ಮಳೆ ಕೊರತೆ ನಡುವೆಯೂ ಒಂದೊಳ್ಳೆ ಸುದ್ದಿ.. ಸಂಪೂರ್ಣ ತುಂಬಿದ ಹಾರಂಗಿ ಜಲಾಶಯ..!

Published : Jul 25, 2026, 04:17 PM IST
Harangi Dam rainfall

ಸಾರಾಂಶ

ರಾಜ್ಯದಲ್ಲಿ ಮಳೆ ಕೊರತೆಯಿದ್ದರೂ, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಈ ವರ್ಷ ಮೊದಲ ಬಾರಿಗೆ ಸಂಪೂರ್ಣ ಭರ್ತಿಯಾಗಿದೆ. ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ, ನಾಲ್ಕು ಕ್ರೆಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದ್ದು, ಇದು ಸಾವಿರಾರು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಕೊಡಗು: ಈ ಬಾರಿ ರಾಜ್ಯದ ಹಲವೆಡೆ ಮಳೆಯ ಕೊರತೆ ಇದೆ. ಆದರೆ, ಕೊಡಗು ಜಿಲ್ಲೆಯ ಜನರ ಆರಾಧ್ಯ ದೈವ, ಕಾವೇರಿಯ ಉಪನದಿ ಹಾರಂಗಿ ಮಾತ್ರ ಮಳೆಯ ಕೊರತೆಯ ನಡುವೆಯೂ ಮೈದುಂಬಿ ನಿಂತಿದ್ದಾಳೆ. ರಾಜ್ಯದಲ್ಲಿಯೇ ಈ ವರ್ಷ ಮೊಟ್ಟ ಮೊದಲ ಬಾರಿಗೆ ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ಹಾರಂಗಿ ಪಾತ್ರವಾಗಿದ್ದು, ಈ ನದಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತರಲ್ಲಿ ಈಗ ಹೊಸ ಭರವಸೆ ಚಿಗುರೊಡೆದಿದೆ.

ಸಂಭ್ರಮದ ಹಾರಂಗಿ: ಅಧಿಕಾರಿಗಳಿಂದ ವಿಶೇಷ ಪೂಜೆ

ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು. ಸದ್ಯ ಜಲಾಶಯವು ತನ್ನ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಸಂಭ್ರಮದ ಸಂದರ್ಭದಲ್ಲಿ ಹಾರಂಗಿ ಜಲಾಶಯದ ಅಧಿಕಾರಿಗಳು ಗಂಗೆಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ನದಿಗೆ ನೀರನ್ನು ಹರಿಸಿದ್ದಾರೆ. ಪ್ರಸ್ತುತ ಜಲಾಶಯಕ್ಕೆ 4500 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ.

ನಾಲ್ಕು ಕ್ರೆಸ್ಟ್ ಗೇಟ್‌ಗಳು ಓಪನ್!

ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ತೆರೆಯಲಾಗಿದ್ದು, ಸುಮಾರು 4000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬಿಳಿ ನೊರೆಯಂತೆ ಹರಿಯುತ್ತಿರುವ ನೀರನ್ನು ನೋಡಲು ಪ್ರವಾಸಿಗರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಜಲಾಶಯದ ಒಳಹರಿವು ಹೆಚ್ಚಾದಂತೆ ನದಿಗೆ ಬಿಡುವ ನೀರಿನ ಪ್ರಮಾಣವನ್ನು ಕೂಡ ಹೆಚ್ಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಬಾರಿ ಸೈರನ್.. ನದಿ ತಟದ ಜನರಿಗೆ ಎಚ್ಚರಿಕೆ!

ನದಿಗೆ ನೀರು ಬಿಡುವ ಮುನ್ನ ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳು ಮೂರು ಬಾರಿ ಸೈರನ್ ಮೊಳಗಿಸಿದ್ದಾರೆ. ನದಿ ತಟದ ಗ್ರಾಮಗಳ ಜನರಿಗೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ನದಿಗೆ ಇಳಿಯದಂತೆ ಮತ್ತು ಜಾನುವಾರುಗಳನ್ನು ನದಿ ತಟಕ್ಕೆ ಬಿಡದಂತೆ ಅಧಿಕಾರಿಗಳು ಡಂಗುರ ಸಾರಿದ್ದಾರೆ.

ರೈತರ ಮುಖದಲ್ಲಿ ಮಂದಹಾಸ

ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ, ಜಲಾಶಯ ಭರ್ತಿಯಾಗಿರುವುದು ರೈತರಲ್ಲಿ ಹರ್ಷ ತಂದಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆಯಾಗುವುದಿಲ್ಲ ಎಂಬ ನಂಬಿಕೆ ಈಗ ಅವರಲ್ಲಿ ಮೂಡಿದೆ. ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಈಗ ಬಿತ್ತನೆ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಕೊಡಗಿನ ಪ್ರಕೃತಿ ಸೌಂದರ್ಯಕ್ಕೆ ಈ ಹಾರಂಗಿ ಜಲಾಶಯದ ವೈಭವ ಮತ್ತಷ್ಟು ಮೆರುಗು ನೀಡಿದೆ.

PREV
Read more Articles on
click me!

Recommended Stories

ಕೊಡಗು ಭಾರೀ ಮಳೆ ಕೈಹಿಡಿದ ಕಾವೇರಿ: ಹಾರಂಗಿ ಜಲಾಶಯ ಬಹುತೇಕ ಭರ್ತಿ, ನಾಳೆ ನದಿಗೆ ನೀರು ಬಿಡುಗಡೆ!
ಕೊಡಗಿನಲ್ಲಿ ಕಾಟಿ ಕಳ್ಳಬೇಟೆಗಾರರ ಮೇಲೆ ಅರಣ್ಯ ಇಲಾಖೆ ಫೈರಿಂಗ್: 260 ಕೆಜಿ ಮಾಂಸ ಜಪ್ತಿ