ಗಂಗಾವತಿ: ಪ್ರವಾಹ ಬಂದರೆ ಇಲ್ಲಿನ ಮಕ್ಕಳಿಗೆ ಬಯಲಲ್ಲೇ ಪಾಠ

By Web Desk  |  First Published Oct 24, 2019, 8:13 AM IST

ಶಾಲೆಯ ವರೆಗೂ ನುಗ್ಗುವ ನೀರು, ಮಕ್ಕಳೂ ಸಹ ತೆಪ್ಪದಲ್ಲಿ ನದಿ ದಾಟಬೇಕು | ರಾಘವೇಂದ್ರ ಕಾಲನಿಯ ಕೂಲಿ ಕಾರ್ಮಿಕ ಮಕ್ಕಳ ಪಡಿಪಾಟಿಲು ಇದು| ನದಿಯ ನೀರಿನ ಮಟ್ಟ ಏರಿತೆಂದರೆ ಇಲ್ಲಿನ ಶಾಲೆಯ ಮಕ್ಕಳು ಜೀವ ಭಯದಿಂದ ತತ್ತರಿಸುತ್ತಾರೆ| ಶಿಕ್ಷಕರಿಗೂ ಸಹ ಹೇಗೆ ಪಾಠ ಮಾಡಬೇಕೆಂಬ ಚಿಂತೆ ಕಾಡುತ್ತದೆ| ಬಡವರ ಮಕ್ಕಳು ಶಿಕ್ಷಣಕ್ಕಾಗಿ ಪ್ರತಿ ದಿನ ನದಿ ದಾಟಿ ವಿರುಪಾಪುರಗಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕಾಗುತ್ತದೆ| 


ಗಂಗಾವತಿ[ಅ.24]: ತುಂಗಭದ್ರಾ ನದಿಗೆ ಪ್ರವಾಹ ಬಂತೆಂದರೆ ಈ ಮಕ್ಕಳಿಗೆ ಮರದ ಕೆಳಗೆ ಬಯಲಲ್ಲೇ ಪಾಠ!

ಇದು ಪ್ರಸಿದ್ಧ ಪ್ರವಾಸಿ ತಾಣ ಕೊಪ್ಪಳ ಜಿಲ್ಲೆಯ ಗಂಗಾವತಿಯ ವಿರೂಪಾಪುರಗಡ್ಡೆಯ ಪಕ್ಕದಲ್ಲೇ ಇರುವ ರಾಘವೇಂದ್ರ ಕಾಲನಿಯ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಡಿಪಾಟಿಲು. ತುಂಗಭದ್ರಾ ನದಿಯ ನೀರಿನ ಮಟ್ಟ ಏರಿತೆಂದರೆ ಇಲ್ಲಿನ ಶಾಲೆಯ ಮಕ್ಕಳು ಜೀವ ಭಯದಿಂದ ತತ್ತರಿಸುತ್ತಾರೆ. ಶಿಕ್ಷಕರಿಗೂ ಸಹ ಹೇಗೆ ಪಾಠ ಮಾಡಬೇಕೆಂಬ ಚಿಂತೆ ಕಾಡುತ್ತದೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿರುಪಾಪುರಗಡ್ಡೆಯಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡಿದ್ದಾರೆ ಎಂಬ ಕಾರಣಕ್ಕೆ ಹಂಪಿ ಅಭಿವೃದ್ಧಿ ಪ್ರಾಧಿಕಾರವು 70 ಜನರನ್ನು ಅಲ್ಲಿಂದ ಎತ್ತಂಗಡಿ ಮಾಡಿದೆ. ಈ ಬಡ ಕೂಲಿ ಕಾರ್ಮಿಕರು ಅಲ್ಲಿಯೇ ಪಕ್ಕದ 1 ಕಿ.ಮೀ. ದೂರದ ರಾಘವೇಂದ್ರ ಕಾಲನಿಯಲ್ಲಿ ತಾತ್ಕಾಲಿಕ ಗುಡಿಸಲು ಹಾಕಿಕೊಂಡು ವಾಸವಾಗಿದ್ದಾರೆ. ಆದರೆ ಈ ಬಡವರ ಮಕ್ಕಳು ಶಿಕ್ಷಣಕ್ಕಾಗಿ ಪ್ರತಿ ದಿನ ನದಿ ದಾಟಿ ವಿರುಪಾಪುರಗಡ್ಡೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ (1 ಕಿ.ಮೀ) ಹೋಗಬೇಕಾಗುತ್ತದೆ. ಈ ಶಾಲೆಯಲ್ಲಿ 40 ಮಕ್ಕಳು ಓದುತ್ತಿದ್ದಾರೆ. 1 ರಿಂದ 5 ನೇ ತರಗತಿ ತನಕ ತರಗತಿ ನಡೆಯುತ್ತಿದೆ.ಇ ಬ್ಬರು ಶಿಕ್ಷಕರಿದ್ದಾರೆ. 1996 ರಲ್ಲಿಯೇ ಇಲ್ಲಿ ಶಾಲೆಪ್ರಾರಂಭಗೊಂಡಿದ್ದು, 1998 ರಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ತುಂಗಭದ್ರಾ ನದಿಯದಡದಲ್ಲಿಯೇ ಇರುವುದರಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ಶಾಲೆಗೆ ಪ್ರವಾಹ ನುಗ್ಗುತ್ತದೆ. ಇಲ್ಲಿ ಮಕ್ಕಳಿಗೆ ಪಾಠ ಮಾಡುವುದೇ ಸಾಧ್ಯವಿಲ್ಲವಾಗುತ್ತದೆ. 

ಈ ಹಿಂದೆ ಹೆಚ್ಚು ಮಳೆಯಾಗದೇ ಇದ್ದುದರಿಂದ ಮಕ್ಕಳು ತೊಂದರೆ ಅನುಭವಿಸುತ್ತಿರಲಿಲ್ಲ. ಆದರೆ ಈ ಬಾರಿ ಪದೇ ಪದೇ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಮಕ್ಕಳು ಎದುರಿಸುತ್ತಿರುವ ಪರಿಸ್ಥಿತಿ ಹೇಳತೀರದಾಗಿದೆ.ಈ ಮೊದಲು ವಿರುಪಾಪುರಗಡ್ಡೆಯಲ್ಲೇ ಈ ಬಡವರ ಮಕ್ಕಳು ಇರುವುದರಿಂದ ಶಾಲೆಗೆ ನೀರುನುಗ್ಗಿದ್ದರೂ ಪಕ್ಕದಲ್ಲೇ ಇರುವ ಕಟ್ಟಡದಲ್ಲಿ ಪಾಠ ನಡೆಯುತ್ತಿತ್ತು. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿರಲಿಲ್ಲ. ಈಗ ಅವರು ನದಿ ದಾಟಿಯೇ ಬರಬೇಕಾಗಿದೆ. ಕಳೆದ ನಾಲ್ಕು ದಿನಗಳಿಂದಲೂ ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ರಾಘವೇಂದ್ರ ಕಾಲನಿಯಲ್ಲೇ ಶಿಕ್ಷಕರು ಮರದ ಕೆಳಗೆ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಈ ಹಿಂದೆ ಮಕ್ಕಳನ್ನು ತೆಪ್ಪದ ಮೂಲಕ ಕರೆದುಕೊಂಡು ಹೋಗಿ ಪಾಠ ಮಾಡಿಸುವ ಯತ್ನವೂ ನಡೆದಿತ್ತು. ಆದರೆ ಅದು ಅಪಾಯಕಾರಿ ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೆಪ್ಪವನ್ನು ನಿಷೇಧಿಸಿದ್ದು ಮಕ್ಕಳಿಗೆ ರಾಘವೇಂದ್ರ ಕಾಲನಿಯಲ್ಲೇ ಪಾಠ, ಪ್ರವಚನ ನಡೆದಿದೆ.

ಎರಡು ತಿಂಗಳ ಹಿಂದೆ ಪ್ರವಾಹ ಬಂದಸಂದರ್ಭದಲ್ಲಿ ಪ್ರವಾಹದ ಪರಿಸ್ಥಿತಿ ಪರಿಶೀಲನೆಗೆಸಚಿವ ಸಿ.ಸಿ. ಪಾಟೀಲ ಆಗಮಿಸಿದ್ದ ಸಂದರ್ಭದಲ್ಲಿಸಮಸ್ಯೆಯ ಮಾಇತಿ ಪಡೆದು ವಿದ್ಯಾರ್ಥಿಗಳಿಗೆಪರ್ಯಾಯ ಕಟ್ಟಡ ಹಾಗೂ ಕುಟುಂಬಗಳಿಗೆಪುನರ್ವಸತಿ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ,ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದರೂ ಯಾವುದೇಪ್ರಯೋಜನವಾಗಿಲ್ಲ.

ವಿದೇಶಿಯರ ಸಹಾಯ ಹಸ್ತ: 

ವಿರೂಪಾಪುರಗಡ್ಡೆಯಲ್ಲಿರುವ ಶಾಲೆಯ ಪರಿಸ್ಥಿತಿ ಅರಿತು ಯುರೋಪ ರಾಷ್ಟ್ರದ ದಂಪತಿಗಳು ಶಾಲೆಗೆ ದೇಣಿಗೆ ನೀಡಿದ್ದಾರೆ. ಶಾಲೆಗೆ ಸರಿಯಾದ ಮೈದಾನ ಇಲ್ಲದಿರುವುದನ್ನು ಗಮನಿಸಿದ ಯುರೋಪ್ ರಾಷ್ಟ್ರದ ಪೀಟರ್‌ ದಂಪತಿ ಮೈದಾನ ನವೀಕರಣ ಮತ್ತು ಆಟೋಟಗಳ ಸಾಮಗ್ರಿ ಕಾಣಿಕೆಯಾಗಿ ನೀಡಿದ್ದಾರೆ. ಈ ವರ್ಷವೂ ಈ ಪ್ರದೇಶಕ್ಕೆ ಪ್ರವಾಸ ಬಂದಿದ್ದ ಈ ದಂಪತಿ ಶಾಲೆಯ ಮಕ್ಕಳ ಪ್ರವಾಸಕ್ಕಾಗಿ 25 ಸಾವಿರ ನೆರವು ನೀಡಿದ್ದಾರೆ. ಶಾಲೆಯ ಮಕ್ಕಳ ಜೊತೆ ಕೆಲ ಸಮಯ ಕಳೆದಿದ್ದಾರೆ. 

ವಿರೂಪಾಪುರಗಡ್ಡೆಯ ಶಾಲಾ ಕಟ್ಟಡಕ್ಕೆ ನೀರು ನುಗ್ಗಿದ್ದರಿಂದವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಮರದ ಕೆಳಗೆ ಪಾಠ ಮಾಡಲಾಗುತ್ತದೆ. ನೀರಿನ ಪ್ರಮಾಣ ಇಳಿಮುಖವಾದ ನಂತರ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪಾಠ ಮಾಡಲಾಗುತ್ತದೆ. ಪ್ರತಿ ವರ್ಷ ಪ್ರವಾಹ ಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ವಿರೂಪಾಪುರಗಡ್ಡೆಯ  ಶಿಕ್ಷಕ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹನುಮಂತಪ್ಪ  ಅವರು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರು, ಪ್ರವಾಹ ಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೊಂದರೆಗೀಡಾಗುತ್ತಿದ್ದಾರೆ. ಈ ಕಾರಣಕ್ಕೆ ಅಚ್ಯುತಾಶ್ರಮದಲ್ಲಿ ಪಾಠ ಮಾಡಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಹೊಸಶಾಲೆ ಕಟ್ಟಡ ನಿರ್ಮಿಸಲು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ 1 ಎಕರೆ ಭೂಮಿ ನೀಡುವಂತೆ ಕೋರಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಸಚಿವ ಸಿ.ಸಿ. ಪಾಟೀಲ್ ಭೇಟಿ ನೀಡಿದ ಸಂದರ್ಭದಲ್ಲಿಯೂ ಜಿಲ್ಲಾಧಿಕಾರಿಗಳಿಗೆ ನಿವೇಶನದ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.  


 

click me!