Communal Harmony: ದ್ವೇಷದ ವಾತಾವರಣದಲ್ಲಿ ಪ್ರೀತಿಯ ವಾಸನೆ; ಗಣೇಶೋತ್ಸವಕ್ಕೆ ₹5 ಲಕ್ಷ ದೇಣಿಗೆ ನೀಡಿ ಸೌರ್ಹಾದತೆಗೆ ಮಾದರಿಯಾದ ಮುಸ್ಲಿಂ ಮುಖಂಡ!

Published : Sep 14, 2026, 03:43 PM IST
Ganesh Festival

ಸಾರಾಂಶ

ಮುಸ್ಲಿಂ ಮುಖಂಡ ಅಜ್ಗರ್ ಅವರು ಗಣೇಶೋತ್ಸವಕ್ಕಾಗಿ 5 ಲಕ್ಷ ರೂಪಾಯಿ ಧನಸಹಾಯ ನೀಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ. ಸಮಾಜದಲ್ಲಿ ಒಗ್ಗಟ್ಟು ಮತ್ತು ಶಾಂತಿಯನ್ನು ಸಾರುವ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಭಕ್ತಿ, ಸೌಹಾರ್ದತೆ ಮತ್ತು ಸಾಂಸ್ಕೃತಿಕ ವೈಭವದಿಂದ ಆಚರಿಸಲ್ಪಡುವ ಈ ಗಣೇಶೋತ್ಸವವು ಸಮಾಜದ ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸುವ ಮಹಾನ್ ಪರ್ವಕಾಲ. ಇತ್ತೀಚಿನ ದಿನಗಳಲ್ಲಿ ದೇಶದ ಹಲವೆಡೆ ಸಣ್ಣಪುಟ್ಟ ಕಾರಣಗಳಿಗೆ ಕೋಮು ಸಂಘರ್ಷಗಳು, ಉದ್ವಿಗ್ನ ವಾತಾವರಣಗಳು ವರದಿಯಾಗುತ್ತಿರುವ ಈ ಸಂದರ್ಭದಲ್ಲಿ, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗುವಂತಹ ಅಪರೂಪದ ಘಟನೆಯೊಂದು ನಡೆದಿದೆ.

ಗಮನ ಸೆಳೆದ ಕೋಲಾರ!

ಮಾಲೂರು ತಾಲೂಕಿನಲ್ಲಿ ಈ ಬಾರಿಯ ಗಣೇಶ ಚತುರ್ಥಿಯು ವಿಭಿನ್ನ ಹಾಗೂ ಮಾದರಿಯಾಗಿ ಆಚರಣೆಯಾಗುತ್ತಿದ್ದು, ಇಡೀ ರಾಜ್ಯದ ಗಮನ ಸೆಳೆದಿದೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಸಹೋದರತ್ವವನ್ನು ಸಾರುವ ಉದ್ದೇಶದಿಂದ ಬಿಜೆಪಿಯ ಮುಸ್ಲಿಂ ಮುಖಂಡರಾದ ಅಜ್ಗರ್ ಅವರು ಅತ್ಯಂತ ಪ್ರಶಂಸನೀಯ ಕಾರ್ಯವೊಂದಕ್ಕೆ ಮುಂದಾಗಿದ್ದಾರೆ. ಭೇದಭಾವವಿಲ್ಲದೆ ಸಮಾಜದಲ್ಲಿ ಒಗ್ಗಟ್ಟನ್ನು ಮೂಡಿಸಲು ತಮ್ಮ ಸ್ವಂತ ಖರ್ಚಿನಿಂದ ಹಿಂದೂ ಸಮಾಜದ ಯುವಕರಿಗೆ ಬೃಹತ್ ಮಟ್ಟದ ಧನಸಹಾಯ ಘೋಷಣೆ ಮಾಡಿದ್ದಾರೆ.

ದೇಣಿಗೆ ನೀಡಿದ್ದು ಯಾರು!

ತಮ್ಮ ಸ್ವಂತ ಗಳಿಕೆಯಿಂದ ಬರೋಬ್ಬರಿ 5 ಲಕ್ಷ ರೂಪಾಯಿಗಳನ್ನು ಗಣೇಶೋತ್ಸವ ಆಚರಿಸುವ ಯುವಕರ ಸಮಿತಿಗಳಿಗೆ ದಾನವಾಗಿ ನೀಡಲು ಅಜ್ಗರ್ ಅವರು ನಿರ್ಧರಿಸಿದರು. ಮಾಲೂರು ತಾಲೂಕಿನ ವಿವಿಧ ಬಡಾವಣೆಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಕೂರಿಸುವ ಯುವಕರ ತಂಡಗಳಿಗೆ ನೆರವಾಗಲು, ಪ್ರತಿ ಗಣೇಶ ಮಂಡಳಿಗೆ ತಲಾ 10,000 ರೂಪಾಯಿಗಳಂತೆ ಧನಸಹಾಯ ಹಂಚಿಕೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ಸೌಹಾರ್ದಯುತ ನಡವಳಿಕೆಗೆ ಮೆಚ್ಚುಗೆ!

ಈ ವಿಷಯ ತಿಳಿಯುತ್ತಿದ್ದಂತೆ ಮಾಲೂರಿನ ಬಿಜೆಪಿ ಕಚೇರಿಯ ಬಳಿ ಸಾವಿರಾರು ಯುವಕರು ಜಮಾಯಿಸಿದರು. ಧನಸಹಾಯ ಪಡೆಯಲು ಹಾಗೂ ಮುಖಂಡ ಅಜ್ಗರ್ ಅವರ ಈ ಕಾರ್ಯಕ್ಕೆ ಬೆಂಬಲ ಸೂಚಿಸಲು ಆಗಮಿಸಿದ ಯುವಕರ ಸಂಖ್ಯೆ ಹೆಚ್ಚಾಗಿದ್ದರಿಂದ, ಅಲ್ಲಿಗೆ ಆಗಮಿಸಿದ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸ್ಥಳದಲ್ಲಿದ್ದ ಯುವಕರು ಮುಖಂಡನ ಈ ಸೌಹಾರ್ದಯುತ ನಡವಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮುಕ್ತ ಮಾತು!

ಈ ವಿಶೇಷ ಸೌಹಾರ್ದ ಕಾರ್ಯಕ್ರಮದ ಕುರಿತು 'ಏಷ್ಯಾನೆಟ್ ಸುವರ್ಣ ನ್ಯೂಸ್' ಜೊತೆ ಮುಕ್ತವಾಗಿ ಮಾತನಾಡಿದ ಮುಸ್ಲಿಂ ಮುಖಂಡ ಅಜ್ಗರ್, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. "ಇಂದು ದೇಶದ ಕೆಲವು ಭಾಗಗಳಲ್ಲಿ ಕೋಮು ಸಂಘರ್ಷಗಳನ್ನು ಉಂಟುಮಾಡುವ ಮತ್ತು ಸಮಾಜವನ್ನು ಒಡೆಯುವ ವ್ಯರ್ಥ ಪ್ರಯತ್ನಗಳು ನಡೆಯುತ್ತಿವೆ. ಆದರೆ ನಮ್ಮ ಮಾಲೂರು ತಾಲೂಕಿನಲ್ಲಿ ನಾವು ಎಂದಿಗೂ ಅಂತಹ ವಾತಾವರಣಕ್ಕೆ ಆಸ್ಪದ ನೀಡುವುದಿಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ, ಅಪಾರ ಒಗ್ಗಟ್ಟಿನಿಂದ ಬಾಳುತ್ತಿದ್ದೇವೆ" ಎಂದು ಹೆಮ್ಮೆಯಿಂದ ಹೇಳಿದರು.

ಭಾವೈಕ್ಯತೆ ಕರೆ ನೀಡಿದ ಅಜ್ಗರ್!

ಮುಂದುವರಿದು ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದ್ದರ ಮುಖ್ಯ ಉದ್ದೇಶವೇ ದೇಶದ ಜನರನ್ನು ಜಾತಿ-ಧರ್ಮದ ಭೇದವಿಲ್ಲದೆ ಒಂದೆಡೆ ಸೇರಿಸುವುದಾಗಿತ್ತು. ಇಂದು ನಾವು ತಿಲಕರ ಆ ಉದಾತ್ತ ಉದ್ದೇಶವನ್ನು ಜೀವಂತವಾಗಿಡುತ್ತಿದ್ದೇವೆ ಮತ್ತು ಕಾಪಾಡಿಕೊಂಡು ಹೋಗುತ್ತಿದ್ದೇವೆ. ಹಿಂದೂ-ಮುಸ್ಲಿಂ ಬಾಂಧವರೆಲ್ಲರೂ ಯಾವುದೇ ಭೇದಭಾವವಿಲ್ಲದೆ, ಅತ್ಯಂತ ಸಂಭ್ರಮದಿಂದ ಹಾಗೂ ಒಗ್ಗಟ್ಟಿನಿಂದ ಗಣೇಶ ಹಬ್ಬವನ್ನು ಆಚರಿಸಬೇಕು" ಎಂದು ದೇಶದ ಜನತೆಗೆ ಕರೆ ನೀಡಿದರು.

ದ್ವೇಷದ ವಾತಾವರಣದಲ್ಲಿ ಪ್ರೀತಿ ವಾಸನೆ!

ದ್ವೇಷದ ವಾತಾವರಣದ ನಡುವೆಯೂ ಪ್ರೀತಿ, ಸಾಮರಸ್ಯ ಮತ್ತು ಸೌಹಾರ್ದತೆಯ ದೀವಿಗೆ ಬೆಳಗಿಸಿದ ಮಾಲೂರಿನ ಮುಸ್ಲಿಂ ಮುಖಂಡ ಅಜ್ಗರ್ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ನಡೆ ಇಡೀ ನಾಡಿಗೆ ಶಾಂತಿ ಹಾಗೂ ಸೌಹಾರ್ದತೆಯ ಶ್ರೇಷ್ಠ ಸಂದೇಶವನ್ನು ಸಾರಿದೆ.

PREV
Read more Articles on
click me!

Recommended Stories

ನಾಳೆ ಕೋಲಾರಮ್ಮನಿಗೆ 10108 ತಾವರೆ ಹೂಗಳಿಂದ ಸ್ವರ್ಣಕಮಲದ ಅಲಂಕಾರ! ವಿಮಾನದಲ್ಲಿ ತಂದಿದ್ದೇಕೆ?
ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್‌ ಕಾರ್ಖಾನೆ ಸ್ಥಾಪನೆಗೆ ಮನವಿ