National Youth Festival 2023: ಯುವಜನೋತ್ಸವ: 4 ವರ್ಷಗಳ ಬಳಿಕ ಮತ್ತೆ ಶೃಂಗಾರಗೊಳ್ಳುತ್ತಿದೆ ಧಾರವಾಡ!

By Kannadaprabha News  |  First Published Jan 4, 2023, 11:07 AM IST

ಜ.12ರಿಂದ ಐದು ದಿನ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಇಡೀ ಧಾರವಾಡ ನಗರವನ್ನು ಸುಂದರಗೊಳಿಸುವತ್ತ ಜಿಲ್ಲಾಡಳಿತದ ಚಿತ್ತ ಹರಿಸಿದೆ.


ಬಸವರಾಜ ಹಿರೇಮಠ

 ಧಾರವಾಡ (ಜ.4) : ಜ. 12ರಿಂದ ಐದು ದಿನ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಇಡೀ ಧಾರವಾಡ ನಗರವನ್ನು ಸುಂದರಗೊಳಿಸುವತ್ತ ಜಿಲ್ಲಾಡಳಿತದ ಚಿತ್ತ ಹರಿಸಿದೆ.

Tap to resize

Latest Videos

ಈ ಹಿಂದೆ ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ(Kannada sahitya sammelana)ದ ಸಂದರ್ಭದಲ್ಲೂ ಇದೇ ರೀತಿ ನಗರವನ್ನು ಶೃಂಗರಿಸಲಾಗಿತ್ತು. ಇದೀಗ ನಾಲ್ಕು ವರ್ಷಗಳ ನಂತರ ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಬೇರೆ ಬೇರೆ ರಾಜ್ಯಗಳ ಅಂದಾಜು 7500 ಯುವ ಕಲಾವಿದರು ಆಗಮಿಸುತ್ತಿದ್ದಾರೆ. ಅತಿಥಿಗಳು, ಗಣ್ಯಮಾನ್ಯರು ಧಾರವಾಡದ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಧಾರವಾಡ ನಗರ(Dharwad city)ವನ್ನು ಸ್ವಚ್ಛಗೊಳಿಸಿ ಸುಂದರಗೊಳಿಸುವ ಅನಿವಾರ‍್ಯತೆಯೂ ಇದೆ.

Congress convention: ಬಿಜೆಪಿ ಶಕ್ತಿ ಕೇಂದ್ರ ಹುಬ್ಬಳ್ಳಿ-ಧಾರವಾಡದಲ್ಲಿ ಅಬ್ಬರಿಸಿದ ಕಾಂಗ್ರೆಸ್‌!

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಯುವ ಸಮ್ಮೇಳನವನ್ನು ಹುಬ್ಬಳ್ಳಿಯಲ್ಲಿ ಉದ್ಘಾಟನೆ ಮಾಡಿದರೂ ಧಾರವಾಡದ ಪ್ರಮುಖ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ ಮೊದಲಿಗೆ ಧಾರವಾಡದ ಕರ್ನಾಟಕ ಕಾಲೇಜು(Karnataka collage), ಕರ್ನಾಟಕ ವಿವಿ, ಕೃಷಿ ವಿವಿಗೆ ಸಂಪರ್ಕ ಕಲ್ಪಿಸುವ ಒಟ್ಟು 12 ರಸ್ತೆಗಳ ಸುಧಾರಣೆ ಕಾರ್ಯ ಬರದಿಂದ ನಡೆದಿದೆ. ಜತೆಗೆ ಗಟಾರುಗಳ ಸ್ವಚ್ಛತೆ, ಕಸ ನಿರ್ವಹಣೆ ಕಾರ್ಯ ಶುರು ಮಾಡಲಾಗಿದೆ. ಮಹಾನಗರ ಪಾಲಿಕೆಯ 100 ಸಿಬ್ಬಂದಿ ಬಳಸಿಕೊಂಡು ಕಸ ಸ್ವಚ್ಛತಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ನಗರದ ಪ್ರಮುಖ ಸ್ಥಳ, ವೃತ್ತಗಳಿಗೆ ಸುಣ್ಣ-ಬಣ್ಣ ಬಳಿದು ಒಂದು ವಾರ ಕಾಲ ವಿದ್ಯುತ್‌ ಅಲಂಕಾರ ಮಾಡಲಾಗುತ್ತಿದೆ. ಅದರಲ್ಲೂ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆಗಳ ಕಟ್ಟಡ, ಕಾಂಪೌಡ್‌ ಸ್ವಚ್ಛಗೊಳಿಸಿ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಸಮ್ಮೇಳನದ ಸಮಯದಲ್ಲಿ ಯಾವುದೇ ಕಾರಣಕ್ಕೂ ಪಾರ್ಕಿಂಗ್‌ ಸಮಸ್ಯೆ, ಟ್ರಾಫಿಕ್‌ ತೊಂದರೆಗಳಾಗಬಾರದೆಂದು ರಸ್ತೆ ಬದಿಯ ಅನಧಿಕೃತ ಅಂಗಡಿ-ಮುಗ್ಗಟ್ಟುಗಳನ್ನು ತೆರವುಗೊಳಿಸಿ ಅಗಲೀಕರಣ ಮಾಡಲಾಗಿದೆ. ಜತೆಗೆ ಮುಖ್ಯ ವೇದಿಕೆಗಳ, ಕಾರ‍್ಯಕ್ರಮ ನಡೆಯುವ ಸ್ಥಳಗಳಿಗೆ ಸರಾಗವಾಗಿ ವಾಹನ ಸಂಚಾರ ಮಾಡುವಂತೆ ಟ್ರಾಫಿಕ್‌ ಡೈವರ್ಶನ್‌ ಮಾಡಲಾಗುತ್ತಿದೆ. ಇದರೊಂದಿಗೆ ಮಹಾನಗರ ಪಾಲಿಕೆಯು ವಿವಿಧ 12 ಸ್ಥಳಗಳಲ್ಲಿ ಮೊಬೈಲ್‌ ಟಾಯಲೆಟ್‌ ನಿರ್ಮಿಸುತ್ತಿದೆ. ಈ ಸಮ್ಮೇಳನ ಪ್ಲಾಸ್ಟಿಕ್‌ ಮುಕ್ತವಾಗಲೆಂದು ವಿವಿಧ ಸಂಘ-ಸಂಸ್ಥೆಗಳೊಂದಿಗೆ ಅಗತ್ಯ ಯೋಜನೆಗಳನ್ನು ಸಹ ಜಿಲ್ಲಾಡಳಿತ ರೂಪಿಸುತ್ತಿದೆ.

ಹಬ್ಬದ ವಾತಾವರಣ...

ಯುವ ಸಮ್ಮೇಳನದ ಹಿನ್ನೆಲೆಯಲ್ಲಿ ಧಾರವಾಡ-ಹುಬ್ಬಳ್ಳಿ ನಗರಗಳ ಚಹರೆ ಬದಲಿಸಲು ಕೆಲವು ಕಾರ್ಯಗಳನ್ನು ಮಾಡುತ್ತಿದ್ದೇವೆ. ಮುಖ್ಯ ರಸ್ತೆ, ಪ್ರವಾಸಿ ಸ್ಥಳಗಳ ವೈಭವೀಕರಣ, ರಸ್ತೆ, ಉದ್ಯಾನವನ, ಕೆರೆ ಹಾಗೂ ಸಾಂಸ್ಕೃತಿಕ ಸ್ಥಳಗಳನ್ನು ಶೃಂಗರಿಸಲಾಗುತ್ತಿದೆ. ಒಟ್ಟಾರೆ ಹು-ಧಾ ಅವಳಿ ನಗರದಲ್ಲಿ ಒಂದು ವಾರ ಹಬ್ಬದ ವಾತಾವರಣ ಮೂಡುವಂತೆ ಕೆಲಸ ಮಾಡಲಾಗುತ್ತಿದೆ. ಆಗಮಿಸುವ ಪ್ರತಿನಿಧಿಗಳಿಗೆ ಯೋಗಾ ಮ್ಯಾಟ್‌, ಧಾರವಾಡ ಪೇಢೆ, ರಾಷ್ಟ್ರಧ್ವಜವಿರುವ ಪ್ರೇಮ್‌ ಕೊಡುವ ಮೂಲಕ ಧಾರವಾಡದ ಯುವ ಸಮ್ಮೇಳನದ ನೆನಪು ಸದಾ ಇರುವಂತೆ ನೋಡಿಕೊಳ್ಳಲಾಗುವುದು.

Dharwad: ಜ.12ರಂದು ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ: ಜಿಲ್ಲಾಧಿಕಾರಿ ಗುರುದತ್ತ

ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ಸಾಧನಕೇರಿ, ಕೆಲಗೇರಿ ಕೆರೆ...

ಯುವ ಸಮ್ಮೇಳನಕ್ಕೆ ಉದ್ಯಾನವನ, ಕೆರೆಗಳನ್ನು ಶೃಂಗರಿಸಲಾಗುವುದು ಎನ್ನಲಾಗುತ್ತಿದೆ. ಆದರೆ, ಕವಿ ದ.ರಾ. ಬೇಂದ್ರೆ ಹೆಸರಿನ ಬಾರೋ ಸಾಧನಕೇರಿ ಕೆರೆ ಮಾತ್ರ ವಿಪರೀತ ಹದಗೆಟ್ಟಿದೆ. ಇಡೀ ಊರಿನ ಚರಂಡಿ ನೀರು ಕೆರೆಗೆ ಸೇರುತ್ತಿದೆ. ಈ ನೀರು ಕೆರೆಗೆ ಸೇರುವ ದೊಡ್ಡ ಗಟಾರು ಕುಸಿದು ಬೀಳುವ ಸ್ಥಿತಿಯಲ್ಲಿದೆ. ಕೆರೆ ತುಂಬ ಹೊಳಲು, ಕಳೆ-ಕಸ ತುಂಬಿದೆ. ಉದ್ಯಾನವನದಲ್ಲಿ ವಿಹರಿಸುವವರಿಗೆ ವಾಸನೆ ಬಿಡಲೊಲ್ಲದು. ನಿರ್ವಹಣೆ ಇಲ್ಲದೇ ಉದ್ಯಾನವನ ಸೊರಗಿದ್ದು ಸಮ್ಮೇಳನದಲ್ಲಿ ಈ ಉದ್ಯಾನವನ, ಕೆರೆ ವೀಕ್ಷಿಸಿದರೆ ಬೇಂದ್ರೆ ಅವರ ಗೌರವಕ್ಕೆ ಚ್ಯುತಿ ಬರದೇ ಇರದು ಎಂದು ಹಿರಿಯ ಸಾಹಿತಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಸಾಹಸ ಕ್ರೀಡೆ ಮಾಡುತ್ತಿರುವ ಕೆಲಗೇರಿ ಕೆರೆಯ ಸ್ಥಿತಿಯೇನೂ ಬೇರಿಲ್ಲ.

click me!