
ಕೊಪ್ಪಳ: ಗಿಣಿಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯ, ಪರಿಸರ ಮತ್ತು ಕೃಷಿ ಭೂಮಿಯ ರಕ್ಷಣೆ ದೃಷ್ಟಿಯಿಂದ ಕಾರ್ಖಾನೆ ವಿಸ್ತರಣೆ ಹಾಗೂ ಕಚ್ಚಾ ವಸ್ತುಗಳ ಸಾಗಣೆಗಾಗಿ ಉದ್ದೇಶಿಸಿರುವ ರೈಲ್ವೆ ರೇಕ್ ಯಾರ್ಡ್ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಬಾರದು ಎಂದು ಆಗ್ರಹಿಸಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಕೈಗಾರಿಕಾ ಚಟುವಟಿಕೆಗಳಿಂದ ವಾಯು ಮಾಲಿನ್ಯ, ಧೂಳಿನ ಸಮಸ್ಯೆ ಹಾಗೂ ವಾಹನಗಳ ಸಂಚಾರದಿಂದ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕವಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿತು.
ಕಾರ್ಖಾನೆ ವಿಸ್ತರಣೆ ಹಾಗೂ ರೈಲ್ವೆ ರೇಕ್ ಯಾರ್ಡ್ ನಿರ್ಮಾಣಕ್ಕೆ ಅವಕಾಶ ನೀಡಿದರೆ ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರ ಬದುಕಿನ ಮೇಲೆ ಪರಿಣಾಮ ಬೀರಬಹುದು. ಪರಿಸರ ಮಾಲಿನ್ಯ ಹೆಚ್ಚಾದರೆ ಕೃಷಿ ಚಟುವಟಿಕೆ ಹಾಗೂ ಜನರ ಜೀವನೋಪಾಯಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳೀಯರ ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗ್ರಾಮಸ್ಥರ ಹಿತಾಸಕ್ತಿಗೆ ಧಕ್ಕೆಯಾಗುವ ಯೋಜನೆ ಎಂದು ಆರೋಪ
ಗ್ರಾಮ ಪಂಚಾಯಿತಿಯು ಈ ಕುರಿತು ವಿಶೇಷ ಸಭೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಯೋಜನೆಯಿಂದ ಪರಿಸರ ಹಾಗೂ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದ ಬಳಿಕವೇ ನಿರ್ಧಾರ ಕೈಗೊಳ್ಳಬೇಕು. ಗ್ರಾಮಸ್ಥರ ಹಿತಾಸಕ್ತಿಗೆ ಧಕ್ಕೆಯಾಗುವ ಯೋಜನೆಗಳಿಗೆ ಅನುಮತಿ ನೀಡಬಾರದು ಎಂದು ಸಮಿತಿ ಆಗ್ರಹಿಸಿತು.
ಈ ಸಂದರ್ಭದಲ್ಲಿ ಸಮಿತಿ ಮುಖಂಡರಾದ ಮಂಗಳೇಶ ರಾಥೋಡ್, ಹನುಮಂತ ಕಟಿಗಿ, ಮಾಜಿ ಗ್ರಾಪಂ ಸದಸ್ಯರಾದ ಯಮನೂರಪ್ಪ ಕಟಿಗಿ, ರಾಮಚಂದ್ರಪ್ಪ ಕವಲೂರು, ಯಮನೂರಪ್ಪ ಕೊಲ್ಕಾರ್, ನಿಂಗಜ್ಜ ಅಬ್ಬಿಗೇರಿ, ಬಸವರಾಜ್ ಗಂಟೆ ಸೇರಿದಂತೆ ಇತರರು ಇದ್ದರು.
ಗಿಣಿಗೇರಿ ಕಾರ್ಖಾನೆ ವಿಸ್ತರಣೆ ಹಾಗೂ ರೈಲ್ವೆ ರೇಕ್ ಯಾರ್ಡ್ ನಿರ್ಮಾಣಕ್ಕೆ ಎನ್‌ಒಸಿ ನೀಡದಂತೆ ಆಗ್ರಹಿಸಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.