ಯುವತಿಯ ಕಣ್ಣುಗಳಿಂದ ಬರುತ್ತಿವೆ ಬಾಲದ ಹುಳು: ವೈದ್ಯರಿಗೂ ಅಚ್ಚರಿ!

By Kannadaprabha NewsFirst Published Jan 13, 2020, 7:29 AM IST
Highlights

ಕಿಮ್ಸ್‌ನಲ್ಲಿ 3ದಿನಗಳಿಂದ ಯುವತಿಗೆ ಚಿಕಿತ್ಸೆ| ದೈಹಿಕ ಹಾಗೂ ಮಾನಸಿಕ ನ್ಯೂನತೆಯಿಂದ ಬಳಲುತ್ತಿರುವ ಮಹಿಳೆ|ಕಳೆದ 10-15 ದಿನಗಳಲ್ಲಿ ಬಿಳಿ ಬಣ್ಣದ ಬಾಲದ ಹುಳುಗಳಂತಿರುವ ಹುಳುಗಳು ಕಣ್ಣಿನಿಂದ ಬರುತ್ತಿವೆ|ಸ್ಕ್ಯಾನಿಂಗ್‌  ವರದಿ ಬಂದ ಬಳಿಕವೇ ಕಣ್ಣುಗಳಲ್ಲಿ ಹುಳುಗಳು ಬರುತ್ತಿರುವುದಕ್ಕೆ ಕಾರಣವೇನು ಎಂಬುದು ಗೊತ್ತಾಗಲಿದೆ |

ಹುಬ್ಬಳ್ಳಿ[ಜ.13]: ಸಾಮಾನ್ಯವಾಗಿ ಮನುಷ್ಯನ ಕಣ್ಣುಗಳಲ್ಲಿ ನೀರು ಬರುತ್ತದೆ. ಇದು ಸಹಜ ಕೂಡ. ಇನ್ನೂ ಏನಾದರೂ ಗಾಯಗಳಾದರೆ ರಕ್ತ ಬರುವುದನ್ನೂ ಕೇಳಿದ್ದೇವೆ. ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆಯ ಕಣ್ಣುಗಳಿಂದ ಹುಳುಗಳು ಬರುತ್ತಿವೆ. ಇದಕ್ಕೆ ವೈದ್ಯರು ಚಕಿತ ವ್ಯಕ್ತಪಡಿಸಿದ್ದು, ಕಿಮ್ಸ್‌ನಲ್ಲಿ ಯುವತಿಗೆ ಕಳೆದ 3 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಆಶಾಬಿ ಬೆಂಡಿಗೇರಿ (42) ಎಂಬ ಮಹಿಳೆಯ ಕಣ್ಣುಗಳಿಂದ ಹುಳುಗಳು ಬರುತ್ತಿವೆ. ಈಕೆ ದೈಹಿಕ ಹಾಗೂ ಮಾನಸಿಕ ನ್ಯೂನತೆಯಿಂದ ಬಳಲುತ್ತಿದ್ದಾಳೆ. ಮಾನಸಿಕ ಅಸ್ವಸ್ಥೆಯಾಗಿರುವ ಈಕೆಯನ್ನು ಪಾಲಕರೇ ಪೋಷಣೆ ಮಾಡುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಕೆಗೆ ಕಳೆದ 10-15 ದಿನಗಳಲ್ಲಿ ಬಿಳಿ ಬಣ್ಣದ ಬಾಲದ ಹುಳುಗಳಂತಿರುವ ಹುಳುಗಳು ಕಣ್ಣಿನಿಂದ ಬರುತ್ತಿವೆ. ಮೊದಲಿಗೆ ಯಾವುದೋ ಕಾರಣಕ್ಕೆ ಬರುತ್ತಿರಬಹುದು ಎಂದು ತಿಳಿದುಕೊಂಡಿದ್ದ ಪಾಲಕರು, ಅದು ಜಾಸ್ತಿಯಾದ ತಕ್ಷಣ ಗಾಬರಿಯಾಗಿದ್ದಾರೆ. ಎಡಕಣ್ಣುಗಳಲ್ಲಿ ಈ ರೀತಿ ಹುಳುಗಳು ಜಾಸ್ತಿ ಬರುತ್ತಿವೆ. ಹಾಗಂತ ಬಲಗಣ್ಣಲ್ಲಿ ಬರುವುದೇ ಇಲ್ಲ ಅಂತೇನೂ ಅಲ್ಲ. ಅಲ್ಲೂ ಬರುತ್ತಿವೆ. ಆದರೆ ಎಡಗಣ್ಣಿನಷ್ಟು ಬಲಗಣ್ಣಿನಲ್ಲಿ ಬರಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದ ಮೂರು ದಿನಗಳ ಹಿಂದೆ ಇಲ್ಲಿನ ಕಿಮ್ಸ್‌ಗೆ ಕರೆದುಕೊಂಡು ದಾಖಲಿಸಿದ್ದಾರೆ. ವೈದ್ಯರು ಕೂಡ ಯುವತಿಗೆ ಪರಿಸ್ಥಿತಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದು, ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸ್ಕ್ಯಾನಿಂಗ್‌ ಮಾಡಿಸಿದ್ದಾರೆ. ಅದರ ವರದಿ ಬಂದ ಬಳಿಕವೇ ಈಕೆಯ ಕಣ್ಣುಗಳಲ್ಲಿ ಹುಳುಗಳು ಬರುತ್ತಿರುವುದಕ್ಕೆ ಕಾರಣವೇನು ಎಂಬುದು ಗೊತ್ತಾಗಲಿದೆ ಎಂಬುದು ವೈದ್ಯರು ತಿಳಿಸುತ್ತಾರೆ.

ಈ ಕುರಿತು ಯುವತಿಯ ತಾಯಿ ನಜುಮಾ ಬೆಂಡಿಗೇರಿ ಮಾತನಾಡಿ, ನನ್ನ ಮಗಳ ಕಣ್ಣುಗಳಿಂದ ಕೆಲ ದಿನಗಳಿಂದ ಬಿಳಿ ಬಣ್ಣದ ಹುಳುಗಳು ಬೀಳುತ್ತಿವೆ. ಕಳೆದ 15-20 ದಿನಗಳಿಂದ ಈ ಸಮಸ್ಯೆ ಎದುರಾಗಿದೆ. ಏಕೆ ಹೀಗಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ವೈದ್ಯರು ಹೇಳುತ್ತಿಲ್ಲ. ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ ಎಂದು ಕಣ್ಣಿರು ಸುರಿಸುತ್ತಾರೆ.

ಯುವತಿಯ ಸಂಬಂಧಿ ಆಸೀಫ್‌, ಕಣ್ಣುಗಳಿಂದ ಹುಳುಗಳು ಬರುತ್ತಿರುವುದರಿಂದ ಯುವತಿಯ ದೇಹಸ್ಥಿತಿ ಗಂಭೀರವಾಗುತ್ತಿದೆ. ಯುವತಿಯದ್ದು ಬಡಕುಟುಂಬ ಸರ್ಕಾರ. ಏನಾದರೂ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಯುವತಿಯ ಕಣ್ಣಲ್ಲಿ ಹುಳುಗಳು ಬರುತ್ತಿರುವುದು ಅಚ್ಚರಿಯನ್ನು ಮಾಡಿರುವುದಂತೂ ಸತ್ಯ.

click me!