
ಕೊಡಗು (ಜು.08): ಕರ್ನಾಟಕದ ಸ್ವಿಡ್ಜರ್‌ಲ್ಯಾಂಡ್ ಎಂದೇ ಖ್ಯಾತವಾಗಿರುವ ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಡಿಕೇರಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ 'ರಾಜಾಸೀಟು' (Raja Seat) ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಮಡಿಕೇರಿ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಜುಲೈ 9 ರಿಂದ ಜುಲೈ 12 ರವರೆಗೆ ರಾಜಾಸೀಟಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜುಲೈ 7 ರಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ರಸ್ತೆ ಬದಿ ಕುಸಿತ ಉಂಟಾಗಿತ್ತು. ಈ ರಸ್ತೆಯ ದುರಸ್ತಿ ಕಾರ್ಯ ಮತ್ತು ಸುಗಮ ಸಂಚಾರಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಸ್ ನಿಲ್ದಾಣದ ಬಳಿ ರಸ್ತೆ ಕುಸಿದಿರುವುದರಿಂದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸೇರಿದಂತೆ ಎಲ್ಲಾ ವಾಹನಗಳು ಈಗ ರಾಜಾಸೀಟು ರಸ್ತೆಯ ಮೂಲಕವೇ ಸಂಚರಿಸಬೇಕಾಗಿದೆ. ರಾಜಾಸೀಟು ಪ್ರದೇಶದಲ್ಲಿ ರಸ್ತೆ ಕಿರಿದಾಗಿದ್ದು, ಪ್ರವಾಸಿಗರ ವಾಹನಗಳು ಅಲ್ಲಿ ನಿಲ್ಲುವುದರಿಂದ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗುತ್ತಿದೆ. ಅಲ್ಲದೆ ಈ ಭಾಗದಲ್ಲಿ ಶಾಲೆಗಳಿರುವುದರಿಂದ ಶಾಲಾ ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಈಗಾಗಲೇ ಕೊಡಗು ಪ್ರವಾಸ ಹಮ್ಮಿಕೊಂಡಿರುವ ಪ್ರವಾಸಿಗರು ಜುಲೈ 12ರ ವರೆಗೆ ರಾಜಾಸೀಟಿಗೆ ಭೇಟಿ ನೀಡಲು ಸಾಧ್ಯವಿಲ್ಲ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ಈ ನಿರ್ಬಂಧ ಹೇರಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಪ್ರವೇಶದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.