ಪುತ್ತೂರು (ಆ. 11): ಇದನ್ನು ಪ್ರಕೃತಿ ಎಂದೆನ್ನಬೇಕಲ್ಲದೇ ಮಳೆ ರಕ್ಕಸ ಜಲ ರಾಕ್ಷಸ ಎನ್ನುವುದು ಸರಿಯೇ? ಗಾಳಿಯನ್ನು ಹಿಡಿಯೋರು ಯಾರೂ ಇಲ್ಲ, ಕಾಲವನ್ನು ತಡೆಯೋರು ಯಾರೂ ಇಲ್ಲ. ಈ ವಾರ ನಾಗರಪಂಚಮಿಗೆ ಕರ್ನಾಟಕ ಕರಾವಳಿ ಮತ್ತು ಸನಿಹದ ಉತ್ತರ ಭಾಗಗಳಿಗೆ ಮಳೆ ಸುರಿಯತೊಡಗಿತು. ಅಕಾಲಿಕವೂ ಅಲ್ಲ, ಅನಿರೀಕ್ಷಿತವೂ ಅಲ್ಲ. ಬಂದಿದ್ದು ಮಳೆಗಾಲದ ಮಳೆಯೇ.

ನೇತ್ರಾವತಿಯಲ್ಲಿ 45 ವರ್ಷಗಳ ದಾಖಲೆ ನೀರು, ನೂರಾರು ಮನೆಗಳು ಜಲಾವೃತ!

ಪ್ರಕೃತಿ ತನ್ನ ಧರ್ಮವನ್ನು ಸಕಾಲದಲ್ಲಿ ಸ್ಥಾಪಿಸಿದೆ ಅಷ್ಟೇ. ಆದರೆ ನಾವು ಮಾತ್ರಾ ಲೆಕ್ಕ ತಪ್ಪಿದವರಂತೆ, ಹಾದಿ ಕಾಣದವರಂತೆ, ದಿಕ್ಕು ತೋಚದವರಂತೆ ಬಡಬಡಿಸಿದೆವು, ಬೆದರಿದೆವು, ಮುದ್ದೆಯಾದೆವು. ಜೂನ್ ಒಂದನೇ ತಾರೀಖು ಮುಂಗಾರು ಕರ್ನಾಟಕಕ್ಕೆ ಆಗಮಿಸುವುದು ಪ್ರಕೃತಿ ಇಟ್ಟ ಮುಹೂರ್ತ. ಸಾಮಾನ್ಯವಾಗಿ ಈ ದಿನಕ್ಕೆ ನಾಲ್ಕು ದಿನ ಹಿಂದೆ ಮುಂದೆ ಮುಂಗಾರು ಬರಬೇಕು. ಆದರೆ ಕಳೆದ ಹತ್ತು ಹದಿನೈದು ವರ್ಷಗಳಿಂದ ಈ ಮುಹೂರ್ತ ಮೀರತೊಡಗಿದೆ.

ಜೂನ್ ಮೊದಲ ತೇದಿ ಬಿಡಿ, ಹದಿನೈದಾದರೂ ಮುಂಗಾರಿನ ಸುಳಿವಿಲ್ಲ. ಹಾಗಾದರೆ ಏನಾದರೂ ಲೆಕ್ಕ ಎಡವಟ್ಟಾಗಿದೆ ಎಂದೇ ಆಯಿತಲ್ಲ. ಆದರೆ ಆ ಎಡವಟ್ಟಿನ ಯೋಚನೆ ನಮಗೇಕೆ ಇಷ್ಟು ಕಾಲ ಕಳೆದರೂ ಬಂದಿಲ್ಲ? ಮುಂಗಾರು ಆಗಮನದ ವಿಳಂಬದ ಸುದ್ದಿಯನ್ನಷ್ಟೇ ಹವಾಮಾನ ಇಲಾಖೆ ಬಿತ್ತರಿಸುತ್ತದೆ. ಅದಕ್ಕೆ ಎಲ್ ನಿನೋ ಕಾರಣವನ್ನು ಕೊಡುತ್ತದೆ. ಸಾಗರ ಸಮುದ್ರಗಳು ಕೊತಕೊತ ಕುದಿಯುತ್ತವೆ ಎಂದಾದರೆ, ಆ ಕಾರಣಕ್ಕಾಗಿ ಮೋಡಗಳು ಮುರುಟಿಕೊಳ್ಳುತ್ತವೆ ಎಂದಾದರೆ ತಪ್ಪು ನಮ್ಮದೇ ಅಲ್ಲವೇ?

ಮಲೆನಾಡಲ್ಲಿ ಭೂಕುಸಿತ ಹೆಚ್ಚಳ: ಕೊಡಗು ಚಿಕ್ಕಮಗಳೂರಲ್ಲಿ ಭಾರೀ ಸಮಸ್ಯೆ!

ಯಾವಾಗ ಮುಂಗಾರು ಮಾರುತವೇ ತನ್ನ ಆಗಮನದಲ್ಲೇ ಮುಗ್ಗರಿಸುತ್ತದೆಯೋ ಆಗ ಉಳಿದೆಲ್ಲಾ ಮಳೆ ಗಣಿತ ತಪ್ಪು ತಪ್ಪೇ ಆಗುತ್ತದೆ. ಈಗೀಗ ಆಗುತ್ತಿರುವುದೇ ಅದು. ಒಂದೊಂದು ಬಾರಿ ಮುಂಗಾರು ಮಳೆ ಮಾರುತ ಹೆಜ್ಜೆ ಹಾಕಿದಾಗಲೂ ಅದೆಲ್ಲಿಂದಲೋ ಬಂದೆರಗುವ ಚಂಡಮಾರುತ ಅದನ್ನು ಎತ್ತಿ ಎಸೆದು ಬಿಡುತ್ತದೆ. ರಣಹದ್ದು ಪಿಕಳಾರವನ್ನು ಎರಗಿ ಅಪಹರಿಸಿ ಕೊಕ್ಕಿ ಕೆಡಹಿದ ಹಾಗೇ. ಮುಂಗಾರು ಮಳೆ ಎಂದರೆ ಭಾರತದ ಬಂಗಾರು. ಅದರ ಪ್ರತಿಯೊಂದು ಬಿಂದು ಬಿಂದುವಿನಲ್ಲೂ ನಮ್ಮ ನಡಲದ ಸಂಪತ್ತು ಇದೆ. ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯ ಶಾಲಿನೀ ಎನ್ನುತ್ತದೆ ಉಪನಿಷತ್.

ಬಹುಶಃ ಮುಂಗಾರು ಮಳೆಗೇ ಇದನ್ನು ಉದ್ದೇಶಿಸಿರಬೇಕು. ಸಕಾಲದಲ್ಲಿ ಸಹಜವಾಗಿ ಸುರಿದ ಮುಂಗಾರಿಗೆ ಭೂಮಿ ನಳನಳಿಸುವುದು ಧರ್ಮ,ಉಳಿದದ್ದೆಲ್ಲಾ ಅಧರ್ಮ. ಈ ವರ್ಷ ಆಗಿದ್ದು ನೋಡಿ. ಜೂನ್ ಒಂದಲ್ಲ, ಹತ್ತು ಕಳೆದು ಇಪ್ಪತ್ತಾದರೂ ಮುಂಗಾರಿನ ಸುಳಿವಿಲ್ಲ. ಆಮೇಲೆ ಬಂದದ್ದೂ ಎಂದಿನ ಮುಂಗಾರಲ್ಲ. ಮುಂಗಾರು ಮಳೆಯ ಯಾವ ಸೋಜಿಗವನ್ನೂ ಈ ವರ್ಷದ ವರ್ಷಧಾರೆ ಹೊಂದಿರಲಿಲ್ಲ. ಅರಬ್ಬೀ ಸಮುದ್ರದ ದಿಕ್ ದಿಗಂತದಿಂದ ತೊಡಗಿ ಪಶ್ಚಿಮ ಘಟ್ಟದ ಪರ್ವತ ಸಾಲಿನ ತುತ್ತತುದಿಯ ತನಕ ಕಾರ್ಮೋಡಗಳು ಸವರಿಕೊಳ್ಳಲಿಲ್ಲ.

ಸಮುದ್ರ ಭೋರ್ಗರೆಯಲಿಲ್ಲ. ಬಿರುಗಾಳಿ, ಸಿಡಿಲು, ಮಿಂಚುಗಳ ಯಾವ ಓಲಗವೂ ಇಲ್ಲದೇ ಸಂಗೀತ ಕಚೇರಿಯ ಶುರುವಿನ ಆಲಾಪನೆಯಂತೆ, ಕಚೇರಿಯ ಕೊನೆಗೆ ತನಿ ಬಿಟ್ಟಂತೆ ಶೃತಿ ಮೀರದ ನಿನಾದ ಮುಂಗಾರು ಮಳೆಯದ್ದು. ಬಾನು ಭೂಮಿಯನ್ನು ಅಪ್ಪಿ ಮುದ್ದಾಡುತ್ತಾ ಚೆಲ್ಲುವುದು ಅದರ ವರಸೆ. ಇತ್ತೀಚೆಗಿನ ವರ್ಷಗಳಲ್ಲಿ ಮುಂಗಾರು ಮಳೆಗೆ ಯಾವ ತಾಳವೂ ಇಲ್ಲ, ಲಯವೂ ಇಲ್ಲ. ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಬಂತು ಎಂದರೆ ಬಡಬಡಸಿ ಗುಡುಗುಡಿಸಿ ಬರುತ್ತದೆ. ಸಿಡಿಲು, ಬಿರುಗಾಳಿ ಸಹಿತವಾಗಿ. ಮಂಗಳೂರಲ್ಲಿ ಬಂದರೆ ಕಾಸರಗೋಡಲ್ಲಿ ಇಲ್ಲ, ಗೋಕರ್ಣದಲ್ಲಿ ಸುರಿದರೆ ಕುಮಟಾದಲ್ಲಿಲ್ಲ. ಹಾಗಾಗಿ ಬಂದದ್ದು ಮುಂಗಾರೇ ಅಲ್ಲ.

ಹಾಗಾದರೆ ಇದೇನು? ವಾಯುಭಾರ ಕುಸಿತದ ಪರಿಣಾಮವಾಗಿ ಎದ್ದೇಳುವ ಮಹಾ ಮಾರುತಗಳಿವು ಎನ್ನುತ್ತದೆ ವಿಜ್ಞಾನ. ಸಾಗರದಲ್ಲಿ ವಾಯುಭಾರ ಕುಸಿತ ಏಕಾಗುತ್ತದೆ ಎಂದರೆ ಅದು ಕೂಡಾ ಪ್ರಕೃತಿಯ ನಿರ್ಧಾರ. ಒಂದು ವಾರದಿಂದ ಮಹಾಮಳೆ ನಮ್ಮನ್ನು ಸಾಕುಬೇಕು ಮಾಡಿದೆ.ಯಾವ ದಯೆ ದಾಕ್ಷಿಣ್ಯವಿಲ್ಲದೇ ಸುರಿದಿದೆ. ಬೆಟ್ಟಗುಡ್ಡ ಕುಸಿದಿವೆ. ಕಾಡುಮೇಡುಗಳು ಮುರಿದಿವೆ. ಹಳ್ಳಕೊಳ್ಳಗಳು ಉಕ್ಕಿವೆ. ಹೊಳೆಗಳು ಮೈಯುಕ್ಕಿ ಹರಿದು ಊರುಕೇರಿಗಳನ್ನು ಬಾಚಿಕೊಂಡಿವೆ. ಮಹಾಮಳೆಯ ಈ ಬಿರುಸಿಗೆ ಸಮುದ್ರ ಕೂಡಾ ತತ್ತರಿಸಿದೆ.

ನೆರೆಪೀಡಿತ ಜಿಲ್ಲೆಗಳಲ್ಲಿ ಬಿಎಸ್ಸೆನ್ನೆಲ್‌ ಉಚಿತ ಕರೆ, ಡೇಟಾ

ಸಾಗರನ ತೆಕ್ಕೆಗಳನ್ನು ದೂಡಿ ನದಿಗಳು ನುಗ್ಗಿವೆ. ಅಳಿವೆಗಳು ನಡುಗಿ ಮೈ ಮುಚ್ಚಿಕೊಂಡ ಕಾರಣಕ್ಕೆ ನದಿಗಳು ಮತ್ತಷ್ಟು ಸೊಕ್ಕಿವೆ. ನಾವು ಇದನ್ನು ಜಲಪ್ರಳಯ ಎಂದು ಕರೆಯುತ್ತೇವೆ. ಇಷ್ಟೊಂದು ಮಹಾಮಳೆ ರೆಚ್ಚೆ ಬಿಡದಂತೆ ಬಂದರೂ
ಪ್ರಕೃತಿಯದ್ದೇ ಆದ ಯಾವುದೂ ಏನೂ ಆಗಿಲ್ಲ. ಮರಗಿಡಗಳಲ್ಲಿ ಎಂದಿನಂತೆ ಹೂವರಳಿವೆ, ಕಾಯಿ ಉದುರಿಲ್ಲ, ಹಣ್ಣುಕೊಳೆತಿಲ್ಲ. ಹಸಿರು ಕೊಳೆತಿಲ್ಲ, ಎಲೆಗಳು ಉದುರಿಲ್ಲ. ಹಕ್ಕಿಯ ಗೂಡಿನ ಬೆಚ್ಚನೆಯ ಸಂಸಾರಕ್ಕೆ ಯಾವ ಕಷ್ಟವೂ ಆಗಿಲ್ಲ. ಪೊರೆಯಲ್ಲಿ ಕುಳಿತ ಅಳಿಲಿನ ಸಂತೋಷಕ್ಕೆ ಪಾರವೇ ಇಲ್ಲ. ಆದರೆ ಮನುಷ್ಯ ನಿರ್ಮಿಸಿದ ಯಾವುದನ್ನೂ ಈ ಮಹಾಮಳೆ ಬಿಟ್ಟಿಲ್ಲ.

ತೂಗುಸೇತುವೆಗಳನ್ನು ಮುರಿದು ಎಸೆದಿದೆ, ಕಡಿದ ಗುಡ್ಡ ಬೆಟ್ಟಗಳನ್ನು ಕೆಡಹಿದೆ, ನೆಟ್ಟ ತೋಟಗಳನ್ನು ಮುರಿದಿದೆ, ಕೆತ್ತಿ ಕಟ್ಟಿದ ರಸ್ತೆಗಳನ್ನು ಜರಿದುಹಾಕಿದೆ, ತನ್ನ ಹಾದಿಗೆ ಅಡ್ಡಬಂದ ಅಣೆಕಟ್ಟನ್ನು ಕೊರೆದು ಸಾಗಿದೆ. ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂವಾದದಲ್ಲಿ ಈ ಸಾರೆಯೂ ಪ್ರಕೃತಿಯೇ ಗೆದ್ದಿದೆ. ಮೊನ್ನೆ ಮಳೆಗಾಲವೇ ನಾಪತ್ತೆಯಾಗಿದೆಯಲ್ಲಾ ಮಾರಾಯಾ ಅಂತ ಗೆಳೆಯನೊಬ್ಬನ ಜೊತೆ ಹಳಹಳಿಸಿದ್ದೆ. ಆಗ ಅವನು ಹೇಳಿದ, ಈಗ ದೇವರುಗಳ ಆಡಳಿತ ಇಲ್ಲ
ಮಾರಾಯಾ,ಎಲ್ಲಾ ದೇವರುಗಳ ಮಕ್ಕಳದ್ದೇ ಕಾರುಬಾರು.

ಈ ಮಕ್ಕಳು ನಮ್ಮ ಹಾಗೇ ಮಾಡರ್ನ್ ಮಂದಿ, ನಮ್ಮ ಹಾಗೇ ಮಹಾ ರೌಡಿಗಳು. ಈ ಕುಂಭದ್ರೋಣ ಮಳೆಯ ಹೊತ್ತಿಗೆ ಗೆಳೆಯ ಸಿಕ್ಕಿದ. ಹೇಗೆ,ನಾನು ಹೇಳಿಲ್ಲವಾ? ದೇವರುಗಳ ಮಕ್ಕಳ ಆಡಳಿತ ಅಂದರೆ ಹೀಗೇ, ಉಲ್ಟಾಪುಲ್ಟಾ ಅಂದ.
ಅವನು ಹಾಗೇ ಹೇಳುತ್ತಿದ್ದಾಗ ನಾನು ನಲವತ್ತೈದು ವರ್ಷಗಳ ಬಳಿಕ ನಮ್ಮ ಸಂಗಮ ಕ್ಷೇತ್ರ ಉಪ್ಪಿನಂಗಡಿ ಮುಳುಗು ತ್ತಿರುವುದನ್ನು ಅಬ್ಬೇಪ್ಪಾರಿ ತರಹ ನೋಡುತ್ತಾ ನಿಂತಿದ್ದೆ. 

- ಗೋಪಾಲಕೃಷ್ಣ ಕುಂಟಿನಿ