ಕೊಪ್ಪಳ: ಕೊರೋನಾ ಗೆದ್ದುಬಂದವ ಈಗ ಕೋವಿಡ್‌ ಆಸ್ಪತ್ರೆ ಸ್ವಯಂ ಸೇವಕ

By Kannadaprabha News  |  First Published Jun 14, 2021, 2:13 PM IST

* ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಸೇವೆ
* ಕೊಪ್ಪಳ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಯಲ್ಲಿ ಮಹೇಶ ಸೇವೆ
* 12 ದಿನಗಳ ಚಿಕಿತ್ಸೆಯ ಬಳಿಕ ಬಿಡುಗಡೆಯಾಗಿದ್ದ ಮಹೇಶ 
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.14):  ಇಲ್ಲೊಬ್ಬರು ಕೊರೋನಾ ಗೆದ್ದ ವೀರ ಈಗ ಕೊಪ್ಪಳ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಯಲ್ಲಿ ಸ್ವಯಂಸೇವಕರಾಗಿ ಸೇವೆ ಮಾಡುತ್ತಿದ್ದಾರೆ. ಕೋವಿಡ್‌ ರೋಗಿಗಳಿಗೆ ಧೈರ್ಯ ತುಂಬುತ್ತಿದ್ದಾರೆ. ಮಹೇಶ ಸಾಲಿಮಠ ಇವರ ಹೆಸರು. ಕೊಪ್ಪಳ ಗವಿಶ್ರೀ ನಗರದ ನಿವಾಸಿ. ಎಂಎಸ್‌ಸಿ, ಪಿಎಚ್‌ಡಿ ಪದವೀಧರ. ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗಿ.

Tap to resize

Latest Videos

ಇವರಿಗೆ ಕೊರೋನಾ ಪಾಸಿಟಿವ್‌ ಆಗಿತ್ತು. ಬೆಂಗಳೂರಿನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದು ಕೊಪ್ಪಳಕ್ಕೆ ಆಗಮಿಸಿದ್ದಾರೆ. ಇಲ್ಲಿಗೆ ಬಂದ ಮೇಲೆ ಅವರ ದೇಹದ ಆಮ್ಲಜನಕ ಮಟ್ಟ ಕುಸಿಯಿತು. ಅದರಿಂದ ಗಾಬರಿಗೊಂಡ ಅವರು ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಗೆ ಮೇ 13ರಂದು ದಾಖಲಾದರು. 12 ದಿನಗಳ ಚಿಕಿತ್ಸೆಯ ಬಳಿಕ ಮೇ 25ರಂದು ಬಿಡುಗಡೆಯಾದರು.

ಸೇವೆಯ ಚಿಂತನೆ:

ಹೀಗೆ ಗುಣಮುಖವಾದ ಮೇಲೆ ಇವರಿಗೆ ಕೋವಿಡ್‌ ರೋಗಿಗಳ ಸೇವೆ ಮಾಡಬೇಕು ಎಂಬ ಚಿಂತನೆ ಮೊಳೆಯಿತು. ಹತ್ತಿರವೂ ಸೇರಿಸಿಕೊಳ್ಳದಿರುವಾಗ ನನಗೆ ಅನೇಕರು ಸೇವೆ ಮಾಡಿ, ಗುಣಮುಖವಾಗುವುದಕ್ಕೆ ನೆರವಾಗಿದ್ದಾರೆ. ನಾನು ಈಗ ಅಂಥದ್ದೆ ಸೇವೆ ಮಾಡಬೇಕು ಎಂದು ತೀರ್ಮಾನಿಸಿ ಡಾ. ಮಹೇಶ ಹಾಗೂ ಡಾ. ಸೋಮಶೇಖರ ಅವರನ್ನು ಭೇಟಿಯಾಗಿ ತಮ್ಮ ಆಸಕ್ತಿಯನ್ನು ವಿವರಿಸುತ್ತಾರೆ.

ಕೊಪ್ಪಳ: ಕೋವಿಡ್‌ ನಿಯಮ ಉಲ್ಲಂಘಿಸಿ ಕನಕಗಿರಿ ತಹಶೀಲ್ದಾರ್‌ ಬರ್ತ್‌ಡೇ ಸಂಭ್ರಮ

‘ನೀವು ಈಗಾಗಲೇ ಪಾಸಿಟಿವ್‌ ಆಗಿ ಕೊರೋನಾ ಗೆದ್ದಿರುವುದರಿಂದ ನಿಮ್ಮಲ್ಲಿ ರೋಗನಿರೋಧ ಶಕ್ತಿ ವೃದ್ಧಿಯಾಗಿರುತ್ತದೆ. ಇಚ್ಛೆ ಇದ್ದರೆ ಅಲ್ಲಿಯೇ ಸೇವೆ ಮಾಡಬಹುದು’ ಎಂದು ವೈದ್ಯರು ಹೇಳುತ್ತಾರೆ. ಅದರಂತೆ ಕಳೆದೊಂದು ವಾರದಿಂದ ಅವರು ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿ ಸೇವೆ ಮಾಡುತ್ತಿದ್ದಾರೆ.

ರೋಗಿಗಳ ಸಂರಕ್ಷಣೆ:

ರೋಗಿಗಳ ಸಂರಕ್ಷಣೆಯ ಹೊಣೆ ಹೊತ್ತಿರುವ ಅವರು, ರೋಗಿಗಳಲ್ಲಿ ಇರುವ ಖಿನ್ನತೆ ದೂರ ಮಾಡಲು ಅವರ ಜತೆಗೆ ಮಾತನಾಡುತ್ತಾರೆ. ತಾವು ಗೆದ್ದ ಕತೆಯನ್ನು ಕೇಳಿ ಧೈರ್ಯ ತುಂಬುತ್ತಾರೆ. ಅಷ್ಟೇ ಅಲ್ಲ, ಇದೊಂದು ಮಹಾಮಾರಿ ಏನು ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಾರೆ. ಅವರಿಗೆ ಬೇಕಾಗಿರುವುದನ್ನು ಕೊಡುವುದು, ಅವರೊಂದಿಗೆ ಮಾತನಾಡುವುದು. ಅವರು, ಅವರ ಕುಟುಂಬದವರೊಂದಿಗೆ ಮಾತನಾಡಲು ವೀಡಿಯೋ ಕಾಲ್‌ ಮಾಡಿಕೊಡುವುದು. ವಿವಿಧ ರೀತಿಯ ಸಹಾಯ ಮಾಡುತ್ತಲೇ ಅವರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ಇವರದು ಸಾರ್ಥಕ ಸೇವೆ.

ನಾನು ಗುಣಮುಖವಾದ ಮೇಲೆ ಏನಾದರೂ ಸಹಾಯ ಮಾಡಬೇಕು ಎನಿಸಿತು. ಅದರಲ್ಲೂ ಕೋವಿಡ್‌ ರೋಗಿಗಳ ಸೇವೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ನನಗೆ ವೈದ್ಯರು ಅವಕಾಶ ಮಾಡಿಕೊಟ್ಟಿದ್ದಾರೆ. ಸೇವೆ ಮಾಡುತ್ತಿದ್ದೇನೆ ಎಂದು ಸ್ವಯಂ ಸೇವಕ ಮಹೇಶ ಸಾಲಿಮಠ ತಿಳಿಸಿದ್ದಾರೆ. 

ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖವಾದ ಮೇಲೆ ಅಂಜಿ ಮನೆಯಲ್ಲಿ ಕುಳಿತುಕೊಳ್ಳದೆ ಕೋವಿಡ್‌ ರೋಗಿಗಳ ಸೇವೆ ಮಾಡುವ ಮನೋಭಾವನೆ ನಿಜಕ್ಕೂ ಗ್ರೇಟ್‌. ಆತನ ಧೈರ್ಯ ಮತ್ತು ಸೇವೆ ಸಾರ್ಥಕತೆಗೆ ಹಿಡಿದ ಕನ್ನಡಿ ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ತಿಳಿಸಿದ್ದಾರೆ. 

ಈ ರೀತಿಯ ಸೇವೆ ಮಾಡುವುದು ತೀರಾ ಅಗತ್ಯ. ಇಂಥ ಮಹಾಮಾರಿಯನ್ನು ಕಟ್ಟಿ ಹಾಕಲು ಗೆದ್ದವರು ಕೈಜೋಡಿಸಿದರೆ ಇನ್ನು ಸುಲಭವಾಗುತ್ತದೆ. ಗುಣಮುಖವಾದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗಿರುವುದರಿಂದ ಸಮಸ್ಯೆಯಾಗದು ಎಂದು ಡಾ. ಮಹೇಶ ಹೇಳಿದ್ದಾರೆ. 
 

click me!