ಧಾರವಾಡ: ವಿನಯ್ ಕುಲಕರ್ಣಿಗೆ ಜಾಮೀನು, 'ನಾನು ಸುಪ್ರೀಂ ಕೋರ್ಟ್‌ಗೆ ಹೋಗಲ್ಲ' ಎಂದ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ!

Published : Jul 31, 2026, 03:36 PM IST
yogesh gowda wife mallamma

ಸಾರಾಂಶ

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ತೀರ್ಪನ್ನು ಪ್ರಶ್ನಿಸಿ ಮೃತರ ಸಹೋದರ ಸುಪ್ರೀಂ ಕೋರ್ಟ್‌ಗೆ ಹೋಗಲು ಸಿದ್ಧರಾಗಿದ್ದರೆ, ಪತ್ನಿ ಮಲ್ಲಮ್ಮ ಮಾತ್ರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಾನೂನು ಹೋರಾಟದಿಂದ ಹಿಂದೆ ಸರಿಯುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.

ಧಾರವಾಡ: ಜಿಲ್ಲೆಯ ತೀವ್ರ ಕುತೂಹಲ ಕೆರಳಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ,  ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್‌ನಿಂದ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಮೃತ ಯೋಗೇಶ್ ಗೌಡ ಅವರ ಸಹೋದರ ಗುರುನಾಥಗೌಡರ್ ಹಾಗೂ ಹೋರಾಟಗಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದರೆ, ಇತ್ತ ಯೋಗೇಶ್ ಗೌಡ ಅವರ ಪತ್ನಿ ಮಲ್ಲಮ್ಮ ಅವರು ಮಾತ್ರ ಅತ್ಯಂತ ಅಚ್ಚರಿಯ ಹಾಗೂ ಭಿನ್ನವಾದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಸುಪ್ರೀಂ ಕೋರ್ಟ್‌ಗೆ ಹೋಗುವುದಿಲ್ಲ ಎಂದು ಮಲ್ಲಮ್ಮ ಹೇಳಿಕೆ ನೀಡಿದ್ದಾರೆ.

ನ್ಯಾಯಾಲಯದ ತೀರ್ಪೇ ಅಂತಿಮ: ನಾವೇನು ಹೇಳಲು ಸಾಧ್ಯ?

ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಲ್ಲಮ್ಮ, "ಈ ವಿಷಯದಲ್ಲಿ ನಾವೇನು ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ನ್ಯಾಯಾಲಯ ಮತ್ತು ಗೌರವಾನ್ವಿತ ನ್ಯಾಯಾಧೀಶರಿಗೆ ಬಿಟ್ಟಿದ್ದು. ಕೋರ್ಟ್ ಯಾವ ರೀತಿಯ ತೀರ್ಪು ನೀಡುತ್ತದೆ ಎಂಬುದು ಮೊದಲೇ ಯಾರಿಗೂ ಗೊತ್ತಾಗುವುದಿಲ್ಲ. ನ್ಯಾಯಾಲಯದ ತೀರ್ಪೇ ಅಂತಿಮವಾಗುತ್ತದೆ. ಈ ತೀರ್ಪಿನಿಂದ ನಮಗೇನೂ ಹಿನ್ನಡೆಯಾಗಿದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

ಮಕ್ಕಳ ಭವಿಷ್ಯಕ್ಕಾಗಿ ಕಾನೂನು ಹೋರಾಟಕ್ಕೆ ಬ್ರೇಕ್!

ತಮ್ಮ ಮುಂದಿನ ನಡೆಯ ಬಗ್ಗೆ ಮಾತನಾಡುತ್ತಾ, "ನಾನು ಇನ್ಮುಂದೆ ಯಾವುದೇ ರೀತಿಯ ಕಾನೂನು ಹೋರಾಟವನ್ನು ಮುಂದುವರಿಸುವುದಿಲ್ಲ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಾನು ಸರ್ವೋಚ್ಚ ನ್ಯಾಯಾಲಯದ (Supreme Court) ಮೆಟ್ಟಿಲೇರುವುದಿಲ್ಲ. ನನಗೆ ನನ್ನ ಮಕ್ಕಳ ಶಿಕ್ಷಣ, ಅವರ ಉಜ್ವಲ ಭವಿಷ್ಯ ಹಾಗೂ ನನ್ನ ಕ್ಷೇತ್ರದ ಜನರ ಅಭಿವೃದ್ಧಿ ಮುಖ್ಯವಾಗಿದೆ. ಅವರ ಸಲುವಾಗಿ ನಾನು ಈ ಕಾನೂನು ಹೋರಾಟದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಹೋರಾಟ ಕೈಬಿಡುವ ಮುನ್ಸೂಚನೆ ನೀಡಿದರು.

ಯಾರು ಎಷ್ಟೇ ಕೆಟ್ಟದ್ದು ಮಾಡಿದರೂ ಒಳ್ಳೆಯದನ್ನೇ ಬಯಸುತ್ತೇನೆ

ನನ್ನ ಜೀವನದಲ್ಲಿ ಯಾರು ಎಷ್ಟೇ ಕೆಟ್ಟದ್ದನ್ನು ಮಾಡಿದ್ದರೂ, ನಾನು ಮಾತ್ರ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ. ದ್ವೇಷ ಸಾಧನೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಇಡೀ ಪ್ರಕರಣದಲ್ಲಿ ಶಾಂತಿಯುತ ನಡೆ ಪ್ರದರ್ಶಿಸಿದರು.

ಒಂದೆಡೆ ಮೃತರ ಸಹೋದರ ಗುರುನಾಥಗೌಡರ್ ಮತ್ತು ಕಾನೂನು ತಜ್ಞರು ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳುತ್ತಿದ್ದರೆ, ಇನ್ನೊಂದೆಡೆ ಸ್ವತಃ ಪತ್ನಿ ಮಲ್ಲಮ್ಮ ಅವರೇ ಹೋರಾಟದಿಂದ ಹಿಂದೆ ಸರಿದಿರುವುದು ಧಾರವಾಡ ರಾಜಕೀಯ ಮತ್ತು ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

PREV
Read more Articles on
click me!

Recommended Stories

ವಯಸ್ಸು ಚಿಕ್ಕದಾದರೂ ಸಾಧನೆ ದೊಡ್ಡದು, ಕಷ್ಟದ ದಿನಗಳಿಂದ ಬಂದ 24 ವರ್ಷದ ಬೆಂಗಳೂರು ಯುವಕ ಈಗ 1.8 ಕೋಟಿ ರೂ. ಮನೆಯೊಡೆಯ
ಸಿಎಂ ವಿಜಯ್‌ರನ್ನ ಕರೆಸಿ ಪ್ರತಿಭಟನೆ ಮಾಡಿದ್ರೆ ನನಗೆ ಸಮಾಧಾನ ಕಾಣುತ್ತಿಲ್ಲ - ಡಿ.ಕೆ. ಶಿವಕುಮಾರ್