
ಕೋಲಾರ (ನ.11) ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮರು ಎಣಿಕೆ ಕಾರ್ಯ ನಡೆದಿದೆ. ಬಿಜೆಪಿ ಪಾರಾರ್ಜಿತ ಅಭ್ಯರ್ಥಿ ಮಂಜುನಾಥ್ ಗೌಡ ಸಲ್ಲಿಸಿದ್ದ ಅರ್ಜಿಯಿಂದ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದ ಇಂದು ಬೆಳಗ್ಗೆ 8 ಗಂಟೆಯಿಂದ ಮತ ಮರು ಎಣಿಕೆ ನಡೆದಿದೆ. ಇದೀಗ ತೀವ್ರ ಕುತೂಹಲ ಮನೆ ಮಾಡಿದೆ. ಮರು ಎಣಿಕೆ ಮುಕ್ತಾಯಗೊಂಡ ಬಳಿಕ ಕೇಂದ್ರದಿಂದ ಹೊರಬಂದ ಕಾಂಗ್ರೆಸೆ್ ಶಾಸಕ ಕೆವೈ ನಂಜೇಗೌಡ ಕಣ್ಣೀರಿಟ್ಟಿದ್ದಾರೆ. ಕುಟುಂಬದ ಜೊತೆ ಭಾವುಕರಾದ ನಂಜೇಗೌಡ ಕಣ್ಣೀರಿಟ್ಟಿದ್ದಾರೆ. ಇದರ ಬೆನ್ನಲ್ಲೇ ಹಲವು ಚರ್ಚೆಗಳು ಶುರುವಾಗಿದೆ.
ಮಾಲೂರು ಮತ ಎಣಿಕೆ ಕೇಂದ್ರದಿಂದ ಹೊರಬಂದ ನಂಜೇಗೌಡರನ್ನು ಕಾಯುತ್ತಿದ್ದ ಕುಟುಂಬಸ್ಥರನ್ನು ನೋಡುತ್ತಿದ್ದಂತೆ ಭಾವುಕರಾಗಿದ್ದಾರೆ. ಪತ್ನಿ,ಮಕ್ಕಳು, ಸೊಸೆಯರ ಜೊತೆ ಶಾಸಕ ನಂಜೇಗೌಡರು ಕಣ್ಣೀರು ಹಾಕಿದ್ದಾರೆ. ಇದರ ಬೆನ್ನಲ್ಲೇ ಹಲವು ಚರ್ಚೆಗಳು ನಡೆಯುತ್ತಿದೆ. ವಿನಾ ಕಾರಣ ನಂಜೇಗೌಡರ ಗೆಲುವನ್ನು ಸಂಶಯದಿಂದ ನೋಡಲಾಗಿತ್ತು. ಇಂದು ಮರು ಎಣಿಕೆಯಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಹೀಗಾಗಿ ನಂಜೇಗೌಡರು ಭಾವುಕರಾಗಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿಗರು ಹೇಳಿದ್ದಾರೆ. ಇದೇ ವೇಳೆ ಮರು ಎಣಿಕೆಯಲ್ಲಿ ಫಲಿತಾಂಶ ಉಲ್ಟಾ ಹೊಡೆಯುವ ಸಾಧ್ಯತೆ ಇದೆ ಎಂದು ಕಣ್ಣೀರು ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶವನ್ನು ಚುನಾವಣಾ ಆಯೋಗ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ. ಸುಪ್ರೀಂ ಕೋರ್ಟ್ ನವೆಂಬರ್ 24ರಂದು ಫಲಿತಾಂಶ ಪ್ರಕಟಿಸಲಿದೆ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಸುಪ್ರೀಂ ಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಇಂದು (ನ.11) ಬೆಳಗ್ಗೆ 8 ಗಂಟೆಯಿಂದ ಕೋಲಾರ ವಿಧಾನಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭಗೊಂಡಿತ್ತು.ಕೋಲಾರ ಹೊರಹೊಲಯದ ತೋಟಗಾರಿಕೆ ವಿವಿ ಮರು ಏಣಿಕೆ ಕಾರ್ಯ ಆರಂಭಗೊಂಡಿತ್ತು. ಇವಿಎಂ ಹಾಗೂ ಪೋಸ್ಟಲ್ ಹಾಗೂ ವಿವಿ ಪ್ಯಾಟ್ ಮತಗಳ ಎಣಿಕೆ ಮಾಡಲಾಗಿದೆ. ಒಟ್ಟು 18 ಸುತ್ತುಗಳ ಮರು ಎಣಿಕೆ ಕಾರ್ಯ ನಡೆದಿತ್ತು. ಅನುಮಾನವಿರುವ ಎರಡು ಬೂತ್ ಗಳ ಜೊತೆ ಉಳಿದ ಮೂರು ಬೂತ್ ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಎಣಿಕೆ ನಡೆಸಲಾಗಿತ್ತು.ಮರು ಎಣಿಕೆ ಸ್ಥಳದಿಂದ ಒಂದು ಕಿಮಿ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಒಂದು ಕಿಮಿ ವ್ಯಾಪ್ತಿ ನಿಷೇಧಿತ ಪ್ರದೇಶ ಎಂದು ಕೋಲಾರ ಜಿಲ್ಲಾಧಿಕಾರಿ ಡಾ ಎಂ.ಆರ್ ರವಿ ಆದೇಶ ನೀಡಿದ್ದರು.
ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮತದಾನದಲ್ಲಿ ಮಾಲೂರು ತಾಲೂಕು ಕಚೇರಿಯ ಉಪ ಖಜಾನೆಯಲ್ಲಿ ಫಾರಂ 17(ಸಿ) ಪತ್ರಗಳು ಇರಿಸಿರೊ ಆರೋಪ ಕೇಳಿಬಂದಿತ್ತು. ದೂರುದಾರ, ಬಿಜೆಪಿ ಪಾರಾರ್ಜಿತ ಅಭ್ಯರ್ಥಿ ಮಂಜುನಾಥ್ ಗೌಡ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಡಿಸಿ ಕಚೇರಿ ಉಗ್ರಾಣದಲ್ಲಿ ಇರಬೇಕಿದ್ದ ಏಜೆಂಟ್ ಪ್ರತಿಗಳು ಇರಿಸಿರೊ ಆರೋಪ ಮಾಡಿದ್ದರು. ಮತ ಎಣಿಕೆಯಲ್ಲಿ ಅನುಮಾನ ಎಂದು ಮಂಜುನಾಥ್ ಕೋರ್ಟ್ ಮೆಟ್ಟಿಲೇರಿದ್ದರು. 113 ಏಜೆಂಟ್ ಸಹಿ ಇಲ್ಲ,ಸಿಸಿ ಟಿವಿ ದೃಶ್ಯಗಳು ನಾಶವಾಗಿದೆ. ಈ ಬಾರಿ ಮತ ಎಣಿಕೆ ಮಾಡುವಾಗ ಅಚ್ಚುಕಟ್ಟಾಗಿ ನಡೆಸಿ ಅಂತ ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮರು ಎಣಿಕೆ ಮಾಡುವಂತೆ ಆದೇಶ ನೀಡಿತ್ತು.
ಹಾಲಿ ಕಾಂಗ್ರೆಸ್ ಶಾಸಕ ನಂಜೇಗೌಡ ವಿರುದ್ಧ 248 ಮತಗಳಿಂದ ಸೋತಿರುವ ಮಂಜುನಾಥ್ ಗೌಡ ಸತತ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕೊನೆಗೂ ಮಂಜುನಾಥ್ ಗೌಡರ ದೂರಿನಂತೆ ಮತ ಮರು ಎಣಿಕೆ ಆಗಿದೆ.