ಯತ್ನಾಳ, ಕಾಶಪ್ಪನವರ ಬಣಜಿಗರ ಕ್ಷಮೆಯಾಚಿಸಬೇಕು; ಬಣಜಿಗ ಸಮುದಾಯ ಒತ್ತಾಯ

By Kannadaprabha NewsFirst Published Oct 30, 2022, 10:44 AM IST
Highlights
  • ಯತ್ನಾಳ, ಕಾಶಪ್ಪನವರ ಸಮುದಾಯದ ಕ್ಷಮೆಯಾಚಿಸಬೇಕು
  • ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆಂಬ ಹಿನ್ನೆಲೆಯಲ್ಲಿ ಬಣಜಿಗ ಸಮುದಾಯದಿಂದ ಒತ್ತಾಯ

ಬೀಳಗಿ (ಅ.30) : ಬಣಜಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಬೀಳಗಿ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದಿಂದ ಬೀಳಗಿ ಪಟ್ಟಣದಲ್ಲಿಂದು ಬೃಹತ್‌ ಪ್ರತಿಭಟನೆ ನಡೆಸಿ, ಇಬ್ಬರ ಪ್ರತಿಕೃತಿ ದಹಿಸಲಾಯಿತು.

ಯತ್ನಾಳ್‌, ಕಾಶಪ್ಪನವರ ವಿರುದ್ಧ ಬೃಹತ್‌ ಪ್ರತಿಭಟನೆ: ಬಣಜಿಗ ಸಮಾಜದ ಮುಖಂಡರು

ಪಟ್ಟಣದ ಶಿವಾಜಿ ವೃತ್ತದಲ್ಲಿ ಸೇರಿದ ಸಮಾಜದ ಜನರು ಕೈಗೆ ಕಪ್ಪು ಬಟ್ಟೆಕಟ್ಟಿಕೊಂಡು ತಹಸೀಲ್ದಾರ ಕಚೇರಿವರೆಗೆ ಪ್ರತಿಭಟನಾ ರಾರ‍ಯಲಿ ನಡೆಸಿ ಯತ್ನಾಳ ಹಾಗೂ ಕಾಶಪ್ಪನವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಈ ಇಬ್ಬರು ಕೂಡಲೇ ಸಮಾಜದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಸುಹಾಸ ಇಂಗಳೆ ಅವರಿಗೆ ಅರ್ಪಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ ಸಭೆ, ಸಮಾರಂಭಗಳಲ್ಲಿ ಬಣಜಿಗ ಸಮಾಜ ಹಾಗೂ ವೃತ್ತಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದು, ಇದು ಖಂಡನೀಯ. ಇವರಿಬ್ಬರು ಆಡುವ ಮಾತುಗಳಿಂದ ಬಣಜಿಗ ಹಾಗೂ ಪಂಚಮಸಾಲಿ ಸಮಾಜದ ಮಧ್ಯೆ ಬಿರುಕು ಉಂಟಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಇದು ಹೀಗೆ ಮುಂದುವರೆದರೆ ಎರಡೂ ಸಮಾಜದ ನಡುವೆ ಕಂದಕ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ತಮ್ಮ ಬಾಯಿಗೆ ಕಡಿವಾಣ ಹಾಕಿಕೊಂಡು ತೆಪ್ಪಗೆ ಇರಬೇಕು. ಒಂದು ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ನಿಂದನೆ ಮಾಡಿರುವ ಆರೋಪದ ಮೇಲೆ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರತಿಭಟನಾಕಾರನ್ನು ಉದ್ದೇಶಿಸಿ ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ಶಿವಾನಂದ ನಿಂಗನೂರ, ಗೌರವಾಧ್ಯಕ್ಷ ಬಸವರಾಜ ಖೋತ, ಮುಖಂಡರಾದ ವೀರೇಂದ್ರ ಶೀಲವಂತ, ರವಿ ಕುಮಟಗಿ, ಆನಂದ ಜಿಗಜಿನ್ನಿ, ಜಿ.ಡಿ.ಅಂಗಡಿ, ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ಯತ್ನಾಳ ಹಾಗೂ ಕಾಶಪ್ಪನವರ ವಿರುದ್ಧ ಹರಿಹಾಯ್ದು ಒಂದು ಸಮಾಜದ ಕುರಿತು ನಿಂದನೆ ಮಾಡುವುದು ಸರಿಯಲ್ಲ. ಅದಕ್ಕಾಗಿ ಇಬ್ಬರು ಕೂಡಲೇ ಬಣಜಿಗ ಸಮಾಜದ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕ್ಷಮಾಪಣೆ ಕೇಳುವವರೆಗೂ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಅಧಿಕಾರ, ಹಣದ ಮದದಿಂದ ಹೊರಬಂದು ಬೇಷರತ್‌ ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಇವರಿಬ್ಬರನ್ನು ಸೋಲಿಸುವುದಾಗಿ ಹೇಳಿ, ಸೌಹಾರ್ದತೆಗೆ ಹೆಸರಾದ ಬಣಜಿಗ ಸಮಾಜದ 7 ಜನರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲ ಸಮಾಜದೊಂದಿಗೆ ಬೆರೆಯುವ ಗುಣ ಬಣಜಿಗ ಸಮಾಜಕ್ಕೆ ಇದೆ ಎಂದರು.

2ಎ ಮೀಸಲಾತಿ ಹೋರಾಟದಲ್ಲಿ ಭಾಗವಹಿಸಿ, ಶಕ್ತಿ ತುಂಬಿ: ಕಾಶಪ್ಪನವರ

ಈ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಿದ್ದು ಬಾಗಶೆಟ್ಟಿ, ಮುಖಂಡರಾದ ನಾಗರಾಜ ಹದ್ಲಿ, ಮುತ್ತು ಜೋಳದ, ಗುರುಬಸಪ್ಪ ನಾಗರಾಳ, ಶ್ರೀಶೈಲಪ್ಪ ಜತ್ತಿ, ಎಸ್‌.ಎಂ.ಕಟಗೇರಿ, ಪ್ರಭು ಇಂಡಿ, ರಾಚಣ್ಣ ಗೋಳಿಪಲ್ಲೆ, ಮುತ್ತಣ್ಣ ಅಂಗಡಿ, ಹೊಳಬಸು ಬಾಳಶೆಟ್ಟಿ, ಸಂತೋಷ ಶೀಲವಂತ, ಆನಂದ ಇಂಗಳಗಾವಿ, ಬಸವರಾಜ ಮಂಟೂರ, ಈರಪ್ಪ ಕಟ್ಟೆಪ್ಪನವರ, ಮಂಜುನಾಥ ಅಂಗಡಿ, ಅಂಬರೀಶ ಬೆಳವಲ, ಸುಭಾಷ ಸವದಿ, ಸಂತೋಷ ಕೋಲಾರ, ಶಂಕರ ಖೋತ, ವಿಠ್ಠಲ ಅಂಗಡಿ ಸೇರಿದಂತೆ ಸಮುದಾಯದ ನೂರಾರು ಜನ ಭಾಗವಹಿಸಿದ್ದರು. ಪಿಎಸ್‌ಐ ಸಿಮಾನಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್‌್ತ ಏರ್ಪಡಿಸಿದ್ದರು.

click me!