ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ರಾಜ್ಯಮಟ್ಟದ ಮಹಿಳೆಯರ ವಾಲ್‌ಬಾಲ್ ಪಂದ್ಯಾವಳಿ ಆಯೋಜನೆ| ಬದುಕಿಗೆ ದಾರಿ ತೋರಿಸುವ ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಗವಿಸಿದ್ಧೇಶ್ವರ ಶ್ರೀಗಳು ಗವಿಮಠ ಜಾತ್ರೆಯ ಅರ್ಥಪೂರ್ಣತೆಯನ್ನು ಹೆಚ್ಚಳ ಮಾಡುತ್ತಿದ್ದಾರೆ|
ಕೊಪ್ಪಳ(ಡಿ.22): ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಮಹಿಳೆಯರ ವಾಲ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಜಾತ್ರೆ ಎಂದರೇ ಕೇವಲ ದೇವರು, ಪೂಜೆಗೆ ಮಾತ್ರ ಸೀಮಿತವಲ್ಲ, ಅದೊಂದು ಸಂಪ್ರದಾಯ, ಬದುಕಿಗೆ ದಾರಿ ತೋರಿಸುವ ಪ್ರೇರಣಾದಾಯಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಗವಿಸಿದ್ಧೇಶ್ವರ ಶ್ರೀಗಳು ವರ್ಷದಿಂದ ವರ್ಷಕ್ಕೆ ಗವಿಮಠ ಜಾತ್ರೆಯ ಅರ್ಥಪೂರ್ಣತೆಯನ್ನು ಹೆಚ್ಚಳ ಮಾಡುತ್ತಿದ್ದಾರೆ.
ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಚಾಲನೆ ನೀಡಲು ಕರೆಸಿದ್ದು ಅವರಿಂದ ವಿಕಲಚೇತನರು, ಮಹಿಳೆಯರು ಹಾಗೂ ಕ್ರೀಡಾಪಟುಗಳಲ್ಲಿ ಹುಮ್ಮಸ್ಸು ಹೆಚ್ಚಿಸುವ ಕಾರ್ಯಕ್ಕೆ ಶ್ರೀಗಳು ಮುಂದಾಗಿದ್ದಾರೆ. ಜತೆಗೆ ಜಾತ್ರೆಯಲ್ಲಿ ರಾಜ್ಯಮಟ್ಟದ ಮಹಿಳಾ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳುವ ಮೂಲಕ ಕ್ರೀಡಾಪಟುಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಳ ಮಾಡುವಂತೆ ಮಾಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೊಪ್ಪಳ ಜಿಲ್ಲಾ ವಾಲಿಬಾಲ್ ಅಸೋಷಿಯೇಶನ್ ಗವಿಸಿದ್ಧೇಶ್ವರ ಮಠದ ಸಹಯೋಗದಲ್ಲಿ ಮಹಿಳೆಯರಿಗಾಗಿ ಅಹ್ವಾನಿತ ವಾಲಿಬಾಲ್ ಸ್ಪರ್ಧೆಯನ್ನು ಜ. 13 ಹಾಗೂ 14ರಂದು ಹಮ್ಮಿಕೊಂಡಿದೆ. ರಾಜ್ಯದ ಪ್ರತಿಷ್ಠಿತ 8 ಮಹಿಳಾ ತಂಡಗಳ ಅಹ್ವಾನದ ಜತೆಗೆ ನಗರದ ಜಿಲ್ಲಾ ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ವಸತಿ ಶಾಲೆಯ ಪ್ರತಿಭಾನ್ವಿತ ರಾಷ್ಟ್ರಮಟ್ಟದ ಬಾಲಕಿಯರ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ವಾಲಿಬಾಲ್ ಕ್ರೀಡೆಯಲ್ಲಿ ಬಹಳಷ್ಟುಪ್ರತಿಭೆ ಮೆರೆದಿರುವ ಕ್ರೀಡಾಪಟುಗಳು ಗವಿಮಠ ಜಾತ್ರೆಯಲ್ಲಿ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನು ನೋಡಲು ಪ್ರೇರಕ್ಷಕರು ತುದಿಗಾಲ ಮೇಲೆ ನಿಂತಿದ್ದಾರೆ.
ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಬೇಕೆಂದು ಜಿಲ್ಲಾ ವಾಲಿಬಾಲ್ ಅಸೋಷಿಯೇಶನ್ ಅಧ್ಯಕ್ಷ ಗವಿಸಿದ್ಧಪ್ಪ ನಾಗಲಿಕರ, ಉಪಾಧ್ಯಕ್ಷ ಈಶಣ್ಣ ಕೊರ್ಲಳ್ಳಿ, ಕಾರ್ಯದರ್ಶಿ ಸುರೇಶ ಯಾದವ, ಕುಷ್ಟಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಸದಸ್ಯರಾದ ಎ.ಎನ್. ಯತಿರಾಜು, ಬಸವರಾಜ, ದಿವಾಕರ, ಹುಸೇನ್ ಸಾಬ್, ಮಹೇಂದ್ರ ಹಾಗೂ ಸುನೀಲ ಇಜಾರೆ ಮನವಿ ಮಾಡಿದ್ದಾರೆ.