ಒಗ್ಗಟ್ಟಿನಿಂದ ಹೋರಾಡಿದ ಮಹಿಳೆಯರು ತಮ್ಮ ಗ್ರಾಮದಲ್ಲಿನ ಮದ್ಯದಂಗಡಿಯನ್ನು ಬಂದ್ ಮಾಡಿಸಿ ಮಾದರಿ ನಡೆ ಅನುಸರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಬಳಿಯ ಕೋಚರಿ ಗ್ರಾಪಂನಲ್ಲಿ ನಡೆದಿದೆ.
ಸಂಕೇಶ್ವರ(ಆ.31): ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ದಿನವೇ ಗ್ರಾಪಂ ಸದಸ್ಯನ ಮಾತಿನಿಂದ ಪ್ರೇರೇಪಿತಗೊಂಡು, ಒಗ್ಗಟ್ಟಿನಿಂದ ಹೋರಾಡಿದ ಮಹಿಳೆಯರು ತಮ್ಮ ಗ್ರಾಮದಲ್ಲಿನ ಮದ್ಯದಂಗಡಿಯನ್ನು ಬಂದ್ ಮಾಡಿಸಿ ಮಾದರಿ ನಡೆ ಅನುಸರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಬಳಿಯ ಕೋಚರಿ ಗ್ರಾಪಂನಲ್ಲಿ ಬುಧವಾರ ನಡೆದಿದೆ.
ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ನೇರಪ್ರಸಾರದ ವ್ಯವಸ್ಥೆಯನ್ನು ಕೋಚರಿ ಗ್ರಾಪಂ ಮುಂಭಾಗದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಗ್ರಾಪಂ ಸದಸ್ಯ ಹನಮಂತರಾವ್ ಇನಾಂದಾರ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಮನೆಯಲ್ಲಿ ಪುರುಷರಿಗೆ ನೀಡಿದರೆ ಅವರು ಮದ್ಯದ ಅಂಗಡಿಗೆ ನೀಡಿ ನಿಮ್ಮ ಹಣ ಹಾಳು ಮಾಡುತ್ತಾರೆ. ಹೀಗಾಗಿ ಯಾರೂ ಅವರ ಕೈಗೆ ಹಣ ಕೊಡಬೇಡಿ ಎಂದು ಕರೆ ನೀಡಿದರು. ಇದರಿಂದ ಪ್ರೇರೇಪಿತರಾದ ಅಲ್ಲಿ ನೆರೆದಿದ್ದ ಫಲಾನುಭವಿ ಮಹಿಳೆಯರು, ನಾನಾ ಸ್ತ್ರಿಶಕ್ತಿ ಸಂಘಗಳೊಡನೆ ಕಾರ್ಯಕ್ರಮ ವೇದಿಕೆಯಿಂದ ನೇರವಾಗಿ ಸಮೀಪದಲ್ಲಿಯೇ ಇದ್ದ ಮದ್ಯದ ಅಂಗಡಿ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಲು ಆರಂಭಿಸಿದರು.
ಕ್ರಿಸ್ಟಲ್ ಉಪ್ಪು ಪತ್ತೆ ಪ್ರಕರಣ; ಹಿಂಡಲಗಾ ಕಾರಾಗೃಹದ ಮೂವರು ಕೈದಿಗಳ ವಿರುದ್ಧ ಕೇಸು
ಗ್ರಾಮಸ್ಥರ ನೆಮ್ಮದಿಗೆ ಭಂಗವಾಗುತ್ತಿರುವ ಈ ಮದ್ಯದ ಅಂಗಡಿ ಮುಚ್ಚಬೇಕು ಎಂದು ಒತ್ತಾಯಿಸಿದರು. ಇದು ಗ್ರಾಮಸ್ಥರಿಗೆ ತುಂಬ ತೊಂದರೆ ಉಂಟಾಗುತ್ತಿದೆ. ಹದಿಹರೆಯದ ಯುವಕರು ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದು, ಮನೆಯಲ್ಲಿನ ಗಂಡಸರು ಪ್ರತಿ ನಿತ್ಯ ಮದ್ಯ ಸೇವಿಸಿ ಮನೆಯಲ್ಲಿ ಜಗಳ ಮಾಡುತ್ತಿದ್ದಾರೆ. ನಾವು ಪಡೆದ ಸಾಲವನ್ನು ತುಂಬದೆ ಸಂಕಷ್ಟ ಎದುರಾಗುತ್ತಿದ್ದು, ಕೂಡಲೇ ಈ ಮದ್ಯದಂಗಡಿಯನ್ನು ಇಲ್ಲಿಂದ ತೆರವುಗೊಳಿಸಬೇಕು. ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ನಂತರ ವಿಷಯ ತಿಳಿದು ಸ್ಥಳಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿ, ತಾತ್ಕಾಲಿಕವಾಗಿ ಮದ್ಯದ ಅಂಗಡಿಯನ್ನ ಬಂದ್ ಮಾಡಲಾಯಿತು.