ಯಕ್ಷಭೀಷ್ಮ ಹೊಸ್ತೋಟ ಮಂಜುನಾಥ ಭಾಗವತ ಅಸ್ತಂಗತ| ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ| ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಚೇತನ| ಮಂದಾರ್ತಿ ಮೇಳದ ಭಾಗವತರಾಗಿ ಪ್ರಸಿದ್ಧರಾಗಿದ್ದ ಸುಬ್ರಹ್ಮಣ್ಯ ಆಚಾರ್ ಆತ್ಮಹತ್ಯೆ
ಶಿರಸಿ| ಮಂಗಳೂರು(ಜ. 07) ಮಂಗಳವಾರ ಯಕ್ಷಗಾನ ಕ್ಷೇತ್ರಕ್ಕೆ ಡಬಲ್ ಆಘಾತ.ಯಕ್ಷಗಾನದ ಭೀಷ್ಮ ಎಂದೇ ಪರಿಚಿತರಾಗಿದ್ದ ಹೊಸ್ತೋಟ ಮಂಜುನಾಥ ಭಾಗವತರು ಅಸ್ತಂಗತರಾಗಿದ್ದಾರೆ. ಇನ್ನೊಂದು ಕಡೆ ಮಂದಾರ್ತಿ ಮೇಳದ ಭಾಗವತ ರಾಗಿ ಪ್ರಸಿದ್ಧರಾಗಿದ್ದ ಸುಬ್ರಹ್ಮಣ್ಯ ಆಚಾರ್ ಮಂಗಳೂರಿನ ಕುಲಶೇಖರದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಕ್ಷಗಾನಕ್ಕಾಗಿ ಇಡೀ ಬದುಕನ್ನೇ ಸಮರ್ಪಿಸಿದ ಯಕ್ಷಗಾನದ ಪರಿವ್ರಾಜಕ, ಯಕ್ಷಭೀಷ್ಮ, ಯಕ್ಷಋಷಿ, ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತರು (80) ಮಂಗಳವಾರ ನಿಧನರಾಗಿದ್ದು, ಯಕ್ಷ ಲೋಕ ದಿಗ್ಗಜನೋರ್ವರನ್ನು ಕಳೆದುಕೊಂಡಂತಾಗಿದೆ. ಕೆಲ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಆಸ್ಪತ್ರೆಯಲ್ಲಿದ್ದರು. 15 ದಿನಗಳಿಂದ ಸಂಪೂರ್ಣ ಹಾಸಿಗೆ ಹಿಡಿದಿದ್ದ ಅವರಿಗೆ ಅಭಿಮಾನಿಗಳು ಆರೈಕೆ ಮಾಡುತ್ತಿದ್ದರು.
undefined
ಬಾಲ್ಯದ ಜೀವನ: ತಾಲೂಕಿನ ಹನುಮಂತಿ ಗ್ರಾಮದ ಹೊಸ್ತೋಟದಲ್ಲಿ ಭಾಗವತರು 1940ರಲ್ಲಿ ಜನಿಸಿದವರು. ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಅತೀವ ಆಸಕ್ತಿ ಹೊಂದಿದವರಾಗಿದ್ದರು. ಅವರ ಇಷ್ಟದ ಕಲಾವಿದರಾಗಿದ್ದ ಕೆರೆಮನೆ ಶಿವರಾಮ ಹೆಗಡೆ ಅವರ ಬಳಿ ಯಕ್ಷಗಾನದ ಸರ್ವಾಂಗೀಣ ಶಿಕ್ಷಣ ಪಡೆದ ನಂತರ, ಕೆರೆಮನೆ ಮೇಳದಲ್ಲಿ ಕಲಾವಿದರಾಗಿ ಪಾತ್ರ ನಿರ್ವಹಿಸಿದರು. ಬಾಳೆಹದ್ದ ಕೃಷ್ಣ ಭಾಗವತ ಹಾಗೂ ಕೆರಮನೆ ಮಹಾಬಲ ಹೆಗಡೆ ಶಿಷ್ಯನಾಗಿ ಯಕ್ಷಗಾನದ ಕಲಿಕೆಯ ಪಂಚಾಂಗವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡರು. ಯಕ್ಷಗಾನದ ಭಾಗವತಿಕೆ, ನೃತ್ಯ, ಚಂಡೆ, ಮದ್ದಲೆ ವಾದನ, ವೇಷಗಾರಿಕೆ, ಅರ್ಥಗಾರಿಕೆ ಹೀಗೆ ಎಲ್ಲ ವಿಭಾಗಗಳಲ್ಲೂ ತಜ್ಞತೆ ಹೊಂದಿದ್ದರು.
ಯಕ್ಷಗಾನ ಪ್ರಸಂಗಗಳು: ರಾಮ ನಿರ್ಯಾಣ, ಶ್ರೀರಾಮ ಮಹಿಮೆ (19 ಆಖ್ಯಾನಗಳು), ಶ್ರೀಕೃಷ್ಣ ಮಹಿಮೆ (21 ಆಖ್ಯಾನಗಳು), ಮಹಾಭಾರತ (50 ಆಖ್ಯಾನಗಳು), ಹನುಮಾಯಣ (28 ಆಖ್ಯಾನಗಳು), ಗೋಮಹಿಮೆ (33 ಆಖ್ಯಾನಗಳು), ರಾಮಕೃಷ್ಣ ಚರಿತೆ (27ಆಖ್ಯಾನಗಳು), ಭಾಸವತಿ, ಮೇಘದೂತ, ಉತ್ತರರಾಮ ಚರಿತೆ, ಪ್ರತಿಜ್ಞಾಯೌಗಂಧರಾಯಣ, ಚಂಡ ಮಹಾಸೇನ, ಸುಹಾಸಿನಿ ಪರಿಣಯ ಮೊದಲಾದ 300ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ ಮೇರು ವ್ಯಕ್ತಿತ್ವ ಅವರದು.
ಸಂಶೋಧನೆ ಮತ್ತು ಇತರೆ ಕೃತಿಗಳು: ಸಂಪಾಜೆ ಯಕ್ಷಗಾನ ಸಮ್ಮೇಳನದ ಅದ್ಯಕ್ಷತೆಯ ಭಾಷಣ, ಶಿವರಾಮ ಕಾರಂತ ಪ್ರತಿಷ್ಠಾನದಲ್ಲಿ ವಿಚಾರ ಪೂರ್ಣ ಪ್ರಬಂಧಮಂಡನೆ, ಮೂಡಲಪಾಯ ಯಕ್ಷಗಾನದ ವರದಿ ಮಂಡನೆ (ಬಿದಿರೇಹಳ್ಳಿ-ತುಮಕೂರುಜಿಲ್ಲೆ), ತಾಳೆಗರಿಯಲ್ಲಿನ ‘ಯಕ್ಷಗಾನ ಪ್ರಸಂಗಗಳ ಅಧ್ಯಯನ’ ಮತ್ತು ಅದರ ಪ್ರಕಟಣೆ (ಕೆಳದಿ ವಸ್ತು ಸಂಗ್ರಹಾಲಯ), ‘ರಾಮಕೃಷ್ಣ ಚರಿತೆ’, ಮಹಾಕಾವ್ಯದ ಭಾವಾನುವಾದ (ರಾಮಕೃಷ್ಣಾಶ್ರಮ ಮೈಸೂರು), ‘ಒಡಲಿನ ಮಡಿಲು-ಯಕ್ಷತಾರೆ’ (ಬಯಲಾಟದ ನೆನಪುಗಳು) (ಅನೇಕ ಟ್ರಸ್ಟ್ ಬೆಂಗಳೂರು.), ‘ಪವಾಡವಲ್ಲ ವಿಸ್ಮಯ’, (ಅಪೂರ್ವ ಅನುಭವಗಳು- ಅನೇಕ ಟ್ರಸ್ಟ್ ಬೆಂಗಳೂರು.), ಯಕ್ಷಗಾನ ಲಕ್ಷಣ ಹೀಗೆ ಹಲವರು ಕೃತಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಸಂದರ್ಶನಗಳು ಪ್ರಕಟಗೊಂಡಿವೆ.
‘ಯಕ್ಷಗುರು’, ಯಕ್ಷಭೀಷ್ಮ, ಯಕ್ಷ ಋಷಿ ಮುಂತಾಗಿ ಗುರುತಿಸಲ್ಪಟ್ಟ ಇವರು ಹಲವು ವರ್ಷಗಳ ಕಾಲ ಶಿರಸಿ ತಾಲೂಕಿನ ಕೋಳಿಗಾರ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಹೊಸ್ತೋಟ ಭಾಗವತರ ಮಾರ್ಗದರ್ಶನದಲ್ಲಿ ಯಕ್ಷಗಾನ ಸಪ್ತಾಹ ನಡೆದಿದೆ. ಶ್ರೀ ಲಕ್ಷ್ಮೀನರಸಿಂಹ ಪ್ರಸಾದಿತ ಯಕ್ಷಗಾನ ಮಂಡಳಿ ಸೋಂದಾ, ಸಮಯ ಸಮೂಹ ಶಿರಸಿ, ವನಶ್ರೀ ಶಿಕ್ಷಣ ಸಂಸ್ಥೆ ಸಾಗರ, ಯಕ್ಷಕೂಟ ಮೈಸೂರು ಮೊದಲಾದ ಯಕ್ಷಗಾನ ಮಂಡಳಿಗಳಿಗೆ ನಿರ್ದೇಶನ ಮಾಡಿದ್ದಾರೆ. ಯಕ್ಷಗಾನ ಸಮ್ಮೇಳನಗಳ ಅಧ್ಯಕ್ಷತೆ, ವಿದ್ವತ್‌ಪೂರ್ಣ ಪ್ರಬಂಧ ಮಂಡನೆ ಮೂಲಕ ಸಭಿಕರಲ್ಲಿ ಯಕ್ಷಗಾನದ ಬಗ್ಗೆ ಹೊಸ ಹೊಳಹು ಮೂಡಿಸಲು ಭಾಗವತರು ಕಾರಣರಾದವರು. ಸಹಸ್ರಾರು ತಾಳಮದ್ದಲೆಗಳಲ್ಲಿ ಅರ್ಥಧಾರಿಯಾಗಿ ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾದವರು ಭಾಗವತರು.
ಮಂಜುನಾಥ ಭಾಗವತರ ಸಾಧನೆಯನ್ನು ಗುರುತಿಸಿ ನಾಡಿನೆಲ್ಲೆಡೆ ಅನೇಕ ಸಮ್ಮಾನಗಳು ನಡೆದಿವೆ. ಅವುಗಳಲ್ಲಿ ಮುಖ್ಯವಾದವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1987, ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ 2012, ಜಾನಪದ ಅಕಾಡೆಮಿಯ ವಿಶೇಷ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಬ್ರಹ್ಮಾವರದ ಹಾರಾಡಿ ರಾಮ ಗಾಣಿಗ-ವೀರಭದ್ರನಾಯಕ ಪ್ರಶಸ್ತಿ, ಆಳ್ವಾಸ್ ನುಡಿ ಪುರಸ್ಕಾರ (ಮೂಡುಬಿದರೆ), 2016 ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ. ಸಾಕೇತ ಟ್ರಸ್ಟ್ ಹೆಗ್ಗೋಡು ಇವರಿಗೆ 60ವರ್ಷ ತುಂಬಿದಾಗ ‘ಷಷ್ಯ್ಠಬ್ಧಿ’ -ಜೀವನ ಕೃತಿ ವಿಮರ್ಶೆ 1999 ಪ್ರಕಟಿಸಿದೆ. ಸ್ವರ್ಣವಲ್ಲಿ ಮಠದ ಯಕ್ಷ ಶಾಲ್ಮಲಾ ‘ಯಕ್ಷಋಷಿ’ ಕೃತಿಗಳನ್ನು ಪ್ರಕಟಿಸಿವೆ.
ಸುಮಾರು 75 ಸ್ಥಳಗಳಲ್ಲಿ ಯಕ್ಷಗಾನ ತರಬೇತಿ ಕೇಂದ್ರಗಳನ್ನು ನಡೆಸಿ, 1600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. 1990ರಲ್ಲಿ ಶಿವಮೊಗ್ಗದ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಅಂಧ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ದಾಖಲೆ ಬರೆದವರು ಹೊಸ್ತೋಟ ಭಾಗವತರು. ಈ ಶಾಲೆಯ ಮಕ್ಕಳು ‘ಕಂಸವಧೆ’ ಪ್ರಸಂಗವನ್ನು 200ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರದರ್ಶಿಸಿದ್ದರು.
ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಲು ‘ಗೋವರ್ಧನ ಗಿರಿ ಪೂಜೆ’, ‘ನಿಸರ್ಗ ಸಂಧಾನ’ ಹಾಗೂ ‘ಪ್ರಕೃತಿ ಸಂಧಾನ’ ಪ್ರಸಂಗಗಳನ್ನು ರಚಿಸಿದ್ದರು. ಈ ಆಖ್ಯಾನಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ 200ಕ್ಕೂ ಹೆಚ್ಚು ಕಡೆ ಪ್ರದರ್ಶನಗೊಂಡಿವೆ. ವೀರಶೈವ ಸಿದ್ಧಾಂತ ಕುರಿತು ‘ಮಾಯಾ ಕೋಲಾಹಲ’, ‘ಪ್ರಭುಲಿಂಗ ಲೀಲೆ’ ಹಾಗೂ ‘ಬಸವೇಶ್ವರ ಚರಿತೆ’ ಇಂತಹ ವಿಭಿನ್ನ ಪ್ರಸಂಗಗಳನ್ನು ಅವರು ರಚಿಸಿದ್ದರು. ಇವು ಆಕಾಶವಾಣಿಯಲ್ಲಿ ಬಿತ್ತರಗೊಂಡಿವೆ.
ಮೇರು ಕಲಾವಿದ: ನಗರ ಸುಬ್ರಹ್ಮಣ್ಯ ಅಚಾರ್ ಮರೆ:
ಆತ್ರಾಡಿ ಪೃಥ್ವಿರಾಜ ಹೆಗ್ಡೆ ( ನ್ಯಾಯಾವಾದಿ & ನೋಟರಿ ಉಡುಪಿ)
2000-01ರಲ್ಲಿ ನಾನು ಉಡುಪಿಯ ಯಕ್ಷಗಾನ ಕೇಂದ್ರಕ್ಕೆ ಭೇಟಿಕೊಡುತ್ತಿದ್ದ ಸಮಯ ನಗರ ಸುಬ್ರಹ್ಮಣ್ಯ ಅಚಾರ್ ಅವರ ಪರಿಚಯವಾಯ್ತು. ಅಲ್ಲಿ ಅವರು ಯಕ್ಷಗಾನ ಗುರುವಾಗಿ ಸೇವೆ ಸಲ್ಲಿಸುತ್ತಿದ್ದರು. ನೆಲ್ಲೂರು ಮರಿಯಪ್ಪ ಆಚಾರ್ ರವರ ಭಾಗವತಿಕೆಯ ಶೈಲಿ ಹಾಗೂ ಕಂಠ ಅವರಲ್ಲಿತ್ತು. ಅವರ ಕಂಠ ಸಿರಿಗೆ ಮನಸೋತ ನಾನು ಅವರನ್ನು ಮನೆಗೂ ಕರೆಸಿಕೊಂಡು ಹಾಡು ಹಾಡಿಸಿ ಖುಷಿಪಟ್ಟಿದ್ದೆ. ಆಮೇಲೆ ನಮ್ಮ ನಡುವಿನ ಸ್ನೇಹ ಸ್ಥಿರವಾಗಿ ಅವರು ‘ನಡುಮನೆಯಲ್ಲಿ ಯಕ್ಷಗಾನ’ವೆಂಬ ಹೊಸ ಕಲಾ ಪ್ರಯೋಗ ಮಾಡಿದಾಗ ಅಗಾಗ್ಗೆ ನಮ್ಮ ಮನೆಗೆ ಬಂದು ನನ್ನನ್ನು ಆಹ್ವಾನಿಸುತ್ತಿದ್ದರು.
ನಾನು ಅವರ ನಡುಮನೆ ಕಾರ್ಯಕ್ರಮಕ್ಕೆ ಹೋದಾಗಲೆಲ್ಲಾ ಮೈಕವನ್ನು ನನ್ನ ಕೈಗೆ ಕೊಟ್ಟು ಅವರ ಕಲಾಸೇವೆಯ ಬಗ್ಗೆ ಹಾಗೂ ನಡುಮನೆಯೆಂಬ ಹೊಸ ಪ್ರಯೋಗದ ಬಗ್ಗೆ ನಾಲ್ಕು ಮಾತನಾಡುವುದಕ್ಕೆ ಹೇಳುತ್ತಿದ್ದುದಲ್ಲದೇ ಒಂದೆರಡು ಪದ್ಯ ಹಾಡುವುದಕ್ಕೂ ಒತ್ತಾಯಿಸುತ್ತಿದ್ದರು. ಶ್ರೀ ಮಂದಾರ್ತಿ ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸುವ ಸೌಭಾಗ್ಯ ದೊರೆತಾಗ ಉಡುಪಿಯ ಹತ್ತಿರದಲ್ಲಿ ಆಟ ಇದ್ದಾಗಲೆಲ್ಲಾ ನನಗೆ ಖುದ್ದು ಫೋನಾಯಿಸಿ ನನ್ನನ್ನು ಬರಹೇಳುತ್ತಿದ್ದರು.
29-09-2019ರಂದು ಮುಂಜಾನೆ ನಮ್ಮ ಮನೆಗೆ ಬಂದು ಅದೇ ದಿನ ಹಿರಿಯಡ್ಕ ಸಮೀಪ ನಡುಮನೆ ಯಕ್ಷಗಾನವಿದೆಯೆಂದು ನನ್ನನ್ನು ಬರಬೇಕೆಂದು ಕೋರಿಕೊಂಡು ನನ್ನಿಂದ ನಾಲ್ಕು ಮಾತಾಡಿಸಿದ್ದಲ್ಲದೇ ಕಾರ್ಯಕ್ರಮದ ಕೊನೆಯಲ್ಲಿ ನನ್ನಿಂದ ಮಂಗಳ ಹಾಡಿಸಿ ಖುಷಿಪಟ್ಟಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ, ಯಾರೋ ಅವರಿಗೆ ಕೊಟ್ಟಿದ್ದ ಹಾರ್ಮೋನಿಯಂ ಪೆಟ್ಟಿಗೆಯನ್ನು, ನನಗೆ ನೀಡಿ ನಿತ್ಯ ಮನೆಯಲ್ಲಿ ಭಾಗವತಿಗೆ ಅಭ್ಯಾಸ ಮಾಡಿ ಅಂತ ಶುಭ ಹಾರೈಸಿದ್ದರು.
ಉಡುಪಿಯಲ್ಲಿ ಕೆಲವೊಂದು ಯುವಕರನ್ನು ಒಟ್ಟು ಸೇರಿಸಿಕೊಂಡು ಒಂದಷ್ಟು ಕಾಲ ಭಾಗವತಿಕೆಯ ತರಬೇತಿ ತರಗತಿಗಳನ್ನು ನಡೆಸಿದ್ದರು. ಆ ಸಮಯದಲ್ಲಿ ನನಗೆ ಗರುವಾಗಿ ಭಾಗವತಿಕೆಯ ಪಾಠ ಹೇಳಿಕೊಟ್ಟಿದ್ದರು. 2012-13ನೇ ಸಾಲಿನಲ್ಲಿ ನಾನು ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯ ದಶಮಾನೋತ್ಸವ ವರ್ಷದ ಅಧ್ಯಕ್ಷನಾಗಿದ್ದ ಸಮಯ ವೇದಿಕೆಯಲ್ಲಿ ಅವರ ಭಾಗವತಿಕೆಯ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದರು. ಯಕ್ಷಗಾನ ಕಲಾ ಲೋಕದ ಉದಯೋನ್ಮುಖ ಕಲಾವಿದರಾಗಿ ಮೂಡಿ ಬಂದ ನಗರರವರು ಸಾವಿರ ಸಾವಿರ ಅಭಿಮಾನಿಗಳ ಸಂಪಾದನೆ ಮಾಡಿದ್ದಾರೆ.
ಭಾಗವತಿಕೆಯಲ್ಲಿ ತನ್ನದೇ ಶೈಲಿಯನ್ನು ತನ್ನ ಕಂಠದಲ್ಲಿ ಹೊರಹೊಮ್ಮಿಸುತ್ತಿದ್ದರು. ಒಬ್ಬ ಮೇರು ಕಲಾವಿದನಾಗಿ ಹೆಸರು ಮಾಡುವ, ಅದೆಷ್ಟೋ ಸನ್ಮಾನ ಪ್ರಶಸ್ತಿಗಳಿಗೆ ಭಾಜನರಾಗುವ ಸೌಭಾಗ್ಯ ಖಂಡಿತವಾಗಿಯೂ ಅವರಿಗಿತ್ತು. ಆದರೆ ಅದ್ಯಾವುದೂ ತನಗೆ ಬೇಡವೆಂದು ಸಾವಿಗೆ ಶರಣಾಗಿದ್ದು ನನ್ನ ದೌರ್ಭಾಗ್ಯ ಎನ್ನುವುದಕ್ಕಿಂತಲೂ ಯಕ್ಷಗಾನ ಕಲಾಲೋಕದ ದೌರ್ಭಾಗ್ಯವೆನ್ನುವುದೇ ಸೂಕ್ತ ಅನ್ನಿಸುತ್ತಿದೆ.
ಇಂದು ಅಪರಾಹ್ನ ಅವರ ಸಾವಿನ ಸುದ್ದಿ ಕೇಳಿದಾಗ ಒಂದು ಕ್ಷಣ ನಂಬಲಿಕ್ಕೇ ಅಗಲಿಲ್ಲ. ಅದ್ಯಾಕೆ ಮೃತ್ಯು ಅವರನ್ನು ಕಾಡಿತೋ ಪರಮಾತ್ಮನೇ ಬಲ್ಲ. ಹಲವಾರು ಸಂದೇಹಗಳನ್ನು ಮನಸ್ಸಿನಲ್ಲಿ ಬಿತ್ತಿ ನಮ್ಮಿಂದ ದೂರವಾಗಿದ್ದಾರೆ ನಗರ ಸುಬ್ರಹ್ಮಣ್ಯ ಆಚಾರ್. ಯಕ್ಷಗಾನ ಲೋಕವೇ ನಿಬ್ಬೆರಗಾಗಿ ಕಣ್ಣುಬಿಡುವ ಸನ್ನಿವೇಶ ನಿರ್ಮಾಣಮಾಡಿ ಇಹಲೋಕ ತ್ಯಜಿಸಿದ್ದಾರೆ. ಅವರು ಇನ್ನಷ್ಟು ಕಾಲ ಕಲಾಸೇವೆ ಮಾಡಬೇಕಿತ್ತು, ಅವರ ಕಂಠ ಸಿರಿಯನ್ನು ಸವಿಯುವ ಯೋಗಭಾಗ್ಯ ನಮಗೆ ಇನ್ನಷ್ಟು ಕಾಲ ಸಿಗಬೇಕಿತ್ತು ಎಂಬ ಕೊರಗು ಅವರ ಅಭಿಮಾನಿಗಳೆಲ್ಲರನ್ನೂ ಕಾಡಿಯೇ ಕಾಡುತ್ತದೆ. ಅವರ ದಿವ್ಯ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಿಲಿ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಕುಟುಂಬಿಕರಿಗೆ ಶ್ರೀದೇವರು ಅನುಗ್ರಹಿಸಲಿ ಅಂತ ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇನೆ. ನಮೋ ನಮಃ