ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ ಪ್ರವಾಹದ ಅಪಾಯ ತಪ್ಪುತ್ತಿತ್ತು!

By Kannadaprabha NewsFirst Published Aug 11, 2019, 10:56 AM IST
Highlights

ಮಳೆ ಚಚ್ಚುತ್ತಿದೆ, ಬದುಕು ಕೊಚ್ಚಿಹೋಗುತ್ತಿದೆ. ನೆಲಮುಗಿಲು ಒಂದಾದಂತೆ ಕುಂಭದ್ರೋಣ ಮಳೆ ಮುಸಲಧಾರೆಯಾಗುತ್ತಿದೆ. ಇಂಥ ಮಳೆಯನ್ನು ನಾವು ನೋಡೇ ಇಲ್ಲ ಅನ್ನುತ್ತಾರೆ ಹಿರಿಯರು. ಕುಸಿದ ಮನೆಗಳು, ಜರಿದ ಗುಡ್ಡಗಳು, ಮುಳುಗಿದ ತೋಟಗಳು, ನೆಲವೆಲ್ಲ ಸಪಾಟಾದಂತೆ ಎಲ್ಲೆಲ್ಲೂ ಬರೀ ಕೆಂಪು ಕೆಂಪು ನೀರು. ಮಳೆಯ ವಿರುದ್ಧ ಈಜಲು ಹೊರಟ ನೆಲದ ತೋಳು ಕುಸಿದಿದೆ. ಇಂಥ ಜಲಪ್ರಳಯದ ಹೊತ್ತಲ್ಲೂ ಮತ್ತೊಬ್ಬರಿಗೆ ನೆರವಾಗುತ್ತಾ, ಮಳೆಯನ್ನೂ ಲೆಕ್ಕಿಸದೇ ಜೀವನ್ಮರಣದ ನಡುವೆ ಹೋರಾಡುತ್ತಾ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಜಾನುವಾರುಗಳನ್ನು ರಕ್ಷಿಸುತ್ತಾ, ಮಳೆಯಲ್ಲಿ ನಡುಗುವ ಮಕ್ಕಳ ನೆತ್ತಿಯೊರೆಸುತ್ತಾ ಮಾತೃರೂಪಿ ಕೈಯೊಂದು ಎಲ್ಲವನ್ನೂ ಸಲಹುತ್ತಿದೆ. ಒದ್ದೆಯಾಗಿರುವುದು ಬರೀ ನೆಲವಷ್ಟೇ ಅಲ್ಲ, ಕಣ್ಣು ಕೂಡ. ಇಂಥ ಹೊತ್ತಲ್ಲಿ ಮಳೆಯನ್ನು ಎದುರಿಸಿ ನಿಂತು ಹಲ್ಲುಕಚ್ಚಿಹಿಡಿದು ಕಾಯುತ್ತಿರುವ ಎಲ್ಲರಿಗೂ ನಮನಗಳನ್ನು ಸಲ್ಲಿಸುತ್ತಾ ಈ ಮಳೆ ಸಂಚಿಕೆಯ ಮೂಲಕ ಕೃತಜ್ಞತೆ ಸಲ್ಲಿಸುತ್ತಿದೆ ಸಾಪ್ತಾಹಿಕ ಪ್ರಭ

ನಾಗೇಶ್ ಹೆಗಡೆ

ನೆರೆಯೂ ಸೇರಿ ಪ್ರಕೃತಿ ವಿಕೋಪಗಳು ಹೇಳಿಯೇ ಬರಬೇಕಿಲ್ಲ. ಅದರಲ್ಲೂ ಈಗಿನ ಪ್ರಕೃತಿಯ ಮುನಿಸುಗಳು ನಾವೇ ಮಾಡಿಕೊಂಡ ಅನಾಹುತಗಳು. ಅರಣ್ಯನಾಶದ ಪರಿಣಾಮ ಸಣ್ಣ ಪುಟ್ಟ ಮಳೆಗೂ ಇವತ್ತು ನೆರೆ ಬರುವುದು ಸಹಜವೇ ಆಗಿದೆ. ಆದರೆ ಅದು ಸೃಷ್ಟಿಸುವ ಅನಾಹುತಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ಅಂತಹದರಲ್ಲಿ ಧಾರಾಕಾರವಾಗಿ ಸುರಿಯುವ ಮಳೆ, ಅದರಿಂದಾಗಿ ತುಂಬಿ ಹರಿಯುವ ಕರೆ-ಕಟ್ಟೆ, ಹಳ್ಳ-ಕೊಳ್ಳಗಳು, ನದಿ-ತೊರೆಗಳ ಪ್ರವಾಹದ ಪರಿಣಾಮ ಹೇಗಿರಬಲ್ಲದು ಎನ್ನುವುದೀಗ ಉತ್ತರ ಕರ್ನಾಟಕದಲ್ಲಿ ಕಾಣುತ್ತಿದೆ. ಬೆಳಗಾವಿ ಜಿಲ್ಲೆ ಸೇರಿ ಉತ್ತರ ಕರ್ನಾಟಕದ ಸಾಕಷ್ಟು ಜಿಲ್ಲೆಗಳು ಈಗ ಪ್ರವಾಹಕ್ಕೆ ಸಿಲುಕಿವೆ. ಮೇಲ್ನೋಟಕ್ಕೆ ಇದು ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ, ಘಟಪ್ರಭ, ಮಲಪ್ರಭ ನದಿಗಳ ನೀರಿನಿಂದ ಆಗಿರುವ ಪ್ರವಾಹ ಎಂದೇ ಕಾಣುತ್ತಿದೆ. ಅದರಲ್ಲಿ ಮಳೆಯ ಪ್ರಮಾಣವೂ ಇದೆ. ಆದರೆ, ಇದನ್ನು ಸರಿಯಾಗಿ ನಿಭಾಯಿಸಲು ಆ ಭಾಗದ ರೈತರು ಮತ್ತು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದರೆ ಈ ಪ್ರಮಾಣದ ಅನಾಹುತ ಆಗುತ್ತಿರಲಿಲ್ಲ.

ಎಲ್ಲಿ ಹೋಗಬೇಕಾದರೂ ದೋಣಿಯಲ್ಲೇ ಹೋಗಬೇಕು!

ಉದಾಹರಣೆಗೆ ಹೇಳುವುದಾದರೆ ಪಕ್ಕದ ಮಹಾರಾಷ್ಟ್ರದಲ್ಲಿ ಆ ಕೆಲಸ ಆಗಿದೆ. ಮಳೆ ನೀರು ಸಂಗ್ರಹ ಮತ್ತು ಪ್ರವಾಹ ತಡೆಗೆ ಅಲ್ಲಿ ಚೆಕ್ ಡ್ಯಾಂ ಮತ್ತು ಮಳೆ ನೀರು ಇಂಗು ಗುಂಡಿಗಳನ್ನು ವ್ಯಾಪಕವಾಗಿ ನಿರ್ಮಿಸಲಾಗಿದೆ. ಇದೆಲ್ಲದರಿಂದ ಭಾರೀ ಪ್ರಮಾಣದ ಪ್ರವಾಹ ತಡೆಗಟ್ಟಲು ಅಸಾಧ್ಯ ಎನಿಸಿದರೂ, ಆರಂಭಿಕ ಹಂತದಲ್ಲಿ ನೀರು ಹರಿದು ಹೋಗುವುದನ್ನು ನಿಲ್ಲಿಸುತ್ತದೆ. ಇದರಿಂದ ಅಂತರ್ಜಲ ಹೆಚ್ಚುತ್ತದೆ. ಜತೆಗೆ ಹರಿಯುವ ನೀರಿನ ಪ್ರಮಾಣವೂ ಕಡಿಮ  ಆಗುತ್ತದೆ. ಇಂತಹ ಮುನ್ನೆಚ್ಚರಿಕೆ ಕ್ರಮಗಳು ಇಲ್ಲಿ ಆಗಿಲ್ಲ ಎನ್ನುವುದು ಬೇಸರ. ಕೊನೆ ಪಕ್ಷ ಮಳೆ ನೀರು ಸಂಗ್ರಹದಂತಹ ಕಾರ್ಯಕ್ರಮಗಳು ಅಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ. ಸರ್ಕಾರಕ್ಕೂ ಅಂತಹ ಇಂತಹ ಇಚ್ಛಾಶಕ್ತಿ ಇರಲಿಲ್ಲ. ಈಗ ಪ್ರವಾಹ ನೋಡಿ, ಕಣ್ಣೀರು
ಸುರಿಸುವಂತಾಗಿದೆ. ಬೆಂಕಿ ಬಿದ್ದಾಗ ಬಾವಿ ತೋಡುವ ಮನಸ್ಥಿತಿ ಬದಲಾಗದಿದ್ದರೆ, ಪ್ರಕೃತಿ ವಿಕೋಪಗಳಿಗೆ ನಾವು ತಲೆಬಾಗಲೇ ಬೇಕಾಗುವುದು ಅನಿವಾರ್ಯ.

ಮೇಲಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬರುತ್ತಿರುವುದು ಇದೇ ಮೊದಲಲ್ಲ. 12 ವರ್ಷಗಳ ಹಿಂದೆಯೂ ಉತ್ತರ ಕರ್ನಾಟಕದ ಬಹುಭಾಗ ಇದೇ ರೀತಿ ಮುಳುಗಡೆ ಆಗಿ ಸಾಕಷ್ಟು ಅನಾಹುತ ಕಂಡಿತ್ತು. ಅನಂತರದ ದಿನಗಳಲ್ಲಿ ನಾನು ಒಮ್ಮೆ ಉತ್ತರ ಕರ್ನಾಟಕದ ಮಠಾಧೀಶರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರು ಬೋರ್‌ವೆಲ್ ನೀರನ್ನು ಕುಡಿಯಲು ತರಿಸಿದ್ದರು. ಆಗ ಅವರೊಂದಿಗೆ ಚರ್ಚಿಸುತ್ತಾ, ಮಳೆ ನೀರು ಸಂಗ್ರಹವನ್ನೇ ನೀವು ಪ್ರಧಾನವಾಗಿ ತೆಗೆದುಕೊಂಡರೆ ಈ ಬೋರ್‌ವೆಲ್ ನೀರು ಅಗತ್ಯ ಇರೋದಿಲ್ಲ ಅಂತ ಹೇಳಿದ್ದೆ. ಈ ಕೆಲಸ ಸರ್ಕಾರಗಳಿಂದ ಆಗಬೇಕು. ಜನರಲ್ಲಿ ಮಳೆ ನೀರು ಹರಿದು ಹೋಗದಂತೆ ತಡೆಯಲು ತಮ್ಮ ಜಮೀನುಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವಂತೆ ಪ್ರೇರೇಪಣೆ ಮಾಡಬೇಕು. ಸರ್ಕಾರಗಳು ಪ್ರೋತ್ಸಾಹ ನೀಡಬೇಕು. ಪ್ರವಾಹ ಇಲ್ಲಿ ಸುಲಭ. ಇಲ್ಲಿನ ಬಹುಭಾಗ ಸಮತಟ್ಟಾಗಿದೆ. ಮಲೆನಾಡಿನ ಹಾಗೆ ಅಲ್ಲಿ ಗುಡ್ಡಗಾಡು ಕಡಿಮೆ. ಇಂತಹ ಪ್ರದೇಶದಲ್ಲಿ ಮಳೆ ನೀರು ಭೂಮಿಯಲ್ಲಿ ಇಂಗುವುದಕ್ಕೆ ತೋಡು ಗುಂಡಿಗಳು ಹಾಗೂ ಚೆಕ್ ಡ್ಯಾಂಗಳ ನಿರ್ಮಾಣ ವ್ಯಾಪಕವಾಗಿ ನಡೆದರೆ, ಪ್ರವಾಹದ ಅನಾಹುತಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

45 ವರ್ಷದ ನಂತರ ಮಹಾಮಳೆಗೆ ಮುಳುಗಿದ ಉಪ್ಪಿನಂಗಡಿ

ಜನರಿಗಾಗಲಿ, ಸರ್ಕಾರಗಳಿಗಾಗಲಿ ದೂರದೃಷ್ಟಿ ಕಡಿಮೆ. ನೆರೆ ಬರಬಹುದು, ಅದು ಮನೆ-ಮಠ ಸೇರಿ ಬೆಳೆದ ಬೆಳೆಗಳನ್ನು ಹಾಳು ಮಾಡಬಹುದು ಅಂತ ಯಾವತ್ತಾದರೂ ಜನರು ತಮ್ಮ ಜಮೀನುಗಳಲ್ಲಿ ನೀರು ಇಂಗಿಸುವ ತೊಡು ಗುಂಡಿಗಳನ್ನು, ಚೆಕ್ ಡ್ಯಾಂಗಳನ್ನು ನಿರ್ಮಿಸುವುದಕ್ಕೆ ಆದ್ಯತೆ ನೀಡಿದ್ದನ್ನು ನಾನು ಹೆಚ್ಚಾಗಿ ಕಂಡಿಲ್ಲ. ಅಷ್ಟೇ ಯಾಕೆ, ನಗರಗಳಲ್ಲಿ
ಕುಡಿಯುವ ನೀರಿನ ಸಮಸ್ಯೆ ಇದ್ದಾಗಲೂ ಇಲ್ಲಿನ ಸರ್ಕಾರಗಳಿಗೆ ಮಳೆ ನೀರು ಸಂಗ್ರಹಣೆ ಮುಖ್ಯ ಎಂದೆನಿಸಿಲ್ಲ. ದೆಹಲಿಯಲ್ಲಿ ಆ ಕೆಲಸ ಆಗಿದೆ. ಅಲ್ಲಿನ ಪ್ರತಿ ಮನೆಯಲ್ಲೂ ಮಳೆ ನೀರು ಸಂಗ್ರಹ ಕಡ್ಡಾಯ. ಅದೇ ರೀತಿ ಇಲ್ಲೂ ಸರ್ಕಾರ ಎಲ್ಲಾ ಸರ್ಕಾರಿ ಅಧಿಕಾರಿಗಳ ನಿವಾಸಕ್ಕೆ ಮಳೆ ನೀರು ಸಂಗ್ರಹ ಕಡ್ಡಾಯ ಮಾಡಬೇಕು. ರೈತರು ಜಮೀನುಗಳಲ್ಲೂ ಮಳೆ ನೀರು ಇಂಗಿಸುವುದಕ್ಕೆ ತೋಡುಗಳ ನಿರ್ಮಾಣ ಅಗತ್ಯ ಎನ್ನಬೇಕು, ಹಾಗಾದರೂ, ಈ ಪ್ರವಾಹದ ಅನಾಹುತಗಳನ್ನು ಒಂದಷ್ಟು ತಡೆಗಟ್ಟಬಹುದು.

click me!