ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಹೋಬಳಿ ಬರಗಿ ಗ್ರಾಮದ ಯುವ ರೈತರು ದೇವರಕಾಡು ರಕ್ಷಣೆಗೆ ಟೊಂಕಕಟ್ಟಿ ಕಾಪಾಡಿಕೊಂಡಿರುವ ಪರಿಣಾಮ ಇಲ್ಲೀಗ ಸಮೃದ್ಧ ಕಾಡು ಕಂಗೊಳಿಸುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಸೊರಬ(ಜು.29): ಸುಮಾರು 25 ವರ್ಷಗಳ ಹಿಂದೆ ಇಲ್ಲಿನ ತರುಣ ರೈತರು ಪಶ್ಚಿಮಘಟ್ಟಉಳಿಸಿ, ವೃಕ್ಷಲಕ್ಷ ಆಂದೋಲನ ಸ್ಫೂರ್ತಿಯ ಹಿನ್ನೆಲೆಯಲ್ಲಿ ತಮ್ಮ ಗ್ರಾಮದ ದೇವರಕಾಡು ರಕ್ಷಣೆಗೆ ಟೊಂಕಕಟ್ಟಿ ಕಾಪಾಡಿಕೊಂಡಿರುವ ಪರಿಣಾಮ ಇಲ್ಲೀಗ ಸಮೃದ್ಧ ಕಾಡು ಕಂಗೊಳಿಸುತ್ತಿದೆ ಎಂದು ರಾಜ್ಯಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಹರ್ಷ ವ್ಯಕ್ತಪಡಿಸಿದರು.
ತಾಲೂಕಿನ ಉಳವಿ ಹೋಬಳಿ ಬರಗಿ ಗ್ರಾಮದ ಸ.ನಂ. 92ರಲ್ಲಿ ಸಹಜ ಜೇನು ಸಂರಕ್ಷಣೆ ಹಿನ್ನೆಲೆಯಲ್ಲಿ ಜೇನು ಕಾನು ನಾಮಕರಣ ಸಂಬಂಧ ಗ್ರಾಮಸ್ಥರು ಆಹ್ವಾನಿಸಿದ್ದು, ಪರಿಸರ ಕಾರ್ಯಕರ್ತರು, ಅಧಿಕಾರಿ, ಗ್ರಾಮಸ್ಥರನ್ನು ಉದ್ದೇಶಿಸಿ ಹಸಿರು ಸಮಾಲೋಚನೆ ನಡೆಸಿ ಅವರು ಮಾತನಾಡಿದರು.
ಅಪಾರ ವಿಧದ ಸಸ್ಯ ವೈವಿಧ್ಯತೆ ಇರುವ ಇಲ್ಲಿ ತುಡವೆ ಜೇನು, ಕೋಲು ಜೇನು ಮತ್ತು ನಸರಿ ಜೇನು ಆವಾಸವಿದೆ. ಸುತ್ತಮುತ್ತ ಕ್ಯಾಸನೂರು ರಕ್ಷಿತ ಅರಣ್ಯವಿದ್ದು, ಅವುಗಳ ರಾಸಾಯನಿಕ ಮುಕ್ತ ವಾಸಕ್ಕೆ ಈ ಸ್ಥಳ ಯೋಗ್ಯವಾಗಿದೆ. ಕಾಡುಜೇನು ಸಂತತಿಯ ವೃದ್ಧಿ ಕೃಷಿ ಉತ್ಪನ್ನದ ಹೆಚ್ಚಳಕ್ಕೆ ಪೂರಕ, ಪ್ರಸ್ತುತ ಇಲ್ಲಿ 60 ಕ್ಕೂ ಹೆಚ್ಚು ರೈತರು ಜೇನು ಕೃಷಿಯಲ್ಲಿ ತೊಡಗಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಇಲ್ಲಿನ ಗ್ರಾಮ ಪಂಚಾಯತಿ ಜೀವ ವೈವಿಧ್ಯ ಸಮಿತಿ ಜೇನುಕಾನು ಪಾರಂಪರಿಕ ತಾಣವನ್ನಾಗಿ ಗುರುತಿಸಬೇಕು. ಅರಣ್ಯ ಇಲಾಖೆ ಗ್ರಾಮ ಅರಣ್ಯ ಸಮಿತಿ ರಚಿಸಬೇಕು ಎಂದು ಸೂಚಿಸಿದರು.
ಹುಲಿಗಳ ವಾಸಕ್ಕೆ ಯೋಗ್ಯ ಭದ್ರಾ ಅಭಯಾರಣ್ಯ
ಜೇನು ಕೃಷಿಕ ರಾಜಾರಾಂ, ಜೇನುರಕ್ಷಣೆಯಲ್ಲಿ ಉಂಟಾಗುತ್ತಿರುವ ಅಡ್ಡಿ ಆತಂಕಗಳ ಕುರಿತು ಮಾತನಾಡಿ, ಅರಣ್ಯ ಇಲಾಖೆಯಿಂದ ಈ ಕಾನಿನಲ್ಲಿ ಜೇನು ಅಭಿವೃದ್ಧಿಗೆ ಸಹಕಾರ ನೀಡಬೇಕು. ಈ ಭಾಗದಲ್ಲಿ ಸುತ್ತಮುತ್ತ ಹೆಚ್ಚು ಅರಣ್ಯ ಪ್ರದೇಶವಿರುವುದರಿಂದ ಜೇನಿಗೆ ರಾಸಾಯನಿಕ ಮುಕ್ತ ವಾತಾವರಣ ಲಭಿಸಿದೆ. ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯಾದರೆ ರೈತ ಮಿತ್ರ ಕೀಟದೊಂದಿಗೆ ಹತ್ತು ಹಲವು ಪ್ರಾಣಿಗಳಿಗೂ ರಕ್ಷಣೆ ದೊರಕಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.
ಎಸಿಎಫ್ ಮಂಜುನಾಥ್, ಅರಣ್ಯ ವಲಯಾಧಿಕಾರಿ ಗಣೇಶ್ ಶೆಟ್ಟರ್, ಉಪ ವಲಯಾರಣ್ಯಾಧಿಕಾರಿ ಮೋಹನ್, ಅರಣ್ಯ ಇಲಾಖೆ ಸಿಬ್ಬಂದಿ, ವೃಕ್ಷಲಕ್ಷ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ, ಸಿ.ಪಿ.ಈರೇಶಗೌಡ, ಬರಿಗೆ ಅಮೃತಾ, ಬರಿಗೆ ಗ್ರಾಮದ ಕೃಷಿಕ ಬಿಎನ್‌ಸಿ ರಾವ್, ಬರಿಗೆ ರೈತ ಸುರೇಶ್ ಹಾಗೂ ಗ್ರಾಮಸ್ಥರು ಇದ್ದರು.