ಪ್ರಕೃತಿಯೆಂದರೆ ಸಹಜ ಸೌಂದರ್ಯದ ಕಣಿ. ಆ ಸೌಂದಯವೇ ಮನುಜನ ಕಣ್ಮನ ಹೃದಯಗಳನ್ನು ಸೆಳೆದುಬಿಡುತ್ತದೆ. ಅಂತಹ ಪ್ರಕೃತಿ ತುಂಬೆಲ್ಲಾ ನಿಸರ್ಗವೇ ಹೂವು ಮುಡಿಸಿದರೆ ಇನ್ನೆಷ್ಟು ಸುಂದರವಾಗಿಬಿಡಬಹುದು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜ.04): ಪ್ರಕೃತಿಯೆಂದರೆ ಸಹಜ ಸೌಂದರ್ಯದ ಕಣಿ. ಆ ಸೌಂದಯವೇ ಮನುಜನ ಕಣ್ಮನ ಹೃದಯಗಳನ್ನು ಸೆಳೆದುಬಿಡುತ್ತದೆ. ಅಂತಹ ಪ್ರಕೃತಿ ತುಂಬೆಲ್ಲಾ ನಿಸರ್ಗವೇ ಹೂವು ಮುಡಿಸಿದರೆ ಇನ್ನೆಷ್ಟು ಸುಂದರವಾಗಿಬಿಡಬಹುದು. ಹೀಗೆ ಪ್ರಕೃತಿಯ ಸೌಂದಯಕ್ಕೆ ಪ್ರಕೃತಿಯೇ ಹೂವು ಮುಡಿಸಿಕೊಂಡಿರುವ ಸ್ವರ್ಗದ ಕನಿ ಇಲ್ಲಿದೆ ನೋಡಿ. ಹೂವೆ ಹೂವೇ, ಹೂವೆ ಹೂವೇ ನಿನ್ನೀ ನಗುವೆ ಕಾರಣವೇನೇ ಸೂರ್ಯನ ನಿಯಮಾನೆ. ಹೂವು ಚೆಲುವೆಲ್ಲಾ ನನ್ನದೆಂದಿತು. ಹೀಗೆ ಹೂವನ್ನು ವರ್ಣಿಸುತ್ತಾ ಹೋದರೆ ಮುಗಿಯುವುದೇ ಇಲ್ಲ.
undefined
ಅಷ್ಟಕ್ಕೂ ಹೀಗೆ ಪ್ರಕೃತಿಗೆ ಹೂವು ಮುಡಿಸಿ ಸಹಜ ಸೌಂದರ್ಯವನ್ನು ಇಮ್ಮಡಿಗೊಳಿಸಿ ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವ ಹೂವಿನ ಲೋಕ ಸೃಷ್ಟಿಯಾಗಿರುವುದು ಭಾರತದ ಸ್ಕಾಟ್‍ಲ್ಯಾಂಡ್, ಕರ್ನಾಟಕದ ಕಾಶ್ಮೀರ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ. ಹೌದು! ಕೊಡಗು ಎಂದರೆ ಪ್ರಕೃತಿ ಸೌಂದರ್ಯದಿಂದಲೇ ವಿಶ್ವದ ಗಮನ ಸೆಳೆದಿರುವ ಜಿಲ್ಲೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದಕ್ಕಾಗಿಯೇ ದೇಶ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೆ ಕೊಡಗಿನಲ್ಲಿ ಡಿಸೆಂಬರ್ ಅಂತ್ಯ ಮತ್ತು ಜನವರಿ ತಿಂಗಳಲ್ಲಿ ಅರಳುವ ಕಾಡು ಮಲ್ಲಿಗೆ ಎಂದು ಕರೆಸಿಕೊಳ್ಳುವ ಹೂವು ಎಲ್ಲೆಡೆ ಅರಳಿ ಪ್ರವಾಸಿಗರನ್ನು ಮತ್ತಷ್ಟು ಮುದಗೊಳಿಸಿದೆ.
ಬಿಜೆಪಿ ಬಗ್ಗೆ ಮಾತನಾಡುವದಕ್ಕಿಂತ ಡಿಕೆಶಿ ತಮ್ಮ ಪಕ್ಷ ಸರಿಮಾಡಿಕೊಳ್ಳಲಿ: ಸಚಿವ ನಾಗೇಶ್
ಹೀಗೆ ರಾಶಿ, ರಾಶಿ ಹೂವುಗಳು ಅರಳಿರುವುದು ಯಾವುದೋ ಹೂವು ತೋಟದಲ್ಲಿ ಅಲ್ಲ. ಬದಲಾಗಿ ಕೊಡಗಿನ ಬೆಟ್ಟಗುಡ್ಡಗಳು ಹಾಗೂ ತಿರುವು ರಸ್ತೆಗಳ ಎರಡು ಬದಿಗಳಲ್ಲಿ ಹೂವಿನ ಅಲಂಕಾರ ಮಾಡಿದಂತೆ ಈ ಕಾಡು ಮಲ್ಲಿಗೆ ಹೂವು ಅರಳಿ ನಗೆ ಬೀರಿ ನಿಂತಿವೆ. ಮಲ್ಲಿಗೆಯಂತೆ ಸುಗಂಧ ಸೂಸುತ್ತಿರುವ ಈ ಹೂವು ಅರಳಿ ಎಲ್ಲರ ಕಣ್ಣು ಕೋರೈಸುತ್ತಿದೆ. ಹೀಗಾಗಿ ಜಿಲ್ಲೆಗೆ ಬರುವ ಪ್ರವಾಸಿಗರು ಕೊಡಗಿಗೆ ಎಂಟ್ರಿಯಾಗುತ್ತಿದ್ದಂತೆ ಈ ಹೂವುಗಳ ಸೌಂದರ್ಯಕ್ಕೆ ಮಾರು ಹೋಗಿ ರಸ್ತೆ ಬದಿಗಳಲ್ಲಿ ಅರಳಿ ನಿಂತಿರುವ ಇವುಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಅಂದರೆ ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ವೇಳೆಗೆ ಈ ಹೂವು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅರಳಿ ಪ್ರಕೃತಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಇದೇ ವೇಳೆಯಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರ ಮನಸೂರೆಗೊಳಿಸುತ್ತಿವೆ ಎನ್ನುತ್ತಾರೆ ಸ್ಥಳೀಯರಾದ ಅಕ್ಷಿತಾ. ಹಚ್ಚ ಹಸಿರಿನ ಕೊಡಗಿನ ಪ್ರದೇಶದಲ್ಲಿ ಈ ಕಾಡು ಮಲ್ಲಿಗೆ ಅರಳಿದ್ದು ಹಸಿರು ಗಿಡಗಳ ಮೇಲೆ ಮೊಸರು ಚೆಲ್ಲಿದಂತೆ ಭಾಸವಾಗುತ್ತಿದೆ. ಕೆಳಭಾಗದಲ್ಲಿ ಗಿಡವು ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದ್ದರೆ, ಮೇಲ್ಭಾಗದಲ್ಲಿ ಅರಳಿರುವ ಮಲ್ಲಿಗೆ ಎಂತಹ ಅರಸಿಕರನ್ನಾದರೂ ಈ ಹೂವಿನ ಲೋಕ ಮೈ ರೋಮಾಂಚನ ಗೊಳ್ಳುವಂತೆ ಮಾಡುತ್ತಿದೆ.
Kodagu: ವರ್ಷದ ಕೊನೆಯ ಸೂರ್ಯಾಸ್ತ ಕಣ್ತುಂಬಿಕೊಂಡ ಪ್ರವಾಸಿಗರು
ಅರಳಿ ನಿಂತಿರುವ ಕಾಡು ಮಲ್ಲಿಗೆ ಹೂವಿನ ಗಿಡಗಳ ಬಳಿಗೆ ಹೋದರೆ ಹೂವಿನ ಸೌಂದರ್ಯ ಅಷ್ಟೇ ಅಲ್ಲ, ಜೇನು, ದುಂಬಿಗಳು ಬಂದು ಆ ಹೂವಿನಿಂದ ಮಕರಂದ ಹೀರಲು ಓಡಾಡುತ್ತಿರುವ ಜೇಂಕಾರದ ಶಬ್ಧ ನಿಮ್ಮ ಮೈಮನಗಳ ಜೊತೆಗೆ ಕಿವಿಯನ್ನು ಮತ್ತಷ್ಟು ಇಂಪಾಗಿಸುತ್ತಿವೆ. ಈ ಸೌಂದರ್ಯವನ್ನು ನೀವು ಕಣ್ತುಂಬಿಕೊಳ್ಳಬೇಕೆಂದರೆ ಕೊಡಗಿಗೆ ಭೇಟಿ ನೀಡಬೇಕು ಎಂದು ಪ್ರವಾಸಿಗರಾದ ಡೀನಾ ಹೂವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಲೇ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ತನ್ನ ಪ್ರಾಕೃತಿಕ ಸೌಂದರ್ಯದಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಕೊಡಗು ಜಿಲ್ಲೆಯಲ್ಲಿ, ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಬಿರಿದು ನಗೆ ಚೆಲ್ಲಿ ಹೂವಿನ ಲೋಕವನ್ನೇ ಸೃಷ್ಟಿಸಿರುವ ಕಾಡು ಮಲ್ಲಿಗೆ, ಇಲ್ಲಿನ ಪ್ರಕೃತಿಯನ್ನು ಮತ್ತಷ್ಟು ರಮಣೀಯವಾಗಿಸಿರುವುದಂತು ಸತ್ಯ.