
ಚಿಕ್ಕಮಗಳೂರು: ಹೊಸ ವರ್ಷದ ಮೊದಲ ದಿನವೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಯುವತಿಗೆ ಬರ್ತ್‌ಡೇ ವಿಶ್ ಮಾಡಿದ ವಿಚಾರವೇ ಯುವಕನ ಹತ್ಯೆಗೆ ಕಾರಣವಾದ ದುರ್ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ನಡೆದಿದೆ. ಉಡೇವಾ ಗ್ರಾಮದ ನಿವಾಸಿ ಮಂಜುನಾಥ್ (28) ಎಂಬ ಯುವಕ ಚಾಕು ಇರಿತದಿಂದ ಕೊಲೆಯಾದ ದುರ್ದೈವಿಯಾಗಿದ್ದಾನೆ.
ಮೃತ ಮಂಜುನಾಥ್ ಸೋಶಿಯಲ್ ಮೀಡಿಯಾ ಮೂಲಕ ಒಬ್ಬ ಯುವತಿಗೆ ಬರ್ತ್‌ಡೇ ವಿಶ್ ಮಾಡಿದ್ದನು. ಆದರೆ ಆ ಯುವತಿಯ ವಿವಾಹ ನಿಶ್ಚಯ ಈಗಾಗಲೇ ವೇಣು ಎಂಬ ಯುವಕನೊಂದಿಗೆ ನಡೆದಿತ್ತು. ಈ ವಿಚಾರದಿಂದ ಕೋಪಗೊಂಡ ವೇಣು ಹಾಗೂ ಅವನ ಸ್ನೇಹಿತರು ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಅತ್ತಿಗನಾಳು ಗ್ರಾಮಕ್ಕೆ ಅಡಿಕೆ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ವೇಣು ಮತ್ತು ಅವನ ಸ್ನೇಹಿತರು ಮಂಜುನಾಥ್ ನನ್ನು ಅಡ್ಡಗಟ್ಟಿ ಗಲಾಟೆ ಮಾಡಿದ್ದಾರೆ. ಮಾತಿನ ಚಕಮಕಿ ತೀವ್ರಗೊಂಡು, ಗಲಾಟೆ ಹಿಂಸಾತ್ಮಕ ರೂಪ ಪಡೆದಿದ್ದು, ಈ ವೇಳೆ ವೇಣು ಹಾಗೂ ಅವನ ಸ್ನೇಹಿತರು ಮಂಜುನಾಥ್‌ಗೆ ಚಾಕು ಇರಿದಿದ್ದಾರೆ ಎಂದು ತಿಳಿದುಬಂದಿದೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ನನ್ನು ತಕ್ಷಣ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾನೆ. ಮೃತ ಮಂಜುನಾಥ್ ಹಾಗೂ ಎಂಗೇಜ್ಮೆಂಟ್ ಆಗಿದ್ದ ಯುವತಿ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹುಡುಗಿ ಮನೆಯವರು ಬೇರೆ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಆಕೆಯ ಹುಟ್ಟು ಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಂಜು ವಿಶ್ ಮಾಡಿದ್ದ. ಹುಡುಗಿ ಜೊತೆ ಎಂಗೇಜ್ಮೆಂಟ್ ಆಗಿದ್ದ ವೇಣು ಆತನ ಸ್ನೇಹಿತರ ಜೊತೆಗೂಡಿ ಮಂಜುನಾಥ್ ಗೆ ಚಾಕು ಇರಿದು ಕೊಂದಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಒಂದು ಸಂದೇಶವೇ ಜೀವ ಕಳೆದುಕೊಳ್ಳುವ ಮಟ್ಟಿಗೆ ತಲುಪಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.