ಮನ್ಯಾಗ ಬಾಣಂತಿ ಅದಾಳ, ವಸಿ ಬಿಸಿ ನೀರಾದ್ರೂ ಕೊಡ್ರಿ..

By Kannadaprabha NewsFirst Published Aug 11, 2019, 10:38 AM IST
Highlights

ಪ್ರವಾಹ ಬಂದಾಗ ತಕ್ಷಣ ಜನರ ಬಳಿ ಹೋಗಿ ಅವರ ನೋವು ಕೇಳುವವರು ವರದಿಗಾರರು. ಹುಬ್ಬಳ್ಳಿ, ಧಾರವಾಡದ ಜನರ ನೋವಲ್ಲಿ ಪಾಲುದಾರನಾದ ಕನ್ನಡಪ್ರಭ ವರದಿಗಾರನ ಅನುಭವ ಕಥನ.

ಧಾರವಾಡ (ಆ. 11): ಮನ್ಯಾಗ ಒಲಿ ಹಚ್ಚಾಕು ಬರಂಗಿಲ್ಲ.. ಹಾಂಗೋ ಹಿಂಗೋ ಮಾಡಿ ಅಡ್ಗಿ ಮಾಡೋಣ ಅಂದ್ರ ಹಿಡಿ ಹಿಟ್ಟ ಇಲ್ಲ.. ಹ್ಯಾಂಗ್ ಮಾಡ್ಬೇಕ್ರಿ. ಮನ್ಯಾಗ ನೋಡಿದ್ರ ಬಾಣಂತಿ ಅದಾಳ. ವಸಿ ಬಿಸಿ ನೀರಾದ್ರೂ ಕೊಡ್ರಿ..’ ಇದು ಬೆಣ್ಣಿಹಳ್ಳದ ಪ್ರವಾಹಕ್ಕೆ ತತ್ತರಿಸಿದ ಮಹಿಳೆಯ ಮಾತು.

ಬೆಣ್ಣಿಹಳ್ಳದ ಪ್ರವಾಹದ ಭೀಕರತೆಗೆ ಈ ಮಹಿಳೆಯ ಮಾತೊಂದೇ ಸಾಕ್ಷಿ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಲ್ಲಿ ಬೆಣ್ಣಿಹಳ್ಳ, ಬೆಳಗಾವಿ ಜಿಲ್ಲೆ ಕಿತ್ತೂರಲ್ಲಿ ತುಪರಿಹಳ್ಳ ಹುಟ್ಟಿದರೂ ಇವೆರಡು ತಮ್ಮ ಪ್ರತಾಪ ತೋರುವುದು ಮಾತ್ರ ಧಾರವಾಡ, ಗದಗ ಜಿಲ್ಲೆಗಳಲ್ಲಿ. ಸಣ್ಣವನಿದ್ದಾಗ ಬೆಣ್ಣಿಹಳ್ಳಕ್ಕೆ ಪ್ರವಾಹ ಬಂದಿದೆ ಎಂದೆಲ್ಲ ಕೇಳಿ ಬೆಳೆದಿದ್ದ ನನಗೆ ಬೆಣ್ಣಿಹಳ್ಳದ ಪ್ರವಾಹವನ್ನು ಕಣ್ಣಾರೆ ಕಾಣುವ ಅವಕಾಶ ಸಿಕ್ಕಿದ್ದು ಮಾತ್ರ ಈಗ. ಹಾಗಂತ ಪ್ರವಾಹವನ್ನೂ ನೋಡಿಯೇ ಇಲ್ಲ
ಅಂತೇನೂ ಇಲ್ಲ.

ನೆರೆ ಸಂತ್ರಸ್ತರಿಗೆ ನೆರವು: 4000 ಚಪಾತಿ ತಯಾರಿ

ಹಾವೇರಿಯಲ್ಲಿ ನಾಲ್ಕು ನದಿಗಳು ಉಕ್ಕಿ ಹರಿಯುವುದನ್ನು ಕಣ್ಣಾರೆ ಕಂಡಿದ್ದ ನನಗೆ ಬೆಣ್ಣಿಹಳ್ಳ- ತುಪರಿಹಳ್ಳದ ಪ್ರವಾಹ ಮಾತ್ರ ಹೊಸ ಅನುಭವ. ಬೇಸಿಗೆಯಲ್ಲಿ ಚಿಕ್ಕ ಕಾಲುವೆಯಂತೆ ಕಾಣುವ ಈ ಎರಡು ಹಳ್ಳಗಳು ಮಳೆಗಾಲದಲ್ಲಿ ಸೃಷ್ಟಿಸುವ ಅವಾಂತರ ಮಾತ್ರ ಅಷ್ಟಿಷ್ಟಲ್ಲ. ಹತ್ತು ವರ್ಷಗಳ ಹಿಂದೆ ಆರ್ಭಟಿಸಿದ್ದ ಈ ಹಳ್ಳಗಳೆರಡು ನಂತರದ ವರ್ಷಗಳಲ್ಲಿ ಅಷ್ಟೊಂದು ತಮ್ಮ ಪ್ರತಾಪವನ್ನು ತೋರಿರಲಿಲ್ಲ. ಆದರೆ ಈ ವರ್ಷ ಮಾತ್ರ ಅಕ್ಷರಶಃ ಬೊಬ್ಬಿರಿಡುತ್ತಿವೆ.

ಏನೇನಾಗಿದೆ?: ಮೊದಲ ದಿನ ಬೆಣ್ಣಿಹಳ್ಳಕ್ಕೆ ಕೊಂಚ ನೀರು ಬಂದಿದೆ ಜಿಲ್ಲೆಯಲ್ಲಿ ಅಂತಹ ಯಾವುದೇ ಪ್ರವಾಹ ಪರಿಸ್ಥಿತಿಯಿಲ್ಲ ಎಂಬ ಸುದ್ದಿಯನ್ನು ಬರೆದು ಹೋದ ನಮಗೆ ಮರುದಿನವೆಂದರೆ ಅಚ್ಚರಿ. ಕೇವಲ ಒಂದೇ ಒಂದು ರಾತ್ರಿಯಲ್ಲಿ ತನ್ನ ಪ್ರತಾಪವನ್ನು ತೋರಿಸಿದ್ದು ಅರಿವಾಯ್ತು. ಹತ್ತಾರು ರಸ್ತೆ, ಸೇತುವೆಗಳು ಎಲ್ಲಿದ್ದವು ಎಂಬುದು ತಿಳಿಯದಂತಹ ಪರಿಸ್ಥಿತಿ. ಮನೆ, ಹೊಲ, ಮಠ, ಮಂದಿರ, ಶಾಲೆ ಎಲ್ಲೆಡೆ ನೀರು ನುಗ್ಗಿದೆ. ಊರಿಗೆ ಊರೇ ನೀರು ಸುತ್ತುವರಿದಿವೆ. ಎತ್ತ ನೋಡಿದರತ್ತ ಬರೀ ನೀರೇ ನೀರು!.

400 ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತ

ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಇನ್ನು ಪುನರ್ವಸತಿ ಕೇಂದ್ರಗಳಲ್ಲಿ ಹೇಗಿದೆ ಪರಿಸ್ಥಿತಿ ಎಂದು ನೋಡಲು ಹೋದರೆ ಯಾರೋ ಅಧಿಕಾರಿ ಬಂದಾರೆ ಎಂದು ತಿಳಿದು ಮಧ್ಯಮ ವಯಸ್ಸಿನ ಮಹಿಳೆ ಬಂದು ‘ಯಪ್ಪಾ ನಮ್ಮನ್ಯಾಗ ಬಾಣಂತಿ ಅದಾಳ್. ನಿನ್ನೆ ರಾತ್ರಿ ಊಟ ಕೊಟ್ಟವರೂ. ನಮ್ಮತ್ತ ಯಾರೋ ಬಂದಿಲ್ಲ. ಬಿಸಿನೀರಾದ್ರೂ ಕೊಡಿ... ನಾಷ್ಟಾ ಯಾವಾಗ ಕೊಡ್ತಿರಿ.. ಎಂದೆನ್ನುತ್ತಲೇ ‘ನೀವೇ ನಮ್ಮ ಪಾಲಿನದ್ಯಾವ್ರ’ ಎನ್ನು ತ್ತಲೇ ಕಾಲು ಮುಗಿಯಲು

ಬಂದಾಗ ಕರಳು ಹಿಂಡಿದಂತಹ ಅನುಭವ. ಏನು ಹೇಳಬೇಕೆಂಬುದೇ ತಿಳಿಯದೇ ‘ಇಲ್ಲಬೇ ನಾನೇನು ಅಧಿಕಾರಿ ಅಲ್ಲಾ.. ನಾನು ನಿಮ್ಮ ಪರಿಸ್ಥಿತಿ ಏನಾಗೈತಿ ಅಂತ ಪೇಪರನ್ಯಾಗ್ ಬರೆಯಾಂವ..’ ಅಂತ್ಹೇಳಿದಾಗ, ‘ಹೌದೇನ ತಮ್ಮಾ ನೋಡ್ಬಾ ನಮ್ಮನಿ ಬಾಣಂತಿನ್ ಇಲ್ಲೇ ಮಲಗೇಸೇವಿ ನೋ ಡಪಾ.. ಮನಿಯೆಲ್ಲ ಸೋರತೈತಿ.. ಮನ್ಯಾಗೆಲ್ಲ ನೀರ್ ಬಂದಿತ್ ರಾತ್ರಿಯೆಲ್ಲ ಮಗಳಿಗೆ ನೀರು ಸಿಡಿಬಾರದಂಗ ಪ್ಲಾಸ್ಟಿಕ್ ಚೀಲಾ ಹಿಡ್ಕೊಂಡು ನಿಂತೇನಿ ನೋಡು..’
ಎಂದು ನುಡಿಯು ತ್ತಿದ್ದಲೇ ತನ್ನ ಸ್ಥಿತಿ ತಾನೇ ನೆನೆದುಕೊಂಡು ಕಣ್ಣೀರು ಸುರಿಸುತ್ತಿದ್ದಳು.

400 ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತ

ಇನ್ನು ಆ ಮನೆಯಿಂದ ಹೊರಗ ಬಂದಾಗ ಇಂಗಳಹಳ್ಳಿಯಲ್ಲಿ 10 ಜನ ಕಾರ್ಮಿಕರೆಲ್ಲ ಹಳ್ಳದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ದೊರೆಯಿತು. ಅಲ್ಲಿಗೆ ಬೈಕ್ ಮೇಲೆ ಹೋಗಬೇಕಂದ್ರ ನಡುದಾರಿಯಾಗ ಹಳ್ಳ ಬಂದು ನಮ್ಮ ಬೈಕ್ ಸಿಕ್ಕಾಕಬೇಕಾ.. ಹಾಂಗೂ ಹೀಂಗೂ ಮಾಡಿ ಅಲ್ಲಿಂದ ತಪ್ಪಿಸಿಕೊಂಡ ಬಂದು ಇಂಗಳಹಳ್ಳಿ ಕಡೆಗೆ ಹೆಜ್ಜೆ ಹಾಕಿದೆವು.

ಕಾರ್ಮಿಕನ ನಾಯಿ ಪ್ರೀತಿ!:

ಇಂಗಳಹಳ್ಳಿಯಲ್ಲಿ ಎನ್‌ಡಿಆರ್ ಎಫ್ ತಂಡ 10 ಜನರನ್ನು ರಕ್ಷಿಸುವ ಕಾರ್ಯ ಮಾಡುತ್ತಿತ್ತು. ಬರೋಬ್ಬರಿ 20 ಜನರ ತಂಡ ರಬ್ಬರಿನ ಬೋಟ್‌ನ್ನು ಅಲ್ಲೇ ಹವಾ ಹಾಕಿ ಸಿದ್ಧಪಡಿಸಿ ನೀರಿಗಿಳಿದು ಎರಡು ಸಲ ಹೋಗಿ 10 ಜನರನ್ನು ಕರ‌್ಕೊಂಡು ಬಂದರೆ ಅದರೊಳಗೆ ಎರಡು ನಾಯಿಗಳೂ ಇದ್ದವು.

ಅಲ್ಲಿದ್ದ ಕಾರ್ಮಿಕನೊಬ್ಬ ಪ್ರವಾಹ ದಾಟಿಕೊಂಡು ಬರಲು ಅವಕಾಶವಿದ್ದರೂ ಬಾರದೆ ಜೀವಂತ ಹೋದರೆ ನಾಯಿಗಳೊಂದಿಗೆ ಹೋಗಬೇಕೆಂದು ನಿರ್ಧಾರ ಮಾಡಿದ್ದ. ಈ ಬಗ್ಗೆ ಕೇಳಿದರೆ ನಾಯಿಗಳೆರಡು ನನ್ನ ಪ್ರಾಣರ‌್ರಿ ಸಾಹೇಬ್ರ ಅವನ್ನು ಹ್ಯಾಂಗ್ ಬಿಟ್ಟ ಬರಲಿ ನಾ. ಅದಕ್ಕೆ ಅಲ್ಲೇ ಉಳಿದಿದ್ದೆ ಎಂದು ನಗು ಮೊಗದಲ್ಲಿ ನುಡಿದ. ಅಬ್ಬಾ ಪ್ರವಾಹದಲ್ಲೂ ಎಂಥ ಪ್ರಾಣಿ ಪ್ರೀತಿ ಈತನದು ಎಂದೇನಿಸದೇ ಇರಲಿಲ್ಲ.

ಇದೀಗ ಪ್ರವಾಹ ಕೊಂಚ ಕಡಿಮೆಯಾಗಿದೆ ನಮ್ಮ ಸುತ್ತಾಟ ಇದೀಗ ಪುನರ್ವಸತಿ ಕೇಂದ್ರಗಳತ್ತ ನೆಟ್ಟಿದೆ. ಅಲ್ಲಿ ಸರಿಯಾಗಿ ಅನ್ನ, ನೀರು ಸಿಗದೇ ನಿರಾಶ್ರಿತರ ಪರದಾಟ ನೋಡಿ ಒಂದು ಪ್ರವಾಹ ಎಷ್ಟೊಂದು ತೊಂದರೆ ಸಿಲುಕಿಸುತ್ತಿದೆ ಎಂದೆನಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ‘ಭೂತಯ್ಯನ ಮಗ ಅಯ್ಯ’, ‘ಮದರ್ ಇಂಡಿಯಾ’, ‘ಸತ್ಯಂ ಶಿವಂ ಸುಂದರಂ’ ಚಿತ್ರಗಳಲ್ಲಿನ ಮಹಾಪೂರದ ಎಲ್ಲ ದೃಶ್ಯಗಳು ಕಣ್ಣಮುಂದೆಯೇ ಹಾಯ್ದು ಹೋಗಿ ಮಮ್ಮಲ ಮರುಗುತ್ತವೆ.

- ಶಿವಾನಂದ ಗೊಂಬಿ 

click me!