
ಕೊಪ್ಪಳ [ನ.11]: ಇಲ್ಲಿಯ ಜಯನಗರದ ಗಂಗಾಧರೇಶ್ವರ ದೇವಸ್ಥಾನದ 17 ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಪಲ್ಲಕ್ಕಿ ಹೊತ್ತು ಭಕ್ತಿ ಸಮರ್ಪಿಸಿದರು.
ಭಜನೆಯಲ್ಲಿ ಭಾಗವಹಿಸಿ ತಾಳ ಹಾಕಿದರು. ಶಾಸಕ ಇಕ್ಬಾಲ್ ಅನ್ಸಾರಿ ಜತೆ ಪಲ್ಲಕ್ಕಿಗೆ ಶಾಸಕ ಪರಣ್ಣ ಮುನವಳ್ಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್. ಆರ್. ಶ್ರೀನಾಥ, ಮಾಜಿ ಸಂಸದ ಶಿವರಾಮಗೌಡ ಹೆಗಲು ಕೊಟ್ಟಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಶಿವರಾಜ ತಂಗಡಗಿ, ಮಾಜಿ ಶಾಸಕ ಜಿ. ವೀರಪ್ಪ ಭಾಗವಹಿಸಿದ್ದರು.
ಭಜನೆ ಕಾರ್ಯಕ್ರಮದಲ್ಲೂ ಕೆಲ ಕಾಲ ಈ ಎಲ್ಲ ನಾಯಕರು ಭಾಗವಹಿಸಿದ್ದರು. ಬೆಳಗ್ಗೆ ಗಂಗಾಧರೇಶ್ವರ ಸ್ವಾಮಿಗೆ ಬಿಲ್ವಾರ್ಚನೆ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಗಂಗಾಧರೇಶ್ವರ ದೇವಸ್ಥಾನದಿಂದ ಜಯನಗರ, ಸತ್ಯನಾರಾಯಣ ಪೇಟೆ, ಶಂಕರ ಮಠದ ರಸ್ತೆ ಮೂಲಕ ಬನ್ನಿ ಮಹಾಂಕಾಳಿ ದೇವಸ್ಥಾನದವರಿಗೂ ಪಲ್ಲಕ್ಕಿ ಉತ್ಸವ ಜರುಗಿತು. ಮೆರವಣಿಗೆಯಲ್ಲಿ ವಿವಿಧ ಸಮಾಜದ ಮಹಿಳಾ ಭಜನಾ ಮಂಡಳಿ, ವೀರಗಾಸೆ ಕುಣಿತ, ತಾಷಾ, ಡೊಳ್ಳು ಕುಣಿತ ಇತ್ತು. ಮಹಿಳೆಯರು ಪೂರ್ಣಕುಂಭ ಹೊತ್ತು ಭಾಗವಹಿಸಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಳಗ್ಗೆ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಗಂಗಾಧರೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ಬಂಡೆಪ್ಪ ಕಂಪ್ಲಿ, ಅಧ್ಯಕ್ಷ ಟಿ.ಎಂ. ಉಮಾ ಮಹೇ ಶ್ವರಸ್ವಾಮಿ, ಮಂಟಪಗೌಡ, ಕಾರ್ಯದರ್ಶಿ ಸುರೇಶ ಗೌರಪ್ಪ, ಪ್ರಭುರಾಜ ನೂಲ್ವಿ, ವಿದ್ಯಾಸಾಗರ ನವಲಿ, ಎಸ್.ಟಿ. ರಾಮಕೃಷ್ಣ, ಶಾಂತಾ ಮಲ್ಲಿಕಾರ್ಜುನಸ್ವಾಮಿ, ವಸಂತ ನಾಯಕ, ಶ್ರೀಕಾಂತ ಹಿರೇಮಠ, ಚೆನ್ನಬಸಪ್ಪ, ರಾಜೋಳ್ಳಿ ಶ್ರೀನಿವಾಸ, ರಾಮಮೂರ್ತಿ ನವಲಿ, ಮಲ್ಲಿಕಾರ್ಜುನಯ್ಯ ಹಿರೇಮಠ ನವಲಿ, ತಾರಾನಾಥಸ್ವಾಮಿ ಹಿರೇಮಠ, ಕೆಳಗಿನಗೌಡ ಭಾಗವಹಿಸಿದ್ದರು.