ. ಲಾರ್ವಾ ಸರ್ವೇ ಆಧರಿಸಿ ಮಡಿಕ್ಕೇರಿಯಲ್ಲಿ ಫಾಗಿಂಗ್‌ ಮಾಡಲಾಗುವುದು ಎಂದು ಚಳಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶರಣಪ್ಪ ಮೂಲಿಮನಿ ಅವರು ಹೇಳಿದ್ದಾರೆ.  

ಮಡಿಕ್ಕೇರಿಯಲ್ಲಿ ಕೆಲವು ದಿನಗಳ ಹಿಂದೆ ಚರಂಡಿ ಸ್ವಚ್ಛಗೊಳಿಸಲಾಗಿದೆ. ಶಂಕಿತ ಡೆಂಘೀ ಜ್ವರ ಕಾಣಿಸಿಕೊಂಡರೆ ಆರೋಗ್ಯ ಇಲಾಖೆಯೊಂದಿಗೆ ಮಾತನಾಡಿ ಎರಡ್ಮೂರು ದಿನಗಳಲ್ಲಿ ಫಾಗಿಂಗ್ ಮಾಡಿಸುವ ವ್ಯವಸ್ಥೆ ಮಾಡಿಸಲಾಗುವುದು ಎಂದು ಬೆನಕನಾಳ ಪಿಡಿಒ  ಪ್ರಶಾಂತ ಹಿರೇಮಠ ಅವರು ಹೇಳಿದ್ದಾರೆ. 
 

click me!