ಬರಗಾಲಕ್ಕೂ ಜಗ್ಗದ ಛಲ: 10 ಎಕರೆ ಜಮೀನಿನಲ್ಲಿ 100 ಕ್ವಿಂಟಲ್ ಶೇಂಗಾ ಬೆಳೆದು ₹7 ಲಕ್ಷ ಲಾಭ ಗಳಿಸಿದ ಕೂಡ್ಲಿಗಿ ಯುವ ರೈತ!

Gowthami K   | Kannada Prabha
Published : Oct 28, 2026, 07:39 AM IST
Kudligi Farmer Veeresh

ಸಾರಾಂಶ

ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಕೂಡ್ಲಿಗಿಯ ಯುವ ರೈತ ವೀರೇಶ್ ತಮ್ಮ 10 ಎಕರೆ ಜಮೀನಿನಲ್ಲಿ ಕೊಳವೆಬಾವಿ ನೀರು ಬಳಸಿ ಶೇಂಗಾ ಬೆಳೆದಿದ್ದಾರೆ. ಜಿಪ್ಸಂ ಬಳಕೆಯಿಂದ ಒಂದೇ ಬಳ್ಳಿಯಲ್ಲಿ 40-80 ಕಾಯಿಗಳು ಬಿಟ್ಟಿದ್ದು, 100 ಕ್ವಿಂಟಲ್ ಇಳುವರಿಯೊಂದಿಗೆ 7 ಲಕ್ಷ ರೂ. ಲಾಭ ಗಳಿಸಿ ಬರಕ್ಕೆ ಸೆಡ್ಡು ಹೊಡೆದಿದ್ದಾರೆ.

ವರದಿ: ಭೀಮಣ್ಣ ಗಜಾಪುರ

ಕೂಡ್ಲಿಗಿ: ಈ ವರ್ಷ ಇಡೀ ರಾಜ್ಯಕ್ಕೆ ಬರ ಆವರಿಸಿ ಬಿತ್ತನೆ ಬೀಜ, ರಸಗೊಬ್ಬರ, ಬಿತ್ತಿದ ಕೂಲಿಯೂ ಸಹ ಸಿಗದೇ ರೈತರು ಕೈಸುಟ್ಟುಕೊಂಡಿದ್ದರೆ, ಇಲ್ಲಿಯ ಯುವ ರೈತನೊಬ್ಬ ತನ್ನ 10 ಎಕರೆ ಭೂಮಿಯಲ್ಲಿ 3 ಲಕ್ಷ ಖರ್ಜು ಮಾಡಿ 100 ಕ್ವಿಂಟಲ್ ಶೇಂಗಾ ಬೆಳೆದಿದ್ದು ಅಂದಾಜು 7 ಲಕ್ಷ ಲಾಭ ಪಡೆದು ಬರಗಾಲಕ್ಕೆ ಸೆಡ್ಡು ಹೊಡೆದಿದ್ದಾನೆ.

ತಾಲೂಕು ಕಾನಾಹೊಸಹಳ್ಳಿ ಹೋಬಳಿಯ ಬಯಲು ತುಂಬರಗುದ್ದಿ ಗ್ರಾಮದ ಕೆಂಚಪ್ಪರ ವೀರೇಶ್ ಎನ್ನುವ ಯುವ ರೈತ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾನೆ.

ನೀರು ಎಲ್ಲಿಂದ?

ಈ ಬಾರಿ ಕೂಡ್ಲಿಗಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಎರಡೂ (ಮುಂಗಾರು, ಹಿಂಗಾರು) ಮಳೆ ಸರಿಯಾಗಿ ಬಿದ್ದಿಲ್ಲ, ಇಂತಹದಲ್ಲಿ ಬೆಳೆ ಬೆಳೆಯುವುದು ಕನಸಿನ ಮಾತು ಎಂದು ತಿಳಿದ ವೀರೇಶ್ 3 ಕೊಳವೆಬಾವಿ ಕೊರೆಯಿಸಿದ್ದಾನೆ. ನೀರು ಚೆನ್ನಾಗಿ ಬಂದಿರುವುದರಿಂದ ತನ್ನ 10 ಎಕರೆ ಭೂಮಿಗೆ ಕೊಳವೆ ಬಾವಿಗಳಿಂದ ನೀರುಣಿಸಿ ಶೇಂಗಾ ಬೆಳೆದಿದ್ದಾನೆ. ಒಂದು ಶೇಂಗಾ ಗಿಡದಲ್ಲಿ 40 ರಿಂದ 80 ಗಟ್ಟಿ ಶೇಂಗಾ ಕಾಯಿ ಬಿಟ್ಟಿರುವುದು ರೈತ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಈಗ ಶೇಂಗಾ ಬೇರ್ಪಡಿಸುವ ಕಾರ್ಯ ಬರದಿಂದ ನಡೆಯುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ಜನತೆ ಇಲ್ಲಿನ ಶೇಂಗಾ ಬಳ್ಳಿಯಲ್ಲಿ ಗೊಂಚಲು ಗೊಂಚಲು ಕಾಯಿ ನೋಡಲು ಬರುತ್ತಿದ್ದಾರೆ. ಕೆಲ ಬಳ್ಳಿಗಳಲ್ಲಿ ಮಾತ್ರ 40 ರಿಂದ 50 ಇರಲು ಸಾಧ್ಯ, ಆದರೆ ಇಡೀ ಜಮೀನು ತುಂಬಾ 40 ರಿಂದ 80 ಶೇಂಗಾಕಾಯಿ ಒಂದೇ ಬಳ್ಳಿಯಲ್ಲಿ ಇರುವುದನ್ನು ನೋಡುವುದೇ ಸೋಜಿಗ.

ಶೇಂಗಾ ಕಾಯಿ ಹೆಚ್ಚು ಬಿಡಲು ಜಮೀನಿಗೆ ಎಡೆಕುಂಟೆ ಹೊಡೆಯುವ ಸಂದರ್ಭದಲ್ಲಿ 2 ಬಾರಿ 25 ಚೀಲದಂತೆ 50 ಚೀಲ ಜಿಪ್ಸ್ಂ ಹಾಕಿದ್ದೇನೆ. ಹೀಗಾಗಿ ಹೆಚ್ಚು ಕಾಯಿ ಕಟ್ಟಲು ಸಾಧ್ಯವಾಗಿದೆ. 100 ಕ್ವಿಂಟಲ್ ಶೇಂಗಾ ಆಗಬಹುದು, ಈಗ ಕ್ವಿಂಟಲ್ ಗೆ ₹9 ಸಾವಿರಕ್ಕೂ ಹೆಚ್ಚು ದರ ಇರುವುದರಿಂದ ₹10 ಲಕ್ಷ ಆಗಬಹುದು.

-ಕೆಂಚಪ್ಪರ ವೀರೇಶ್. ಬಯಲು ತುಂಬರಗುದ್ದಿಯ ರೈತ

ನಮ್ಮೂರಿನ ಯುವಕ ಕೆಂಚಪ್ಪರ ವೀರೇಶ್ 10 ಎಕರೆಯಲ್ಲಿ ಬೆಳೆದ ಶೇಂಗಾ ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗಿದೆ. ಒಂದು ಬಳ್ಳಿಯಲ್ಲಿ ಅರವತ್ತರಿಂದ ಎಂಬತ್ತು ಶೇಂಗಾಕಾಯಿ ಇರುವುದು ಅಚ್ಚರಿ ಮೂಡಿಸಿದೆ.

-ಚಂದ್ರು. ಬಯಲು ತುಂಬರಗುದ್ದಿಯ ರೈತ, ಕಮ್ಯುನಿಷ್ಟ್ ಪಕ್ಷದ ಯುವ ಮುಖಂಡ

PREV
Read more Articles on
click me!

Recommended Stories

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾಕಿಸ್ತಾನಿ ಸೇರಿ 716 ವಿದೇಶಿ ಪ್ರಜೆಗಳು ಪತ್ತೆ
ಗಿಣಿಗೇರಿಯಲ್ಲಿ ಕಾರ್ಖಾನೆ ವಿಸ್ತರಣೆ, ರೈಲ್ವೆ ರೇಕ್ ಯಾರ್ಡ್‌ಗೆ NOC ನೀಡದಂತೆ ಆಗ್ರಹ