ಕೊರೋನಾ ಸೋಂಕಿತರಿಗೆ ಯೊಗಗುರು ಸಾವಿತ್ರಿ ಅವರಿಂದ ಯೋಗ ತರಬೇತಿ| ಬಳ್ಳಾರಿ ನಗರದ ಸರ್ಕಾರಿ ದಂತ ಕಾಲೇಜಿನ ಕೊರೋನಾ ಸೆಂಟರ್‌ನಲ್ಲಿ ಯೋಗ ತರಬೇತಿ| ಯೋಗಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಮಾನಸಿಕ ನೆಮ್ಮದಿ ನೀಡುವ ಬಹುದೊಡ್ಡ ಶಕ್ತಿ|
ಬಳ್ಳಾರಿ(ಸೆ.14): ಇಲ್ಲಿನ ಸರ್ಕಾರಿ ದಂತ ಕಾಲೇಜಿನ ಕೊರೋನಾ ಸೆಂಟರ್‌ನ ಕೊರೋನಾ ಸೋಂಕಿತರಿಗೆ ಯೊಗಗುರು ಸಾವಿತ್ರಿ ಅವರು ವಿವಿಧ ಯೋಗಾಸನಗಳನ್ನು ಕಲಿಸಿಕೊಡುತ್ತಿದ್ದು, ಸೋಂಕಿತರು ನಿತ್ಯ ಯೋಗ-ಧ್ಯಾನಗಳ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಯೋಗಗುರು ಸಾವಿತ್ರಿ ಅವರಿಗೂ ಸೋಂಕು ಕಾಣಿಸಿಕೊಂಡಿದ್ದು, ದಂತ ಕಾಲೇಜಿನ ಕೊರೋನಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರದಲ್ಲಿರುವ ಸೋಂಕಿತರಿಗೆ ಬೆಳಗ್ಗೆ ಹಾಗೂ ಸಂಜೆ ವೇಳೆ ಯೋಗದ ವಿವಿಧ ಆಸನಗಳನ್ನು ಕಲಿಸಿಕೊಡುವುದರ ಜತೆಗೆ ಯೋಗ-ಧ್ಯಾನಗಳ ಮಹತ್ವ ಕುರಿತು ಸೋಂಕಿತರಿಗೆ ತಿಳಿಸಿಕೊಡುತ್ತಿದ್ದಾರೆ.
ಸಂಡೂರು: ಭಾರೀ ಮಳೆಗೆ ತುಂಬಿದ ನಾರಿಹಳ್ಳ ಜಲಾಶಯ
ಕೊರೋನಾ ಸೆಂಟರ್‌ನಲ್ಲಿ ಸೋಂಕಿತರು ಯೋಗ ಕಲಿಯುತ್ತಿರುವ ವಿಡಿಯೋದ ತುಣಕನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ಜರುಗಿದ ಯೋಗಾಭ್ಯಾಸ ವೇಳೆ ಮಾತನಾಡಿದ ಯೋಗಗುರು ಸಾವಿತ್ರಿ ಅವರು, ಪ್ರಾಣಯಾಮ ನಿತ್ಯ ಮಾಡುವುದರಿಂದ ದೇಹದ ಎಲ್ಲ ಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಪ್ರಾಣಾಯಾಮ ದೇಹಕ್ಕೆ ಬಹಳ ಮುಖ್ಯ. ದೇಹದಂತೆ ಪ್ರಾಣವಾಯು ಸಹ ಪ್ರಮುಖವಾಗುತ್ತದೆ. ಶರೀರವನ್ನು ಹಿಗ್ಗಿಸಬೇಕು. ಬಗ್ಗಿಸಬೇಕು. ಸ್ನಾಯುಗಳನ್ನು ಸರಿಯಾದ ಕ್ರಮದಲ್ಲಿ ಬಗ್ಗಿಸುವುದರಿಂದ ಆರೋಗ್ಯ ಮತ್ತಷ್ಟೂ ವೃದ್ಧಿಯಾಗಲಿದೆ. ಯೋಗಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಾಗೂ ಮಾನಸಿಕ ನೆಮ್ಮದಿ ನೀಡುವ ಬಹುದೊಡ್ಡ ಶಕ್ತಿಯಿದೆ ಎಂದು ತಿಳಿಸಿಕೊಟ್ಟರು. ಕೋವಿಡ್ ವಿಭಾಗದ ನೋಡೆಲ್ ಅಧಿಕಾರಿ ಡಾ. ರಾಘವೇಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಇತರರಿದ್ದರು.