ಹೂವಿನ ಶಿಗ್ಲಿಯ ಗುಡ್ಡಗಾಡನ್ನು ನಂದನವನವನ್ನಾಗಿಸಿದ ಕದಳಿಯ ಕರ್ಪುರ ಹೂವಿನಶಿಗ್ಲಿಯ ಶ್ರೀ ನಿರಂಜನ ಸ್ವಾಮೀಜಿ!

By Suvarna News  |  First Published Jan 12, 2025, 7:30 PM IST

ಎತ್ತಣ ಮಾಮರ, ಎತ್ತಣ ಕೋಗಿಲೆ? ಎಂಬಂತೆ ಶ್ರೀ ನಿರಂಜನ ಸ್ವಾಮೀಜಿಯವರು ಹುಟ್ಟಿದ್ದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸೋನಾಳದಲ್ಲಿ, ನೆಲೆಗೊಂಡದ್ದು ಹಾವೇರಿ ಜಿಲ್ಲೆಯ ಹೂವಿನಶಿಗ್ಲಿಯಲ್ಲಿ!


ಜನಸಾಮಾನ್ಯರು ಅರಿವಿನ ದಾರಿ ಕಾಣದೆ ಪರಿತಪಿಸುತ್ತಿರುವಾಗ ಮನುಕುಲದ ಉದ್ಧಾರಕ್ಕೆ ಜಗತ್ತಿನಲ್ಲಿ ಅನೇಕ ವಿಭೂತಿ ಪುರುಷರು, ಶರಣರು ಅವತರಿಸುತ್ತಾರೆ. ತಮ್ಮ ಆಧ್ಯಾ ಶಕ್ತಿಯಿಂದ ಜನರ ಜೀವನವನ್ನು ಹಸನಾಗಿಸುತ್ತಾರೆ. ಹೀಗೆ ಅವತರಿಸಿ ಬಂಜರು ಭೂಮಿಯಂತಿದ್ದ ಹೂವಿನ ಶಿಗ್ಲಿಯ ಗುಡ್ಡಗಾಡನ್ನು ನಂದನವನವನ್ನಾಗಿಸಿದವರು ಶ್ರೀ ಮದ್ ನಿರಂಜನ ಪ್ರಣವಸ್ವರೂಪಿ ನಿರಂಜನ ಸ್ವಾಮೀಜಿ.

ಅಂಗವೈಕಲ್ಯತೆ ಮೀರಿದ ಅನವರತ: ಎತ್ತಣ ಮಾಮರ, ಎತ್ತಣ ಕೋಗಿಲೆ? ಎಂಬಂತೆ ಶ್ರೀ ನಿರಂಜನ ಸ್ವಾಮೀಜಿಯವರು ಹುಟ್ಟಿದ್ದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸೋನಾಳದಲ್ಲಿ, ನೆಲೆಗೊಂಡದ್ದು ಹಾವೇರಿ ಜಿಲ್ಲೆಯ ಹೂವಿನಶಿಗ್ಲಿಯಲ್ಲಿ! ಪೂರ್ವಾಶ್ರಮದ ಹೆಸರು ವಿಶ್ವಾರಾಧ್ಯ. ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದುದು ಬಾಬಯ್ಯ, ಬಾಬಾನಂದ, ಬಾಬಾಸ್ವಾಮಿ. ಅವರ ತಂದೆ ಶರಣಯ್ಯ, ತಾಯಿ ನೀಲಮ್ಮ. ಬಾಬಾನಂದ ಬಾಲ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸುತ್ತಿದ್ದಾಗ ಪೋಲಿಯೋ ಕಾರಣಕ್ಕೆ ಬಲಗಾಲಿನ ಸ್ವಾಧೀನ ಕಳೆದುಕೊಂಡು ವಿಕಲಚೇತನನಾದ. ಸಂಸ್ಕಾರವಂತನಾಗಿದ್ದ ಹುಡುಗ ಬಲಹೀನತೆಯನ್ನೇ ಶಕ್ತಿಯಾಗಿಸಿಕೊಂಡ. ತನ್ನೂರಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿ, ಪ್ರೌಢ ಶಿಕ್ಷಣಕ್ಕಾಗಿ ಕಮಲಾನಗರ ಸೇರಿಕೊಂಡ. ಅಂಗವಿಕಲತೆಯ ನಡುವೆಯೂ ನಿತ್ಯ ಎಂಟು ಕಿಲೋಮೀಟರ್ ನಡೆದು ಶಾಲೆಗೆ ಹೋಗಿ ಬರುತ್ತಿದ್ದ. ಓದಿನಲ್ಲಿ ಪ್ರತಿಭಾವಂತನಾಗಿದ್ದ ಹುಡುಗನಿಗೆ ಉನ್ನತ ವ್ಯಾಸಂಗ ಮಾಡುವ ಇಚ್ಛೆಯಿದ್ದರೂ ಮನೆಯ ಬಡತನದ ಕಾರಣಕ್ಕೆ ತಂದೆಯಿಂದ ವೈದಿಕವನ್ನು ಕಲಿತು, ಹೊಟ್ಟೆಪಾಡಿನ ವೈದಿಕ ಉನ್ನತ ಶಿಕ್ಷಣಕ್ಕಾಗಿ ಭಾಲ್ಕಿಯ ಹಿರೇಮಠ ಸೇರಿಕೊಂಡ. ಪಟ್ಟದ್ದೇವರ ಆಶ್ರಯದಲ್ಲಿ ವೇದ, ಶಾಸ್ತ್ರಗಳ ಮನನ ಮಾಡಿಕೊಂಡು ಅಲ್ಲಿಂದ ಉನ್ನತ ವ್ಯಾಸಂಗಕ್ಕಾಗಿ ಸಿದ್ಧರಿಂದ ಪಾವನಗೊಂಡ ಸುಕ್ಷೇತ್ರ ಸಿದ್ಧಗಂಗೆಗೆ ತೆರಳಿದ.

Tap to resize

Latest Videos

ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶೃಂಗೇರಿ: ಏಕಕಾಲಕ್ಕೆ 75 ಸಾವಿರ ಜನರಿಂದ ಬೃಹತ್ ವೇದಿಕೆಯಲ್ಲಿ ಶ್ಲೋಕ ಪಠಣೆ

ಬಿ.ಎ. ಮೊದಲ ವರ್ಷ ಮುಗಿಸಿ ತಂದೆ-ತಾಯಿಯನ್ನು ನೋಡುವ ಹಂಬಲದಿಂದ ಮನೆಗೆ ಹೊರಟಿದ್ದ ಹುಡುಗನ ಕಿವಿಯ ಮೇಲೆ ಶ್ರೀಕ್ಷೇತ್ರ ಮುಕ್ತಿ ಮಂದಿರದ ಕುರಿತಾದ ಮಾತುಗಳು ಬಿದ್ದವು. ದರ್ಶನ ಮಾಡಬೇಕೆಂಬ ಬಯಕೆ ಉಂಟಾಯಿತು. ರೈಲಿನಲ್ಲಿ ಸಾಗುತ್ತಿದ್ದಂತೆ, ಮನಸ್ಸೂ ಓಡಲಾರಂಭಿಸಿತು. ತಾನು ಜಂಗಮ, ಚಲನಶೀಲನಾಗಿರಬೇಕು. ಮನೆಗೆ ಮರಳಿ ಹೋಗಿ ಮಾಡುವುದಾದರೂ ಏನು? ಅದೇ ಎಲ್ಲರಂತೆ ಲೌಕಿಕದ ಲಾಲಾಸೆಗೆ ಬಿದ್ದ, ಇಂದ್ರೀಯ ಲೋಲುಪತೆಯಲ್ಲಿ ಹೊರಳಾಡುವ ಪಶು ಸಮಾನ ಬದುಕು! ತನಗದು ಸಲ್ಲದು ಎಂದು ಭಾವಿಸಿ ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಗಂಗಾಧರ ಶಿವಾಚಾರ್ಯರ ಪಾದಸ್ಪರ್ಶದಿಂದ ಪಾವನ ಕ್ಷೇತ್ರವಾಗಿದ್ದ ಮುಕ್ತಿ ಮಂದಿರಕ್ಕೆ ತೆರಳಿದರು. ನಾಲ್ಕುದಿನ ಮುಕ್ತಿಮಂದಿರದಲ್ಲಿ ತಿರುಗಾಡಿದ ಹುಡುಗನಲ್ಲಿ ಮೊಳೆದಿದ್ದ ವೈರಾಗ್ಯವು ಬಲಿಯತೊಡಗಿತ್ತು. ತಾನು ಮರಳಿ ಊರಿಗೆ ಹೋಗಬಾರದು ಎಂದು ನಿರ್ಧರಿಸಿ ಸಾಂಸಾರಿಕದಿಂದ ಮುಕ್ತನಾಗಿ ಚರಜಂಗನಂತೆ ಚಲಿಸುತ್ತಿರಬೇಕೆಂದು ಹತ್ತಿರದ 'ರಾಮಗಿರಿ' ಗ್ರಾಮಕ್ಕೆ ತೆರಳಿದರು.

ಕನಸ್ಸಲ್ಲಿ ಕಂಡ ಶಿವಲಿಂಗ ತೋರಿತು ದಾರಿ: ರಾಮಗಿರಿಯ ಬಸವಣ್ಣನ ದೇಗುಲದಲ್ಲಿ ಮಲಗಿದ್ದಾಗ ಕನಸ್ಸೊಂದು ಬಿದ್ದಿತು. ಸ್ವಪ್ನದಲ್ಲಿ ಒಂದು ಹಳ್ಳ ಕಾಣುತ್ತಿತ್ತು, ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದಿದ್ದ ಆ ಪ್ರದೇಶ ಭಯಾನಕವಾಗಿತ್ತು. ಆ ನಿರ್ಜನ ಪ್ರದೇಶದ ಮಧ್ಯೆ ಪಾಳುಬಿದ್ದ ದೇವಾಲಯ. ಅದರೊಳಗೆ ಶಿವ ಲಿಂಗ ಸ್ವರೂಪದಲಿ ಸ್ಥಿತನಾಗಿದ್ದಾನೆ, ಆತನ ಎದುರೇ ನಂದಿ ಮಂಡಿಯೂರಿ ಭಕ್ತಿ ಸಮರ್ಪಿಸುತ್ತಿದ್ದಾನೆ‌. ಅಶರೀರ ವಾಣಿಯೊಂದು ನನ್ನಲ್ಲಿಗೆ ಬಾ... ಬಾ... ಬಾಬಾ ಎಂದು ಕರೆದಂತೆ ಕೇಳಿತು. ದಿಗ್ಗನೆ ಎಚ್ಚರಾಗಿ ನೋಡಿದರೆ ಬೆಳಗಿನ ಜಾವ ದೇವಸ್ಥಾನದ ಅರ್ಚಕ ಕಸ ಗೂಡಿಸುತ್ತಿದ್ದಾನೆ‌. ಸ್ವಪ್ನದಲ್ಲಿ ಕಂಡ ಶಿವಲಿಂಗ ಎಲ್ಲಿರಬಹುದು ಎಂದು ಬಾಬಾನಂದರು ಹುಡುಕಿ ಹೊರಟರು. ಒಂಟಿಗಾಲಲ್ಲಿ ನಡೆಯುತ್ತಾ ಶಿವನನ್ನು ಹುಡುಕಿ ಒಂಟಿಗಾಲಲ್ಲಿ ಹಳ್ಳಿಯಿಂದ ಹಳ್ಳಿಗೆ ತಿರುಗಲು ಶುರು ಮಾಡಿದರು‌. ಕೊನೆಗೆ ಬಸವಳಿದು ಬಂದು ತಲುಪಿದ್ದು 'ಹೂವಿನಶಿಗ್ಲಿ' ಗ್ರಾಮ. ಅಲ್ಲಿ ಶಂಕರಗೌಡ ಪೊಲೀಸ್‌ಪಾಟೀಲ ಎಂಬ ವ್ಯಕ್ತಿಯನ್ನು ಸಂಧಿಸಿ ಕೇಳಲಾಗಿ ಶಿವನ ದೇವಸ್ಥಾನದ ಕುರಿತು ತಿಳಿಸಿದರು. ತಮ್ಮ ಕನಸ್ಸಿನಲ್ಲಿ ಕಂಡ ದೇವಸ್ಥಾನದಂತೆಯೇ ಅದು ಇರುವುದೇ ಎಂದು ಯೋಚಿಸಿ ಅಲ್ಲಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. 

ಬಾಬಾನಂದರು. ಹೋಗಿ ನೋಡಲಾಗಿ ಸಾಕ್ಷಾತ್ ಸ್ವಪ್ನದರ್ಶಿ ದೇವಸ್ಥಾನದ ಹಾಗೆಯೇ ಇದೆ! ಒಮ್ಮೆಲೆ ಪುಳಕಿತರಾದರು. ತಮ್ಮ ಕನಸ್ಸಿನ ಬಗ್ಗೆ ವಿವರಿಸಿ ಅಲ್ಲಿಯೇ ಇರಬೇಕೆಂಬ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು‌. ಅಲ್ಲಿದ್ದ ಜನರ ಸಹಕಾರದೊಂದಿಗೆ ಸ್ಥಳವನ್ನೆಲ್ಲ ಸ್ವಚ್ಛಗೊಳಿಸಿ, ಅನೇಕ ದಿನಗಳ ಕಾಲ ತಾವೇ ಅಲ್ಲಿನ ಕೆಲಸಗಳನ್ನೆಲ್ಲ ಮಾಡುತ್ತಾ  ಆಧ್ಯಾತ್ಮದ ಸುಧೆ ಇಲ್ಲದೆ ಸೊರಗಿ ಹೋಗಿದ್ದ ಹೂವಿನಶಿಗ್ಲಿಯಲ್ಲಿ ಮಠ ನಿರ್ಮಿಸಿ, ಪಾಳು ದೇಗುಲವನ್ನು, ಬರಡು ಗ್ರಾಮವನ್ನು ಈ ಶತಮಾನದ ಕಲ್ಯಾಣವಾಗಿಸಿದರು. ನಿತ್ಯ ಸತ್ಸಂಗ, ಪೌರ್ಣಿಮೆಗೊಮ್ಮೆ ಶಿವಾನುಭವ ಕಾರ್ಯಕ್ರಮ, ಉತ್ಸವಗಳು ಹಾಗೂ ಪ್ರವಚನಗಳನ್ನು ಏರ್ಪಡಿಸುತ್ತಿದ್ದ ಸ್ವಾಮೀಜಿಯವರು ಸುತ್ತಲಿನ ಗ್ರಾಮಗಳಲ್ಲಿ ಆಧ್ಯಾತ್ಮದ ಜಾಗೃತಿಯನ್ನೇ ಹುಟ್ಟುಹಾಕಿದರು. ಸ್ವಾಮೀಜಿಯವರ ಸತ್ಕಾರ್ಯಗಳನ್ನು ನೋಡಿ ಅನೇಕ ಮಠಾಧೀಶರು ಇಲ್ಲಿಗೆ ಬಂದು ಭಕ್ತರಿಗೆ, ಆಧ್ಯಾತ್ಮ ಪಿಪಾಸುಗಳಿಗೆ ಮಾರ್ಗದರ್ಶನ ಮಾಡಿ ಹೋಗಿದ್ದಾರೆ. ಹೀಗೆ ಬಂದವರಲ್ಲಿ ಬಾಗಲಕೋಟೆಯ ಶ್ರೀ ಸಹಜಾನಂದ ಸ್ವಾಮೀಜಿಯವರು ರಂಜನೆ ಇಲ್ಲದ ವಿರಕ್ತರಾದ ಬಾಬಾನಂದರಿಗೆ ಶ್ರೀ ನಿರಂಜನ ಸ್ವಾಮೀಜಿ ಎಂದು ನಾಮಕರಣ ಮಾಡಿದರು. 

ದಕ್ಷಿಣದ ಸಿದ್ಧಗಂಗೆಯಾದ ಹೂವಿನಶಿಗ್ಲಿ: ಸ್ವಾತಂತ್ರ್ಯ ಹೋರಾಟದಲ್ಲಿ ಗಣನೀಯ ಪಾತ್ರ ವಹಿಸಿದ್ದ ಹೂವಿನಶಿಗ್ಲಿಯಲ್ಲಿ ಪರಮಪೂಜ್ಯರ ಪ್ರೇರಣೆಯಿಂದ ಗ್ರಂಥಾಲಯ ತೆರೆಯಲಾಯಿತು. ಅದಕ್ಕೆ 'ಶ್ರೀ ಮಹಾತ್ಮಗಾಂಧಿ ವಾಚನಾಲಯ ಶ್ರೀ ವಿರಕ್ತಮಠ ಹೂವಿನಶಿಗ್ಲಿ' ಎಂದು ಸ್ವಾಮೀಜಿ ನಾಮಕರಣ ಮಾಡಿದರು. ಯುವಕರಲ್ಲಿ ಓದಿನ ಗೀಳು ಹೆಚ್ಚಿಸಿದ ಸ್ವಾಮೀಜಿ ಅವರನ್ನು ವಾಚನಾಲಯದ ಸದಸ್ಯರನ್ನಾಗಿಸಿ ಗ್ರಂಥಗಳ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ಕೆಲವು ನಿರ್ಗತಿಕ ಮಕ್ಕಳನ್ನು ತಮ್ಮೊಟ್ಟಿಗೆ ಇರಿಸಿಕೊಂಡು ಶಿಕ್ಷಣ ನೀಡಲು ಆರಂಭಿಸಿದರು. ತಮಗೇ ಸರಿಯಾದ ವ್ಯವಸ್ಥೆ ಇಲ್ಲದ ಕಾಲಕ್ಕೆ ನಾಲ್ಕಾರು ಮಕ್ಕಳನ್ನು ಜೊತೆಗಿರಿಸಿಕೊಂಡು ಅವರಿಗಾಗಿ ಜೋಳಿಗೆ ಹಾಕಿ ಊರೆಲ್ಲ ಭಿಕ್ಷಾಟನೆ ಮಾಡಿ ಸಾಕಿದರು. ಆ ಮಕ್ಕಳನ್ನು ಶಾಲೆಗೆ ಸೇರಿಸಿ, ಬೇಕಾದ ವ್ಯವಸ್ಥೆಯನ್ನೆಲ್ಲ ಭಕ್ತರಿಂದ ಮಾಡಿಸಿದರು. 

ಹೀಗೆ ಶುರುವಾದ ಸ್ವಾಮೀಜಿಯವರ ಶಿಕ್ಷಣ ದಾಸೋಹ 'ಶ್ರೀ ಗುರುಕುಲ ಶಿಕ್ಷಣ ಸಂಸ್ಥೆ'ಯನ್ನು ಹುಟ್ಟುಹಾಕುವವರೆಗೂ ಸಾಗಿತು. ಶ್ರೀಗುರು ನಿರಂಜನ ಪೂರ್ವ ಪ್ರಾಥಮಿಕ ಕನ್ನಡ ಶಾಲೆ, ಶ್ರೀ ಗುರುಕುಲ ವಸತಿ ಪ್ರಾಥಮಿಕ ಶಾಲೆ, ಶ್ರೀ ಗುರುಕುಲ ವಸತಿ ಪ್ರೌಢಶಾಲೆ ಆರಂಭಿಸಿದ ಪೂಜ್ಯರು ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ್ದಾರೆ. ಇಂದಿಗೆ ನಾಲ್ಕುನೂರಾ ಐವತ್ತಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದು, ನೂರಾರು ಬಡ ಹಾಗೂ ನಿರ್ಗತಿಕ ಮಕ್ಕಳು ಇಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಇಂದಿಗೂ ಇಲ್ಲಿಗೆ ಬಂದು ಅಧ್ಯಯನಕ್ಕೆಂದು ಮಕ್ಕಳನ್ನು ಇರಿಸಿ ಹೋಗುತ್ತಾರೆ ಬಡ ಪಾಲಕರು. ಸಂಸ್ಕಾರದ ಜೊತೆಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆ ನಿಜಕ್ಕೆ ಕರ್ನಾಟಕ ಉತ್ತರದ ಸಿದ್ಧಗಂಗೆ ಎನಿಸಿದೆ. ವ್ಯವಹಾರಿಕ ಯುಗದಲ್ಲಿ ಕಮರ್ಷಿಯಲ್ ಆಗದೇ, ಸೇವೆಯಾಗಿಯೇ ಮುಂದುವರೆದದ್ದು ಶ್ರೀ ನಿರಂಜನ ಸ್ವಾಮೀಜಿ (ಬಾಬಾನಂದರು) ಹಾಗೂ ಈಗಿನ ಮಠಾಧೀಶರಾದ ಶ್ರೀ ಚನ್ನವೀರ ಸ್ವಾಮೀಜಿ ಅವರಿಗೆ ಸಲ್ಲುವ ಶ್ರೇಯವಾಗಿದೆ‌.

ವೈದ್ಯಶ್ರೀ ನಿರಂಜನರು: ಮಹಾನ್ ಆಧ್ಯಾತ್ಮಿಕ ಸಾಧಕರಾದ ಶ್ರೀ ನಿರಂಜನ ಸ್ವಾಮೀಜಿಯವರು ಅನುಷ್ಠಾನ ಸಾಧಕರು, ತಪೋನಿಷ್ಠರು. ಅನೇಕ ಪವಾಡಗಳು ಇವರ ಕಾಲಕ್ಕೆ ಆಗಿದ್ದನ್ನು ಸ್ಮರಿಸಬಹುದು. ಸ್ವಾಮೀಜಿಯವರು ಸ್ವತಃ ಆಯುರ್ವೇದ ಪಂಡಿತರಾಗಿದ್ದರು. ಅನೇಕ ವಾಸಿಯಾಗದ ರೋಗಗಳಿಗೆ ಆಯುರ್ವೇದದ ಮೂಲಕ ಔಷಧ ತಯಾರಿಸಿ, ಗುಣಮುಖರಾಗಿಸಿದ್ದು ಇದೀಗ ಇತಿಹಾಸ. ಮಧುಮೇಹ, ಕ್ಯಾನ್ಸರ್, ಬಂಜೆತನ ನಿವಾರಣೆಯಂಥ ಅನೇಕ ಸಮಸ್ಯೆಗಳನ್ನು ತಮ್ಮ ಆಯುರ್ವೇದ ಜ್ಞಾನದ ಮೂಲಕ ಪರಿಹರಿಸಿದ ಕೀರ್ತಿ ನಿರಂಜನ ಸ್ವಾಮೀಜಿಯವರದ್ದು. ಹೀಗಾಗಿ ಭಕ್ತರು ಅವರನ್ನು 'ವೈದ್ಯಶ್ರೀ' ಎಂದೂ ಕರೆದರು. 
 
ಸತ್ಕಾರ್ಯಕ್ಕೆ ಹಲವು ಶಾಖಾ ಮಠ:
ಶ್ರೀ ನಿರಂಜನ ಸ್ವಾಮೀಜಿಯವರ ಕಾರ್ಯಗಳನ್ನು ನೋಡಿ ಹಲವೆಡೆ ಭಕ್ತರು ದಾನ ನೀಡಿ ಶಾಖಾ ಮಠಗಳನ್ನು ಆರಂಭಿಸುವಂತೆ ಕೇಳಿದರು. ತತ್ಪರಿಣಾಮ ಹಾವೇರಿ ಜಿಲ್ಲೆಯ ಸೋಮನಕಟ್ಟಿ (ಶಿಬಾರ ಬೂದಗಟ್ಟಿ), ಶಿರಹಟ್ಟಿ ತಾಲೂಕು ಕೊಂಚಿಗೆರೆ, ಆಂಧ್ರಪ್ರದೇಶದ ನಾಗೂರಬಿ ಹಾಗೂ ಸ್ವಾಮೀಜಿಯವರ ಪೂರ್ವಾಶ್ರಮ ಬೀದರಿನ ಸೋನಾಳದಲ್ಲಿ ಮಠಗಳು ಆರಂಭವಾದವು. ಅಲ್ಲಿಯೂ ಆಧ್ಯಾತ್ಮದ ಅನುಭಾವವನ್ನು ಹಂಚುವ ಕೆಲಸವನ್ನು ಶ್ರೀಗಳು ಮಾಡಿದ್ದಾರೆ‌. ಅಲ್ಲದೇ ಇಲ್ಲಿಯೂ ಗುರುಕುಲ ಮಾದರಿಯ ಶಾಲೆಯನ್ನು ಆರಂಭಿಸಿ 400ಕ್ಕೂ ಹೆಚ್ಚು ಬಡ ಮಕ್ಕಳ ಪಾಲಿನ ವಿದ್ಯಾದಾಯಿನಿ ಎನಿಸಿದ್ದಾರೆ‌. 

ಕದಳಿಯ ಕರ್ಪುರ: "ಹಲವು ಮಾತೇನು ನೀನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ ಜಲವೇ ಪಾವನ ತೀರ್ಥಸುಲಭ ಶ್ರೀಗುರುವೇ ಕೃಪೆಯಾಗು" ಎಂಬ ಮಾತಿನಂತೆ ತಾವು ಪಾದವಿರಿಸಿದ ಜಾಗವನ್ನೇ ಸುಕ್ಷೇತ್ರವನ್ನಾಗಿಸಿ ಪರಮ ಪೂಜ್ಯರು 2009ರ ಡಿಸೆಂಬರ್ 21ರಂದು ಕದಳಿಯ ಕರ್ಪುರವಾದರು. ಯತಿಗಳ ಲೋಕಕ್ಕೆ ಮುಕುಟಪ್ರಾಯರಾದ ನಿರಂಜನ ಸ್ವಾಮೀಜಿಯವರು ಬಂಜರು ಭೂಮಿಯಂತಿದ್ದ ಮಧ್ಯ ಕರ್ನಾಟಕವನ್ನು ನಂದನವನವನ್ನಾಗಿಸಿದವರು. ತಮ್ಮ ಇಡೀಯ ಬದುಕನ್ನು ಪರೋಪಕಾರಕ್ಕಾಗಿ ಶ್ರೀಗಂಧದಂತೆ ತೇಯ್ದವರು. ಅವರ ಹಾದಿಯಲ್ಲೇ ನಡೆಯುತ್ತಿರುವ ಪ್ರಸ್ತುತ ಮಠಾಧೀಶರೂ ತಮ್ಮ ಕಾರ್ಯಗಳ ಮೂಲಕವೇ ಗುರುತಿಸಲ್ಪಡುತ್ತಿದ್ದಾರೆ. ಬಡ ಹಾಗೂ ನಿರ್ಗತಿಕ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಯೋಜನೆಯನ್ನು ರೂಪಿಸಿರುವ ಅವರು, ಅನೇಕರ ಬಾಳನ್ನು ಬೆಳಗುವ ನಂದಾದೀಪವಾಗಿದ್ದಾರೆ. 

ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದೆ ಶಾರದಾ ಪೀಠ: ಬೃಹತ್ ವೇದಿಕೆಯಲ್ಲಿ 50 ಸಾವಿರ ಜನರಿಂದ ಶ್ಲೋಕ ಪಠಣ

ತನ್ಮೂಲಕ  ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಚಿಂತನೆಗೆ ನಾಂದಿ ಹಾಡಿರುವ ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಸಾಮಾಜ ಮುಖಿಯಾಗಿ ನೋಡಿಕೊಂಡು ಹೋಗುವ ಬಹುದೊಡ್ಡ ಚಿಂತನೆಯಲ್ಲಿದ್ದಾರೆ. ಶಿಕ್ಷಣ ವ್ಯಾಪಾರ ಆಗಬಾರದು ಎನ್ನುವುದು ಉಭಯ ಶ್ರೀಗಳ ಬಹುದೊಡ್ಡ ಕಾಳಜಿ. ಮುಂದಿನ ದಿನಗಳಲ್ಲಿ ಪಿಯುಸಿ, ಪದವಿ ಕಾಲೇಜು ಆರಂಭಿಸಲು ಯೋಚಿಸುತ್ತಿದ್ದು ಸರ್ಕಾರ ಜೊತೆಗೆ ನಿಲ್ಲಲಿ ಎನ್ನುವುದು ಕಳಕಳಿ. ಇಷ್ಟೆಲ್ಲ ಸಾಧನೆಗೈದ ಶ್ರೀ ಮ.ನಿ.ಪ್ರ. ನಿರಂಜನ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಪ್ರಸ್ತುತ ಶ್ರೀಗಳು ಶ್ರೀಮಠದ ಜಾತ್ರೆಯನ್ನೂ ಅವರ ಅಣತಿಯಂತೆಯೇ ನಡೆಸುತ್ತಿದ್ದಾರೆ. ಪ್ರತಿ ಸಂಕ್ರಾಂತಿಯ ಸಂದರ್ಭದಲ್ಲಿ ಮಠದ ರಥೋತ್ಸವ ನಡೆಯುತ್ತದೆ. ಈ ವೇಳೆ ಪುರಾಣ, ಪ್ರವಚನ, ಶಿವಾನುಭವ ಗೋಷ್ಠಿ, ಸಾಧಕರ ಗುರುತಿಸುವಿಕೆ, ಗಣ್ಯರ ಭೇಟಿ ಸೇರಿದಂತೆ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳು ಜರಗುತ್ತವೆ. ನಾಡಿನ ಹಲವೆಡೆಯ ಭಕ್ತರು ಈ ಜಾತ್ರೆಯಲ್ಲಿ ಭಾಗ ವಹಿಸುತ್ತಾರೆ. ಈ ಬಾರಿಯೂ ಜನೇವರಿ 14,15ರಂಸು ಜಾತ್ರೆ ನಡೆಯಲಿದ್ದು, ಈ ಅಂಕಣ ಓದಿದ ತಾವೂ ಮಠದ ಜಾತ್ರೆಯಲ್ಲಿ, ಸಮಾಜ ಸೇವಾ ಕೈಂಕರ್ಯದಲ್ಲಿ ಜೊತೆಯಾಗುವುದಾದರೆ ಅದಕ್ಕಿಂತ ಸುಯೋಗ ಇನ್ನೊಂದಿಲ್ಲ.


ಕಿರಣಕುಮಾರ ವಿವೇಕವಂಶಿ, ಬರಹಗಾರ, ಯುವ ವಾಗ್ಮಿ

click me!