ಕೃಷ್ಣದೇವರಾಯ ಸಮಾಧಿ, ನವ ವೃಂದಾವನಗಡ್ಡೆ ಜಲಾವೃತ | ವಿರೂಪಾಪುರಗಡ್ಡೆ ಸುತ್ತುವರಿದ ನೀರು| ಆನೆಗೊಂದಿ, ಹನುಮನಹಳ್ಳಿ, ಸಣ್ಣಾಪುರ, ವಿರೂಪಾಪುರ ಗಡ್ಡೆ, ಋುಷಿಮುಖಪರ್ವತ, ಸೇರಿದಂತೆ ಐತಿಹಾಸಿಕ ಪ್ರದೇಶಗಳು ಜಲಾವೃತ|
ರಾಮಮೂರ್ತಿ ನವಲಿ
ಗಂಗಾವತಿ[ಅ.23]: ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿ ಬಿಟ್ಟಿದ್ದರಿಂದ ಐತಿಹಾಸಿಕ ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕಳೆದ ಎರಡು ದಿನಗಳಿಂದ ಅಣೆಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಹೆಚ್ಚುವರಿ ನೀರನ್ನೆಲ್ಲ ನದಿಗೆ ಬಿಡಲಾಗುತ್ತಿದೆ. ಮಂಗಳವಾರ ಬೆಳಗ್ಗೆ ನದಿಗೆ 1.50 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ಇದರಿಂದ ತಾಲೂಕಿನ ಆನೆಗೊಂದಿ, ಹನುಮನಹಳ್ಳಿ, ಸಣ್ಣಾಪುರ, ವಿರೂಪಾಪುರ ಗಡ್ಡೆ, ಋುಷಿಮುಖಪರ್ವತ, ಸೇರಿದಂತೆ ಐತಿಹಾಸಿಕ ಪ್ರದೇಶಗಳು ಜಲಾವೃತಗೊಂಡಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆನೆಗೊಂದಿಯ ನದಿ ಮಧ್ಯದಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿ ಮುಳುಗುವ ಹಂತದಲ್ಲಿದ್ದು, 9 ಯತಿವರಣ್ಯೇರ ಪವಿತ್ರ ಸ್ಥಳವಾಗಿರುವ ನವ ವೃಂದಾವನಗಡ್ಡೆ ಜಲಾವೃತಗೊಂಡಿವೆ. ಇದರಿಂದಾಗಿ ದಿನ ನಿತ್ಯ ನಡೆಯುವ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ. ನದಿತೀರದ ಜನತೆ ರಕ್ಷಣೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಬತ್ತ, ಬಾಳೆ ತೋಟಕ್ಕೆ ನುಗ್ಗಿದ ನೀರು:
ಆನೆಗೊಂದಿ, ಸಣ್ಣಾಪುರ, ಹನುಮಹಳ್ಳಿ, ತಿಮಲಾಪುರ ಗ್ರಾಮಗಳಲ್ಲಿರುವ ಬತ್ತದ ಗದ್ದೆ ಮತ್ತು ಬಾಳೆ ತೋಟಕ್ಕೆ ನೀರು ನುಗ್ಗಿದೆ. ಕಳೆದ ಎರಡು ತಿಂಗಳ ಹಿಂದೆ ಬತ್ತನಾಟಿ ಮಾಡುವುದಕ್ಕಾಗಿ ಸಸಿ ಮಡಿಗಳನ್ನು ಹಾಕಲಾಗಿತ್ತು. ಆ ಸಂದರ್ಭದಲ್ಲಿ ಪ್ರವಾಹದಿಂದಾಗಿ ಸಸಿ ಮಡಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದವು. ಈಗ ಮತ್ತೆ ಮಳೆ ನೀರು ನುಗ್ಗಿದ್ದರಿಂದ ಬತ್ತದ ಗದ್ದೆಕೊಚ್ಚಿ ಕೊಂಡು ಹೋಗಿ ಬಾಳೆ ತೋಟಕ್ಕೆ ನೀರು ನುಗ್ಗಿದ್ದರಿಂದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ತಿಂಗಳ ಹಿಂದೆ ಪ್ರವಾಹದಿಂದ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರದಿಂದ ನೈಯಾ ಪೈಸೆ ಪರಿಹಾರ ಸಿಕ್ಕಿಲ್ಲ, ಈಗ ಮತ್ತೆ ಹೀಗಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗಂಗಾವತಿ-ಕಂಪ್ಲಿ ಸಂಪರ್ಕ ಕಡಿತ:
ಗಂಗಾವತಿಯಿಂದ-ಬಳ್ಳಾರಿ ಜಿಲ್ಲೆಯ ಕಂಪ್ಲಿಯ ತುಂಗಭದ್ರಾ ಸೇತುವೆ ಮೇಲೆ ನೀರು ಹರಿದು ಬರುತ್ತಿದ್ದರಿಂದ ವಾಹನಗಳ ಸಂಚಾರ ರದ್ದು ಪಡಿಸಲಾಗಿದೆ. ಇದರಿಂದ ಕಲಬುರ್ಗಿ, ಯಾದಗಿರಿ, ರಾಯಚೂರು ನಗರಗಳಿಂದ ಬರುವ ಬಸ್‌ಗಳನ್ನು ಕಡೇ ಬಾಗಿಲು ಬುಕ್ಕಸಾಗರ ನದಿ ಸೇತುವೆ ಮೇಲೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ, ಕಳೆದ ಎರಡು ತಿಂಗಳಿನಿಂದಲೂ ಈ ಮಾರ್ಗದಲ್ಲಿ ಭಾರಿ ಪ್ರಮಾಣದ ವಾಹನಗಳು ಸಂಚರಿಸುತ್ತಿದ್ದರಿಂದ ರಸ್ತೆ ಸಂಪೂರ್ಣ ಹದ್ದಗೆಟ್ಟಿವೆ. ಎಷ್ಟೋ ವಾಹನಗಳು ರಸ್ತೆ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡು ಅವಘಡಕ್ಕೆ ಕಾರಣವಾಗಿದೆ. ಕಂಪ್ಲಿಸೇತುವೆ ಶಿಥಿಲಗೊಂಡಿದ್ದರಿಂದ ಪೊಲೀಸ್ ಇಲಾಖೆ ಬಿಗಿ ಭದ್ರತೆ ನೀಡಿದೆ. ಚಿಕ್ಕಜಂತಗಲ್ ಗ್ರಾಮದ ನದಿಬಳಿ ಇರುವ ಆಂಜನೇಯ ದೇವಸ್ಥಾನಕ್ಕೆ ನೀರು ಬರುತ್ತಿದ್ದರಿಂದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದೆ.
ಶಾಲಾ ವಿದ್ಯಾರ್ಥಿಗಳ ಪರದಾಟ:
ಗಂಗಾವತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಕಂಪ್ಲಿ, ಮೆಟ್ರಿ, ರಾಮಸಾಗರ, ಸಣ್ಣಾಪುರ ಗ್ರಾಮಗಳಿಂದ ದಿನ ನಿತ್ಯ ಬರುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ನದಿ ಸೇತುವೆ ಮೇಲೆ ಅಧಿಕ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಶಾಲಾ ಬಸ್‌ಗಳ ಸಂಚಾರಕ್ಕೆ ತಡೆ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಬುಕ್ಕಸಾಗರದಿಂದ ಸಂಚರಿಸುವ ಪರಿಸ್ಥಿತಿ ಒದಗಿದೆ. ಬುಕ್ಕಸಾಗರ- ಕಡೇಬಾಗಿಲು ಸೇತುವೆ ಮೇಲೆ ಹೆಚ್ಚಿನವಾಹನಗಳು ಓಡಾಡುತ್ತಿದ್ದರಿಂದ ಮಕ್ಕಳಿಗೆ ಸರಿಯಾದಸಮಯಕ್ಕೆ ಶಾಲೆಗಳಿಗೆ ತೆರಳಲು ಆಗುತ್ತಿಲ್ಲ.
ವಿರೂಪಾಪುರಗಡ್ಡೆ ಸುತ್ತುವರಿದ ನೀರು:
ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಮಿನಿಗೋವಾ ಎಂದೇ ಖ್ಯಾತಿ ಹೊಂದಿದ್ದ ವಿರೂಪಾಪುರಗಡ್ಡೆಈಗ ಜಲಾವೃತಗೊಂಡಿದೆ. ರೆಸಾರ್ಟ್‌ಗಳಲ್ಲಿರುವ ಪ್ರವಾಸಿಗರನ್ನು ಸೋಮವಾರ ಸ್ಥಳಾಂತರಿಸಲಾಗಿದ್ದು, ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ರೆಸಾರ್ಟ್ ಮಾಲೀಕರಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ. ನದಿ ತೀರದ ಜನತೆಗೆ ಎಚ್ಚರಿಕೆ ವಹಿಸಿದ್ದು, ಜಾನುವಾರುಗಳನ್ನು ನದಿ ತೀರದಲ್ಲಿ ಬಿಡಬಾರದೆಂದು ತಾಲೂಕಾಡಳಿತ ಸೂಚಿಸಿದೆ.