
ಕೋಲಾರ: ನ್ಯಾಯ ಕೇಳಲು ಬಂದ ಮಹಿಳೆಯನ್ನೇ ಲೈಂ*ಕವಾಗಿ ಬಳಸಿಕೊಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಸಮಾಜ ಸೇವಕ, ಹೋರಾಟಗಾರ ಎಂದು ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಮಹಿಳೆಗೆ ಲೈಂ*ಕ ಕಿರುಕುಳ ನೀಡಿದ ಆರೋಪದ ಮೇಲೆ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕೋಲಾರ ಜಿಲ್ಲೆಯ ಕೆಜಿಎಫ್ (KGF) ತಾಲೂಕಿನ ಬೇತಮಂಗಲದಲ್ಲಿ ಘಟನೆ ನಡೆದಿದೆ. 'ಪ್ರಜಾ ಪ್ರಬುದ್ಧ ವೇದಿಕೆ'ಯ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ್ ಎಂಬಾತನೇ ಬಂಧಿತ ಆರೋಪಿ. ಸಂತ್ರಸ್ತ ಮಹಿಳೆಯು ತನ್ನ ಜಮೀನಿನ ವಿವಾದವೊಂದನ್ನು ಬಗೆಹರಿಸಿಕೊಡುವಂತೆ ಸಹಾಯ ಕೋರಿ ಶ್ರೀನಾಥ್‌ನನ್ನು ಸಂಪರ್ಕಿಸಿದ್ದರು. ಆದರೆ ಸಹಾಯ ಮಾಡಬೇಕಾದವನೇ ಮಹಿಳೆಯನ್ನ ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ ಎಂಬ ಆರೋಪ ಇದೆ.
ಸಂತ್ರಸ್ತ ಮಹಿಳೆಯ ದೂರಿನ ಪ್ರಕಾರ, ಜಮೀನು ವಿವಾದ ಬಗೆಹರಿಸಿಕೊಡಲು ಶ್ರೀನಾಥ್ ಮೊದಲಿಗೆ ಹಣ ಮತ್ತು ಬಂಗಾರ ಪಡೆದಿದ್ದ ಎನ್ನಲಾಗಿದೆ. ಹಣದ ಜೊತೆಗೆ ಮಹಿಳೆಯ ಮೇಲೆ ಕಣ್ಣು ಹಾಕಿದ್ದ ಈತ, ನಾನು ಕರೆದಾಗೆಲ್ಲ ನೀನು ಬರಬೇಕು ಎಂದು ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಯು ಈತನ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿದಾಗ, ಶ್ರೀನಾಥ್ ಮತ್ತು ಆತನ ಸಹಚರ ನಾರಾಯಣಸ್ವಾಮಿ ಎಂಬುವವರು ಸಂತ್ರಸ್ತೆಯ ಪತಿಯನ್ನು ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಹೆದರಿದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಶ್ರೀನಾಥ್‌ನನ್ನು ಬಂಧಿಸಿದ್ದಾರೆ. ಶ್ರೀನಾಥ್ ಜೊತೆಗೆ ಆತನ ಸಹಚರ ನಾರಾಯಣಸ್ವಾಮಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಮಾಜ ಸೇವೆ, ಹೋರಾಟ ಎಂದು ಹೇಳಿಕೊಂಡು ತಿರುಗುವವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ನ್ಯಾಯ ಕೊಡಿಸಬೇಕಾದವರೇ ಈ ರೀತಿ ದೌರ್ಜನ್ಯ ಎಸಗಿದರೆ ಜನ ಸಾಮಾನ್ಯರು ಯಾರನ್ನು ನಂಬಬೇಕು ಎಂಬ ಪ್ರಶ್ನೆ ಕಾಡುತ್ತಿದೆ.