* ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ನಡೆದ ಘಟನೆ
* ಆಹಾರ ಕಳಪೆಯೆಂದು ದೃಢಪಟ್ಟಲ್ಲಿ ಲೈಸನ್ಸ್ ರದ್ದತಿಗೆ ಕ್ರಮ
* ಸಂಗ್ರಹಿಸಲಾದ ಮಾಂಸವನ್ನು ಬೆಂಗಳೂರು ಪ್ರಯೋಗಾಲಯಕ್ಕೆ ರವಾನೆ
ಕೋಲಾರ(ಜು.04): ಗ್ರಾಹಕರೊಬ್ಬರು ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋದ ತಂದೂರಿ ಚಿಕನ್‌ನಲ್ಲಿ ಹುಳಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಹೋಟೆಲ್‌ಗೆ ಬೀಗ ಹಾಕಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ನಡೆದಿದೆ.
ಕೆಜಿಎಫ್ ನಗರದ ವಿನೋದ್ ಕುಮಾರ್ ಎಂಬವರು ಹೋಟೆಲ್‌ನಿಂದ ಮಧ್ಯಾಹ್ನ ಊಟಕ್ಕೆ ತಂದೂರಿ ಚಿಕನ್ ಪಾರ್ಸೆಲ್ ತಂದಿದ್ದರು. ಮನೆಯಲ್ಲಿ ಪಾರ್ಸೆಲ್ ಬಿಡಿಸಿ ನೋಡಿದಾಗ ಚಿಕನ್‌ನಲ್ಲಿ ಹುಳುಗಳು ಇರುವುದು ಕಂಡುಬಂದಿದೆ. ಕೂಡಲೇ ವಿನೋದ್ ಕುಮಾರ್ ನಗರಸಭೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ನಗರಸಭೆಯವರು ನಿರ್ಲಕ್ಷ್ಯ ವಹಿಸಿದ ಕಾರಣ ಕೋಲಾರದ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ ವಾಟ್ಸಾಪ್‌ನಲ್ಲಿ ಫೋಟೋ ರವಾನಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಕೆಜಿಎಫ್ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣವೇ ಹೋಟೆಲ್‌ಗೆ ಧಾವಿಸಿದ ನಗರಸಭೆ ಅಧಿಕಾರಿಗಳು ಫ್ರಿಡ್ಜ್‌ನಲ್ಲಿದ್ದ ತಂದೂರಿ ಚಿಕನ್ ವಶಕ್ಕೆ ಪಡೆದು ಹೋಟೆಲ್‌ಗೆ ಬೀಗ ಜಡಿದಿದ್ದಾರೆ.
ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ, ಪಕ್ಷ ತೊರೆಯುವ ಸುಳಿವು ಕೊಟ್ಟ ಮತ್ತೋರ್ವ ಹಿರಿಯ ನಾಯಕ
ಘಟನೆಯ ಬಗ್ಗೆ ಮಾತನಾಡಿದ ಕೆಜಿಎಫ್ ನಗರಸಭೆ ಪೌರಾಯುಕ್ತ ನವೀನ್ ಚಂದ್ರ ಹೋಟೆಲ್‌ನಿಂದ ಸಂಗ್ರಹಿಸಲಾಗಿರುವ ಮಾಂಸವನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದು ವೇಳೆ ಕಳಪೆ ಗುಣಮಟ್ಟವಾಗಿದ್ದರೆ ಆಹಾರ ಸುರಕ್ಷತಾ ಕಾಯ್ದೆ ಮತ್ತು ಮುನ್ಸಿಪಲ್ ಕಾಯ್ದೆಯ ಪ್ರಕಾರ ಹೋಟೆಲ್ ಲೈಸೆನ್ಸ್ ರದ್ದುಗೊಳಿಸಲು ಕ್ರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.