
ಕೋಲಾರ: ಆರ್‌ಸಿಬಿ ವಿಜಯೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ತಾಲೂಕಿನ ಕುರುಟಹಳ್ಳಿಯ ಶ್ರವಣ್ ಮೃತಪಟ್ಟಿದ್ದರಿಂದ ಸರ್ಕಾರ ನೀಡಿರುವ ಪರಿಹಾರ ಮೊತ್ತ ₹25 ಲಕ್ಷ ಚೆಕ್‌ನ್ನು ಮೃತ ಶ್ರವಣ್ ತಂದೆ ತಿಮ್ಮಪ್ಪಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ವಿತರಿಸಿದರು.
ತಾಲೂಕಿನ ಕುರುಟಹಳ್ಳಿ ಮೃತ ಶ್ರವಣ್‌ರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಆರ್‌ಸಿಬಿ ಐಪಿಎಲ್‌ನಲ್ಲಿ ಗೆದ್ದು ಬೀಗಿದ ಹಿನ್ನೆಲೆ ಮರುದಿನ ಸರ್ಕಾರ ಹಮ್ಮಿಕೊಂಡಿದ್ದ ವಿಜಯೋತ್ಸವ ಸಮಾರಂಭದಲ್ಲಿ 11 ಮಂದಿ ಮೃತಪಟ್ಟಿದ್ದರು. ರಾಜ್ಯ ಸರ್ಕಾರ ಮೃತರ ಕುಟುಂಬದವರಿಗೆ ಪರಿಹಾರವಾಗಿ 25 ಲಕ್ಷ ರೂಗಳ ಘೋಷಿಸಿತ್ತು, ಜಿಲ್ಲಾ ಆಡಳಿತದಿಂದ ಮೃತ ಶ್ರವಣ್ ತಂದೆಗೆ ಸರ್ಕಾರ ನೀಡಿರುವ ಪರಿಹಾರದ ₹25 ಲಕ್ಷ ಚೆಕ್‌ನ್ನು ನೀಡಿರುವುದಾಗಿ ತಿಳಿಸಿದರು.
ಇಂತಹ ಘಟನೆ ನಡೆಯಬಾರದಿತ್ತು, ಆದರೆ ಘಟನೆಯಿಂದ ಇಡೀ ರಾಜ್ಯದ ಜನತೆಗೆ ನೋವುಂಟಾಗಿದ್ದು ಈ ಹಿನ್ನೆಲೆ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ಧನ ವಿತರಿಸಿದೆ. ಕೆಲ ಪೋಷಕರು ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದ್ದು ಅದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಮಗನನ್ನು ಕಳೆದುಕೊಂಡು ಅತೀವ ದುಖ:ದಲ್ಲಿರುವ ಈ ಕುಟುಂಬದ ಸದಸ್ಯರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದರು. ಈ ಸಂದರ್ಭದಲ್ಲಿ ಎಡಿಸಿ ಭಾಸ್ಕರ್, ತಾ.ಪಂ. ಇಒ ಎಸ್.ಆನಂದ್, ಗ್ರೇಡ್2 ತಹಶೀಲ್ದಾರ್ ರಾಜೇಂದ್ರ, ಪಿಡಿಒ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.
ಊರಿಗೆ ಬಾಡೂಟ
ಐಪಿಎಲ್‌ನ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದ್ದಕ್ಕೆ ತಾಲೂಕಿನ ಬಂಡಿಹರ್ಲಾಪುರ ಯುವಕರು ಊರಿಗೆ ಬಾಡೂಟ ಹಾಕಿದ್ದಾರೆ. ಇದೇ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರಿಗೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆರ್‌ಸಿಬಿ ಕಪ್ ಗೆದ್ದ ದಿನವೇ ಬಾಡೂಟ ಹಾಕಿಸಬೇಕು ಎಂದುಕೊಂಡಿದ್ದರು. ಆದರೆ ಅಂದು ತಡರಾತ್ರಿಯಾಗಿದ್ದರಿಂದ ಆಗಲಿಲ್ಲ. ಮರುದಿನ ಮಾಡಿಸಲು ನಿರ್ಧರಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ 11 ಜನರು ಮೃತಪಟ್ಟಿದ್ದರಿಂದ ಕೈಬಿಡಲಾಗಿತ್ತು. ಇದೀಗ ಗುರುವಾರ ಬಾಡೂಟ ಹಾಕುವ ಜತೆಗೆ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಆರ್‌ಸಿಬಿ ಫೈನಲ್ ಪ್ರವೇಶಿಸುತ್ತಿದ್ದಂತೆ ಗ್ರಾಮದ ಯುವಕರೆಲ್ಲರೂ ಸೇರಿ ಈ ಬಾರಿ ಕಪ್ ಗೆದ್ದರೇ ಊರಿಗೆ ಬಾಡೂಟ ಹಾಕೋಣವೆಂದು ಮಾತನಾಡಿಕೊಂಡಿದ್ದಾರೆ. ಅದರಂತೆ ಆರ್‌ಸಿಬಿ ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದರಿಂದ ಎಲ್ಲರೂ ಸೇರಿ 2 ಕ್ವಿಂಟಲ್ ಚಿಕನ್ ಮತ್ತು 2 ಕ್ವಿಂಟಲ್ ಪಲಾವ್ ಮಾಡಿ ಇಡೀ ಗ್ರಾಮದ ಜನರಿಗೆ ಬಾಡೂಟ ಹಾಕಿಸಿದ್ದಾರೆ.ಆರ್‌ಸಿಬಿ ಗೆದ್ದರೆ ಗ್ರಾಮಕ್ಕೆ ಬಾಡೂಟ ಹಾಕಿಸಬೇಕೆಂದು ತೀರ್ಮಾನಿಸಿದ್ದೇವು. ಅದರಂತೆ ಗೆದ್ದಿತು. ಆದರೆ, ಮರುದಿನವೇ ದುರಂತ ನಡೆದಿದ್ದರಿಂದ ಒಂದು ದಿನ ತಡವಾಗಿ ಊರಿಗೆ ಊಟ ಹಾಕಿಸಿದ್ದೇವೆ ಎಂದು ಯುವಕ ರಾಜು ಯಾದವ್ ತಿಳಿಸಿದ್ದಾರೆ.