ಇದೇ ರಸ್ತೆಯಲ್ಲಿ ಮನೆಗೆ ಹೋಗ್ತೀರಲ್ಲ ಸ್ವಲ್ಪವೂ ಬೇಜಾರಾಗಲ್ವಾ? MLA ರಘುಪತಿ ಭಟ್‌ಗೆ ಯುವತಿ ಕ್ಲಾಸ್

By Ramesh BFirst Published Aug 28, 2022, 4:47 PM IST
Highlights

ಉಡುಪಿ ಜಿಲ್ಲೆಯಲ್ಲಿನ ರಸ್ತೆಯ ದುರವಸ್ಥೆಯ ಕುರಿತು ಇದೀಗ ಅಲ್ಲಿನ ಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಲಾರಂಭಿಸಿದ್ದು, ರಸ್ತೆ ಬಗ್ಗೆ ಯುವತಿಯೋರ್ವಳು ಶಾಸಕರಿಗೆ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಶಾಸಕರ ಸಮಜಾಯಿಷಿ ಕೊಟ್ಟಿದ್ದು ಹೀಗಿದೆ.

ಉಡುಪಿ, (ಆಗಸ್ಟ್. 28): ಉಡುಪಿ ಜಿಲ್ಲೆಯಲ್ಲಿನ ರಸ್ತೆಗಳ ದುರವಸ್ಥೆಯ ಕುರಿತು ಇದೀಗ ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಯುವತಿಯೋರವರು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರು ವಿಡಿಯೋ ಇದೀಗ ಸಾಮಾಜಿಕ ಜಾತಲಾತಣಗಳಲ್ಲಿ ವೈರಲ್​ ಆಗಿದೆ. ಕೋಮಲ್ ಜೆನಿಫರ್ ಎಂಬ ಯುವತಿ, ರಸ್ತೆ ಗುಂಡಿಗಳ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮಣಿಪಾಲ ಅಂಬಾಗಿಲು ಗುಂಡಿಬೈಲು ಕಲ್ಸಂಕ ರಸ್ತೆಯಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಯುವತಿ, ನೀವು ನಿಮ್ಮ ಮನೆಗೆ ಅದೇ ರಸ್ತೆಯಲ್ಲಿ ಹೋಗುತ್ತೀರಿ ಅಲ್ವಾ? ಅದನ್ನೆಲ್ಲ ನೋಡಿ ನಿಮಗೆ ಸ್ವಲ್ಪವೂ ಬೇಜಾರಾಗಲ್ವಾ? ನಿಮಗೆ ಸ್ವಲ್ಪವಾದರೂ ಕಾಮನ್​ ಸೆನ್ಸ್, ಮನುಷ್ಯತ್ವ ಏನಾದ್ರೂ ಉಂಟಾ? ಎಂದು ಪ್ರಶ್ನಿಸಿದ್ದಾಳೆ.

ಊರಿನಲ್ಲಿ ಗುಂಡಿಗಳ ನಡುವೆ ರಸ್ತೆಯನ್ನು ಹುಡುಕುವಂತಾಗಿದೆ. ನಾವು ಎಲ್ಲ ತೆರಿಗೆ, ಟೋಲ್ ಶುಲ್ಕ ಎಲ್ಲವನ್ನೂ ಕಟ್ಟಿದ್ದೇವೆ. ಆದರೆ ಅದೆಲ್ಲ ಯಾರ ಹೊಟ್ಟೆಗೆ ಮಣ್ಣು ಹಾಕಲಿಕ್ಕೆ? ಕೇಳಿದರೆ ಸೇತುವೆ ಕಟ್ಟಿದ್ದೇವೆ, ಅದು ಕಟ್ಟಿದ್ದೇವೆ ಇದು ಕಟ್ಟಿದ್ದೇವೆ ಎನ್ನುತ್ತೀರಿ. ನೀವು ಒಂದು ಕೆಲಸವಾದರೂ ಸರಿಯಾಗಿ ಮಾಡಿದ್ದೀರಾ ಎಂದು ಕೋಮಲ್ ಪ್ರಶ್ನೆ ಮಾಡಿದ್ದಾರೆ.

ಉಡುಪಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಬರುತ್ತಿರುವುದಕ್ಕಾದರೂ ಅಲ್ಲಿ ಸ್ವಲ್ಪ ರಸ್ತೆ ಸರಿಯಾಗುತ್ತಿದೆ. ಇಲ್ಲಿ ರಸ್ತೆ ಸರಿಯಾಗಲು ಯಾರು ಬರಬೇಕು? ಎಂದು ಕಿಡಿಕಾರಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಶಾಸಕರ ಸಮಜಾಯಿಷಿ ಹೀಗಿದೆ: ಯುವತಿಯ ವಿಡಿಯೋಗೆ ಪ್ರತಿಕ್ರಿಯಿಸಿರುವ ಶಾಸಕ ರಘುಪತಿ ಭಟ್, ನಾನು ಮನೆಗೆ ಹೋಗುವುದು ಇದೇ ರಸ್ತೆಯಲ್ಲಿ, ಈ ರಸ್ತೆ ಸಮಸ್ಯೆಯ ಬಗ್ಗೆ ನನಗೆ ಗಂಭೀರತೆ ಇದೆ, ಈಗಾಗಲೇ ಒಂದು ಬಾರಿ ಪ್ಯಾಚ್ ವರ್ಕ್ ಮಾಡಿದ್ದೆವು. ಕಳೆದ ಬಾರಿ ಮತ್ತೊಮ್ಮೆ ಜೋರು ಮಳೆಯಾಗಿದ್ದರಿಂದ ರಸ್ತೆ ಹಾಳಾಗಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಕೇವಲ ಜಲ್ಲಿ ಹಾಕಲಾಗಿದೆ. ವಾಹನ ಸಂಚಾರಕ್ಕೆ ಅಡ್ಡಿ ಆಗಬಾರದೆಂದು ಎಂದು ಸಣ್ಣ ಲೇಯರ್ ಡಾಂಬರ್ ಹಾಕಿದ್ದೇವೆ ಅಷ್ಟೇ. ಇನ್ನು ಎರಡು ಲೇಯರ್ ಡಾಂಬರ್​ ಹಾಕುವುದು ಬಾಕಿ ಇದೆ. ಜಲ್ಲಿ ಹಾಕಿ ಹಾಗೆ ಬಿಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಆದರೆ ಜನರ ಅನುಕೂಲಕ್ಕೆ ಒಂದು ಸಣ್ಣ ಲೇಯರ್ ಡಾಂಬರ್ ಹಾಕಲು ಹೇಳಿದ್ದೆ. ಹೊಸ ರಸ್ತೆಯಾದ ಕಾರಣ ಮಳೆಗೆ ಸಿಂಕ್ ಆಗುತ್ತಿದೆ. ಮೊದಲ ಮಳೆಗೆ ರಸ್ತೆ ಸಿಂಕ್ ಆಗುವುದು ಸಾಮಾನ್ಯ ಎಂದು ಸಮಜಾಯಿಷಿ ನೀಡಿದ್ದಾರೆ.

ಅಲ್ಲದೇ ಇದು ಕಳಪೆ ಕಾಮಗಾರಿಯಲ್ಲ. ಏಕೆಂದರೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆ ನಿಂತ ತಕ್ಷಣ ಪ್ಯಾಚ್ ವರ್ಕ್ ಮಾಡುತ್ತೇವೆ. ಕಳೆದ ಡಿಸೆಂಬರ್​​ನಲ್ಲಷ್ಟೇ ಈ ಕಾಮಗಾರಿ ಪ್ರಾರಂಭವಾಗಿದೆ. ಇದೊಂದು ದೊಡ್ಡ ಕಾಮಗಾರಿಯಾಗಿದ್ದು ಸಾರ್ವಜನಿಕರು ಸಹಕರಿಸಬೇಕು. ಸಿಂಗಲ್ ರೋಡನ್ನು ಸದ್ಯ ಡಬಲ್ ರೋಡಾಗಿ ಮಾರ್ಪಡಿಸುತ್ತಿದ್ದೇವೆ. ಈ ರಸ್ತೆ ಕಾಮಗಾರಿಗೆ 26 ಕೋಟಿ ರೂ. ಅನುದಾನ ತಂದಿದ್ದೇನೆ. ಈ ಬಗ್ಗೆ ನೂರಕ್ಕೂ ಅಧಿಕ ಸಭೆ ನಡೆಸಿದ್ದೇನೆ. ಕೆಲಸ ಆಗುವ ಸಮಯದಲ್ಲಿ ಇಂತಹ ಅವ್ಯವಸ್ಥೆಗಳಾಗುವುದು ಸಹಜ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಮ್ಮೆ ಕಾಮಗಾರಿ ಮುಗಿದರೆ ಏಳೆಂಟು ವರ್ಷ ಯಾವುದೇ ತೊಂದರೆ ಆಗಲ್ಲ. ಅಭಿವೃದ್ಧಿ ಮಾಡಲು ಹೊರಟರೆ ಟೀಕೆ ಬರುತ್ತೆ, ಅಭಿವೃದ್ಧಿ ಮಾಡದಿದ್ದರೆ ಯಾರೂ ಟೀಕಿಸುವುದಿಲ್ಲ. ನಾಗರಿಕರಾಗಿ ಅವರಿಗೆ ಪ್ರಶ್ನಿಸುವ ಹಕ್ಕಿದೆ, ಆದರೆ ಗೊಂದಲಕ್ಕೀಡಾಗಬೇಡಿ ಎಂದು ಶಾಸಕರು ಮನವಿ ಮಾಡಿದ್ದಾರೆ.

click me!