ಖೋ ಖೋ ವಿಶ್ವಕಪ್ 2025ರ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ನೇಪಾಳದ ವಿರುದ್ಧ ಆರಂಭದಿಂದಲೂ ಪಂದ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಅಮೋಘ ಜಯ ಸಾಧಿಸಿತು.
ನವದೆಹಲಿ (ಜ.13): ಸೋಮವಾರ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಖೋ ಖೋ ವಿಶ್ವಕಪ್ 2025ರ ಮೊದಲ ಪಂದ್ಯದಲ್ಲಿ ಭಾರತ ಪುರುಷರ ತಂಡ ನೇಪಾಳದ ವಿರುದ್ಧ 2-0 ಅಂತರದಲ್ಲಿ ಗೆಲುವು ಸಾಧಿಸಿತು. ಆತಿಥೇಯ ಭಾರತ ತಂಡ ಆರಂಭದಿಂದಲೂ ಪಂದ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ನೇಪಾಳಕ್ಕೆ ತಿರುಗೇಟು ನೀಡುವ ಯಾವುದೇ ಅವಕಾಶ ನೀಡಲಿಲ್ಲ. ಪ್ರತೀಕ್ ವೈಕರ್ ನೇತೃತ್ವದ ಭಾರತ ತಂಡ ಟಾಸ್ ಗೆದ್ದು ಮೊದಲು ಆಕ್ರಮಣ ಆಯ್ದುಕೊಂಡು ಮೊದಲ ಇನ್ನಿಂಗ್ಸ್‌ನಲ್ಲಿ 24 ಅಂಕ ಗಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ನೇಪಾಳ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದರೂ, ಭಾರತದ ರಕ್ಷಣೆ ಬಲಿಷ್ಠವಾಗಿತ್ತು. ಇದರಿಂದಾಗಿ ಅವರು ಮುನ್ನಡೆ ಸಾಧಿಸಲು ಐದು ಅಂಕಗಳ ಕೊರತೆ ಅನುಭವಿಸಿದರು.
ಮೂರನೇ ಇನ್ನಿಂಗ್ಸ್‌ನಲ್ಲಿ ಭಾರತ ಮತ್ತೆ ಆಕ್ರಮಣಕ್ಕೆ ಮರಳಿ 18 ಅಂಕಗಳನ್ನು ಗಳಿಸಿತು. ಎರಡು ಇನ್ನಿಂಗ್ಸ್‌ಗಳಲ್ಲಿ ಪ್ರತೀಕ್ ವೈಕರ್ ನೇತೃತ್ವದ ತಂಡ 42 ಅಂಕಗಳನ್ನು ಗಳಿಸಿತು. ಪಂದ್ಯವನ್ನು ಟೈ ಮಾಡಲು ಮತ್ತು ಹೆಚ್ಚುವರಿ ಇನ್ನಿಂಗ್ಸ್ ಆಡಲು ನೇಪಾಳಕ್ಕೆ ಇದು ದೊಡ್ಡ ಸವಾಲಾಗಿತ್ತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ನೇಪಾಳದ ಆಕ್ರಮಣ ಹಿಂದಿನ ಪ್ರಯತ್ನಕ್ಕೆ ಹೋಲಿಸಿದರೆ ಉತ್ತಮವಾಗಿರಲಿಲ್ಲ. ಅವರು 18 ಅಂಕಗಳನ್ನು ಗಳಿಸಿ ಒಟ್ಟು 37 ಅಂಕಗಳನ್ನು ಗಳಿಸಿದರು.
ಎರಡು ಇನ್ನಿಂಗ್ಸ್‌ಗಳಲ್ಲಿ ಹೆಚ್ಚು ಅಂಕ ಗಳಿಸಿದ ಭಾರತ ಗೆಲುವು ಸಾಧಿಸಿ ಎರಡು ಅಂಕಗಳನ್ನು ಗಳಿಸಿತು. ಗುಂಪು A ನಲ್ಲಿ ಐದು ಅಂಕಗಳ ಅಂತರದೊಂದಿಗೆ ಅಗ್ರಸ್ಥಾನದಲ್ಲಿದೆ. ಖೋ ಖೋ ವಿಶ್ವಕಪ್ 2025 ರ ಉದ್ಘಾಟನಾ ಪಂದ್ಯಕ್ಕೂ ಮುನ್ನ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಿತು. ಉಪರಾಷ್ಟ್ರಪತಿ ಜಗದೀಪ್ ಧಂಕರ್, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ, ಭಾರತೀಯ ಒಲಿಂಪಿಕ್ ಸಂಸ್ಥೆಯ (IOA) ಅಧ್ಯಕ್ಷೆ ಪಿ.ಟಿ. ಉಷಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುಧಾಂಶು ಮಿತ್ತಲ್ ಅಧ್ಯಕ್ಷತೆಯ ಖೋ ಖೋ ಫೆಡರೇಶನ್ ಆಫ್ ಇಂಡಿಯಾ, ಪುರುಷರ ಮತ್ತು ಮಹಿಳೆಯರ ವಿಭಾಗಗಳಿಗೆ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿತು. ಐತಿಹಾಸಿಕ ಕಾರ್ಯಕ್ರಮದ ಆರಂಭವನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ಆಕರ್ಷಿಸಲು ದೇಶದ ಸಂಸ್ಕೃತಿಯನ್ನು ಪ್ರದರ್ಶಿಸುವ ನೃತ್ಯ ಪ್ರದರ್ಶನಕ್ಕೂ ಮುನ್ನ ಭಾರತೀಯ ಧ್ವಜದ ಔಪಚಾರಿಕ ಮೆರವಣಿಗೆ ನಡೆಯಿತು. ಉಪರಾಷ್ಟ್ರಪತಿ ಜಗದೀಪ್ ಧಂಕರ್ ಮತ್ತು ರಾಧಾ ಖಡ್ಸೆ ಅವರು ಖೋ ಖೋ ವಿಶ್ವಕಪ್ 2025 ಅಧಿಕೃತವಾಗಿ ಆರಂಭವಾಗಿದೆ ಎಂದು ಗುರುತಿಸಿ ಜ್ಯೋತಿ ಬೆಳಗಿದರು.
Kho Kho World Cup: ಈ ಬಾರಿಯ ವಿಶ್ವಕಪ್ ನಾವೇ ಗೆಲ್ತೇವೆ: ಭಾರತದ ಕೋಚ್ ವಿಶ್ವಾಸ!
ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಕೆಕೆಎಫ್ಐ ಮುಖ್ಯಸ್ಥ ಸುಧಾಂಶು ಮಿತ್ತಲ್, “ಇಲ್ಲಿ ಉಪಸ್ಥಿತರಿದ್ದು ತಮ್ಮ ಬೆಂಬಲವನ್ನು ಪ್ರದರ್ಶಿಸಿದ ಎಲ್ಲ ಗಣ್ಯರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಖೋ ಖೋವನ್ನು ಅಂತರರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯುವುದು ನಮ್ಮ ಕನಸಾಗಿತ್ತು ಮತ್ತು ಈ ಪಂದ್ಯಾವಳಿಯೊಂದಿಗೆ ನಮ್ಮ ಕನಸುಗಳು ನನಸಾಗುತ್ತಿವೆ. ಪಂದ್ಯಾವಳಿಗೆ ಎಲ್ಲಾ ತಂಡಗಳಿಗೂ ಶುಭ ಹಾರೈಸುತ್ತೇನೆ' ಎಂದರು.
ಚೊಚ್ಚಲ ಖೋ ಖೋ ವಿಶ್ವಕಪ್: ಸಂಗೀತ ದಿಗ್ಗಜ ರಿಕಿ ಕೇಜ್ ಬೆಂಬಲ
ನೇಪಾಳದ ವಿರುದ್ಧದ ಉದ್ಘಾಟನಾ ಪಂದ್ಯವನ್ನು ಗೆದ್ದ ನಂತರ, ಭಾರತ ಮಂಗಳವಾರ ಬ್ರೆಜಿಲ್ ವಿರುದ್ಧ ಆಡಲಿದೆ.