ಸಿಲಿಕಾನ್‌ ಸಿಟಿಯಲ್ಲಿ ಯೋಗಾಯೋಗ : ಯೋಗಪಟುಗಳಿಂದ ಸಾವಿರಾರು ಜನರಿಗೆ ಯೋಗ ತರಬೇತಿ

Published : Jun 22, 2025, 06:04 AM IST
International Day of Yoga celebrated at Air Force Station in Delhi (Photo/X/@IAF_MCC)

ಸಾರಾಂಶ

ಸಿಲಿಕಾನ್‌ ಸಿಟಿಯಾದ್ಯಂತ ಸಾಮೂಹಿಕ ಯೋಗಾಸನ, ಧ್ಯಾನ, ಪ್ರಾಣಾಯಾಮ ಅಭ್ಯಾಸದ ಮೂಲಕ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಯಿತು. ನಸುಕಿನಲ್ಲೇ ಸರ್ಕಾರಿ, ಖಾಸಗಿ ಕಚೇರಿ, ಸಂಘ ಸಂಸ್ಥೆಗಳು ಯೋಗಪಟುಗಳಿಂದ ಸಾವಿರಾರು ಜನರಿಗೆ ಯೋಗ ತರಬೇತಿ, ಜಾಗೃತಿಯ ವಿಶೇಷ ಕಾರ್ಯಕ್ರಮ ನಡೆಸಿದವು.

ಬೆಂಗಳೂರು : ಸಿಲಿಕಾನ್‌ ಸಿಟಿಯಾದ್ಯಂತ ಸಾಮೂಹಿಕ ಯೋಗಾಸನ, ಧ್ಯಾನ, ಪ್ರಾಣಾಯಾಮ ಅಭ್ಯಾಸದ ಮೂಲಕ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಯಿತು. ನಸುಕಿನಲ್ಲೇ ಸರ್ಕಾರಿ, ಖಾಸಗಿ ಕಚೇರಿ, ಸಂಘ ಸಂಸ್ಥೆಗಳು ಯೋಗಪಟುಗಳಿಂದ ಸಾವಿರಾರು ಜನರಿಗೆ ಯೋಗ ತರಬೇತಿ, ಜಾಗೃತಿಯ ವಿಶೇಷ ಕಾರ್ಯಕ್ರಮ ನಡೆಸಿದವು.

ಯೋಗದ ಧಿರಿಸಿನಲ್ಲಿ ಕಾಣಿಸಿಕೊಂಡ ಜನತೆ ಪತಂಜಲಿ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಗಂಟೆಗಳ ಕಾಲ ಯೋಗಾಭ್ಯಾಸ ಮಾಡಿದರು. ಆಯುಷ್‌ ಇಲಾಖೆ, ಪತಂಜಲಿ, ಆರ್ಟ್‌ ಆಫ್‌ ಲಿವಿಂಗ್‌, ಈಶ ಫೌಂಡೇಶನ್‌ ಹಾಗೂ ಇತರೆ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಯೋಗದ ಕಾರ್ಯಕ್ರಮಗಳು ಜರುಗಿದವು.

ವಿಧಾನಸೌಧದ ಮೆಟ್ಟಿಲಿನ ಮೇಲೆ ಆರೋಗ್ಯ, ಆಯುಷ್‌ ಇಲಾಖೆಯಿಂದ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ಯೋಗಾಸನ ಮಾಡಿದರು. ಅರಮನೆ ಮೈದಾನದಲ್ಲಿ ಅಕ್ಷರ ಯೋಗ ಕೇಂದ್ರವು ದೇಶ ವಿದೇಶದಿಂದ ಆಗಮಿಸಿದ್ದ ಯೋಗಪಟುಗಳಿಂದ 12 ಗಿನ್ನಿಸ್‌ ರೆಕಾರ್ಡ್‌ ಮಾಡಿಸಿ ಯೋಗ ದಿನವನ್ನು ವಿಶೇಷವಾಗಿಸಿತು.

ನಿಮ್ಹಾನ್ಸ್‌: ಇಲ್ಲಿನ ನಿಮ್ಹಾನ್ಸ್‌ ಆಸ್ಪತ್ರೆಯ ಜಿಮ್ಖಾನಾ ಮೈದಾನದಲ್ಲಿ ಬೆಳಗ್ಗೆ 6.30ಕ್ಕೆ ನಡೆದ ‘ಯೋಗ ಸಂಗಮ’ದಲ್ಲಿ 500ಕ್ಕೂ ಹೆಚ್ಚಿನ ಸಿಬ್ಬಂದಿ, ಜನತೆ ಯೋಗಾಭ್ಯಾಸ ಮಾಡಿದರು. ಬಳಿಕ ರೋಗಿಗಳಿಗಾಗಿ ಅಶ್ವಿನಿ ಹಾಲ್‌ನಲ್ಲಿ ಯೋಗ ಅಧಿವೇಶನ ನಡೆಸಿ ಶಾರೀರಿಕ, ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ಬಗೆ, ಕ್ಷೇಮಾಭಿವೃದ್ಧಿಯ ಜೀವನಶೈಲಿ ಬಗ್ಗೆ ತಿಳಿಸಲಾಯಿತು.

ನಗರ ವಿವಿ: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸೆಂಟ್ರಲ್ ಕಾಲೇಜಿನ ಗಡಿಯಾರ ಗೋಪುರದ ಬಳಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಯೋಗ ದಿನಾಚರಣೆ ನಡೆಲಾಯಿತು. ಬಿಸಿಯು ಪ್ರಭಾರ ಕುಲಪತಿ ಪ್ರೊ. ಕೆ.ಆರ್. ಜಲಜಾ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಕುಲಸಚಿವ ಪ್ರೊ.ಬಿ.ರಮೇಶ್, ಡೀನರಾದ ಡಾ.ಪಿ.ಆರ್. ಚೇತನ ಇದ್ದರು. ಪತಂಜಲಿ ಯೋಗ ಟ್ರಸ್ಟ್ ನ ಮಂಜುನಾಥ ಯೋಗಿ ಯೋಗದ ಮಾರ್ಗದರ್ಶನ ನೀಡಿದರು.

ಪಿಇಎಸ್‌ ಯುನಿವರ್ಸಿಟಿ: ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಕ್ರೀಡಾ, ದೈಹಿಕ ಶಿಕ್ಷಣ ವಿಭಾಗದಿಂದ ನಡೆದ ಯೋಗ ದಿನಾಚರಣೆಯಲ್ಲಿ 1500ಕ್ಕ ಹೆಚ್ಚಿನವರು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು. ಕುಲಸಚಿವ ಡಾ.ಕೆ.ಎಸ್‌.ಶ್ರೀಧರ್‌ ಮಾತನಾಡಿದರು. ಜತೆಗೆ ಅಂತಾರಾಷ್ಟ್ರೀಯ ಸಂಗೀತ ದಿನದ ಪ್ರಯುಕ್ತ ವಿದ್ಯಾರ್ಥಿಗಳು ಗಾಯನ ಪ್ರದರ್ಶಿಸಿದರು.

ನೈಋತ್ಯ ರೈಲ್ವೆ: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವತಿಯಿಂದ ಬೆಂಗಳೂರಿನ ಅನುಗ್ರಹ ಸಮುದಾಯ ಕೇಂದ್ರದಲ್ಲಿ ಸಾಮೂಹಿಕ ಯೋಗಾಭ್ಯಾಸದ ಮೂಲಕ ಯೋಗ ದಿನವನ್ನು ಆಚರಿಸಲಾಯಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ರೈಲ್ವೆ ಮಂಡಳಿಯ ಹೆಚ್ಚುವರಿ ಸದಸ್ಯ ಸಮೀರ್ ದೀಕ್ಷಿತ್, ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಇದ್ದರು.

ಲೈಫ್‌ ಎಟರ್ನಲ್‌ ಟ್ರಸ್ಟ್‌: ನಗರದ ಅರಮನೆ ಮೈದಾನದಲ್ಲಿ ಲೈಫ್‌ ಎಟರ್ನಲ್‌ ಟ್ರಸ್ಟ್‌ ವತಿಯಿಂದ ಸಹಜ ಯೋಗ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯ ಮತ್ತು ಆಯುಷ್ ರಾಜ್ಯ ಸಚಿವ ಪ್ರತಾಪ ರಾವ್ ಜಾಧವ್ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದರು. ಯೋಗವು ಕೇವಲ ವ್ಯಾಯಾಮವಲ್ಲ, ಇದು ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುವ ದಾರಿ ಎಂದರು.

ಲೈಫ್ ಎಟರ್ನಲ್ ಟ್ರಸ್ಟ್‌ನ ಚೇರ್‌ಮೆನ್ ಡಾ. ಮನೋಜ್ ಕುಮಾರ್ ‌ಮಾತನಾಡಿದರು. ವಿಶ್ವ ಸಂಗೀತ ದಿನದ ಪ್ರಯುಕ್ತ 20ಕ್ಕೂ ಹೆಚ್ಚು ದೇಶಗಳ 200 ಕಲಾವಿದರು 100ಕ್ಕೂ ಹೆಚ್ಚು ಸಂಗೀತ ವಾದ್ಯಗಳೊಂದಿಗೆ ಸಂಗೀತವನ್ನು ಪ್ರಸ್ತುತಪಡಿಸಿದರು. ಸಮರ್ಥನಂ ಟ್ರಸ್ಟ್‌ ಫಾರ್‌ ದಿ ಡಿಸೇಬಲ್ಡ್‌ ಸಂಸ್ಥೆಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಲಂಡನ್‌ ನಿಂದ ಎಕ್ಸೆಲೆನ್ಸ್‌ ಪ್ರಮಾಣಪತ್ರ ನೀಡಲಾಯಿತು. ನಟಿ ನಮ್ರತಾ ಗೌಡ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಿಇಒ (ಲಂಡನ್ ಯುಕೆ) ಸಂತೋಷ್ ಶುಕ್ಲ, ಡಾ, ರಾಜೀವ್‌, ಕಲ್ಪನಾ, ಸುದರ್ಶನ್‌ ಶರ್ಮಾ ಸೇರಿ ಹಲವರಿದ್ದರು.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ