ಆರಂಭದಲ್ಲಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿತ್ತು| ಜಿಂದಾಲ್‌ನಲ್ಲಿ ಪಾಸಿಟಿವ್ ಪ್ರಕರಣಗಳು ಶುರುವಾದ ಬಳಿಕ ಜಿಲ್ಲೆಯ ನಾನಾ ಕಡೆ ಹಬ್ಬಿತು| ಜಿಲ್ಲಾಡಳಿತ ಆದೇಶ ಮೀರಿಯೂ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೆಲಸ ಮಾಡಿದ್ದಾರೆ| ಪಾಸಿಟಿವ್ ಪ್ರಕರಣಗಳು ಏರಿಕೆಯಾದ ಬಳಿಕವೂ ಕುರಿಗಳನ್ನು ತುಂಬಿದಂತೆ ವಾಹನಗಳಲ್ಲಿ ಕಾರ್ಮಿಕರನ್ನು ತುಂಬಿಕೊಂಡು ಹೋಗಿ ಕೆಲಸ ಮಾಡಿಸುತ್ತಿದ್ದಾರೆ|
ಬಳ್ಳಾರಿ(ಜು.29): ಜಿಂದಾಲ್ ನಿಂದಾಗಿಯೇ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ. ಜಿಂದಾಲ್ ನಿಂದ ಜಿಲ್ಲೆಯ ಜನರು ಸಫರ್ ಆಗುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿತ್ತು. ಜಿಂದಾಲ್ ನಲ್ಲಿ ಪಾಸಿಟಿವ್ ಪ್ರಕರಣಗಳು ಶುರುವಾದ ಬಳಿಕ ಜಿಲ್ಲೆಯ ನಾನಾ ಕಡೆ ಹಬ್ಬಿತು. ಜಿಲ್ಲಾಡಳಿತ ಆದೇಶ ಮೀರಿಯೂ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೆಲಸ ಮಾಡಿದ್ದಾರೆ. ಪಾಸಿಟಿವ್ ಪ್ರಕರಣಗಳು ಏರಿಕೆಯಾದ ಬಳಿಕವೂ ಕುರಿಗಳನ್ನು ತುಂಬಿದಂತೆ ವಾಹನಗಳಲ್ಲಿ ಕಾರ್ಮಿಕರನ್ನು ತುಂಬಿಕೊಂಡು ಹೋಗಿ ಕೆಲಸ ಮಾಡಿಸುತ್ತಿದ್ದಾರೆ ಎಂದು ದೂರಿದರು.
ಬಳ್ಳಾರಿಯಲ್ಲೀಗ ಖಾಸಗಿ 'ಕೋವಿಡ್ ಕೇರ್ ಹೋಟೆಲ್’ ಶುರು..!
ಜಿಂದಾಲ್‌ನಲ್ಲಿ ಟೆಸ್ಟಿಂಗ್ ಸ್ಲೋ ಮಾಡಿ ಎಂದು ಜಿಂದಾಲ್‌ನ ಎಚ್ಒಡಿಗಳಿಗೆ ಮೇಲಿಂದ ಸೂಚನೆ ಬಂದಿದೆ. ಇದರರ್ಥ ಏನು ? ಜನ ಹೇಗಾದರೂ ಸಾಯಲಿ. ಕಾರ್ಖಾನೆಯ ಉತ್ಪಾದನೆ ಮಾತ್ರ ನಿಲ್ಲಬಾರದು ಎಂಬುದು ಇವರ ಉದ್ದೇಶವಾಗಿದೆ. ಇಂತಹ ಹೀನ ಮನಸ್ಥಿಗೆ ಜಿಂದಾಲ್ ತಲುಪಿರುವುದು ಕಂಡು ಬರುತ್ತದೆ ಎಂದು ಹೇಳಿದರು.
ಜಿಂದಾಲ್‌ನ ನೌಕರರನ್ನು ಕೆಲಸದಿಂದ ವಿನಾಕಾರಣ ತೆಗೆದು ಹಾಕುವ ಕಾರ್ಯ ನಡೆದಿದೆ. ಜಿಲ್ಲೆಯ ನೂರಾರು ಜನರನ್ನು ಕೆಲಸ ಹಾಕುವುದು ಸರಿಯಲ್ಲ. ಈಗಾಗಲೇ ಕೆಲಸ ಮಾಡುತ್ತಿರುವ ನೌಕರರನ್ನು ಮನೆಗೆ ಕಳಿಸುವುದು ಎಷ್ಟು ಸರಿ ? ಅದೇ ಕಾರ್ಮಿಕರು ಹಾಗೂ ನೌಕಕರಿಂದ ಬೃಹತ್ ಆಗಿ ಬೆಳೆದಿರುವ ಕಂಪನಿ, ಸಂಕಷ್ಟದ ಸಮಯದಲ್ಲಿ ಕೆಲಸ ತೆಗೆದು ಹಾಕಿದರೆ ನೌಕರರು ಎಲ್ಲಿಗೆ ಹೋಗಬೇಕು ? ಅವರ ಕುಟುಂಬಗಳ ಗತಿ ಏನು ? ಎಂದು ಪ್ರಶ್ನಿಸಿದರು.ಈ ಸಂಬಂಧ ಜಿಲ್ಲಾ ಸಚಿವ ಆನಂದಸಿಂಗ್, ಶ್ರೀರಾಮುಲು, ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಎಲ್ಲ ಚುನಾಯಿತ ಜನಪ್ರತಿನಿಧಿಗಳು ಸಹ ನಮ್ಮ ಜಿಲ್ಲೆಯವರನ್ನು ಕೆಲಸದಿಂದ ತೆಗೆಯಬೇಡಿ ಎಂದು ಹೇಳಿದರೂ ಜಿಂದಾಲ್ ನ ಅಧಿಕಾರಿಗಳು ಕೇಳುತ್ತಿಲ್ಲ. ಹೀಗಾದರೆ ಈ ಜಿಲ್ಲೆಯ ನೆಲ, ಜಲ ಬಳಸಿಕೊಂಡು ಕಾರ್ಖಾನೆ ಸ್ಥಾಪನೆ ಮಾಡಿರುವ ಜಿಂದಾಲ್ ಧೋರಣೆ ಎಂತಹದ್ದು ಎಂದು ಎಲ್ಲರಿಗೂ ಅರ್ಥವಾಗುತ್ತಿದೆ ಎಂದು ಟೀಕಿಸಿದರು.