
ಕುಷ್ಟಗಿ(ಮೇ.25): ಮತದಾನ ಮಾಡಲು ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ರಾಜ್ಯದ ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಆಗಮಿಸಿರುವ ಗುಳೇ ಕಾರ್ಮಿಕರು ವಾಪಸ್ ಪುನಃ ತಮ್ಮ ಕೆಲಸದ ಸ್ಥಳಕ್ಕೆ ತೆರಳಲು ಪರದಾಡುತ್ತಿದ್ದಾರೆ.
ಕೂಲಿ ಅರಸಿ ವಿವಿಧೆಡೆ ಗುಳೇ ಹೋಗಿದ್ದರು. ದುಡಿಮೆ ಅಲ್ಲಿದ್ದರೂ ಇಂದಿಗೂ ತಮ್ಮ ಗ್ರಾಮದಲ್ಲಿ ಮತದಾರರಾಗಿರುವ ಇವರನ್ನು ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ವಾಹನ ವ್ಯವಸ್ಥೆ ಮಾಡಿ ಮತದಾನದ ದಿನ ಊರಿಗೆ ಕರೆದು ತಂದು ಮತದಾನ ಮಾಡಿಸಿದ್ದಾರೆ. ಹೀಗೆ ಊರಿಗೆ ಬರುವಾಗ ಇವರಿಗೆ ವಾಹನ ವ್ಯವಸ್ಥೆಯ ಜತೆಗೆ ಊಟ-ತಿಂಡಿ ವ್ಯವಸ್ಥೆಯನ್ನೂ ಮಾಡಿದ್ದರು. ಮತದಾನ ಮುಗಿದು, ಫಲಿತಾಂಶವೂ ಪ್ರಕಟವಾಗಿದೆ. ಈಗ ಇವರನ್ನು ಕೇಳುವವರೇ ಇಲ್ಲ.
ಒಂದು ವಾರದಿಂದ ಕುಷ್ಟಗಿ ಸೇರಿದಂತೆ ಸುತ್ತಮುತ್ತಲಿನ ತಾಲೂಕಿನ ಅನೇಕ ಗ್ರಾಮಗಳ ಜನತೆ ವಾಪಸ್ ಕೆಲಸ ಸ್ಥಳಕ್ಕೆ ಹೋಗಲು ಕುಷ್ಟಗಿ ಬಸ್ ನಿಲ್ದಾಣಕ್ಕೆ ಬರುತ್ತಾರೆ. ಹೆಚ್ಚಿನ ಸಾರಿಗೆ ಸೌಲಭ್ಯ ಇಲ್ಲದ್ದರಿಂದ ಪರದಾಡುವಂತಾಗಿದೆ. ಮುಂಗಡ ಬುಕ್ಕಿಂಗ್ ಮಾಡಿ ಸುಖಾಸೀನ, ಸ್ಲೀಪರ್ ಕೋಚ್, ವೋಲ್ವೊ ಬಸ್ಸುಗಳಲ್ಲಿ ತೆರಳುವ ಶಕ್ತಿ ಇವರಿಗಿಲ್ಲ. ಏನಿದ್ದರೂ ಕೆಂಪು ಬಸ್ಸಲ್ಲೇ ಹೋಗಬೇಕಿದೆ. ಆದರೆ ಬಸ್ಸುಗಳ ಕೊರತೆ ಇದೆ. ಮಂಗಳೂರು, ಬೆಂಗಳೂರಿಗೆ ಬೆಂಗಳೂರಿಗೆ ಅತಿ ಹೆಚ್ಚಿನ ಸಂಖ್ಯೆ ಕೂಲಿಕಾರರು ಹೋಗುತ್ತಿದ್ದಾರೆ. ಬಸ್ಸಿಗಾಗಿ ಬಂದು, ಸೀಟು ಸಿಗದೇ ವಾಪಸ್ ಹೋಗುತ್ತಿದ್ದಾರೆ.
ಕರೆಂಟ್ ಬಿಲ್ ಕಟ್ಟಿ ಅನ್ನೋದೆ ತಪ್ಪಾ ?: ಜೆಸ್ಕಾಂ ಲೈನ್‌ಮ್ಯಾನ್ ಮೇಲೆ ಚಪ್ಪಲಿಯಿಂದ ಹಲ್ಲೆ- ವಿಡಿಯೋ ವೈರಲ್
ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ಕುಷ್ಟಗಿ ಘಟಕದಿಂದ ಪ್ರತಿ ದಿನ ಬೆಂಗಳೂರಿಗೆ ಐದಾರು ಬಸ್ ತೆರಳುತ್ತದೆ. ಅದೇ ರೀತಿ ಮಂಗಳೂರಿಗೆ 2, ಮೀರಜ್‌ಗೆ ಒಂದು ಬಸ್ ಸಂಚಾರ ಇದೆ. ಈಗ ಕಾರ್ಮಿಕರಿಗಾಗಿಯೇ ಮಂಗಳೂರಿಗೆ ಹೆಚ್ಚುವರಿ ಬಸ್ ಸೌಲಭ್ಯ ಸಹ ಕಲ್ಪಿಸಲಾಗಿದೆ.
ಸಾರಿಗೆ ಸಂಸ್ಥೆ, ಖಾಸಗಿ ಬಸ್, ಕ್ರೂಷರ್, ಇತರೆ ವಾಹನಗಳು ನಿತ್ಯ ಸಾವಿರಾರು ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಇದನ್ನೆ ಬಂಡವಾಳ ಮಾಡಿಕೊಂಡ ವಾಹನ ಮಾಲೀಕರು ದುಪ್ಪಟ್ಟು ದರ ಪಡೆದುಕೊಳ್ಳುತ್ತಿದ್ದಾರೆ. ಪ್ರಯಾಣ ದರ ಎಷ್ಟೆ ಆಗಲಿ ನಮ್ಮನ್ನು ಬೆಂಗಳೂರು ತಲುಪಿಸಿ ಎಂಬುದು ಪ್ರಯಾಣಕರ ವಾದ. ಮಕ್ಕಳು ಸಮೇತ ಅಗತ್ಯ ಲಗೇಜು ಹೊತ್ತು ಬಸ್ ನಿಲ್ದಾಣಕ್ಕೆ ಬರುತ್ತಿರುವ ಕೂಲಿಕಾರರ ಸಂಖ್ಯೆ ಕಂಡು ಸಾರಿಗೆ ಸಂಸ್ಥೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.
ಹಲವು ದಿನಗಳಿಂದ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೆಚ್ಚುವರಿಯಾಗಿ ನಿತ್ಯ 5 ರಿಂದ 10 ಬಸ್ ವ್ಯವಸ್ಥೆ ಮಾಡುತ್ತಿದ್ದೇವೆ. ಅಷ್ಟೊಂದು ಪ್ರಮಾಣದ ಸಂಖ್ಯೆ ಹೊರಟಿರುವುದು ತಮಗೂ ತಿಳಿಯದಾಗಿದೆ. ಸಾಧ್ಯವಾದಷ್ಟು ಸೌಲಭ್ಯ ಕಲ್ಪಿಸಲಾಗುವುದು ಅಂತ ಕುಷ್ಟಗಿ ಸಾರಿಗೆ ಘಟಕದ ಪ್ರಭಾರಿ ವ್ಯವಸ್ಥಾಪಕ ಸಣ್ಣ ಕುಂಟಪ್ಪ ತಿಳಿಸಿದ್ದಾರೆ.