ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದ ವೇಳೆಯಲ್ಲಿ, ಇಡೀ ಊರಿಗೇ ಊರೇ ಜಲಾವೃತವಾದ ಸಂದರ್ಭದಲ್ಲಿ ತಾವೇ ದೋಣಿ ನಡೆಸಿಕೊಂಡು ಜನರ ಕತೆ ಕೇಳಿ ಬಂದು ನಾಡಿಗೆ ತಿಳಿಸಲು ಶ್ರಮಿಸಿದ ಕನ್ನಡ ಪ್ರಭದ ಉತ್ತರ ಕನ್ನಡ ವರದಿಗಾರನ ಅನುಭವ ಕಥನ.
ಬೆಳಗ್ಗೆ ಏಳುವಷ್ಟರಲ್ಲಿ ಬಿರುಗಾಳಿ ಮಳೆ. ಎಲ್ಲೆಲ್ಲೋ ನೀರೇನೀರು. ಪ್ರವಾಹ ಎಲ್ಲರನ್ನೂ ಆತಂಕಕ್ಕೆ ದೂಡಿತ್ತು. ಪ್ರವಾಹ ಪ್ರದೇಶಗಳಿಗೆ ಹೋಗುವುದೇ ಒಂದು ದೊಡ್ಡ ಸವಾಲಾಗಿತ್ತು. ಎಲ್ಲಾ ರಸ್ತೆಗಳ ಮೇಲೂ ಹತ್ತಾರು ಅಡಿಗಳಷ್ಟು ನೀರು. ರಸ್ತೆ ಸಂಚಾರ ಆಗಲೇ ಸ್ಥಗಿತಗೊಂಡಿತ್ತು. ಏನಿದ್ದರೂ ದೋಣಿಗಳಲ್ಲೇ ಮುಂದೆ ಹೋಗಬೇಕು. ನಮ್ಮ ಮುಂದೆ ಬೇರೆ ದಾರಿ ಇರಲಿಲ್ಲ. ಸಂತ್ರಸ್ತರ ಸಂಕಟಗಳಿಗೆ ಧ್ವನಿಯಾಗಲು ದೋಣಿ ಹತ್ತಬೇಕಿತ್ತು. ಜನರನ್ನು ತಲುಪಬೇಕಿತ್ತು. ನಾವು ಹೊರಟೆವು.
ಹಾಗೂ ಹೀಗೂ ಅಂಕೋಲಾದ ಅಗಸೂರ ಎಂಬಲ್ಲಿಂದ 3 ಕಿ.ಮೀ.ದೂರ ಮಿತ್ರ ಅಂಕೋಲಾದ ನಮ್ಮ ವರದಿಗಾರ ರಾಘು ನಾಯ್ಕ ಕರೆದೊಯ್ದರು. ಮುಂದೆ ರಸ್ತೆಯ ಮೇಲೆ 8-10 ಅಡಿ ನೀರು. ಅಲ್ಲೇ ಇದ್ದ ದೋಣಿ ಏರಿ ಹೋದಾಗ ವಾಸರಕುದ್ರಗಿ ಊರಿನ ಗುಡ್ಡದ ಮೇಲಿನ ಶಾಲೆಯಲ್ಲಿ ನೂರಾರು ಜನರು ಸೇರಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಮುದುಡಿ ಕುಳಿತಿದ್ದಾರೆ. ರಾತ್ರೋರಾತ್ರಿ ದಿಕ್ಕೆಟ್ಟು ಕಂಠಮಟ್ಟದ ನೀರಿನಲ್ಲಿ ಮನೆ ತೊರೆದು ಬಂದವರ ಕತೆಗಳು ಮುಗಿಯುವುದೇ ಇಲ್ಲ. ಅಷ್ಟಕ್ಕೂ ಅಲ್ಲಿ ಸರ್ಕಾರದ ಅಧಿಕಾರಿಗಳು ತಲುಪಿರಲೇ ಇಲ್ಲ. ಇಡಿ ಊರು ದ್ವೀಪವಾಗಿತ್ತು. ಪರಿಹಾರ ಕೇಂದ್ರವೂ ಶುರುವಾಗಿರಲಿಲ್ಲ. ಇದ್ದ ಬಿದ್ದ ಸಾಮಗ್ರಿಗಳನ್ನು ಊರಿನವರೇ ಸೇರಿ ವಂತಿಗೆ ಹಾಕಿ ದೋಣಿಯ ಮೇಲೆ ತಂದು ರಾಶಿ ಹಾಕಿದ್ದರು. ಕಿಸೆಯಲ್ಲಿದ್ದ 50-100 ರು. ನೋಟುಗಳನ್ನು ಒಟ್ಟುಗೂಡಿಸಿ ಇರುವ ಮೂರು ಅಂಗಡಿಗಳಿಂದ ರೇಶನ್ ತಂದರು. ಎರಡೇ ದಿನಗಳಲ್ಲಿ ಅಂಗಡಿಗಳು ಖಾಲಿಯಾಗಿತ್ತು. ಅಕ್ಕಿ ಬಿಟ್ಟರೆ ಬೇರೇನೂ ಇರಲಿಲ್ಲ.
45 ವರ್ಷದ ನಂತರ ಮಹಾಮಳೆಗೆ ಮುಳುಗಿದ ಉಪ್ಪಿನಂಗಡಿ
ಮುಂದೆ ಹೋಗಬೇಕೆಂದರೆ ಮತ್ತೆ ದೋಣಿಗೆ ಹುಟ್ಟುಹಾಕಬೇಕು. ಸರಿ ದೋಣಿ ಏರಿ ಹೋಗುತ್ತಿದ್ದಂತೆ ಎಲ್ಲಿ ನೋಡಿದರೂ ನೀರೇ ನೀರು. ಗಂಗಾವಳಿ ನದಿಯ ಅಬ್ಬರ. ತೇಲಿ ಬರುತ್ತಿರುವ ಮರ ಗಿಡಗಳು. ಎರಡು ದನಗಳೂ ಕೊಚ್ಚಿ ಹೋದವು. ಅಲ್ಲೆಲ್ಲಾ ಕೆಲವು ಮನೆಗಳ ಮೇಲ್ಛಾವಣಿ ಮಾತ್ರ ಕಾಣಿಸುತ್ತಿದೆ. ಒಂದೆರಡು ಬೆಕ್ಕುಗಳು ಜೀವ ಉಳಿಸಿಕೊಳ್ಳಲು ಮೇಲ್ಛಾವಣಿ ಹತ್ತಿ ಮಳೆಯಲ್ಲಿ ನಡುಗುತ್ತಿದ್ದವು. ಅಗೇರ ಕೇರಿ, ಅಂಬಿಗರ ಕೇರಿಯ ಮನೆಗಳು ನೀರಿನಲ್ಲಿ ಮುಳುಗಿಹೋಗಿದ್ದವು. ಹಸುಗೂಸನ್ನು ಎದೆಗವುಚಿಕೊಂಡ ಬಾಣಂತಿ ನಟ್ಟಿರುಳಲ್ಲಿ ನಡು ಮಟ್ಟದ ನೀರಿನಲ್ಲಿ ಭಾರಿ ಮಳೆಯ ನಡುವೆಯೂ ನಡುಗುತ್ತ ಬಂದು ಅಂಗಡಿಯೊಂದರಲ್ಲಿ ಕುಳಿತಿದ್ದಳು. ಹೊಯ್ದಾಡುತ್ತಿರುವ ದೋಣಿಯಲ್ಲಿ ಸಾಗುವುದು ಒಂದು ಸವಾಲಾಗಿತ್ತು. ಏಕೆಂದರೆ ಯಾವುದೇ ಕ್ಷಣದಲ್ಲಿ ಮರದ ದಿಮ್ಮಿ ಅಥವಾ ಇನ್ನಾವುದೋ ವಸ್ತು ಬಂದು ಬಡಿದರೆ ನಾವೂ ನೀರುಪಾಲಾಗಬೇಕು. ಒಂದೆಡೆ ನಾನು ಮತ್ತು ಗೆಳೆಯ ತಿಮ್ಮಪ್ಪ ಹರಿಕಾಂತ ಇಬ್ಬರೇ ಹುಟ್ಟುಹಾಕಿ ದೋಣಿ ಕೊಂಡೊಯ್ದಾಗ ತೀರದಲ್ಲಿದ್ದ ನಿರಾಶ್ರಿತರು ಅಪಾಯದಲ್ಲಿ ಸಿಲುಕುತ್ತೀರಿ ಹೋಗಬೇಡಿ ಎಂದು ಕೂಗಿ ಕೂಗಿ ಕರೆಯುತ್ತಿದ್ದರು.
ಮತ್ತೆ ಗುಡ್ಡದ ರಸ್ತೆಯಲ್ಲಿ ಕೆಲ ದೂರ ಹೆಜ್ಜೆ ಹಾಕಿದರೆ ಕೋಡ್ಸಣಿ ತಲುಪಬೇಕು. ಅಲ್ಲಿ ಮತ್ತೆ ದೋಣಿಯೇ ಆಸರೆ. ಸರಿ ಕೋಡ್ಸಣಿಗೆ ಹೋದರೆ ಗಂಗಾವಳಿ ನದಿಯ ರೌದ್ರಾವತಾರ ಬೆಚ್ಚಿ ಬೀಳಿಸಿತ್ತು. ಅಲ್ಲಿನ ಜನತೆ ಭಯಗೊಂಡಿದ್ದರು. ಯಾರ ಬಾಯಲ್ಲೂ ಮಾತೆ ಬರುತ್ತಿರಲಿಲ್ಲ. ಬಡ ಹಾಲಕ್ಕಿ ಒಕ್ಕಲಿಗರ ಮನೆಗಳು ಸಾಲು ಸಾಲಾಗಿ ನೆಲಸಮವಾಗಿತ್ತು. ಒಂದೆ ಕಡೆ ಐದು ಮನೆಗಳು ಕುಸಿದು ಬಿದ್ದಿದ್ದವು. ಮನೆಗಳು ಕುಸಿಯುವ ಕೆಲವೆ ಗಂಟೆಗಳ ಮುನ್ನ ತಡ ರಾತ್ರಿಯಲ್ಲಿ ಧೋ ಎಂದು ಸುರಿಯುವ ಮಳೆಯ ನಡುವೆ ನಡು ಮಟ್ಟದ ನೀರಿನಲ್ಲಿ ಮೇಲಿನ ಕೋಡ್ಸಣಿಗೆ ಬರುತ್ತಾರೆ. ಆದರೆ ಸಣ್ಣಮ್ಮ ನಾಗಪ್ಪ ಗೌಡ ಕುಟುಂಬದ ಆ 9 ಜನರಿಗೆ ಉಳಿದುಕೊಳ್ಳಲು ಎಲ್ಲೂ ಆಸರೆ ಇಲ್ಲ. ಆಗ ನೆರವಿಗೆ ಬಂದಿದ್ದು ದನದ ದೊಡ್ಡಿ. ದನಗಳ ನಡುವೆ ಮುದುಡಿಕೊಂಡು ಬೆಳಗು ಮಾಡಿದರು. ಚಿಕ್ಕ ಮಕ್ಕಳನ್ನೂ ಅಲ್ಲೇ ಮಲಗಿಸಿದರು. ಎರಡು ದಿನ ಅವರು ದನಗಳೊಟ್ಟಿಗೆ ಕಳೆದಿದ್ದಾರೆ.
ಹೊನ್ನಳ್ಳಿಯ ವೃದ್ಧೆ ಮೋಹಿನಿ ಗೌಡ ಮನೆಯಲ್ಲಿ ಏಕಾಂಗಿಯಾಗಿದ್ದರು. ಅವರ ಮನೆಯ ಸುತ್ತ ಹತ್ತಾರು ಅಡಿ ನೀರು ತುಂಬಿದೆ. ಮಾಳಿಗೆಯಲ್ಲಿ ರಾತ್ರಿಯಿಡೀ ನಡುಗುತ್ತಲೇ ಕಳೆದ ಅವಳನ್ನು ಸ್ಥಳೀಯ ಯುವಕರು ಪಾರು ಮಾಡಿದ್ದೇ ಒಂದು ಪವಾಡ. ಬೋಟ್ ಕೊಂಡೊಯ್ದು ಮೇಲ್ಛಾವಣಿ ಹತ್ತಿ ಹೆಂಚುಗಳನ್ನು ತೆಗೆದು ಮಾಳಿಗೆ ಪ್ರವೇಶಿಸಿ ಅವರನ್ನು ಪಾರು ಮಾಡಿದ್ದು ದೊಡ್ಡ ಸಾಹಸ. ಈ ಘಟನೆಯನ್ನು ದೂರದಿಂದಲೇ ನೋಡಬೇಕಾಯಿತು. ಯಾಕೆಂದರೆ ಗಂಗಾವಳಿ ಅಬ್ಬರಿಸುತ್ತಿತ್ತು. ಊಟ ತಿಂಡಿ ಬಿಟ್ಟು ಹುಟ್ಟು ಹಾಕುತ್ತ ದಿನವಿಡೀ ನಿರಾಶ್ರಿತರೊಂದಿಗೆ ಕಳೆದೆ. ನಾನು ಹೊರಟು ಬರುವಾಗ ಎಲ್ಲವನ್ನೂ ಕಳೆದುಕೊಂಡು ಉಟ್ಟ ಬಟ್ಟೆಯಲ್ಲೇ ಪಾರಾಗಿ ಬಂದವರು ಸುತ್ತುವರಿದು ಅಣ್ಣಾ ನೀವು ಇಷ್ಟು ಸಾಹಸ ಮಾಡಿ ಬಂದ್ರಿ, ಆದರೆ ನಿಮಗೆ ಊಟ ಕೊಡ್ಲಿಲ್ಲ. ತಿಂಡಿ ಕೊಡ್ಲಿಲ್ಲ. ನೀರು ಕೊಡಲೂ ನಮ್ಮಿಂದ ಆಗ್ಲಿಲ್ಲ. ಬೇಜಾರ ಮಾಡಬೇಡಿ ಎಂದಾಗ ನನಗೆ ನಿಜಕ್ಕೂ ಕಣ್ಣಾಲಿಗಳು ತೇವವಾದವು.