ಕೋಲಾರ ಕೈಗಾರಿಕಾ ಪ್ರದೇಶದಲ್ಲಿ ಭಯ: ಕಾರ್ಮಿಕರೇ ಟಾರ್ಗೆಟ್

By Anusha KbFirst Published Apr 16, 2022, 12:33 AM IST
Highlights
  • ಕೋಲಾರ ಕೈಗಾರಿಕಾ ಪ್ರದೇಶದಲ್ಲಿ ಭಯದ ವಾತಾವರಣ
  • ಕಾರ್ಮಿಕರನ್ನೇರಾಬರಿ ಮಾಡುವ ಗ್ಯಾಂಗ್‌
  • ಒಡವೆ ಹಣ ಕಳೆದುಕೊಂಡ ಕಾರ್ಮಿಕರು

ದೀಪಕ್ ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ, (ಏ.15): ಅವರೆಲ್ಲಾ ಬರದ ನಾಡಿನ ಜನರಿಗೆ ಉದ್ಯೋಗ ಕೊಟ್ಟ ಉದ್ಯೋಗದಾತರು, ಸಾವಿರಾರು ಜನರಿಗೆ ಜೀವನಕ್ಕೆ ದಾರಿದೀಪ ಮಾಡಿಕೊಟ್ಟವರು. ಅದರೆ ಇತ್ತೀಚೆಗೆ ಅದೇ ಕೈಗಾರಿಕಾ ಪ್ರದೇಶಗಳು ಆತಂಕದ ಕೇಂದ್ರವಾಗಿ ಕಾರ್ಮಿಕರನ್ನೇ ರಾಬರಿ ಮಾಡುವ ಗ್ಯಾಂಗ್‌ಗಳು ಸೃಷ್ಟಿಯಾಗಿವೆ. 

ಹೌದು, ಕೋಲಾರ ತಾಲ್ಲೂಕು ನರಸಾಪುರದ ಬಳಿ ಕಂಡು ಬರುವ ಬೃಹತ್ ಕೈಗಾರಿಕೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಅದರಲ್ಲೂ ರಾತ್ರಿ ವೇಳೆಯಲ್ಲಿ ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ಓಡಾಡುವ ಕಾರ್ಮಿಕರನ್ನು ಅಡ್ಡಗಟ್ಟಿ ಮೊಬೈಲ್ (mobile phones), ಒಡವೆಗಳು(jewelery), ಹಾಗೂ ಹಣ ದೋಚುವ ಒಂದು ವ್ಯವಸ್ಥಿತ ಗ್ಯಾಂಗ್ ಕೆಲಸ ಮಾಡುತ್ತಿದೆ. 

ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ದರೋಡೆ, ದೃಶ್ಯ ಮೊಬೈಲ್‌ನಲ್ಲಿ ಸೆರೆ

ಹಣ ಕಳೆದುಕೊಂಡ ಹತ್ತಾರು ಜನರು ಭಯದಲ್ಲಿ ಪೊಲೀಸ್ ಠಾಣೆಗೆ ದೂರು ನೀಡದೆ ತಮ್ಮ ತಮ್ಮ ಕಂಪನಿಗಳ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ. ಎರಡೂ ಕೈಗಾರಿಕಾ ಪ್ರದೇಶಗಳಲ್ಲಿ ಬಹುತೇಕ 50 ರಷ್ಟು ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿದ್ದು, ಕೆಲಸ ಕಳೆದು ಕೊಂಡವರು, ಹೊಸಬರು, ಹಣಕ್ಕಾಗಿ ಇಂತಹ ಕೃತ್ಯ ಎಸಗುತ್ತಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ. ಅಲ್ಲದೆ ಮಹಿಳೆಯರು ಮತ್ತು ಯುವತಿಯರು ಕೂಡಾ ಕೆಲಸಕ್ಕೆ ಬಂದು ವಾಪಸ್ ಮನೆಗೆ ತೆರಳುವ ವೇಳೆ ಬೇರೆ ಅನಾಹುತಗಳಾದರೆ ಹೇಗೆ ಅನ್ನೋ ಆತಂಕ ಶುರುವಾಗಿದೆ. ಹಾಗಾಗಿ ರಾತ್ರಿ ಪಾಳಯದಲ್ಲಿ ಕೆಲಸ ಮುಗಿಸಿಕೊಂಡು ಹೋಗುವ ಕಾರ್ಮಿಕರು ಕೈಗಾರಿಕಾ ಪ್ರದೇಶದಲ್ಲಿ ಭಯದಲ್ಲೇ ಓಡಾಡುವಂತಾಗಿದೆ.

ಇನ್ನು ನರಸಾಪುರ (Narasapur) ಹಾಗೂ ವೇಮಗಲ್ (Vemgal) ಕೈಗಾರಿಕಾ ಪ್ರದೇಶದಲ್ಲಿ ಹೋಂಡಾ (Honda), ಸ್ಕ್ಯಾನಿಯಾ(Scania), ಮಹಿಂದ್ರಾ(Mahindra), ವಿಸ್ಟ್ರಾನ್(Vistron), ಮಿಸ್ಟ್ರುಬ್ಯುಷಿ ಎಕ್ಸಿಡ್(Mistrubushi Exid), ಬಡವೆ, ಟ್ರಾಕ್ ಕಾಂಪೊನೆಂಟ್ಸ್, ಲೂಮೆಕ್ಸ್ (Lumex) ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳಿವೆ. ದೇಶದಲ್ಲೇ ದೊಡ್ಡ ಆಟೊಮೊಬೈಲ್ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆ ಕೂಡಾ ಇಲ್ಲಿದೆ. ಇಂತಹ ಪ್ರದೇಶದಲ್ಲಿ ರಾಬರಿ ಪ್ರಕರಣಗಳು ಹೆಚ್ಚಾಗಿದ್ದು ಪೊಲೀಸ್ ಇಲಾಖೆಗೆ ಕೈಗಾರಿಕಾ ಪ್ರದೇಶದಲ್ಲಿರುವ ರಾಬರಿ ಗ್ಯಾಂಗ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಶೀಘ್ರದಲ್ಲೇ ಕೋಲಾರದ ಐಫೋನ್ ಉತ್ಪಾದನೆ ಘಟಕ ಪುನರಾರಂಭ!

ಹಾಗಾಗಿ ಮಾಲೂರು ಪೊಲೀಸ್ ಠಾಣೆ ಹಾಗೂ ವೇಮಗಲ್ ಪೊಲೀಸ್ ಠಾಣಾ (Wamegal Police Station)ವ್ಯಾಪ್ತಿಗೆ ಬರುವ ಈ ಕೈಗಾರಿಕಾ ಪ್ರದೇಶಗಳಲ್ಲಿ ರಾತ್ರಿ ಗಸ್ತು ಜೊತೆಗೆ  ಮೊದಲ ಪಾಳಿಯ, ಎರಡನೇ ಪಾಳಿಯ ಹಾಗೂ ರಾತ್ರಿ ಪಾಳಿಯ ಕೆಲಸ ಮುಗಿಯುವ ವೇಳೆಯಲ್ಲಿ ಪೊಲೀಸ್ ಬೀಟ್ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದಲೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಕೈಗಾರಿಕೆಯ ಮುಖ್ಯಸ್ಥರುಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಒಟ್ನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರನ್ನು ಕಿತ್ತು ತಿನ್ನುವ ಖತರ್ನಾಕ್ ಗ್ಯಾಂಗ್ ಕೆಲಸ ಮಾಡುತ್ತಿದ್ದು, ಗ್ಯಾಂಗ್ ಹಿಡಿಯಲು ಪೊಲೀಸ್ ಇಲಾಖೆ ಪ್ಲಾನ್ ಮಾಡುತ್ತಿದೆ. ಆದಷ್ಟು ಬೇಗ ಗ್ಯಾಂಗ್ ಹಿಡಿಯುವ ಜೊತೆಗೆ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಅನ್ನೋದು ಎಲ್ಲರ ಆಗ್ರಹವಾಗಿದೆ. ಈ ಮಧ್ಯೆ ಕಾರ್ಮಿಕರಿಂದಲೇ ಧ್ವಂಸಗೊಂಡ ಕೋಲಾರದ ಐಫೋನ್ ಉತ್ಪಾದನೆ ಘಟಕ ವಿಸ್ಟ್ರಾನ್ ಮತ್ತೆ ಕಾರ್ಯರಂಭಕ್ಕೆ ಸಜ್ಜಾಗಿದೆ. ಕಾರ್ಮಿಕರು ಹಾಗೂ ಕಂಪನಿ ನಡುವಿನ ಜಟಾಪಟಿಯನ್ನು ಮಾತುಕತೆ ಮೂಲಕ ಬಗೆಹರಿಸಲಾಗಿದೆ. ಈ ಕುರಿತು ಕೈಗಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ.

click me!