ಸ್ಕ್ಯಾನಿಂಗ್ ಸೆಂಟರ್‌ ಭ್ರೂಣ ಪತ್ತೆ ಹಚ್ಚೋ ಕಾರ್ಯ ಮಾಡಬಾರದು: ಉಡುಪಿ ಡಿಸಿ ವಿದ್ಯಾಕುಮಾರಿ

By Girish GoudarFirst Published Aug 31, 2023, 12:33 PM IST
Highlights

ಸ್ಕ್ಯಾನಿಂಗ್‌ ಸೆಂಟರ್‌ಗಳು ಪರವಾನಿಗೆ ಹೊಂದಿ, ಅನುಮತಿ ಪಡೆದಿರಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳು ಭ್ರೂಣವನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಬಾರದು. ನಿಯಮಾನುಸಾರ ದಾಖಲಾತಿಗಳನ್ನು ಪ್ರತಿದಿನ ನಿರ್ವಹಣೆ ಮಾಡಬೇಕು: ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ 

ಉಡುಪಿ(ಆ.31): ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವುದು ಕಾನೂನಿನ ಅಡಿಯಲ್ಲಿ ಅಪರಾಧ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳ ಲಿಂಗಾನುಪಾತ ವ್ಯತ್ಯಾಸ ಉಂಟಾಗಿ ಸಮಾಜದಲ್ಲಿ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.

ಅವರು ಇಂದು(ಗುರುವಾರ) ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಕ್ಷಮ ಪ್ರಾಧಿಕಾರ ಪಿ.ಸಿ. & ಪಿ.ಎನ್.ಡಿ.ಟಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ಪಿ.ಸಿ & ಪಿ.ಎನ್.ಡಿ.ಟಿ ನೋಂದಾಯಿತ ಸಂಸ್ಥೆಗಳ ಮಾಲೀಕರು ಹಾಗೂ ವೈದ್ಯರಿಗೆ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರಿತು ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ಇವತ್ತು ಕಾಣಲಿರೋ ಮೂನ್ ಸೂಪರ್ರೋ ಸೂಪರ್: ಚಂದ್ರನ ನೋಡೋದು ಮಿಸ್‌ ಮಾಡ್ಲೇಬೇಡಿ..!

ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣಹತ್ಯೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರಿಂದ ಸಾಮಾಜಿಕವಾಗಿ ಅಸಮತೋಲನ ಉಂಟಾಗುತ್ತಿದೆ. ಹೆಣ್ಣು ಮಕ್ಕಳು ಹೊರೆ ಎಂದು ಭಾವಿಸದೇ, ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಇದರಿಂದ ಲಿಂಗಾನುಪಾತದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

ಸ್ಕ್ಯಾನಿಂಗ್‌ ಸೆಂಟರ್‌ಗಳು ಪರವಾನಿಗೆ ಹೊಂದಿ, ಅನುಮತಿ ಪಡೆದಿರಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳು ಭ್ರೂಣವನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಬಾರದು. ನಿಯಮಾನುಸಾರ ದಾಖಲಾತಿಗಳನ್ನು ಪ್ರತಿದಿನ ನಿರ್ವಹಣೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಲಿಂಗಾನುಪಾತವು 1000 ಗಂಡು ಮಕ್ಕಳಿಗೆ 967 ಹೆಣ್ಣು ಮಕ್ಕಳಿದ್ದಾರೆ. ಮುಂದಿನ ದಿನಗಳಲ್ಲಿ ಲಿಂಗಾನುಪಾತವು ಮತ್ತಷ್ಟು  ವ್ಯತ್ಯಾಸವಾಗುವ ಸಾಧ್ಯತೆ ಇವೆ ಎಂದ ಅವರು, ಸ್ಕಾö್ಯನಿಂಗ್ ಕೇಂದ್ರಗಳಲ್ಲಿ ಹೆಣ್ಣು ಅಥವಾ ಗಂಡು ಎಂಬುದನ್ನು ತಿಳಿಸಬಾರದು. ಒಂದೊಮ್ಮೆ ಇದನ್ನು  ಉಲ್ಲಂಘಿಸಿದ್ದಲ್ಲಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದ ಅವರು, ಹಣ ಸಂಪಾದನೆ ಮಾಡುವ ಉದ್ದೇಶದಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿದ್ದು, ಪರೀಕ್ಷಿಸಲು ಬರುವ ಸ್ಕ್ಯಾನಿಂಗ್ ಸೆಂಟರ್‌ಗಳ ಸಿಬ್ಬಂದಿಗಳು, ಪೋಷಕರಿಗೆ ಮತ್ತು ವೈದ್ಯರುಗಳಿಗೆ ಈ ಕುರಿತು ತಿಳೀ ಹೇಳಬೇಕು ಎಂದರು. 

ಹೆಣ್ಣು ಭ್ರೂಣ ಹಚ್ಚಿದಲ್ಲಿ ಅವುಗಳ ಹತ್ಯೆ ನಡೆಯುತ್ತಿದ್ದು, ಇದರಿಂದ ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರ ಜೊತೆಗೆ ಹೆಣ್ಣು ಮಕ್ಕಳ ಅಕ್ರಮ ಮಾರಾಟ ಮಾಡುತ್ತಿರುವಂತಹ ಅಕ್ರಮ ಜಾಲವು ಕಾರ್ಯಾಚರಿಸುತ್ತಿದ್ದು, ಇದರ ಕುರಿತು ಜಾಗೃತೆ ವಹಿಸುವುದರೊಂದಿಗೆ, ಹೆಣ್ಣು ಮಕ್ಕಳಿಗೆ ಈ ಕುರಿತು ಅರಿವು ಮೂಡಿಸಬೇಕು ಎಂದರು. 

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಇದು ಶೋಚನೀಯ ಸಂಗತಿಯಾಗಿದೆ. ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಗರ್ಣಿಣಿಯರು ಹಾಗೂ ಅಪ್ರಾಪ್ತ ವಯಸ್ಕರು ಬಂದಲ್ಲಿ ಮೊದಲು ಪೊಲೀಸರಿಗೆ ಮಾಹಿತಿ ನೀಡಬೇಕು. ವಲಸೆ ಕಾರ್ಮಿಕರ ಮಕ್ಕಳು ಹಾಗೂ ಇತರರು ಬಂದಲ್ಲಿ ಸಕ್ಷಮ ಪ್ರಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಗರ್ಭಿಣಿಯರು ಭ್ರೂಣದಲ್ಲಿರುವ ಮಗುವು ಹೆಣ್ಣು ಅಥವಾ ಗಂಡು ಮಕ್ಕಳ ಕುರಿತು ತಪಾಸಣೆ ಮಾಡಿಸಿದ್ದಲ್ಲಿ ಇದಕ್ಕೆ ಕಾನೂನಿನಲ್ಲಿ 3 ವರ್ಷಗಳ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 5 ವರ್ಷಗಳ ಕಾರಾಗೃಹ ವಾಸ ಶಿಕ್ಷೆ ಹಾಗೂ 50,000 ರೂ. ಗಳ ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಉಡುಪಿಯಲ್ಲಿ ಇಸ್ರೋ ಘಟಕ ಸ್ಥಾಪಿಸುವಂತೆ ಪ್ರಧಾನಿ ಮೋದಿಗೆ ಕ್ಯಾಂಪ್ಕೊ ಪತ್ರ; ಯಾಕೆ ಗೊತ್ತಾ?

ಸ್ಕ್ಯಾನಿಂಗ್ ಸೆಂಟರ್‌ನಲ್ಲಿರುವ ತಂತ್ರಜ್ಞಾನಗಳನ್ನು ಸದುಪಯೋಪಡಿಸಿಕೊಳ್ಳಬೇಕು. ಇದರ ದುರುಪಯೋಗವಾಗಬಾರದು ಎಂದರು. 

ಪಿ.ಸಿ & ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಾಗಾರದಲ್ಲಿ ಹೆಣ್ಣು ಮಕ್ಕಳ ಪ್ರಾಮುಖ್ಯತೆ ಕುರಿತು ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ, ಡಾ. ಶಶಿಕಲಾ ಭಟ್, ವೈದ್ಯಾಧಿಕಾರಿಗಳು, ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲೀಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

click me!