ಮೇಡಂ ನೋಡ್ಬೇಕಿತ್ತು. ಬಿಜಿ ಇದ್ದಾರಾ? ಅದ್ಸರಿ ಅವ್ರ ಮೂಡ್ ಹೆಂಗೈತಿ...! ಹೀಗೊಂದು ಉದ್ಘಾರ ಬರೋದು ಚಿತ್ರದುರ್ಗದಲ್ಲಿ ಅಧಿಕಾರಿಗಳ ಭೇಟಿಗೆ ತೆರಳಿದ ಜನರ ಬಾಯಲ್ಲಿ. ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್
ಚಿತ್ರದುರ್ಗ [ಮಾ.02] : ಏನಪ್ಪಾ, ಮೇಡಂ ನೋಡ್ಬೇಕಿತ್ತು. ಬಿಜಿ ಇದ್ದಾರಾ? ಅದ್ಸರಿ ಅವ್ರ ಮೂಡ್ ಹೆಂಗೈತಿ...! ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಪ್ರಮುಖ ಇಲಾಖೆಗಳ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳ ಭೇಟಿಮಾಡಲು ಆಗಮಿಸುತ್ತಿರುವ ಜನರ ಬಾಯಿಂದ ಹೊರ ಸೂಸುತ್ತಿರುವ ಸಾಮಾನ್ಯ ಉಕ್ತಿಯಿದು. ಅಧಿಕಾರಿಯ ಚೇಂಬರ್ ಮುಂಭಾಗ ಕುಳಿತ ಜವಾನನ ಬಳಿ ತೆರಳುವ ಮಂದಿ ಮೆಲ್ಲಗೆ ಆತನ ಕಿವಿಯಲ್ಲಿ ಇಂತಹದ್ದೊಂದು ಮೆಲ್ಲಗಿನ ದನಿಯ ಮಾತೊಂದನ್ನು ಇಳಿಯ ಬಿಡುತ್ತಿದ್ದಾರೆ.
ಓಬವ್ವನ ನಾಡು ಚಿತ್ರದುರ್ಗದಲ್ಲಿ ಮಹಿಳೆಯರ ದರ್ಬಾರು ಮರುಕಳಿಸಿರುವ ಎಫೆಕ್ಟ್ ಇದು. ಜಿಲ್ಲಾಧಿಕಾರಿ, ಜಿಲ್ಲಾರಕ್ಷಣಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ, ಎಸ್ಸಿ, ಎಸ್ಟಿ ಕಾರ್ಪೋರೇಷನ್ ಜಿಲ್ಲಾ ಅಧಿಕಾರಿ, ಅಂಗವಿಲಕಲರ ಕಲ್ಯಾಣಾಧಿಕಾರಿ, ತೋಟಗಾರಿಕೆ ಉಪ ನಿರ್ದೇಶಕರು, ತಾಲೂಕು ಮಟ್ಟದ ಕೃಷಿ ಅಧಿಕಾರಿ, ಸಂಚಾರಿ ಠಾಣೆ ಪಿಎಸ್‌ಐ, ನಗರಸಭೆ ಕಚೇರಿ ವ್ಯವಸ್ಥಾಪಕರು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿ ಸೇರಿ ಜಿಲ್ಲಾ ಮಟ್ಟದ ಎಲ್ಲ ಪ್ರಮುಖ ಅಧಿಕಾರಿಗಳು ಮಹಿಳೆಯರಾಗಿದ್ದು, ಅಹವಾಲು ಮಂಡಿಸಲು ಹೋಗುವವರು ಸಹಜವಾಗಿಯೇ ಮೇಡಂ ಮೂಡ್ ಹೆಂಗಿದೆ ಎಂದು ವಿಚಾರಿಸುತ್ತಿದ್ದಾರೆ.
undefined
ಪುರುಷ ಪ್ರಧಾನದ ಗುಂಗನ್ನು ತಲೆಯಲ್ಲಿಟ್ಟುಕೊಂಡು ಕಚೇರಿಗೆ ಎಡತಾಕುವವರು ಸಹಜವಾಗಿಯೇ ಒಂದಿಷ್ಟು ಹಿಂಜರಿಯುತ್ತಿದ್ದಾರೆ. ಮೇಡಂ ಬೈಯ್ದರೆ ಹೇಗೆ, ಬೈಯುವಾಗ ಯಾರಾದರೂ ಅಲ್ಲಿ ಬೇರೆ ಅಧಿಕಾರಿಗಳು ಇದ್ದರೆ ಏನಾದೀತು. ಎಂಬೆಲ್ಲ ಅಳುಕುಗಳ ತುಂಬಿಕೊಂಡೇ ಚೇಂಬರ್ ಒಳ ಪ್ರವೇಶಿಸುತ್ತಿದ್ದಾರೆ. ಅಹವಾಲಿಗೆ ಸ್ಪಂದನೆ ಸಿಕ್ಕರೆ, ಪರ್ವಾಗಿಲ್ಲ ಹೆಣ್ಮಕ್ಕಳು ಚೆನ್ನಾಗಿ ಅಧಿಕಾರ ಮಾಡ್ತಾರೆ ಎಂಬ ಉವಾಚಗಳು ಬರ್ತವೆ. ಏನಾದ್ರೂ ವ್ಯತಿರಿಕ್ತ ಸನ್ನಿವೇಶಗಳು ಎದುರಾದರೆ ಈಯಮ್ಮನದು ಬಹಳ ಆಯ್ತು ಎಂಬ ಮಾತುಗಳು ಮಾರ್ದನಿಸುತ್ತವೆ.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅಧಿಕಾರಿಗಳಿಗೆ ಚೆನ್ನಾಗಿಯೇ ಚಾರ್ಜ್ ಮಾಡ್ತಾರೆ, ಲೋಪಗಳು ಕಂಡು ಬಂದರೆ ಸಹಿಸೋಲ್ಲ ಎಂಬ ಅಭಿಪ್ರಾಯಗಳು ಈಗಾಗಲೇ ಬೇರೂರಿವೆ. ಸಂಘಟನೆಗಳು ಪ್ರತಿಭಟನೆ ಮಾಡಿದರೆ ಮನವಿ ಸ್ವೀಕರಿಸಲು ಆಗಮಿಸುವುದಿಲ್ಲವೆಂಬ ಆರೋಪಗಳೂ ಇವೆ.
ಚಿತ್ರದುರ್ಗ : ರೈತ ಸಮುದಾಯಕ್ಕೆ ಇಲ್ಲಿದೆ ಗುಡ್ ನ್ಯೂಸ್...
ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ರಾಧಿಕಾ ಮೇಡಂ, ಮರುದಿನವೇ ಚಿತ್ರದುರ್ಗದಲ್ಲಿರುವ ರೌಡಿಗಳ ಕರೆಸಿ ಅವರಿಗೆ ಎಚ್ಚರಿಕೆ ನೀಡಿದ ಪರಿ ಕೂಡಾ ಮೆಚ್ಚುಗೆಗೆ ಪಾತ್ರವಾಗಿತ್ತು. ಹಳೆಯ ಚಾಳಿಗಳನ್ನೆಲ್ಲ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಿ, ಅದನ್ನು ಬಿಟ್ಟು ಯಾರಾದ್ರೂ ಬಾಲ ಬಿಚ್ಚಿದ್ರೆ ಸಹಿಸಲ್ಲ ಎಂದು ಖಡಕ್ಕಾಗಿಯೇ ಎಚ್ಚರಿಸಿದ್ದರು.
ಆದ್ರೆ ಜಿಪಂ ಸಿಇಒ ಸತ್ಯಭಾಮ ಅದ್ಹೇಕೋ ತುಸು ವಿವಾದಿತ ಅಧಿಕಾರಿಯಾಗಿಯೇ ಗೋಚರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಜನಪ್ರತಿನಿಧಿಗಳ ಸಂಗಡ ಮಾತನಾಡುವಾಗ ಭಾಷೆ ಸರಿಯಾಗಿ ಬಳಕೆ ಮಾಡಿ ಎಂಬ ಎಚ್ಚರಿಕೆಯನ್ನೂ ಶಾಸಕ ತಿಪ್ಪಾರೆಡ್ಡಿ ಅಂದು ನೀಡಿದ್ದರು.
ಇದಕ್ಕೆ ಪೂರಕವಾಗಿಯೋ ಎಂಬಂತೆ ಶನಿವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸತ್ಯಭಾಮಾ ಮೇಡಂ ಸದಸ್ಯರ ನಡೆಸಿಕೊಳ್ಳುವ ಕುರಿತು ಬಿಸಿ ಬಿಸಿ ಚರ್ಚೆ ನಡೆದಿತ್ತು. ಮೆದೆಹಳ್ಳಿ ಜಿಪಂ ಸದಸ್ಯ ನರಸಿಂಹರಾಜು ಸಭೆಯಲ್ಲಿ ಸಿಇಒ ಮೇಡಂ ಮೇಲೆ ನೇರವಾಗಿ ಆರೋಪ ಮಾಡಿದ್ದರು. ಜನಪ್ರತಿನಿಧಿಯಾದ ನನ್ನನ್ನೇ ನೀನ್ಯಾರು ಎಂದು ಪ್ರಶ್ನಿಸಿದ್ದರು ಎಂಬುದಾಗಿ ವಿಷಯ ಮಂಡಿಸಿದ್ದರು. ಬಹುತೇಕ ಸದಸ್ಯರು ನರಸಿಂಹರಾಜು ಅವರ ಬೆಂಬಲಕ್ಕೆ ನಿಂತಿದ್ದರು. ಹಕ್ಕು ಚ್ಯುತಿಯಾಗಿದೆ ಎಂದು ಅಬ್ಬರಿಸಿದ್ದರು. ಮಹಿಳಾ ಸದಸ್ಯರು ನರಸಿಂಹರಾಜುಗೆ ದನಿಗೂಡಿಸಿದ್ದು, ವಿಶೇಷವಾಗಿ ಕಂಡಿತ್ತು.