ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು

Published : Dec 07, 2025, 11:03 PM IST
Koppal Accident

ಸಾರಾಂಶ

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು, ಹಸೆಮಣೆ ಏರಬೇಕಿದ್ದ ನವ ಜೋಡಿಗಳು ದುರಂತ ಅಂತ್ಯಕಂಡ ಘಟನೆ ಗಂಗಾವತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೊಪ್ಪಳ (ಡಿ.07) ಹಸೆಮಣೆ ಏರಬೇಕಿದ್ದ ಜೋಡಿ ದುರಂತ ಅಂತ್ಯಕಂಡ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.ಮದುವೆಗೆ ಕೆಲ ದಿನಗಳು ಮಾತ್ರ ಬಾಕಿ ಇತ್ತು. ಮದುವೆಗೂ ಮುನ್ನ ಸಾಮಾನ್ಯವಾಗಿರುವ ಪ್ರೀ ವೆಡ್ಡಿಂಗ್ ಫೋಟೋ ಶೂಟಿಂಗ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿಯಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಭಾವಿ ದಂಪತಿ ಮೃತಪಟ್ಟ ಘಟನೆ ಕೊಪ್ಪಳದ ಗಂಗಾವತಿಯ ದಾಸನಾಳ ಸಮೀಪದ ಬಂಡ್ರಾಳದ ವೆಂಕಟಗಿರಿ ಕ್ರಾಸ್ ಬಳಿ ನಡೆದಿದೆ.

ಯಮನಾಗಿ ಬಂದ ಲಾರಿ

26 ವರ್ಷದ ಕರಿಯಪ್ಪ ಮಡಿವಾಳ ಹಾಗೂ 19 ವರ್ಷದ ಕವಿತಾ ಪವಾಡೆಪ್ಪ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಲು ಹೊಸಪೇಟೆಯ ಪಂಪಾವನ ಮುನಿರಾಬಾದ್‌ಗೆ ತೆರಳಿದ್ದರು. ಫೋಟೋಗ್ರಾಫರ್ ಈ ಸ್ಥಳ ಸೂಚಿಸಿದ್ದರು. ಹೀಗಾಗಿ ಇಬ್ಬರು ಬೈಕ್‌ನಲ್ಲಿ ತೆರಳಿ ಖುಷಿ ಖುಷಿಯಿಂದ ಪ್ರೀ ವೆಡ್ಡಿಂಗ್ ಫೋಟೋ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಫೋಟೋ ಹಾಗೂ ವಿಡಿಯೋ ಶೂಟಿಂಗ್ ಸಂಜೆವರೆಗೂ ನಡೆದಿತ್ತು. ಕತ್ತಲಾಗುತ್ತಿದ್ದಂತೆ ಶೂಟಿಂಗ್ ಮುಗಿಸಿದ ಭಾವಿ ದಂಪತಿಗಳು ಬೈಕ್ ಮೂಲಕ ಮರಳಿದ್ದಾರೆ. ಕವಿತಾ ಪವಾಡೆಪ್ಪಳನ್ನು ಆಕೆಯ ಕಾರಟಗಿ ತಾಲೂಕಿನ ಮುಷ್ಠೂರು ಗ್ರಾಮಕ್ಕೆ ಬಿಟ್ಟು, ತಾನು ಕೊಪ್ಪಳದ ಇರಕಲಗಡ ಗ್ರಾಮಕ್ಕೆ ತೆರಳಲು ಪ್ಲಾನ್ ಮಾಡಿದ್ದರು. ಇದರಂತೆ ಬೈಕ್‌ನಲ್ಲಿ ಸಾಗುತ್ತಿದ್ದಂತೆ ಏಕಾಏಕಿ ಬಂದ ಲಾರಿ ಡಿಕ್ಕಿಯಾಗಿದೆ.

ಡಿಸೆಂಬರ್ 21 ರಂದು ಮದುವೆ ನಿಶ್ಚಯವಾಗಿತ್ತು

ಕರಿಯಪ್ಪ ಮಡಿವಾಳ ಹಾಗೂ ಕವಿತಾ ಪವಾಡೆಪ್ಪ ಇಬ್ಬರ ಎಂಗೇಜ್‌ಮೆಂಟ್ ನವೆಂಬರ್ 21ರಂದು ನಡೆದಿತ್ತು. ಬಳಿಕ ಮದುವೆ ತಯಾರಿಗಳು ಆರಂಭಗೊಂಡಿತ್ತು. ಕಳೆದೆರಡು ವಾರದಿಂದ ಇಬ್ಬರು ಆಪ್ತರು, ಕುಟುಂಬಸ್ಥರನ್ನು ಮದುವೆಗ ಆಮಂತ್ರಿಸಲು ಆರಂಭಿಸಿದ್ದರು. ಲಗ್ನ ಪತ್ರಿಕೆ ಹಂಚಿ ಆಮಂತ್ರಣ ನೀಡಲು ಆರಂಭಿಸಿದ್ದರು. ಇದರ ನಡುವೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ಗೆ ಸಮಯ ನಿಗದಿ ಮಾಡಿದ್ದರು. ಇದರಂತೆ ಇಂದು ಪ್ರಿ ವೆಡ್ಡಿಂಗ್ ಶೂಟಿಂಗ್ ಮುಗಿಸಿ ಮರಳುವಾಗ ಅಪಘಾತ ಸಂಭವಿಸಿದೆ.ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬಸ್ಥರ ಆಕ್ರಂದನ

ಕುಟುಂಸ್ಥರು ಎಲ್ಲರೂ ಒಪ್ಪಿ ಮದುವೆ ನಿಶ್ಚಯ ಮಾಡಲಾಗಿತ್ತು. ಎರಡೂ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ತಯಾರಿಗಳು ಭರದಿಂದ ನಡೆದಿತ್ತು. ಮದುವೆ ಚೌಲ್ಟ್ರಿ, ಮದುವೆ ದಿನ ಊಟದ ವ್ಯವಸ್ಥೆ, ಆರತಕ್ಷತೆ ಸೇರಿದಂತ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಎರಡೂ ಮನೆಯಲ್ಲಿ ಕುಟುಂಬಸ್ಥರು ತುಂಬಿದ್ದರು. ಇದರ ನಡುವೆ ಅಪಘಾತ ಸುದ್ದಿ ಬರಸಿಡಿಲಿನಂತೆ ಎರಗಿದೆ. ಎರಡೂ ಕುಟುಂಬದ ಪೋಷಕರು, ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ