ಮೂರು ಅಂತಸ್ತಿನ ವಸತಿ ಗೃಹ ಛಾವಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತಂಕ ಸೃಷ್ಟಿಸಿದ್ದ ಯುವಕ| ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದ ಘಟನೆ| ಯುವಕನನ್ನು ಸುರಕ್ಷಿತ ರೀತಿಯಲ್ಲಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದ ಅಗ್ನಿಶಾಮಕ ಸಿಬ್ಬಂದಿ|
ಕುಷ್ಟಗಿ(ಜ.28): ಚಿಕಿತ್ಸೆಗೆ ಬಂದಿದ್ದ ತಾಲೂಕಿನ ಚಳಗೇರಾ ಗ್ರಾಮದ ಅಂಬಾಜಿ ಮರಾಠಾ (35) ಎಂಬ ವ್ಯಕ್ತಿ ಆಸ್ಪತ್ರೆ ವಸತಿಗೃಹ ಕಟ್ಟಡದ ಮೇಲೇರಿ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕೆಲಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಸಿದ ಪ್ರಸಂಗ ಬುಧವಾರ ಇಲ್ಲಿಯ ಸರ್ಕಾರಿ ಆಸ್ಪತ್ರೆ ಬಳಿ ನಡೆಯಿತು.
ಅನಾರೋಗ್ಯಕ್ಕೆ ಒಳಗಾಗಿದ್ದ ಈತನನ್ನು ತಾಯಿ ಚಿಕಿತ್ಸೆಗೆ ಕರೆ ತಂದಿದ್ದರು. ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಎಲ್ಲರ ಕಣ್ಣು ತಪ್ಪಿಸಿ ಮೂರು ಅಂತಸ್ತಿನ ವಸತಿ ಗೃಹ ಛಾವಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತಂಕ ಸೃಷ್ಟಿಸಿದ್ದ. ಆಸ್ಪತ್ರೆ ಸಿಬ್ಬಂದಿ ಕೆಳಗೆ ಇಳಿಯುವಂತೆ ಎಷ್ಟೇ ಕೇಳಿಕೊಂಡರೂ ಮಣಿಯಲಿಲ್ಲ. ನಂತರ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದರು.
ಬಿಜೆಪಿ ಬೆಂಬಲಿತ ಗ್ರಾಪಂ ನೂತನ ಅಧ್ಯಕ್ಷರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ
ವಾಹನದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಠಾಣೆ ಅಧಿಕಾರಿ ರಾಜು ನರಸಪ್ಪ ಮತ್ತಿತರರು, ಕೆಳಗೆ ಇಳಿಯುವಂತೆ ಮನವಿ ಮಾಡಿದರೂ ಜಗ್ಗಲಿಲ್ಲ. ತಮ್ಮ ಮನೆಯವರು, ಸಂಬಂಧಿಕರು ಕಾಟ ಕೊಡುತ್ತಿದ್ದಾರೆ ಎಂದು ಪದೇಪದೆ ಹೇಳುತ್ತಿದ್ದ. ನಂತರ ಏಣಿ ಇಟ್ಟು ಕಟ್ಟಡ ಏರಿದ ಅಗ್ನಿಶಾಮಕ ಸಿಬ್ಬಂದಿ ಆತನನ್ನು ಸುರಕ್ಷಿತ ರೀತಿಯಲ್ಲಿ ಬಲವಂತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾದರು. ನಂತರ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು.
ಈ ಕುರಿತು ವಿವರಿಸಿದ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ, ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಈ ರೀತಿ ವರ್ತಿಸುತ್ತಿದ್ದಾನೆ ಎಂದು ತಾಯಿ ಮತ್ತು ಆತನ ಸಂಬಂಧಿಕರು ತಿಳಿಸಿದ್ದಾರೆ. ಹೀಗಾಗಿ, ಆತನನ್ನು ಮನೆಯವರಿಗೆ ಒಪ್ಪಿಸಲಾಗಿದೆ ಎಂದರು. ಸೂಕ್ತ ಚಿಕಿತ್ಸೆ ಕೊಡಿಸುವಂತೆ ತಿಳಿಸಿರುವುದಾಗಿ ಹೇಳಿದರು.