ಶಾಸಕರು, ಹಿರಿಯ ಅಧಿಕಾರಿಗಳು ಸಂಚರಿಸುವ ರಸ್ತೆಗೆ ಕಾಯಕಲ್ಪವಿಲ್ಲ| ಕೆಸರುಮಯ ರಸ್ತೆಯಲ್ಲಿ ಸಿಲುಕಿ ವಾಹನ ಸವಾರರ ಪರದಾಟ| ದಿನನಿತ್ಯ ನೂರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ| ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಹುಬ್ಬಳ್ಳಿಯಿಂದ ಬರುವ ಭಾರಿ ಪ್ರಮಾಣದ ವಾಹನಗಳು ಇದೇ ರಸ್ತೆ ಮೂಲಕ ಸಂಚಾರ| ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಸಹ ಇತ್ತ ಕಡೆ ಗಮನ ಹರಿಸದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು|
ರಾಮಮೂರ್ತಿ ನವಲಿ
ಗಂಗಾವತಿ:(ಸೆ.28) ಕಳೆದೊಂದು ತಿಂಗಳಿಂದ ಗಂಗಾವತಿ ಆನೆಗೊಂದಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸೇರಿದಂತೆ ವಿದ್ಯಾರ್ಥಿಗಳು ಸಂಚರಿಸುವ ಈ ರಸ್ತೆಗೆ ಮುಕ್ತಿ ಎಂದು ಸಿಗುವುದು ಎಂಬ ಪ್ರಶ್ನೆ ಉದ್ಭವಿಸಿದೆ.
ಈಗಾಗಲೇ ಗಂಗಾವತಿಯಿಂದ ಐತಿಹಾಸಿಕ ಆನೆಗೊಂದಿ ಮತ್ತು ಹಂಪಿಗೆ ಹೋಗುವ ಈ ಮಾರ್ಗದಲ್ಲಿ ತೆಗ್ಗು, ದಿನ್ನೆಗಳು ಬಿದ್ದು ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ರಸ್ತೆ ಕೆಸರುಮಯವಾಗಿ ರಸ್ತೆಯಲ್ಲಿ ವಾಹನಗಳು ಸಿಲುಕಿ ಅಪಘಾತಕ್ಕೀಡಾಗಿವೆ.
ದಿನನಿತ್ಯ ನೂರಾರು ವಾಹನಗಳು ಓಡಾಡುವ ಈ ಪ್ರದೇಶದಲ್ಲಿ ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಹುಬ್ಬಳ್ಳಿಯಿಂದ ಬರುವ ಭಾರಿ ಪ್ರಮಾಣದ ವಾಹನಗಳು ಇದೇ ರಸ್ತೆ ಮೂಲಕ ಸಂಚರಿಸುತ್ತವೆ. ನಗರಸಭೆ ವ್ಯಾಪ್ತಿಗೆ ರಸ್ತೆ ಬರುತ್ತದೆ ಎಂದು ಲೋಕೋಪಯೋಗಿ ಇಲಾಖೆ ದೂರಿದರೆ, ನಗರಸಭೆಯವರು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರಸ್ತೆ ದುರಸ್ತಿ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗಾಗಲೇ ಗಂಗಾವತಿಯಿಂದ ಆನೆಗೊಂದಿ ಮಾರ್ಗದ ರಸ್ತೆಗೆ 1 ಕೋಟಿ ವೆಚ್ಚ ಮಾಡಿರುವ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ಬಿಲ್ ಮಾಡಿ ಕೈತೊಳೆದುಕೊಂಡಿದ್ದಾರೆ. ಕನಿಷ್ಠ 2 ವರ್ಷಗಳವರೆಗೆ ದುರಸ್ತಿ ಕಾರ್ಯ ಮಾಡಬೇಕೆಂಬ ನಿಯಮವಿದೆ. ಆದರೆ, ರಸ್ತೆ ಸಂಪೂರ್ಣ ಹದಗೆಟ್ಟು ದಿನನಿತ್ಯ ಅವಘಡ ಸಂಭವಿಸಿದರೂ ಯಾರು ಇತ್ತ ಕಡೆ ಗಮನಹರಿಸದ ಕಾರಣ ಜನರ ಅಕ್ರೋಶಕ್ಕೆ ಕಾರಣವಾಗಿದೆ.
ಭಾರಿ ಪ್ರಮಾಣದ ವಾಹನಗಳ ಸಂಚಾರ:
ಗಂಗಾವತಿಯಿಂದ ಹೊಸಪೇಟೆಗೆ ಭಾರಿ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆ ಹಾಳಾಗಲು ಕಾರಣವಾಗಿದೆ. ಗಂಗಾವತಿ- ಕಂಪ್ಲಿ ತುಂಗಭದ್ರಾ ಸೇತುವೆ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ರದ್ದುಪಡಿಸಿದ್ದರಿಂದ ಈಗ ಕಡೇಬಾಗಿಲು ಮತ್ತು ಬುಕ್ಕಸಾಗರದ ಮಾರ್ಗದಲ್ಲಿ ಸಂಚಾರ ಮಾಡುತ್ತಿವೆ.
ಇದರಿಂದ ವಾಹನಗಳ ಸಂಚಾರ ದಟ್ಟವಾಗಿದ್ದರಿಂದ ರಸ್ತೆಗಳ ಮಧ್ಯ ಗುಂಡಿಗಳು ಬಿದ್ದಿವೆ. ನಗರದ ವಿರೂಪಾಪುರ ತಾಂಡಾ ಬಳಿ ರಸ್ತೆ ಮಧ್ಯೆ ಗುಂಡಿ ಬಿದ್ದಿದ್ದರಿಂದ ಭಾರಿ ಪ್ರಮಾಣದ ಲಾರಿ ಸಿಕ್ಕಿ ಹಾಕಿಕೊಂಡಿದೆ. ಲಾರಿಯ ಚಕ್ರ ಮುರಿದು ಬಿದ್ದು ಅಪಘಾತ ಸಂಭವಿಸಿದೆ. ಪದವಿ ಕಾಲೇಜು, ಎಂಜಿನಿಯರ್ ಮತ್ತು ಐಟಿಐ ಕಾಲೇಜು ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ವಿದ್ಯಾರ್ಥಿಗಳು ಇದೇ ರಸ್ತೆ ಮೇಲೆ ಸಂಚರಿಸುತ್ತಾರೆ. ಎಷ್ಟೋ ಭಾರಿ ಶಾಲಾ ಅಟೋಗಳು ಉರಳಿಬಿದ್ದ ಉದಾಹರಣೆಗಳಿವೆ.
ಶಾಸಕರು, ಹಿರಿಯ ಅಧಿಕಾರಿಗಳು ಸಂಚರಿಸುವ ರಸ್ತೆ:
ಐತಿಹಾಸಿಕ ಪ್ರದೇಶ ಆನೆಗೊಂದಿ- ಹಂಪಿಗೆ ಹೋಗುವ ಈ ಮಾರ್ಗದಲ್ಲಿ ಸಂಸದರು, ಸಚಿವರು, ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳು ಇದೇ ಮಾರ್ಗದಲ್ಲಿ ದಿನನಿತ್ಯ ಸಂಚರಿಸಿ ರಸ್ತೆ ದಾಟಿಕೊಂಡು ಸಕ್ರ್ಯೂಟ್‌ಹೌಸ್‌ಗೆ ತೆರುಳುತ್ತಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಆದರೆ, ಈ ರಸ್ತೆ ಏಕೆ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ ಪೌರಾಯುಕ್ತರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದೇ ರಸ್ತೆ ಮೇಲೆ ಸಂಚರಿಸುತ್ತಿರುವುದರಿಂದ ಗಬ್ಬೆದ್ದು ಹೋಗಿರುವುದು ಕಣ್ಣಿಗೆ ಬೀಳುತ್ತಿದೆಯೋ ಇಲ್ಲವೋ ಎನ್ನುವಂತಾಗಿದೆ.
ಶಾಸಕರು ಗಮನಹರಿಸುತ್ತಾರೆಯೇ?:
ಶಾಸಕರು ದಿನನಿತ್ಯ ವಿವಿಧ ಕಾಮಗಾರಿ ಭೂಮಿಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಆನೆಗೊಂದಿ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಾರೆ ಆದರೆ ಗಮನಹರಿಸುತ್ತಿಲ್ಲ. ಯುಜಿಡಿ ಮತ್ತು ಕುಡಿಯುವ ನೀರಿನ ಯೋಜನೆಗಳು ಕಾಮಗಾರಿಗೆ ರಸ್ತೆ ಅಗೆದಿದ್ದರೂ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ರಸ್ತೆ ದುಸ್ಥಿತಿ ಮಧ್ಯೆಯೂ ರೈತರು ಕೃಷಿ ಚಟುವಟಿಕೆಗೆ ಈ ಮಾರ್ಗ ಬದಲಾಯಿಸಿದ್ದಾರೆ. ಆದರೆ, ಶಾಸಕರು ಗಮನಹರಿಸುತ್ತಿಲ್ಲ ಎಂಬ ಅರೋಪ ಕೇಳಿಬರುತ್ತಿದೆ.
ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ನಡುವಿನ ಜಗಳವೇ ರಸ್ತೆ ದುರಸ್ತಿ ಕಾರ್ಯ ವಿಳಂಬವಾಗುವುದಕ್ಕೆ ಕಾರಣವಾಗಿದೆ. ಈಗಾಗಲೇ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಗೆ ಜನರು ಮನವಿ ಮಾಡಿಕೊಂಡರೂ ದುರಸ್ತಿ ಕಾರ್ಯ ಕಡೆಗೆ ಗಮನಹರಿಸದ ಕಾರಣ ಜನರ ಅಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿದ ಗಂಗಾವತಿ ನಗರದ 34ನೇ ವಾರ್ಡ್ ನಿವಾಸಿ ಕೆ. ಚಂದ್ರಪ್ಪ ಉಪ್ಪಾರ ಅವರು, ತಿಂಗಳಿಂದ ಗಂಗಾವತಿ- ಆನೆಗೊಂದಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದರೂ ಸಹ ಇತ್ತ ಕಡೆ ಜನಪ್ರತಿನಿಧಿಗಳಾಗಲಿ, ಹಿರಿಯ ಅಧಿಕಾರಿಗಳಾಗಿ ಗಮನ ಹರಿಸುತ್ತಿಲ್ಲ. ಹಲವಾರು ಬಾರಿ ಮನವಿ ಮಾಡಿಕೊಂಡರೂ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ನಾಗರಿಕರು ಬೇಸತ್ತಿದ್ದಾರೆ. ಕೂಡಲೆ ರಸ್ತೆ ದುರಸ್ತಿಗೊಳ್ಳದಿದ್ದರೆ ನಾಗರಿಕರು ಇಲಾಖೆ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)